ಬುಧವಾರ, ಜುಲೈ 28, 2021
21 °C
ಇಳಿಯದ ಕೊತ್ತಂಬರಿ ಸೊಪ್ಪಿನ ದರ, ಬೀನ್ಸ್‌ ಕೊಂಚ ಅಗ್ಗ

ಗಗನಕ್ಕೇರಿದ ಕನಕಾಂಬರ, ಮೊಟ್ಟೆ ಬೆಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಕೋವಿಡ್‌–19 ಲಾಕ್‌ಡೌನ್‌ ನಿಯಮಗಳು ಸಂಪೂರ್ಣವಾಗಿ ಸಡಿಲಿಕೆಗೊಂಡ ಬೆನ್ನಲ್ಲೇ ಮಾರುಕಟ್ಟೆಯಲ್ಲಿ ಕೆಲವು ವಸ್ತುಗಳ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. 

ಹೂವುಗಳ ಪೈಕಿ ಕೆಜಿ ಕನಕಾಂಬರದ ಬೆಲೆ ₹1000ವರೆಗೂ ತಲುಪಿದರೆ, ಮೊಟ್ಟೆಯ ಬೆಲೆಯಲ್ಲೂ ಗಣನೀಯವಾದ ಏರಿಕೆ ಕಂಡು ಬಂದಿದೆ. ಎರಡು ವಾರಗಳಿಂದ ದುಬಾರಿಯಾಗಿದ್ದ ಕೊತ್ತಂಬರಿ ಸೊಪ್ಪಿನ ಬೆಲೆ ಈ ವಾರವೂ ಇಳಿದಿಲ್ಲ. ನಾಟಿ ಸೊಪ್ಪಿನ ಕಟ್ಟಿಗೆ ₹50 ನೀಡಬೇಕಾಗಿದೆ. 

ಲಾಕ್‌ಡೌನ್‌ನಿಂದಾಗಿ ತತ್ತರಿಸಿದ್ದ ಪುಷ್ಪೋದ್ಯಮ ಎರಡು ವಾರಗಳಿಂದ ಸ್ವಲ್ಪ ಚೇತರಿಕೆ ಕಂಡಿತ್ತು. ಸೋಮವಾರದಿಂದ ದೇವಸ್ಥಾನಗಳು ಹಾಗೂ ಇತರೆ ಧಾರ್ಮಿಕ ಕೇಂದ್ರಗಳು ತೆರೆದಿರುವುದರಿಂದ ಹೂವಿಗೆ ಬೇಡಿಕೆ ಬಂದಿದೆ. ಅದರಲ್ಲೂ ಕನಕಾಂಬರಕ್ಕೆ ಹೆಚ್ಚಿನ ಬೇಡಿಕೆ ಇದೆ. ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಕಳೆದವಾರ ಒಂದು ಕೆಜಿ ಕನಕಾಂಬರಕ್ಕೆ ₹600 ಇತ್ತು. ಈ ವಾರ ₹800ರಿಂದ ₹1,000ವರೆಗೆ ಇದೆ. 

‘ಮಳೆಗಾಲ ಆರಂಭವಾಗಿದೆ. ಹೂವುಗಳು ಹೆಚ್ಚಿಗೆ ಬರುತ್ತಿಲ್ಲ. ಇದರ ಜೊತೆಗೆ ದೇವಸ್ಥಾನಗಳು ಭಕ್ತರ ಪ‍್ರವೇಶಕ್ಕೆ ಮುಕ್ತವಾಗಿವೆ. ಶುಭ ಸಮಾರಂಭಗಳೂ ಆರಂಭವಾಗಿದೆ. ಹೀಗಾಗಿ ಬೇಡಿಕೆ ಹೆಚ್ಚಾಗಿರುವುದರಿಂದ ಬೆಲೆಯಲ್ಲೂ ಏರಿಕೆಯಾಗಿದೆ’ ಎಂದು ಬಿಡಿ ಹೂವಿನ ವ್ಯಾಪಾರಿ ಚೆನ್ನೀಪುರದ ಮೋಳೆಯ ರವಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ಮಾಂಸ ಮಾರುಕಟ್ಟೆಯಲ್ಲಿ ಮೊಟ್ಟೆಯ ಬೆಲೆಯೂ ಹೆಚ್ಚಾಗಿದೆ. ಸಗಟು ಮಾರುಕಟ್ಟೆಯಲ್ಲಿ ಕಳೆದ ವಾರ 100 ಮೊಟ್ಟೆಗೆ ₹368 ಇತ್ತು. ಈ ವಾರ ₹465 ಆಗಿದೆ. ಲಾಕ್‌ಡೌನ್‌ ಆರಂಭವಾದಾಗಿನಿಂದ 200 ಮೊಟ್ಟೆಯ ಬೆಲೆ ₹325ರಿಂದ ₹370ರ ನಡುವೆಯೇ ಇತ್ತು. 

‘ಹೋಟೆಲ್‌ಗಳೆಲ್ಲ ತೆರೆದಿರುವುದರಿಂದ ಮೊಟ್ಟೆಗೆ ಹೆಚ್ಚು ಬೇಡಿಕೆ ಬಂದಿದೆ. ಹೀಗಾಗಿ ಬೆಲೆ ಹೆಚ್ಚಾಗಿದೆ. ಇದರಿಂದ ಕೋಳಿ ಸಾಕಣೆ ಮಾಡುವವರಿಗೆ ಹೆಚ್ಚು ಲಾಭವಾಗಲಿದೆ’ ಎಂದು ವ್ಯಾಪಾರಿ ನವೀನ್‌ ಹೇಳಿದರು. 

ಚಿಕನ್‌ ಬೆಲೆಯಲ್ಲಿ ಸ್ವಲ್ಪ ಇಳಿಕೆಯಾಗಿದೆ. ಕೆಜಿಗೆ ₹180ರಿಂದ ₹200ರವೆಗೆ ಇದೆ. ಮಟನ್‌ ಬೆಲೆ (₹600) ಯಥಾಸ್ಥಿತಿ ಮುಂದುವರಿದಿದೆ.

ದಪ್ಪ ಮೆಣಸಿನಕಾಯಿ, ಸೇಬು, ದ್ರಾಕ್ಷಿ ಸ್ವಲ್ಪ ತುಟ್ಟಿ

ತರಕಾರಿಗಳ ಪೈಕಿ ಬೀನ್ಸ್‌ ಬೆಲೆ ಕೆಜಿಗೆ ₹10 ಇಳಿದಿದೆ. ಹಸಿಮೆಣಸು ಕೂಡ ₹5 ಕಡಿಮೆಯಾಗಿದೆ. ಕಳೆದ ವಾರ ಕೆಜಿಗೆ ₹45ರಷ್ಟಿದ್ದ ದಪ್ಪಮೆಣಸಿಕಾಯಿ ಬೆಲೆ ಈ ವಾರ ₹60ರಿಂದ ₹70ಕ್ಕೆ ಏರಿಕೆಯಾಗಿದೆ. ಉಳಿದೆಲ್ಲಾ ತರಕಾರಿಗಳ ಧಾರಣೆಯಲ್ಲಿ ವ್ಯತ್ಯಾಸವಾಗಿಲ್ಲ. 

ಹಣ್ಣುಗಳ ಪೈಕಿ ಸೇಬು ₹10, ದ್ರಾಕ್ಷಿ ₹20ರಷ್ಟು ತುಟ್ಟಿಯಾಗಿದೆ. ಕಿತ್ತಳೆಯ ಧಾರಣೆ ಕೆಜಿಗೆ ₹10ರಿಂದ ₹20ರಷ್ಟು ಕಡಿಮೆಯಾಗಿದೆ. ಸಿಂಧೂರ, ಬಾದಾಮಿ, ರಸಪೂರಿ, ಬಗನಪಲ್ಲಿ ಮಾವುಗಳು ₹40ರಿಂದ ₹70 ನಡುವಿನ ದರದಲ್ಲಿ ಮಾರಾಟವಾಗುತ್ತಿವೆ.

‘ಬೀನ್ಸ್‌ಗೆ ಬೇಡಿಕೆ ಕಡಿಮೆಯಾಗಿರುವುದರಿಂದ ಬೆಲೆ ಸ್ವಲ್ಪ ಇಳಿದಿದೆ. ದಪ್ಪಮೆಣಸಿನಕಾಯಿ ಆವಕ ಕಡಿಮೆಯಾಗಿದೆ. ಹಾಗಾಗಿ ಬೆಲೆ ಹೆಚ್ಚಿದೆ. ಹಣ್ಣುಗಳಲ್ಲಿ ಸೀಡ್‌ಲೆಸ್‌ ದ್ರಾಕ್ಷಿ ಈಗ ಬರುತ್ತಿಲ್ಲ’ ಎಂದು ಹಾಪ್‌ಕಾಮ್ಸ್‌ ವ್ಯಾಪಾರಿ ಮಧು ಅವರು ಹೇಳಿದರು.  

‘ಕೊತ್ತಂಬರಿ ಸೊಪ್ಪು ಸ್ಥಳೀಯವಾಗಿ ಲಭ್ಯವಿಲ್ಲ. ಹೊರಗಡೆಯಿಂದ ತರಬೇಕಾಗುತ್ತದೆ. ಬೇಸಿಗೆಯಲ್ಲಿ ಸಾಮಾನ್ಯವಾಗಿ ಬೆಲೆ ಹೆಚ್ಚಿರುತ್ತದೆ’ ಎಂದು ಅವರು ಮಾಹಿತಿ ನೀಡಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು