ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಜಾನ್: ಹಲೀಂ ಜೊತೆ ಬಿರಿಯಾನಿ ಘಮಲು

ರಾತ್ರಿ ಪೂರಾ ಷಬ್-ಎ-ಖದ್ರ್‌ ಆಚರಣೆ: ಮುಸ್ಲಿಮರಿಂದ ಪ್ರಾರ್ಥನೆ  
Published 7 ಏಪ್ರಿಲ್ 2024, 16:33 IST
Last Updated 7 ಏಪ್ರಿಲ್ 2024, 16:33 IST
ಅಕ್ಷರ ಗಾತ್ರ

ಯಳಂದೂರು: ತಾಲ್ಲೂಕಿನಾದ್ಯಂತ ಮುಸ್ಲಿಮರು ಶನಿವಾರ ರಾತ್ರಿ ಷಬ್-ಎ-ಖದ್ರ್‌ ಅನ್ನು ಸಡಗರ ಸಂಭ್ರಮಗಳ ನಡುವೆ ರಾತ್ರಿಪೂರ ಆಚರಿಸಿದರು. ರಂಜಾನ್‌ ಮಾಸದ 27ನೇ ದಿನದ ಮುನ್ನಾ ದಿನ ರಾತ್ರಿ ಈ ಆಚರಣೆ ಮಾಡಲಾಗುತ್ತದೆ. 

ರಂಜಾನ್ ಅಂಗವಾಗಿ ಮೊದಲ ದಿನದಿಂದ ಮಸೀದಿಗಳಲ್ಲಿ ಹಜರತ್‌ಗಳು ಕುರಾನ್ ಓದಿ, 26ನೇ ದಿನ ಪಠಣವನ್ನು ಮುಕ್ತಾಯಗೊಳಿಸಿದರು. ಚಂದ್ರೋದಯ ದರ್ಶನ ನಂತರ ಪವಿತ್ರ ಮಾಸದ ಕೊನೆಯಲ್ಲಿ ನಡೆಯುವ ‘ರಂಜಾನ್’ ಕಳೆಗಟ್ಟಲಿದೆ. ಬುಧವಾರ ಇಲ್ಲವೇ ಗುರುವಾರ ಮುಸ್ಲಿಮರು ಹಬ್ಬ ಆಚರಿಸಲಿದ್ದಾರೆ. 

ರಂಜಾನ್ ಮಾಸ ಮುಸ್ಲಿಮರಿಗೆ ಪವಿತ್ರವಾದುದು.  ಉಪವಾಸ ಮುಗಿಸಿದ ನಂತರ ತರಹೇವಾರಿ ಖಾದ್ಯಗಳನ್ನು ಸೇವಿಸುತ್ತಾರೆ. ಒಣದ್ರಾಕ್ಷಿ, ಖರ್ಜೂರ, ಮಾಂಸದೂಟಕ್ಕೂ ಮೊದಲ ಪ್ರಾಶಸ್ತ್ಯ ನೀಡಲಾಗುತ್ತದೆ. ಮಸೀದಿಗಳ ಮುಂದೆ ಮುಂಜಾನೆ ಮತ್ತು ಸಂಜೆ ಕಚೋರಿ, ಜಿಲೇಬಿ, ಸಮೋಸಕ್ಕೂ ಹೆಚ್ಚಿನ ಬೇಡಿಕೆ ಇದ್ದು, ಹಬ್ಬದ ಜೊತೆ ತಿಂಡಿ ತಿನಿಸುಗಳ ಭರ್ಜರಿ ಮಾರಾಟವೂ ನಡೆಯುತ್ತದೆ.

‘ಈ ಬಾರಿ ಬಿಸಿಲು ಹೆಚ್ಚಿದೆ. ಮಹಿಳೆಯರು ಮತ್ತು ಮಕ್ಕಳು ಲಘು ಪೋಷಕಾಂಶ ಹೊಂದಿರುವ ಷರಬತ್ತು ಮತ್ತು ಪಾನಕ ಸೇವಿಸಿದರೆ, ರೊಹಬ್ಬಾ, ಕಾಮಕಸ್ತೂರಿ ಮತ್ತು ಇಸಬ್‌ಗೋಲ್‌ ಪುಡಿಯಿಂದ ತಯಾರಿಸಿದ ಪಾನೀಯಗಳಿಗೆ ಆದ್ಯತೆ. ಮಸೀದಿ ಪಕ್ಕದಲ್ಲಿ ಇಫ್ತಾರ್ ಸಮಯ ಕಲ್ಲಂಗಡಿ,  ಈರುಳ್ಳಿ ಬಜ್ಜಿ, ಮಜ್ಜಿಗೆ ಸೇವನೆಗೂ ಆದ್ಯತೆ ನೀಡುತ್ತಾರೆ. ಪಾಲಾಕ್, ಆಲೂಗಡ್ಡೆ, ಈರುಳ್ಳಿ ಬಳಸಿ ಸಿದ್ಧಪಡಿಸಿದ ಸಮೋಸ ಮತ್ತು ಪಪ್ಸ್ ಮಾರಾಟವೂ ನಡೆಯುತ್ತದೆ’ ಎಂದು ಪಟ್ಟಣದ ನಿವಾಸಿ ಮುಜಾಮಿಲ್ ಹೇಳಿದರು.

ಬಾಯಲ್ಲಿ ನೀರೂರಿಸುವ 'ಹಲೀಂ': ‘ಇತ್ತೀಚಿನ ದಿನಗಳಲ್ಲಿ ಮುಸ್ಲಿಂ ಸಮುದಾಯದವರ ಮನೆಗಳಲ್ಲಿ ‘ಹಲೀಂ’ ಅಡುಗೆ ಮನ್ನಣೆ ಪಡೆಯುತ್ತಿದೆ. ಮಾಂಸದ ಜೊತೆ ಗೋಧಿ, ಬೇಳೆ ಬಳಸಿ ಖಾದ್ಯ ಸಿದ್ಧಪಡಿಸಲಾಗುತ್ತದೆ. ಹಬ್ಬಕ್ಕೆ ಬರುವ ಹಿಂದೂ ಬಾಂಧವರು ಹಲೀಂ ಇಷ್ಟಪಡುತ್ತಾರೆ. ಪಾರ್ಸೆಲ್ ಮೂಲಕವೇ ಬೇಡಿಕೆ ಸಲ್ಲಿಸುವವರು ಇದ್ದಾರೆ. ಉಳಿದಂತೆ ಬಿರಿಯಾನಿ ಘಮಲು ಹಬ್ಬದಲ್ಲಿ ಹೆಚ್ಚಿರುತ್ತದೆ’ ಎಂದು ತಾಜ್ ಹೋಟೆಲ್ ಮಾಲೀಕ ಉಸ್ಮಾನ್ ಹೇಳಿದರು. 

ಕುಸಿದ ಹಬ್ಬದ ಸಂತಸ: ‘ಈ ಸಲ ಹಬ್ಬದ ಸಡಗರ ಕಡಿಮೆಯಾಗಿದೆ. ರೇಷ್ಮೆ ಉದ್ಯಮ ನೆಲಕಚ್ಚಿದೆ. ಬಹಳಷ್ಟು ಕಾರ್ಮಿಕರು ಕೂಲಿ ಸಿಗದೆ ಪರಿತಪಿಸಿದ್ದಾರೆ. ಬರದ ಬೇಗೆ ಇನ್ನಿಲ್ಲದಂತೆ ಕಾಡಿದೆ. ಇದರಿಂದ ಆದಾಯ ಕೈಸೇರಿಲ್ಲ. ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗಿದ್ದು, ರಂಜಾನ್ ಸಂಭ್ರಮವನ್ನು ಕಸಿದಿದೆ. ಮಳಿಗೆ ಮತ್ತು ಮಸೀದಿಗಳ ಮುಂದೆ ಕಾಣುತ್ತಿದ್ದ ಜನಜಂಗುಳಿ ಕಡಿಮೆಯಾಗಿದೆ. ಆದರೂ, ಹಬ್ಬವನ್ನು ಆಚರಿಸುವ ಮೂಲಕ ಮಳೆ ಮತ್ತು ಬೆಳೆಗಾಗಿ ಅಲ್ಲಾಹ್‌ನಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು’ ಎಂದು ರೇಷ್ಮೆ ಉದ್ಯಮಿ ಮಾಂಬಳ್ಳಿ ಜೆ.ಶಕೀಲ್ ಅಹಮದ್ ತಿಳಿಸಿದರು.

ಜುಮಾ ಅಲ್ವಿದಾ ಪ್ರಾರ್ಥನೆ

ರಂಜಾನ್ ಮಾಸದ ಕೊನೆಯ ಶುಕ್ರವಾರ ಜುಮಾ ಅಲ್ವಿದಾ ಆಚರಿಸಲಾಗುತ್ತದೆ. ಒಂದು ತಿಂಗಳಲ್ಲಿ ಮಾಡಿರುವ ಉಪವಾಸಕ್ಕಿಂತ ಈ ವಾರದಲ್ಲಿ ಮಾಡುವ ಪ್ರಾರ್ಥನೆ ಶ್ರೇಷ್ಠ ಎನ್ನುವ ನಂಬಿಕೆ ಇದೆ. ಷಬ್ – ಖದ್ರ್‌  ಅನ್ನು ರಂಜಾನ್‌ ಮಾಸದ 26ನೇ ದಿನದಂದು ಆಚರಿಸಲಾಗುತ್ತದೆ. ರಾತ್ರಿ ವಿಶೇಷ ಪ್ರಾರ್ಥನೆ ನಡೆಯುತ್ತದೆ. ನಮಾಜ್ ಮುಗಿದ ನಂತರ ಸಿಹಿ ಹಂಚಲಾಗುತ್ತದೆ.  ಸ್ಥಿತಿವಂತರು ಅಗತ್ಯ ಇರುವವರಿಗೆ ಬಟ್ಟೆ ಉಡುಗೊರೆ ಆಹಾರ ಹಣದ ಸಹಾಯ ಮಾಡುತ್ತಾರೆ’ ಎಂದು ಮಾಂಬಳ್ಳಿ ಜಾಮೀಯಾ ಮಸೀದಿಯ ಹಜರತ್ ಮಾಮೂನ್ ರಶೀದ್ ಹಿಮಾಮತ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT