ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದೇಶ್ವರ ಬೆಟ್ಟ: ಮಾದಪ್ಪನ ಶಿವರಾತ್ರಿ ಜಾತ್ರೆ ಆರಂಭಕ್ಕೆ ಕ್ಷಣಗಣನೆ

21ರಂದು ರಥೋತ್ಸವ, ಪ್ರಾಧಿಕಾರದಿಂದ ಅಂತಿಮ ಸಿದ್ಧತೆ, ದ್ವಿಚಕ್ರವಾಹನಗಳಿಗೆ ನಿರ್ಬಂಧ
Last Updated 17 ಫೆಬ್ರುವರಿ 2023, 6:37 IST
ಅಕ್ಷರ ಗಾತ್ರ

ಮಹದೇಶ್ವರ ಬೆಟ್ಟ: ಇಲ್ಲಿನ ಮಲೆ ಮಹದೇಶ್ವರಸ್ವಾಮಿ ದೇವಾಲಯದಲ್ಲಿ ಮಹಾಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ಶುಕ್ರವಾರ (ಫೆ.17) ಚಾಲನೆ ಸಿಗಲಿದ್ದು, 21ರವರೆಗೆ ನಡೆಯಲಿದೆ.

ಧಾರ್ಮಿಕ ಕಾರ್ಯಕ್ರಮಗಳು: ಶುಕ್ರವಾರ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಜಾತ್ರೆಗೆ ಚಾಲನೆ ಸಿಗಲಿದೆ. 18ರಂದು ಮಹದೇಶ್ವರಸ್ವಾಮಿಗೆ ಎಣ್ಣೆ-ಮಜ್ಜನ ಸೇವೆ ಹಾಗೂ ವಿವಿಧ ಉತ್ಸವಗಳು, ಜಾಗರಣೆ ಉತ್ಸವ ನಡೆಯಲಿದೆ. 19ರಂದು ಮಹದೇಶ್ವರಸ್ವಾಮಿಗೆ ವಿಶೇಷ ಸೇವೆ ಉತ್ಸವಗಳು, 20ರಂದು ಅಮಾವಾಸ್ಯೆ ಪ್ರಯುಕ್ತ ಮಹದೇಶ್ವರಸ್ವಾಮಿಗೆ ವಿಶೇಷ ಪೂಜೆ, 21ರಂದು ಮಹಾರಥೋತ್ಸವ ಜರುಗಲಿದೆ. ಅಂದು ಬೆಳಿಗ್ಗೆ 8.20ರಿಂದ 9.10ರ ನಡುವೆ ರಥೋತ್ಗವ ನಡೆಯಲಿದೆ. ರಾತ್ರಿ ಅಭೀಷೇಕ ಪೂಜೆ ಬಳಿಕ ಕೊಂಡೋತ್ಸವದ ಮೂಲಕ ಜಾತ್ರೆಗೆ ತೆರೆ ಬೀಳಲಿವೆ. ಸಾಲೂರು ಮಠದ ಶಾಂತಮಲ್ಲಿಕಾರ್ಜುನಸ್ವಾಮೀಜಿ ನೇತೃತ್ವದಲ್ಲಿ ವಿಶೇಷ ಉತ್ಸವ ಸೇವೆಗಳು ಜರುಗಲಿವೆ.

ಐದು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವಕ್ಕೆ ಲಕ್ಷಾಂತರ ಭಕ್ತರು ಬರುವುದರಿಂದ ಭಕ್ತರಿಗೆ ಅನುಕೂಲವಾಗುವಂತೆ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರಅಭಿವೃದ್ಧಿ ಪ್ರಾಧಿಕಾರವು ವಿಶೇಷ ಹಾಗೂ ನಿರಂತರ ದಾಸೋಹದ ವ್ಯವಸ್ಥೆ ಮಾಡಿದೆ. ಕುಡಿಯುವ ನೀರು, ಶೌಚಾಲಯ, ಸ್ವಚ್ಛತೆ ಸೇರಿದಂತೆ ವಿವಿಧ ಸೌಕರ್ಯಗಳನ್ನು ಕಲ್ಪಿಸಿದೆ.

ಪಾದಯಾತ್ರೆಯಲ್ಲಿ ಬರುವ ಭಕ್ತರಿಗಾಗಿ ವಡಕೆಹಳ್ಳದ ಸಂತೇಖಾನೆ ಬಳಿಯಿಂದ ಮಹದೇಶ್ವರಬೆಟ್ಟದ ತನಕ ಅಲ್ಲಲ್ಲಿ ಕುಡಿಯುವ ನೀರಿನ ಟ್ಯಾಂಕರ್ ಇಡಲಾಗಿದೆ. ಮಹದೇಶ್ವರಸ್ವಾಮಿ ದರ್ಶನ ಮಾಡುವ ವೇಳೆ ಭಕ್ತರ ನೂಕ ನುಗ್ಗಲು ತಡೆಗಟ್ಟಲು ಸರತಿ ಸಾಲಿನ ವ್ಯವಸ್ಥೆ ಮಾಡಿದ್ದು, ನೆರಳಿನ ವ್ಯವಸ್ಥೆ ಕಲ್ಪಿಸಲಾಗಿದೆ. ಪಾದಯಾತ್ರೆಯಲ್ಲಿ ಬರುವ ಭಕ್ತರಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು, ರಾಜಗೋಪುರದ ಮುಂಭಾಗ ಎಡ ಮತ್ತು ಬಲ ಭಾಗದ ಖಾಲಿ ಮೈದಾನದಲ್ಲಿ ಪ್ರತ್ಯೇಕವಾಗಿ ಶಾಮಿಯಾನ ಅಳವಡಿಸಲಾಗಿದೆ.

ಭಕ್ತರಿಗೆ ವಿತರಿಸುವುದಕ್ಕಾಗಿ ಲಾಡು ತಯಾರಿಕೆ ಮಾಡಿದ್ದು, ಮಾರಾಟಕ್ಕೆ ವಿಶೇಷ ಕೌಂಟರ್ ತೆರೆಯಲಾಗಿದ್ದು, ವಿದ್ಯುತ್ ಬೆಳಕಿನ ವ್ಯವಸ್ಥೆ ಮಾಡಲಾಗಿದೆ.

ಭಕ್ತರಿಂದ ಜಾಗರಣೆ: ಜಾತ್ರೆ ಆರಂಭವಾಗುವುದಕ್ಕೂ ಮುನ್ನವೇ ಬೆಟ್ಟಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಬರುತ್ತಿದ್ದಾರೆ. ಪಾದಯಾತ್ರೆ ಮೂಲಕವೇ ಸಾವಿರಾರು ಮಂದಿ ಬರುತ್ತಿದ್ದಾರೆ. ಬಂದವರು, ದೇವಾಲಯ ಸುತ್ತಮುತ್ತ, ರಂಗ ಮಂದಿರ, ಬಸ್ ನಿಲ್ಧಾಣ, ಮಹದೇಶ್ವರ ಕಲ್ಯಾಣ ಮಂಟಪ, ಸಾಲೂರು ಮಠ ಸೇರಿದಂತೆ ಖಾಲಿ ಜಾಗಗಳಲ್ಲಿ ಬಿಡಾರ ಹೂಡಿದ್ದಾರೆ.

ವಾಹನಗಳ ಮೂಲಕ ಬರುತ್ತಿರುವವರು ಅಥಿತಿ ಗೃಹ, ಯಾತ್ರಿಗಳ ಭವನಗಳ ಕೊಠಡಿಗಳನ್ನು ಕಾಯ್ದಿರಿಸಿಕೊಂಡಿದ್ದಾರೆ. ಮಹಾಶಿವರಾತ್ರಿ ದಿನದಂದು ಭಕ್ತರು ಜಾಗರಣೆ ಮಾಡಲಿದ್ದಾರೆ.

ದ್ವಿಚಕ್ರ ವಾಹನ ನಿರ್ಬಂಧ: ಮಹದೇಶ್ವರ ಬೆಟ್ಟದ ರಸ್ತೆಯಲ್ಲಿ ವಾಹನಗಳ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಜಿಲ್ಲಾಡಳಿತ ಇದೇ ಮೊದಲ ಬಾರಿಗೆ ಬೆಟ್ಟಕ್ಕೆ ದ್ವಿಚಕ್ರವಾಹನಗಳ ಸಂಚಾರವನ್ನು ನಿರ್ಬಂಧಿಸಿದೆ. ಶುಕ್ರವಾರದಿಂದ ಜಾತ್ರೆಯ ಕೊನೆಯ ದಿನದವರೆಗೆ ದ್ವಿಚಕ್ರ ವಾಹನಗಳು ಬೆಟ್ಟಕ್ಕೆ ಹೋಗುವಂತಿಲ್ಲ. ಹನೂರಿನಿಂದ ಬೆಟ್ಟಕ್ಕೆ ಹೋಗುವ ರಸ್ತೆಯಲ್ಲಿ ಕೌದಳ್ಳಿ ಬಳಿಯಲ್ಲಿ ಪ್ರಾಧಿಕಾರ ಪಾರ್ಕಿಂಗ್‌ ವ್ಯವಸ್ಥೆ ಮಾಡಿದ್ದು, ಅಲ್ಲಿಂದ ಕೆಎಸ್‌ಆರ್‌ಟಸಿ ಬಸ್‌ ವ್ಯವಸ್ಥೆ ಮಾಡಲಾಗಿದೆ.

ಬಿಗಿ ಬಂದೋಬಸ್ತ್‌: ಜಾತ್ರೆ ಅಂಗವಾಗಿ ಪೊಲೀಸರು ಬಿಗಿ ಬಂದೋಬಸ್ತ್‌ ಕೈಗೊಂಡಿದ್ದಾರೆ.

500 ಹೆಚ್ಚುವರಿ ಬಸ್‌

ಭಕ್ತರ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿ 500 ಹೆಚ್ಚುವರಿ ಬಸ್‌ಗಳನ್ನು ಹಾಕಿದೆ.

‘ಕೌದಳ್ಳಿಯಿಂದ ಮಹದೇಶ್ವರಬೆಟ್ಟಕ್ಕೆ ಸುಮಾರು 15 ಬಸ್‌ಗಳು ನಿರಂತರವಾಗಿ ಸಂಚರಿಸಲಿವೆ. ಜಾತ್ರೆ ವೇಳೆ ಶಾಲಾ-ಕಾಲೇಜಿಗೆ ತೆರಳಬೇಕಾದ ಸಮಯದಲ್ಲಿ ವಿದ್ಯಾರ್ಥಿಗಳು ಬಸ್‌ನಲ್ಲಿ ಸಂಚರಿಸಲು ಅವಕಾಶ ಮಾಡಿಕೊಡಲು ಈಗಾಗಲೇ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ’ ಎಂದು ಕೊಳ್ಳೇಗಾಲ ಕೆ.ಎಸ್.ಆರ್.ಟಿ.ಸಿ ಡಿಪೊ ವ್ಯವಸ್ಥಾಪಕ ಮುತ್ತುರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

ಸೋಮಣ್ಣ ಭೇಟಿ: ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಶನಿವಾರ (ಫೆ.18) ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಲಿದ್ದಾರೆ.

ಬೆಳಿಗ್ಗೆ 11 ಗಂಟೆಗೆ ಬೆಟ್ಟಕ್ಕೆ ಬರಲಿರುವ ಅವರು ಮಲೆ ಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ದಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುವರು. ನಂತರ ಮಹಾಶಿವರಾತ್ರಿ ವಿಶೇಷ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು. ಮಧ್ಯಾಹ್ನ 1 ಗಂಟೆಗೆ ಬೆಂಗಳೂರಿಗೆ ತೆರಳುವರು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT