ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಳಂದೂರು | ನನ್ನ ಆಸ್ತಿ ಅಭಿಯಾನ: ಆರ್‌‌‌ಟಿಸಿಗೆ ಆಧಾರ್ ಜೋಡಣೆ

ಮುಂಜಾನೆ ಹಳ್ಳಿಗಳಲ್ಲಿ ಕಂದಾಯ ಇಲಾಖೆ ನೌಕರರ ವಾಸ್ತವ್ಯ
Published 30 ಮೇ 2024, 13:34 IST
Last Updated 30 ಮೇ 2024, 13:34 IST
ಅಕ್ಷರ ಗಾತ್ರ

ಯಳಂದೂರು: ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಪಹಣಿಗಳಿಗೆ ಆಧಾರ್ ಜೋಡಣೆ ಕಾರ್ಯಕ್ಕೆ ಕಂದಾಯ ಇಲಾಖೆ ಚಾಲನೆ ನೀಡಿದೆ.

ಆದರೆ, ರೈತರಲ್ಲಿ ಈ ಬಗ್ಗೆ ಇನ್ನೂ ಜಾಗೃತಿ ಇಲ್ಲದಿರುವುದು ಜೋಡಣೆ ಕಾರ್ಯಕ್ಕೆ ಹಿನ್ನಡೆಯಾಗಿ ಪರಿಣಮಿಸಿದೆ.

ನನ್ನ ಆಸ್ತಿ ಅಭಿಯಾನದಡಿ ಭೂಮಿ ವಾರಸುದಾರರಿಗೆ ಉಚಿತ ನೋಂದಣಿ ಮಾಡಿಕೊಡಲಾಗುತ್ತದೆ. ಇದರಿಂದ ಸರ್ಕಾರದ ಸೌಲಭ್ಯ ಬೇಸಾಯಗಾರರಿಗೆ ನೇರವಾಗಿ ಸಿಗಲಿದೆ. ಪದೇಪದೇ ಆರ್ ಟಿಸಿ ಪಡೆಯುವ ತಾಪತ್ರಯವೂ ತಪ್ಪಲಿದೆ. ಗ್ರಾಮ ಲೆಕ್ಕಿಗರು ಇದರ ಮಹತ್ವ ಮನದಟ್ಟು ಮಾಡಿ ಮನೆಮನೆಗೆ ತೆರಳಿ ಪಹಣಿ ಮತ್ತು ಆಧಾರ್ ಜೋಡಣೆ ಕೆಲಸ ಮಾಡುತ್ತಿದ್ದು, ಸಾಗುವಳಿದಾರರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

‘ಕೃಷಿಕರು ಆರ್ ಟಿಸಿ-ಆಧಾರ್ ಜೋಡಣೆ ಕೆಲಸ ಮುಗಿಸಿದರೆ ನಕಲಿಗೆ ಅವಕಾಶ ಇಲ್ಲ. ಬೆಳೆ ಪರಿಹಾರ, ಮ್ಯುಟೇಶನ್ ಸೇರಿ ಎಲ್ಲಾ ಸವಲತ್ತು ಪಡೆಯಲು ಸುಲಭವಾಗಲಿದೆ. ಕಚೇರಿಗೆ ಅಲೆಯುವ ತಾಪತ್ರಯ ತಪ್ಪಲಿದೆ. ಕೃಷಿ ಭೂಮಿ ಒಡೆತನದ ದಾಖಲೆ ಅಧಿಕೃತವಾಗಿ ಸಿಗಲಿದೆ. ಈ ದೆಸೆಯಲ್ಲಿ ಬೇಸಾಯಗಾರರ ಮನೆಗಳಿಗೆ ತೆರಳಿ ನನ್ನ ಆಸ್ತಿ ಅಭಿಯಾನ ಜಾಗೃತಿ ಮತ್ತು ನೋಂದಣಿ ಕಾರ್ಯಕ್ಕೆ ಚಾಲನೆ ನೀಡಲಾಗಿದೆ’ ಎಂದು ಗ್ರಾಮ ಲೆಕ್ಕಾಧಿಕಾರಿ ರಮ್ಯ ಹೇಳಿದರು.

‘ಬೆಳಗಿನ ಸಮಯದಲ್ಲಿ ವಿಎಗಳು ಮನೆಗೆ ಬಂದು ಪಹಣಿಗೆ ಆಧಾರ್ ಸೀಡ್ಲಿಂಗ್ ಮಾಡಿದ್ದಾರೆ. ಇದರಿಂದ ವೃದ್ಧರು ಮತ್ತು ಸ್ತ್ರೀ ಕೃಷಿಕರಿಗೆ ಅನುಕೂಲ ಆಗಿದೆ. 10 ನಿಮಿಷದಲ್ಲಿ ಪ್ರಕ್ರಿಯೆ ಮುಗಿಯುತ್ತದೆ. ನಮ್ಮ ಪೋಟೊ ಮತ್ತು ವಿಳಾಸ ಪಹಣೆಯಲ್ಲಿ ಕೂರುತ್ತದೆ’ ಎಂದು ಮಲಾರಪಾಳ್ಯ ಚಂದ್ರಮ್ಮ ಹೇಳಿದರು.

ಸರ್ಕಾರದ ಸೌಲಭ್ಯ ಪಡೆಯಿರಿ: ‘ರೈತರು ಸ್ವಯಂ ಪ್ರೇರಿತರಾಗಿ ಆಧಾರ್ ಸೀಡಿಂಗ್ ಮಾಡಿಸಲು ಮುಂದೆ ಬರುತ್ತಿಲ್ಲ. ಹೀಗಾಗಿ, ಗ್ರಾಮ ಮಟ್ಟದಲ್ಲಿ ಸಿಬ್ಬಂದಿ ಗಣಕ ಯಂತ್ರದೊಂದಿಗೆ ಧಾವಿಸಿ, ರೈತರನ್ನು ಈ ದೆಸೆಯಲ್ಲಿ ಉತ್ತೇಜಿಸಿ ಜೋಡಣೆ ಕಾರ್ಯ ಮಾಡುತ್ತಿದ್ದಾರೆ. ಈಚೆಗೆ ಸಾಗುವಳಿದಾರರಲ್ಲಿ ಮುಂದೆ ಬರುತ್ತಿದ್ದಾರೆ. ನಿಗಧಿತ ಸಮಯದಲ್ಲಿ ಕಂದಾಯ ನಿರೀಕ್ಷಕರು, ಕಂದಾಯ ಸಿಬ್ಬಂದಿ ಗ್ರಾಮಕ್ಕೆ ಬಂದಾಗ ರೈತರು ಸಹಕಾರ ನೀಡಬೇಕು. ಮಹಿಳಾ ಕೃಷಿಕರನ್ನು ಈ ದೆಸೆಯಲ್ಲಿ ಉತ್ತೇಜಿಸಿ ಈ ಕಾರ್ಯಕ್ಕೆ  ಸಹಕರಿಸಬೇಕು’ ಎಂದು ರಾಜಸ್ವ ನಿರೀಕ್ಷಕ ಎಂ.ಎಸ್.ಯದುಗಿರಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT