ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್‌ ಭಾವಚಿತ್ರಕ್ಕೆ ಚಪ್ಪಲಿ ಹಾರ; ಆರೋಪಿ ವಶಕ್ಕೆ?

ಕುದೇರು ಗ್ರಾಮದ ಅಂಬೇಡ್ಕರ್‌ ಬಡಾವಣೆಯಲ್ಲಿ ಘಟನೆ, ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ
Published 17 ನವೆಂಬರ್ 2023, 15:41 IST
Last Updated 17 ನವೆಂಬರ್ 2023, 15:41 IST
ಅಕ್ಷರ ಗಾತ್ರ

ಸಂತೇಮರಹಳ್ಳಿ: ಸಮೀಪದ ಕುದೇರು ಗ್ರಾಮದ ಪರಿಶಿಷ್ಟ ಜಾತಿಯವರ ಬಡಾವಣೆಯಲ್ಲಿ ಹಾಕಲಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವಿರುವ ನಾಮಫಲಕಕ್ಕೆ ಕಿಡಿಗೇಡಿಗಳು ಗುರುವಾರ ರಾತ್ರಿ ಚಪ್ಪಲಿ ಹಾರ ಹಾಕಿದ್ದು, ಗ್ರಾಮದಲ್ಲಿ ಶುಕ್ರವಾರ ಮುಂಜಾನೆ ಬಿಗುವಿನ ವಾತಾವರಣ ನಿರ್ಮಾಣವಾಯಿತು.

ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯ ಪೊಲೀಸ್ ಠಾಣೆ ಸಿಬ್ಬಂದಿ ಆಗಮಿಸಿ ಚಪ್ಪಲಿ ಹಾರ ತೆರವುಗೊಳಿಸಿದರು.

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಡಿವೈಎಸ್‌ಪಿ  ಲಕ್ಷ್ಮಯ್ಯ, ಇನ್‌ಸ್ಪೆಕ್ಟರ್‌ಗಳಾದ ರಾಜೇಶ್, ಚಿಕ್ಕರಾಜಶೆಟ್ಟಿ, ಪಿಎಸ್‍ಐ ತಾಜುದ್ಧೀನ್ ಭೇಟಿ ನೀಡಿ ಬಂದೋಬಸ್ತ್‌ ಕೈಗೊಂಡಿದ್ದು, ಪರಿಸ್ಥಿತಿ ತಿಳಿಗೊಂಡಿದೆ. 

ಆರೋಪಿ ವಶಕ್ಕೆ?: ನಾಮಫಲಕಕ್ಕೆ ಚಪ್ಪಲಿ ಹಾರ ಹಾಕುತ್ತಿರುವ ದೃಶ್ಯ ಹತ್ತಿರದಲ್ಲೇ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅದೇ ಬಡಾವಣೆಯ ವ್ಯಕ್ತಿಯೊಬ್ಬರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.  

ಆದರೆ, ಪೊಲೀಸರು ಈ ಬಗ್ಗೆ ಮಾಹಿತಿ ನೀಡಿಲ್ಲ. ತನಿಖೆ ನಡೆಯುತ್ತಿದೆ ಎಂದಷ್ಟೇ ಹೇಳಿದ್ದಾರೆ.  

ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ‍‍ಪೊಲೀಸ್‌ ವರಿಷ್ಠಾಧಿಕಾರಿ, ‘ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಜನರ ವಿಶೇಷ ತಂಡ ರಚಿಸಲಾಗಿದ್ದು, ಘಟನೆ ನಡೆದ ಸ್ಥಳ ಹಾಗೂ ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ. ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಕ್ರಮ ಕೈಗೊಳ್ಳಲಾಗುವುದು. ಅಲ್ಲಿಯವರೆಗೆ ಗ್ರಾಮದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಬೇಕು’ ಎಂದು ಮನವಿ ಮಾಡಿದರು. 

‘ಸಿಸಿಟಿವಿ ವಿಡಿಯೊ ದೃಶ್ಯಾವಳಿ ಸಿಕ್ಕಿದೆ. ನಾವು ಕೂಲಂಕಷವಾಗಿ ತನಿಖೆ ನಡೆಸುತ್ತಿದ್ದೇವೆ. ಗ್ರಾಮದಲ್ಲಿ ಪರಿಸ್ಥಿತಿ ತಿಳಿಯಾಗಿದೆ’ ಎಂದು ಪ‍ದ್ಮನಿ ಸಾಹು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT