ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ವರ್ಷಾಚರಣೆ: ಹೆಚ್ಚು ಭಕ್ತರ ನಿರೀಕ್ಷೆ

ಮಹದೇಶ್ವರ ಬೆಟ್ಟ: ಭಕ್ತರಿಗೆ ಮೂಲಸೌಕರ್ಯ ಒದಗಿಸಲು ಪ್ರಾಧಿಕಾರ ಸಜ್ಜು, ಬಿಗಿ ಬಂದೋಬಸ್ತ್‌
Last Updated 29 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ಮಹದೇಶ್ವರ ಬೆಟ್ಟ: ಹೊಸ ವರ್ಷಾಚರಣೆ ಸಂದರ್ಭದಲ್ಲಿಪ್ರಸಿದ್ಧ ತೀರ್ಥಕ್ಷೇತ್ರವಾದ ಮಹದೇಶ್ವರ ಬೆಟ್ಟಕ್ಕೆ ಭಾರಿ ಸಂಖ್ಯೆಯಲ್ಲಿ ಭಕ್ತರು ಬರುವ ನಿರೀಕ್ಷೆ ಇದ್ದು, ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವು ಅಗತ್ಯ ಸಿದ್ಧತೆ ನಡೆಸುತ್ತಿದೆ.

ಹೊಸ ವರ್ಷದ ಸಂದರ್ಭದಲ್ಲಿ ಅಂದರೆ ಡಿ.31ರಂದು ಜಿಲ್ಲೆಯಲ್ಲದೆ, ಹೊರ ಜಿಲ್ಲೆಗಳು ಹಾಗೂ ನೆರೆಯ ತಮಿಳುನಾಡಿನಿಂದ ಸಾವಿರಾರು ಸಂಖ್ಯೆಯ ಭಕ್ತರು ಬೆಟ್ಟಕ್ಕೆ ಬರುತ್ತಾರೆ. ಅಂದು ರಾತ್ರಿ ಬೆಟ್ಟದಲ್ಲೇ ಉಳಿದುಕೊಂಡು ಜನವರಿ 1ರ ಮುಂಜಾನೆ ಕುಟುಂಬ ಸಮೇತರಾಗಿ ಮಾದಪ್ಪನ ದರ್ಶನ ಪಡೆದು ಊರಿಗೆ ಮರಳುತ್ತಾರೆ.

ಸಿದ್ಧತೆಗಳ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವ ಸ್ವಾಮಿ ಅವರು, ‘ಇತ್ತೀಚಿನ ದಿನಗಳಲ್ಲಿ ಬೆಟ್ಟಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚುತ್ತಿದೆ. ಹೊಸ ವರ್ಷದ ಸಂದರ್ಭದಲ್ಲೂ ಹೆಚ್ಚು ಜನರು ಬರುತ್ತಾರೆ ಎಂಬ ನಿರೀಕ್ಷೆ ಇದೆ. ಈಗಾಗಲೇ ಪ್ರಾಧಿಕಾರದ ಅತಿಥಿಗೃಹಗಳಲ್ಲಿ ಶೇ 70ರಷ್ಟು ಕೊಠಡಿಗಳನ್ನು ಭಕ್ತರು ಕಾಯ್ದಿರಿಸಿದ್ದಾರೆ. ಶೇ 30ರಷ್ಟು ಕೊಠಡಿಗಳನ್ನು ಗಣ್ಯರಿಗಾಗಿ ಮೀಸಲಿಟ್ಟಿದ್ದೇವೆ’ ಎಂದು ಹೇಳಿದರು.

‘ಭಕ್ತರ ಅನುಕೂಲಕ್ಕಾಗಿ ಪ್ರಾಧಿಕಾರ ಎಲ್ಲ ಸಿದ್ಧತೆಗಳನ್ನೂ ಮಾಡಿದೆ. ಎಂದಿನಂತೆ ನಿರಂತರ ಅನ್ನ ದಾಸೋಹ ನಡೆಯಲಿದೆ. ಕುಡಿಯುವ ನೀರು, ನೆರಳಿನ ವ್ಯವಸ್ಥೆ ಮಾಡಲಾಗಿದೆ.2020ನೇ ಇಸವಿಯ ಪಾಕೆಟ್ ಹಾಗೂ ಚಿಕ್ಕ ಕ್ಯಾಲೆಂಡರ್‌ಗಳನ್ನು ಬಿಡುಗಡೆ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

ಮದ್ಯಕ್ಕೆ ಕಡಿವಾಣ, ಬಿಗಿ ಬಂದೋಬಸ್ತ್‌: ಹೊಸ ವರ್ಷದಲ್ಲಿ ಬೆಟ್ಟಕ್ಕೆ ಬಂದು ಮೋಜು ಮಸ್ತಿಯಲ್ಲಿ ತೊಡಗುವವರ ಮೇಲೆ ಪೊಲೀಸರು ನಿಗಾ ವಹಿಸಲಿದ್ದಾರೆ. ಅಕ್ರಮವಾಗಿ ಮದ್ಯವನ್ನು ತಂದು ಬೆಟ್ಟದಲ್ಲಿ ಮಾರಾಟ ಅಥವಾ ಸೇವನೆಗೆ ಕಡಿವಾಣ ಹಾಕಲೂ ಅವರು ಕ್ರಮ ಕೈಗೊಳ್ಳಲಿದ್ದಾರೆ.

‘ಮಕ್ಕಳು ಹಾಗೂ ಮಹಿಳಾ ಭಕ್ತರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಬೆಟ್ಟಕ್ಕೆ ಬರುತ್ತಾರೆ. ಅವರಿಗೆ ರಕ್ಷಣೆ ನೀಡಲು ಆದ್ಯತೆ ನೀಡುತ್ತೇವೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ದೀಪಾವಳಿ ಜಾತ್ರೆಯಿಂದ ಹಿಡಿದು ಕಡೆ ಕಾರ್ತೀಕ ಸೋಮವಾರ ಜಾತ್ರೆವರೆಗೂ ಕಳ್ಳತನ ಅಥವಾ ಇತರೆ ಅಪರಾಧ ಪ್ರಕರಣಗಳು ನಡೆದಿಲ್ಲ’ ಎಂದು ಪೊಲೀಸ್‌ ಇನ್‌ಸ್ಪೆಕ್ಟರ್‌ ಬಿ.ಮಹೇಶ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಡಿಸೆಂಬರ್‌ 31ರಂದುದೇವಾಲಯಕ್ಕೆ ಬರುವ ಎಲ್ಲ ವಾಹನಗಳನ್ನೂ ತಪಾಸಣೆ ಮಾಡಿ, ಅಕ್ರಮ ಮದ್ಯ ಸಾಗಾಟದ ಮೇಲೆ ನಿಗಾ ಇಡಲಾಗುವುದು. ಬೆಟ್ಟದಲ್ಲಿ ಮದ್ಯ ಮಾರಾಟ ಹಾಗೂ ಸೇವನೆಗೂ ಕಡಿವಾಣ ಹಾಕಲಾಗುವುದು’ ಎಂದು ಅವರು ಹೇಳಿದರು.

ಖಾಸಗಿ ಅತಿಥಿಗೃಹಗಳಲ್ಲೂ ಬೇಡಿಕೆ

ಬೆಟ್ಟದಲ್ಲಿರುವ ಆದಿಚುಂಚನಗಿರಿ ಮಠ ಹಾಗೂ ಸುತ್ತೂರು ಮಠದ ಅತಿಥಿಗೃಹಗಳು ಬಹುತೇಕ ಭರ್ತಿಯಾಗಿವೆ. ಬೆಟ್ಟದಲ್ಲಿರುವ ಇತರೆ ಖಾಸಗಿ ಅತಿಥಿಗೃಹಗಳಲ್ಲೂ ಕೊಠಡಿಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT