ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಟೊಮೆಟೊ ಸ್ವಲ್ಪ ತುಟ್ಟಿ, ಹೂವು ಇನ್ನಷ್ಟು ಅಗ್ಗ

ಮಾರುಕಟ್ಟೆಯ ಮೇಲೆ ಮುಂದುವರಿದ ಕೋವಿಡ್‌–19, ಆಷಾಢ ಮಾಸದ ಪ್ರಭಾವ
Last Updated 13 ಜುಲೈ 2020, 17:54 IST
ಅಕ್ಷರ ಗಾತ್ರ

ಚಾಮರಾಜನಗರ: ಕೋವಿಡ್‌–19, ಆಷಾಢ ಮಾಸದ ಪರಿಣಾಮ ಮಾರುಕಟ್ಟೆಯನ್ನೂ ಬಾಧಿಸುತ್ತಿದ್ದು, ತರಕಾರಿ, ಹೂವು, ಹಣ್ಣುಗಳಿಗೆ ಹೆಚ್ಚಿನ ಬೇಡಿಕೆ ಕಂಡು ಬರುತ್ತಿಲ್ಲ. ಹಾಗಾಗಿ, ಕೆಲವು ವಾರಗಳಿಂದೀಚೆಗೆ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸ ಕಂಡು ಬಂದಿಲ್ಲ. ಈ ವಾರವೂ ಅದೇ ಸ್ಥಿತಿ ಮುಂದುವರಿಯುವ ಲಕ್ಷಣ ಗೋಚರಿಸುತ್ತಿದೆ.

ತರಕಾರಿಗಳ ಪೈಕಿ ಟೊಮೆಟೊ ಬಿಟ್ಟರೆ ಬೇರೆ ಕಾಯಿ ಪಲ್ಲೆಗಳ ಧಾರಣೆ ಯಥಾಸ್ಥಿತಿ ಮುಂದುವರಿದಿದೆ.ಕಳೆದ ವಾರ ಇಳಿಕೆಯಾಗಿದ್ದ ಟೊಮೆಟೊ ದರ ಈ ವಾರ ಕೆಜಿಗೆ ₹5ರಷ್ಟು ಹೆಚ್ಚಾಗಿದೆ. ಹಾಪ್‌ಕಾಮ್ಸ್‌ನಲ್ಲಿ ₹30ಕ್ಕೆ ಮಾರಾಟವಾಗುತ್ತಿದೆ. ತಳ್ಳುಗಾಡಿಗಳಲ್ಲಿ ದರ ಇನ್ನೂ ಸ್ವಲ್ಪ ಹೆಚ್ಚಿದೆ.

ಸ್ವಲ್ಪ ದುಬಾರಿಯಾಗಿರುವ ಬೀನ್ಸ್‌ಗೆ ಮೂರು ವಾರಗಳಿಂದ ಒಂದೇ ಬೆಲೆಯಿದೆ (ಕೆ.ಜಿ.ಗೆ ₹20). ಕ್ಯಾರೆಟ್‌ ಬೆಲೆಯಲ್ಲೂ (₹20) ವ್ಯತ್ಯಾಸವಾಗಿಲ್ಲ.

‘ತರಕಾರಿಗಳ ಪೈಕಿ ಸದ್ಯಕ್ಕೆ ಸ್ವಲ್ಪ ದುಬಾರಿ ಎಂದರೆ ದಪ್ಪ ಮೆಣಸಿನಕಾಯಿ ಮಾತ್ರ. ಹಾಪ್‌ಕಾಮ್ಸ್‌ನಲ್ಲಿ ಕೆಜಿಗೆ ₹80 ಇದೆ. ನಾಲ್ಕು ವಾರಗಳಿಂದ ಇದೇ ಬೆಲೆ ಇದೆ. ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ಬರುತ್ತಿರುವುದರಿಂದ ಈ ಬೆಲೆ’ ಎಂದು ಹೇಳುತ್ತಾರೆ ವ್ಯಾಪಾರಿ ಮಧು.

ತೆಂಗಿನಕಾಯಿ (ಒಂದಕ್ಕೆ) ₹20ರಿಂದ ₹25 ಇದ್ದರೆ, ನಿಂಬೆಹಣ್ಣಿನ ಗಾತ್ರಕ್ಕೆ ತಕ್ಕಂತೆ ₹3ರಿಂದ ₹5ರವರೆಗೆ ಬೆಲೆ ಇದೆ.

ಹಣ್ಣುಗಳ ಪೈಕಿ ಕಿತ್ತಳೆಯ ಬೆಲೆ ಮಾತ್ರ ಕೆಜಿಗೆ ₹20ನಷ್ಟು ಜಾಸ್ತಿಯಾಗಿದೆ. ದಾಳಿಂಬೆ ₹20 ಕಡಿಮೆಯಾಗಿದೆ. ಮೂರು ವಾರಗಳಿಂದ ₹100ಕ್ಕೆ ಇದ್ದ ದಾಳಿಂಬೆಯ ಬೆಲೆ ಸೋಮವಾರ ‌₹80 ಇತ್ತು. ಸೇಬು (₹160–180), ಏಲಕ್ಕಿ ಬಾಳೆ (₹40–₹50), ಪಚ್ಚೆ ಬಾಳೆ (₹25–₹30) ಧಾರಣೆ ಯಥಾಸ್ಥಿತಿ ಮುಂದುವರಿದಿದೆ.

‘ಮಾಂಸದ ಮಾರುಕಟ್ಟೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಮೊಟ್ಟೆ (100ಕ್ಕೆ) ₹370 ಇದೆ. ಬೇಡಿಕೆಗೆ ಅನುಸಾರ ಪ್ರತಿ ದಿನ ಬೆಲೆಯಲ್ಲಿ ಏರಿಳಿತ ಆಗುತ್ತಿದೆ’ ಎಂದು ಹೇಳುತ್ತಾರೆ ಮೊಟ್ಟೆ ವ್ಯಾಪಾರಿ ನವೀನ್‌.

ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿಚಿಕನ್‌ಗೆ ₹160ರಿಂದ ₹180ರವರೆಗೆ ಇದೆ.

ಹೂವಿಗೆ ಮತ್ತೆ ಕುಸಿದ ಬೇಡಿಕೆ

ಆಷಾಢ ಮಾಸ ಆರಂಭದ ಸಂದರ್ಭದಲ್ಲಿ ಪಾತಾಳಕ್ಕೆ ಕುಸಿದಿದ್ದ ಹೂವುಗಳ ಬೆಲೆ, ಕಳೆದ ವಾರ ಸ್ವಲ್ಪ ಚೇತರಿಸಿಕೊಂಡಿತ್ತು. ಈ ವಾರ ಮತ್ತೆ ಬೇಡಿಕೆ ಕಡಿಮೆಯಾಗಿದ್ದು, ಪರಿಣಾಮವಾಗಿ ಬೆಲೆಯಲ್ಲಿ ಇಳಿಕೆ ಕಂಡಿದೆ.

ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಕನಕಾಂಬರ ಕೆಜಿಗೆ ₹300–₹400 ಇದೆ. ₹200 ಇದ್ದ ಮಲ್ಲಿಗೆ ₹160ಕ್ಕೆ ಇಳಿಕೆಯಾಗಿದೆ. ಚೆಂಡು ಹೂವು ₹10–₹20 ಇದೆ. ಸುಗಂಧರಾಜ (₹40) ಬೆಲೆಯಲ್ಲಿ ಬದಲಾವಣೆಯಾಗಿಲ್ಲ.

‘ಸದ್ಯ ಹೆಚ್ಚು ಬೇಡಿಕೆ ಇಲ್ಲ. ವಹಿವಾಟು ಸಾಧಾರಣ ಎನ್ನುವ ಮಟ್ಟಿಗೆ ಇದೆ. ಇನ್ನೂ 15 ದಿನಗಳು ಇದೇ ರೀತಿ ಮುಂದುವರಿಯಲಿದೆ. ಆ ಬಳಿಕ ಹೂವುಗಳಿಗೆ ಬೇಡಿಕೆ ಬರಲಿದೆ’ ಎಂದು ಬಿಡಿ ಹೂವಿನ ವ್ಯಾಪಾರಿ ರವಿ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT