ಸೋಮವಾರ, ಜನವರಿ 24, 2022
29 °C
ಪಾದಯಾತ್ರೆ ಯಶಸ್ವಿಗೊಳಿಸಲು ಶಾಸಕ ನರೇಂದ್ರ ಮನವಿ

ಮೇಕೆದಾಟು: ಹನೂರಿಗೆ ಅನುಕೂಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹನೂರು: ಮೇಕೆದಾಟು ಯೋಜನೆ ಫಲಪ್ರದವಾದರೆ ಬೆಂಗಳೂರಿಗಿಂತ ಹನೂರು ವಿಧಾನಸಭಾ ಕ್ಷೇತ್ರಕ್ಕೆ ಹೆಚ್ಚಿನ ಅನುಕೂಲವಾಗಲಿದೆ. ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ನಡೆಯಲಿರುವ ಪಾದಯಾತ್ರೆಯಲ್ಲಿ ಕ್ಷೇತ್ರದ ಕಾಂಗ್ರೆಸ್‌ ಚುನಾಯಿತ ಜನಪ್ರತಿನಿಧಿಗಳು, ಮುಖಂಡರು, ಕಾರ್ಯಕರ್ತರು ಪಾಲ್ಗೊಳ್ಳಬೇಕು ಎಂದು ಶಾಸಕ ಆರ್.ನರೇಂದ್ರ ಮನವಿ ಮಾಡಿದರು. 

ಪಾದಯಾತ್ರೆ ಅಂಗವಾಗಿ ಪಟ್ಟಣದ ಕಾಂಗ್ರೆಸ್‌ ಕಚೇರಿಯಲ್ಲಿ ಶುಕ್ರವಾರ ನಡೆದ ಮುಖಂಡರು, ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ‘ಈ ಯೋಜನೆ ಜಾರಿಯಾದರೆ 66 ಟಿಎಂಸಿ ಅಡಿ ನೀರು ಸಂಗ್ರಹ ಹಾಗೂ 400 ಮೆಗಾವಾಟ್ ವಿದ್ಯುತ್ ಉತ್ಪಾದನೆಯಾಗುತ್ತದೆ. ಇದರಿಂದ ಕ್ಷೇತ್ರಕ್ಕೆ ವಿದ್ಯುತ್ ಸೌಕರ್ಯದ ಜೊತೆಗೆ ಹಿನ್ನೀರು ಈ ನಮ್ಮ ಭಾಗದಲ್ಲಿ ಸಂಗ್ರಹವಾಗುವುದರಿಂದ ಕೊಳ್ಳೇಗಾಲ, ಸತ್ತೇಗಾಲ, ಬಂಡಳ್ಳಿ, ಶಾಗ್ಯ ಇನ್ನಿತರಡೆ ಅಂತರ್ಜಲ ಮಟ್ಟ ವೃದ್ಧಿಯಾಗಲಿದೆ’ ಎಂದರು.

ಮೇಕೆದಾಟು ಯೋಜನೆ ಪೂರ್ಣ ಗೊಂಡ ಬಳಿಕ ಮೇಕೆದಾಟು ಮೂಲಕ ಬೆಂಗಳೂರು ಇನ್ನಷ್ಟು ಹತ್ತಿರವಾಗಲಿದೆ. ಇದರಿಂದಾಗಿ ಬೆಂಗಳೂರಿಗೆ ಸುತ್ತಿ ಬಳಸಿ ಹೋಗುವುದು ತಪ್ಪುತ್ತದೆ ಎಂದು ತಿಳಿಸಿದರು. 

‘ವಾರಾಂತ್ಯ ಲಾಕ್‍ಡೌನ್ ಮತ್ತು ಕರ್ಫ್ಯೂ ಇರುವುದರಿಂದ ಈ ಕಾರ್ಯಕ್ರಮಕ್ಕೆ ಆಗಮಿಸುವವರು ಸೋಮವಾರ ಬೆಳಿಗ್ಗೆ 5 ಗಂಟೆಗೆ ಸತ್ತೇಗಾಲ ಗ್ರಾಮಕ್ಕೆ ಆಗಮಿಸಬೇಕು. ಇಲ್ಲಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಸ್ವಗ್ರಾಮ ದೊಡ್ಡಹಳ್ಳಿಗೆ ತೆರಳಿ ಪಾದಯಾತ್ರೆ ಮೂಲಕ ಸಾಗಬೇಕಾಗಿದೆ. ಇಲ್ಲಿಗೆ ತಲುಪಲು ಬಸ್ ಹಾಗೂ ಊಟದ ವ್ಯವಸ್ಥೆ ಕಲ್ಪಿಸಲಾಗುವುದು. ದೂರದ ಪ್ರದೇಶಗಳಿಂದ ಆಗಮಿಸಲು ಇಚ್ಛೆ ಉಳ್ಳವರು ಬಸ್ ಬದಲು ಪರ್ಯಾಯ ವಾಹನ ವ್ಯವಸ್ಥೆಯನ್ನು ಮಾಡಿಕೊಂಡು ನಿಗದಿತ ಸ್ಥಳಕ್ಕೆ ಆಗಮಿಸಬೇಕು’ ಎಂದರು. 

ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಡಿ.ದೇವರಾಜು, ಈಶ್ವರ್, ಕಾರ್ಯದರ್ಶಿ ಉದ್ದನೂರು ಸಿದ್ದರಾಜು, ಮುಖಂಡರಾದ ಬಸವರಾಜು, ಗುರುಮಲ್ಲಪ್ಪ, ಯುವ ಕಾಂಗ್ರೆಸ್‌ನ ಚೇತನ್‍ ದೊರೆರಾಜ್, ಗುಂಡಾಪುರ ಮಾದೇಶ್ ಇದ್ದರು. 

ರಾಜಧಾನಿ ತುಂಬಾ ಹತ್ತಿರ

ಮೇಕೆದಾಟುವಿನಲ್ಲಿ ಅಣೆಕಟ್ಟು ನಿರ್ಮಾಣಗೊಂಡು ಅದರ ‌ಮೇಲೆ ರಸ್ತೆ ನಿರ್ಮಾಣ ಮಾಡಿದರೆ, ಗಡಿ ಜಿಲ್ಲೆ ಚಾಮರಾಜನಗರಕ್ಕೆ ಬೆಂಗಳೂರು ಇನ್ನಷ್ಟು ಹತ್ತಿರವಾಗಲಿದೆ. ಅದರಲ್ಲೂ ಹನೂರು, ಮಹದೇಶ್ವರ ಬೆಟ್ಟದ ಜನರಿಗೆ ಹಾಗೂ ಇಲ್ಲಿಗೆ ಭೇಟಿ ನೀಡುವವರಿಗೆ ಹೆಚ್ಚು ಅನುಕೂಲವಾಗಲಿದೆ.

ಈಗ ಹನೂರು ಭಾಗದಿಂದ ಬೆಂಗಳೂರಿಗೆ ಹೋಗಬೇಕಾದರೆ ಕೊಳ್ಳೇಗಾಲ, ಮಳವಳ್ಳಿಯಿಂದ ಮದ್ದೂರು ಇಲ್ಲವೇ ಕನಕಪುರ ಮಾರ್ಗವಾಗಿ ಸಾಗಬೇಕು. 

ಮೇಕೆದಾಟು ಪ್ರದೇಶವು ಹನೂರು ತಾಲ್ಲೂಕಿನ ಶಾಗ್ಯ ಭಾಗಕ್ಕೆ ಹೊಂದಿ ಕೊಂಡಿದೆ. ಹೀಗಾಗಿ ಅಣೆಕಟ್ಟೆಯ ಜೊತೆಗೆ ರಸ್ತೆ ನಿರ್ಮಾಣವಾದರೆ ಹನೂರು, ಕನಕಪುರ ಪಟ್ಟಣಗಳ ನಡುವೆ ಸಂಪರ್ಕ ಸಾಧ್ಯವಾಗುತ್ತದೆ. ಇದರಿಂದಾಗಿ ಬೆಂಗಳೂರಿಗೆ ತೆರಳುವ ಅಂತರ 80 ಕಿ.ಮೀ.ನಷ್ಟು ಕಡಿಮೆಯಾಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.