ಬುಧವಾರ, ಮಾರ್ಚ್ 29, 2023
25 °C

ಕೇಂದ್ರದ್ದು ದೂರದೃಷ್ಟಿಯ ಬಜೆಟ್‌: ಎನ್‌.ಮಹೇಶ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ‘ದೇಶದ ಸ್ವಾತಂತ್ರ್ಯದ ಶತಮಾನೋತ್ಸವದ ಸಂದರ್ಭದಲ್ಲಿ ಭಾರತ ಯಾವ ರೀತಿ ಅಭಿವೃದ್ಧಿಯಾಗಬೇಕು ಎಂಬುದನ್ನು ಗಮನದಲ್ಲಿ ಇಟ್ಟುಕೊಂಡು ಕೇಂದ್ರ ಸರ್ಕಾರ ಈ ವರ್ಷದ ಬಜೆಟ್‌ ಮಂಡಿಸಿದೆ. ನಿಜಕ್ಕೂ ಇದು ಅಮೃತ ಕಾಲದ ಬಜೆಟ್‌’ ಎಂದು ಕೊಳ್ಳೇಗಾಲ ಶಾಸಕ ಎನ್‌.ಮಹೇಶ್‌ ಸೋಮವಾರ ಬಣ್ಣಿಸಿದರು. 

ಬಿಜೆಪಿ ಮುಖಂಡರೊಂದಿಗೆ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ‘ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗಿವೆ. 2047ಕ್ಕೆ 100 ವರ್ಷವಾಗುತ್ತದೆ. ಇನ್ನು 25 ವರ್ಷಗಳಲ್ಲಿ ದೇಶ ಯಾವ ರೀತಿ ಅಭಿವೃದ್ಧಿಯಾಗಬೇಕು ಎಂದು ದೂರದೃಷ್ಟಿ ಇಟ್ಟುಕೊಂಡು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಬಜೆಟ್‌ ಮಂಡಿಸಿದ್ದಾರೆ’ ಎಂದು ತಿಳಿಸಿದರು.

‘ಬಜೆಟ್‌ನ ಸೂಕ್ಷ್ಮಗಳನ್ನು ಗಮನಿಸಿದರೆ 2047ರ ಗುರಿಗೆ ಹಾಕಿರುವ ಅಡಿಪಾಯ ಇದು. ಇಲ್ಲಿ ದೇಶದ ಯುವಜನರು, ದುಡಿಯುವ ಸಾಮರ್ಥ್ಯ ಇರುವವರು, ಕೃಷಿ, ಮೂಲಸೌಕರ್ಯ, ಹಸಿರು ಅಭಿವೃದ್ಧಿ, ಆರೋಗ್ಯ, ಮಹಿಳಾ ಸಬಲೀಕರಣ ಸೇರಿದಂತೆ ಎಲ್ಲ ಕ್ಷೇತ್ರಗಳಿಗೂ ಆದ್ಯತೆ ನೀಡಲಾಗಿದೆ’ ಎಂದರು. 

‘₹ 45 ಲಕ್ಷ ಕೋಟಿ ಬಜೆಟ್‌ನಲ್ಲಿ ಕೃಷಿವಲಯಕ್ಕೆ ₹20 ಲಕ್ಷ ಕೋಟಿ ವೆಚ್ಚ ಮಾಡಲು ಮೀಸಲಿಟ್ಟಿದ್ದಾರೆ. ಈ ಬಜೆಟ್‌ನ್ನು ನಿರ್ಮಲ ಸೀತಾರಾಮನ್ ಅವರು ಸಪ್ತರ್ಷಿ ಬಜೆಟ್ ಎಂದು ಕರೆದಿದ್ದಾರೆ. ದೇಶವನ್ನು ಪ್ರಗತಿಯ ‍ಪಥದಲ್ಲಿ ಮುನ್ನಡೆಸುವ ಏಳು ವಿಷಯಗಳನ್ನು ಅವರು ಪ್ರಸ್ತಾಪಿಸಿದ್ದಾರೆ’ ಎಂದರು. 

ರಾಜ್ಯಕ್ಕೂ ಕೊಡುಗೆ: ಈ ಸಾಲಿನ ಬಜೆಟ್‌ನಲ್ಲಿ ರಾಜ್ಯಕ್ಕೂ ಹಲವು ಕೊಡುಗೆಗಳನ್ನು ನೀಡಲಾಗಿದೆ. ರಾಜ್ಯದ ನೀರಾವರಿ ದೃಷ್ಟಿಯಿಂದ ಭದ್ರಾ ಮೇಲ್ದಂಡೆ ಯೋಜನೆ ₹ 5,300 ಕೋಟಿ ಹಂಚಿಕೆ ಮಾಡಲಾಗಿದೆ. ರಾಜ್ಯದ ‌ರೈಲ್ವೆ ಯೋಜನೆಗಳಿಗೆ ₹ 7,561 ಕೋಟಿ ಅನುದಾನ ನೀಡಲಾಗಿದೆ’ ಎಂದರು. 

ಬಿಜೆಪಿ ಮುಖಂಡ ಎಂ.ರಾಮಚಂದ್ರ, ಬಿಜೆಪಿ ಜಿಲ್ಲಾ ವಕ್ತಾರ ಅಯ್ಯನಪುರ ಶಿವಕುಮಾರ್, ಗ್ರಾಮಾಂತರ ಮಂಡಲ ಅಧ್ಯಕ್ಷ ಬಸವಣ್ಣ, ನಗರ ಮಂಡಲ ಅಧ್ಯಕ್ಷ ನಾಗರಾಜು, ಮುಖಂಡ ಕಿಲಗೆರೆ ಬಸವರಾಜು, ಜಿಲ್ಲಾ ಮಾಧ್ಯಮ ಪ್ರಮುಖ್ ಮಂಜುನಾಥ್ ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.