ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಮರಾಜನಗರ | ಬಿಸಿಲ ಝಳ: ನಿಂಬೆಹಣ್ಣು ದುಬಾರಿ

ಬದಲಾಗದ ಹಣ್ಣು, ಹೂವುಗಳ ಧಾರಣೆ, ಹೂವಿಗೆ ಕೊಂಚ ಬೇಡಿಕೆ
Published 11 ಮಾರ್ಚ್ 2024, 16:01 IST
Last Updated 11 ಮಾರ್ಚ್ 2024, 16:01 IST
ಅಕ್ಷರ ಗಾತ್ರ

ಚಾಮರಾಜನಗರ: ಬಿಸಿಲಿನಿಂದಾಗಿ ವಾತಾವರಣದ ತಾಪಮಾನ‌ದಲ್ಲಿ ಏರಿಕೆ ಕಂಡು ಬರುತ್ತಿದ್ದಂತೆಯೇ, ಮಾರುಕಟ್ಟೆಯಲ್ಲಿ ನಿಂಬೆ ಹಣ್ಣಿಗೆ ಬೇಡಿಕೆ ಹೆಚ್ಚಾಗಿದೆ. ಇದರಿಂದಾಗಿ ಧಾರಣೆಯೂ ಜಾಸ್ತಿಯಾಗಿದೆ. 

ಗಾತ್ರಕ್ಕೆ ಅನುಗುಣವಾಗಿ ನಿಂಬೆಹಣ್ಣಿಗೆ ₹8ರಿಂದ ₹12ರವರೆಗೂ ವ್ಯಾಪಾರಿಗಳು ಹೇಳುತ್ತಿದ್ದಾರೆ. ಚಿಕ್ಕದಾಗಿರುವ ನಿಂಬೆಗೆ ₹5 ಇದೆ. ಆದರೆ, ಅದರಲ್ಲಿ ರಸ ಹೆಚ್ಚಿಲ್ಲ. ಹೀಗಾಗಿ ಬೇಡಿಕೆ ಇಲ್ಲ ಎಂದು ಹೇಳುತ್ತಾರೆ ವ್ಯಾಪಾರಿಗಳು. 

‘ಬೇಸಿಗೆ ಸಮಯದಲ್ಲಿ ಮಾರುಕಟ್ಟೆಗೆ ನಿಂಬೆಹಣ್ಣಿನ ಆವಕ ಕಡಿಮೆ. ಆದರೆ, ನಿಂಬೆಹಣ್ಣಿನ ಬಳಕೆ ಹೆಚ್ಚಿರುತ್ತದೆ. ನಿಂಬೆ ಹಣ್ಣಿನ ಷರಬತ್ತು, ಪಾನಕಕ್ಕೆ ಹೆಚ್ಚು ಬೇಡಿಕೆ ಜಾಸ್ತಿ ಹೀಗಾಗಿ, ಬೇಡಿಕೆ ಹೆಚ್ಚು. ಹಾಗಾಗಿ, ಪ್ರತಿ ಬೇಸಿಗೆಯಲ್ಲೂ ಬೆಲೆ ಜಾಸ್ತಿ ಇರುತ್ತದೆ’ ಎಂದು ನಿಂಬೆ ಹಣ್ಣಿನ ವ್ಯಾಪಾರಿ ಸಿದ್ದರಾಜು ‘ಪ್ರಜಾವಾಣಿ’ಗೆ ತಿಳಿಸಿದರು. 

‘ನಮ್ಮಲ್ಲಿ ಸ್ಥಳೀಯವಾಗಿ ನಿಂಬೆ ಹಣ್ಣು ಲಭ್ಯವಿಲ್ಲ. ನಾನು ಮೈಸೂರಿನಿಂದ ನಿಂಬೆ ತರಿಸುತ್ತಿದ್ದೇನೆ. ಅಲ್ಲಿಗೆ ವಿಜಯಪುರ ಸೇರಿದಂತೆ ಉತ್ತರ ಕರ್ನಾಟಕದ ಜಿಲ್ಲೆಗಳಿಂದ ಪೂರೈಕೆಯಾಗುತ್ತಿದೆ. ಒಂದು ಮೂಟೆಗೆ ಈಗ ₹6,000ದಿಂದ ₹7.000 ವರೆಗೂ ಇದೆ. ಒಂದು ಮೂಟೆಯಲ್ಲಿ ಎಲ್ಲ ಗಾತ್ರದ 800ರಿಂದ 900ರಷ್ಟು ನಿಂಬೆಹಣ್ಣು ಇರುತ್ತವೆ’ ಎಂದು ಅವರು ಮಾಹಿತಿ ನೀಡಿದರು. 

ಹಾಪ್‌ಕಾಮ್ಸ್‌ನಲ್ಲೂ ಒಂದು ನಿಂಬೆಹಣ್ಣಿಗೆ ₹7–₹8 ಇದೆ.  

ಬೆಳ್ಳುಳ್ಳಿ ಧಾರಣೆ ಇಳಿಕೆ: ತರಕಾರಿ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಬಿಟ್ಟು ಉಳಿದೆಲ್ಲ ತರಕಾರಿಗಳ ಬೆಲೆ ಸ್ಥಿರವಾಗಿದೆ. ಬೆಳ್ಳುಳ್ಳಿಯ ಧಾರಣೆ ಗಣನೀಯವಾಗಿ ಇಳಿದಿದೆ. ಕೆಜಿಗೆ ₹200ಕ್ಕೆ ಸಿಗುತ್ತಿದೆ. 

‘ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಈಗ ಬೆಳ್ಳುಳ್ಳಿ ಪೂರೈಕೆಯಾಗುತ್ತಿದೆ. ಮೊದಲಿನಷ್ಟು ಬೇಡಿಕೆಯೂ ಈಗಿಲ್ಲ. ಹೀಗಾಗಿ ಬೆಲೆಯಲ್ಲಿ ಇಳಿಕೆಯಾಗಿದೆ’ ಎಂದು ಹಾಪ್‌ಕಾಮ್ಸ್‌ ವ್ಯಾಪಾರಿ ಮಧು ಹೇಳಿದರು. 

ಇತರ ತರಕಾರಿಗಳ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ. ಟೊಮೆಟೊ ಕೆಜಿಗೆ ₹20 ಇದೆ. ಬೀನ್ಸ್‌ ಕೆಜಿಗೆ ₹80, ಕ್ಯಾರೆಟ್‌ ₹60, ಮೂಲಂಗಿ ₹40, ಈರುಳ್ಳಿಗೆ ₹20ರಿಂದ ₹25, ದಪ್ಪ, ಹಸಿ ಮೆಣಸಿನಕಾಯಿಗೆ ತಲಾ ₹80 ಇದೆ. 

ಹಣ್ಣುಗಳ ಧಾರಣೆಯಲ್ಲೂ ಹೆಚ್ಚು ಬದಲಾವಣೆಯಾಗಿಲ್ಲ. ಹಾಪ್‌ಕಾಮ್ಸ್‌ನಲ್ಲಿ ಕಿತ್ತಳೆಗೆ ಕೆಜಿಗೆ ₹10 ಹೆಚ್ಚಾಗಿ ₹80ಕ್ಕೆ ತಲುಪಿದೆ. ಉಳಿದಂತೆ ಸೇಬು, ದಾಳಿಂಬೆಗಳ ದುಬಾರಿ ದರ (₹180) ಈ ವಾರವೂ ಮುಂದುವರಿದಿದೆ. ಕಲ್ಲಂಗಡಿ ಹಣ್ಣಿಗೆ ಬೇಡಿಕೆ ಹೆಚ್ಚಿದ್ದು, ಬೆಲೆ ₹20ರಿಂದ ₹30 ಇದೆ. ಬಿಸಿಲಿನ ಕಾರಣಕ್ಕೆ ಕರಬೂಜ ಹಣ್ಣನ್ನು ಖರೀದಿಸುವವರ ಸಂಖ್ಯೆ ಜಾಸ್ತಿ ಇದೆ.

ಆವಕ ಕಡಿಮೆ; ಹೂವಿಗೆ ಬೇಡಿಕೆ

ಹೆಚ್ಚಳ ಬಿಸಿಲಿನ ವಾತಾವರಣದಿಂದ ಹೂವುಗಳ ಆವಕ ಕಡಿಮೆಯಾಗಿದ್ದು ಬೆಲೆ ಕೊಂಚ ಚೇತರಿಸಿದೆ.  ಶಿವರಾತ್ರಿ ಹಬ್ಬದ ಸಮಯದಲ್ಲಿ ಬೇಡಿಕೆ ಜಾಸ್ತಿಯಾಗಿದ್ದರಿಂದ ಬೆಲೆಯೂ ಹೆಚ್ಚಾಗಿತ್ತು. ಈಗ ಅಷ್ಟು ಬೇಡಿಕೆ ಇಲ್ಲದಿದ್ದರೂ ಕಡಿಮೆ ಏನಲ್ಲ. ಗ್ರಾಮೀಣ ಭಾಗಗಳಲ್ಲಿ ಉತ್ಸವಗಳು ಶುಭ ಸಮಾರಂಭಗಳು ನಡೆಯುತ್ತಿರುವುದರಿಂದ ಹೂವುಗಳಿಗೆ ಗ್ರಾಹಕರಿದ್ದಾರೆ ಎಂದು ಹೇಳುತ್ತಾರೆ ಬಿಡಿ ಹೂವಿನ ವ್ಯಾಪಾರಿಗಳು.  ‘ಬಿಸಿಲಿನ ಕಾರಣಕ್ಕೆ ಮಲ್ಲಿಗೆ ಕಾಕಡ ಸೇವಂತಿಗೆ ಚೆಂಡು ಹೂವು ಪೂರೈಕೆ ಕಡಿಮೆಯಾಗಿದೆ. ಹಬ್ಬ ಸಮಾರಂಭಗಳು ಹೆಚ್ಚು ಇರುವುದರಿಂದ ಬೇಡಿಕೆ ಜಾಸ್ತಿಯಾಗಿದೆ. ಸೇವಂತಿಗೆ ಮತ್ತು ಚೆಂಡು ಹೂವಿಗೆ ಹೆಚ್ಚು ಬೇಡಿಕೆ ಕಂಡು ಬರುತ್ತಿದೆ’ ಎಂದು ಚೆನ್ನಿಪುರಮೋಳೆಯ ಬಿಡಿ ಹೂವಿನ ವ್ಯಾಪಾರಿ ರವಿ ‘ಪ್ರಜಾವಾಣಿ’ಗೆ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT