ಶುಕ್ರವಾರ, ಮೇ 14, 2021
25 °C
ಮುಷ್ಕರ ವಾಪಸ್‌ ತೆಗೆದುಕೊಂಡ ನೌಕರರು, ಗುರುವಾರದಿಂದ ಎಂದಿನಂತೆ ಕಾರ್ಯಾಚರಣೆ

ಕೆಎಸ್‌ಆರ್‌ಟಿಸಿ: ಸಹಜ ಸ್ಥಿತಿಯತ್ತ ಬಸ್‌ ಸಂಚಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಆರನೇ ವೇತನ ಆಯೋಗದ ಶಿಫಾರ‌ಸಿನಂತೆ ವೇತನ ನೀಡಬೇಕು ಎಂದು ಆಗ್ರಹಿಸಿ 15 ದಿನಗಳಿಂದ ನಡೆಯುತ್ತಿದ್ದ ಮುಷ್ಕರವನ್ನು ಸಾರಿಗೆ ನೌಕರರು ಬುಧವಾರ ವಾಪಸ್‌ ಪಡೆದಿದ್ದಾರೆ.

ಕೆಎಸ್‌ಆರ್‌ಟಿಸಿ ಚಾಮರಾಜನಗರ ವಿಭಾಗದಲ್ಲಿ ಬುಧವಾರ ಕಾರ್ಯಾಚರಿಸಿದ ಬಸ್‌ಗಳ ಸಂಖ್ಯೆಯಲ್ಲೂ ಹೆಚ್ಚಳ ಕಂಡು ಬಂದಿದೆ. ವಿಭಾಗದಲ್ಲಿ 310 ಬಸ್‌ಗಳು ಓಡಾಟ ನಡೆಸಿವೆ. 700 ಚಾಲಕರು ಮತ್ತು ನಿರ್ವಾಹಕರು ಹಾಗೂ 130 ಮಂದಿ ಮೆಕ್ಯಾನಿಕ್‌ಗಳು ಕೆಲಸಕ್ಕೆ ಹಾಜರಾಗಿದ್ದಾರೆ. 

ಏ.7ರಂದು ಮುಷ್ಕರ ಆರಂಭಗೊಂಡಾಗಿನಿಂದಲೂ ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಿಂದ ಕಾರ್ಯಾಚರಿಸುತ್ತಿದ್ದ ಖಾಸಗಿ ಬಸ್‌ಗಳು ಬುಧವಾರ ಖಾಸಗಿ ನಿಲ್ದಾಣದಿಂದಲೇ ಓಡಾಟ ನಡೆಸಿದವು. ಬಸ್‌ ಸಂಚಾರದ ವಿಚಾರದಲ್ಲಿ ಮಂಗಳವಾರ ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ಗಳ ಸಿಬ್ಬಂದಿ ನಡುವೆ ತೀವ್ರ ವಾಗ್ವಾದ ನಡೆದಿತ್ತು. 

‘ಬಸ್‌ಗಳ ಸಂಚಾರ ಬಹುತೇಕ ಸಹಜ ಸ್ಥಿತಿಗೆ ಬಂದಿದೆ. ‘ಈಗ ಮುಷ್ಕರ ಮಾಡುವುದು ಸರಿಯಲ್ಲ’ ಎಂಬ ಅಭಿಪ್ರಾಯವನ್ನು ಹೈಕೋರ್ಟ್‌ ವ್ಯಕ್ತಪಡಿಸಿದ ನಂತರ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂ ಪ್ರೇರಿತರಾಗಿ ಕೆಲಸಕ್ಕೆ ಹಾಜರಾಗಿದ್ದಾರೆ. ಗುರುವಾರದಿಂದ ಇನ್ನಷ್ಟು ನೌಕರರು ಬರಲಿದ್ದಾರೆ’ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ ಬಿ. ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ಮೂವರ ವರ್ಗಾವಣೆ: ಈ ಮಧ್ಯೆ ಮುಷ್ಕರ ನಿರತ ಮೂವರು ನೌಕರರನ್ನು ಮಂಗಳವಾರ ಕೋಲಾರ ಘಟಕಕ್ಕೆ ವರ್ಗಾವಣೆ ಮಾಡಲಾಗಿದೆ. ಇವರಲ್ಲಿ ಇಬ್ಬರು ಚಾಲಕರು ಹಾಗೂ ಒಬ್ಬರು ಚಾಲಕ ಕಂ ನಿರ್ವಾಹಕ. 

ಪ್ರಯಾಣಿಕರ ಸಂಖ್ಯೆ ಕಡಿಮೆ: ಬುಧವಾರ ಸಾರಿಗೆ ಬಸ್‌ಗಳ ಸಂಖ್ಯೆ ಹೆಚ್ಚಿದ್ದರೂ ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು. ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲಿ ಖಾಸಗಿ ಬಸ್‌ಗಳು ಇಲ್ಲದೇ ಇದ್ದುದರಿಂದ ಜನರು ಖಾಸಗಿ ನಿಲ್ದಾಣದತ್ತ ಮುಖ ಮಾಡಿದ್ದರು. 

‘ಹೈಕೋರ್ಟ್‌ ಮಾತಿಗೆ ಬೆಲೆಕೊಟ್ಟು ಮುಷ್ಕರ ವಾಪಸ್‌’

ಕೋವಿಡ್‌ ಸಂದರ್ಭದಲ್ಲಿ ಮುಷ್ಕರ ನಡೆಸುವುದು ಸೂಕ್ತವಲ್ಲ ಎಂಬ ಹೈಕೋರ್ಟ್‌ನ ಅಭಿಪ್ರಾಯಕ್ಕೆ ಬೆಲೆಕೊಟ್ಟು ಮುಷ್ಕರ ವಾಪ‍ಸ್‌ ತೆಗೆದುಕೊಂಡಿದ್ದೇವೆ ಎಂದು ಸಾರಿಗೆ ನೌಕರರ ಒಕ್ಕೂಟದ ಸದಸ್ಯರು ಹೇಳಿದ್ದಾರೆ.

‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಒಕ್ಕೂಟದ ರಾಜೇಶ್‌ ಅವರು, ‘ಮುಷ್ಕರವನ್ನು ವಾಪಸ್‌ ಪಡೆದಿದ್ದೇವೆ. ಕೋಡಿಹಳ್ಳಿ ಚಂದ್ರಶೇಖರ್‌ ಅವರು ಪತ್ರಿಕಾಗೋಷ್ಠಿ ನಡೆಸಿ ನಿರ್ಧಾರವನ್ನು ಘೋಷಣೆ ಮಾಡಿದ್ದಾರೆ. ಹೈಕೋರ್ಟ್‌ ನೀಡಿರುವ ಸಲಹೆಗೆ ಮನ್ನಣೆ ನೀಡಿ ಈ ನಿರ್ಧಾರ ಕೈಗೊಂಡಿದ್ದೇವೆ. ತಕ್ಷಣದಿಂದಲೇ ಕರ್ತವ್ಯಕ್ಕೆ ಹಾಜರಾಗುತ್ತೇವೆ. ಗುರುವಾರದಿಂದ ಪೂರ್ಣಪ್ರಮಾಣದಲ್ಲಿ ಕರ್ತವ್ಯ ನಿರ್ವಹಿಸುತ್ತೇವೆ’ ಎಂದರು. 

‘ಕರ್ತವ್ಯಕ್ಕೆ ಹಾಜರಾಗುತ್ತಿರುವ ನೌಕರರ ಬಳಿ, ಇನ್ನು ಮುಂದೆ ಮುಷ್ಕರ ಮಾಡುವುದಿಲ್ಲ ಎಂದು ಅಧಿಕಾರಿಗಳು ಮುಚ್ಚಳಿಕೆ ಬರೆಸಿಕೊಳ್ಳುತ್ತಿದ್ದಾರೆ’ ಎಂದೂ ಅವರು ಆರೋಪಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು