ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ | ಪ್ರಧಾನಮಂತ್ರಿ ವಸತಿ ಯೋಜನೆ; ಬಾರದ ಅನುದಾನ

ರಾಜ್ಯ ಸರ್ಕಾರದ ಬಸವ, ಅಂಬೇಡ್ಕರ್‌ ವಸತಿ ಯೋಜನೆ ಜಾರಿಯಲ್ಲಿ, ಗ್ರಾಮೀಣ, ನಗರಗಳಲ್ಲಿ ನಿವೇಶನ ಕೊರತೆ
Last Updated 4 ಸೆಪ್ಟೆಂಬರ್ 2022, 19:31 IST
ಅಕ್ಷರ ಗಾತ್ರ

ಚಾಮರಾಜನಗರ: ಗ್ರಾಮೀಣ ಭಾಗಗಳಲ್ಲಿ ಬಡ ಕುಟುಂಬಗಳಿಗೆ ಮನೆ ನಿರ್ಮಿಸಲು ನೆರವಾಗುವ ಉದ್ದೇಶ
ದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಧಾನ ಮಂತ್ರಿ ವಸತಿ ಯೋಜನೆ (ಪಿಎಂಎವೈ) ಅಡಿಯಲ್ಲಿ ಮೂರು ವರ್ಷಗಳಿಂದ ಅನುದಾನ ಬಂದಿಲ್ಲ.

ಇಂದಿರಾ ಗಾಂಧಿ ವಸತಿ ಯೋಜನೆಯನ್ನು ಕೇಂದ್ರ ಸರ್ಕಾರವು 2016–17ರಲ್ಲಿ ಪಿಎಂಎವೈ ಎಂದು ಬದಲಾಯಿಸಿತ್ತು. ಅದಾದ ಬಳಿಕ 2019–20ರವರೆಗೆ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಬಡ ಕುಟುಂಬಗಳಿಗೆ ಮನೆ ನಿರ್ಮಿಸಲು ಅನುದಾನ ಬಂದಿತ್ತು. 2020–21ರ ಬಳಿಕ ಅನುದಾನ ಬಂದಿಲ್ಲ.

ಆದರೆ, ಪಿಎಂಎವೈ ಜಾರಿಯಲ್ಲಿ ಇಲ್ಲದಿದ್ದರೂ ರಾಜ್ಯ ಸರ್ಕಾರದ ಬಸವ ವಸತಿ ಯೋಜನೆ ಹಾಗೂ ಡಾ.ಬಿ.ಆರ್‌. ಅಂಬೇಡ್ಕರ್‌ವಸತಿ ಯೋಜನೆಗಳು ಜಾರಿಯಲ್ಲಿವೆ. ಜಿಲ್ಲಾ ಪಂಚಾಯಿತಿ ಮೇಲುಸ್ತುವಾರಿಯಲ್ಲಿ ಯೋಜನೆಗಳು ಅನುಷ್ಠಾನಗೊಳ್ಳುತ್ತಿವೆ.

ಜಿಲ್ಲಾ ಪಂಚಾಯಿತಿಯ ಅಂಕಿ ಅಂಶಗಳ ಪ್ರಕಾರ, ಬಸವ ಹಾಗೂ ಅಂಬೇಡ್ಕರ್‌ ವಸತಿ ಯೋಜನೆಗಳ ಅಡಿಯಲ್ಲಿ 2021–22ನೇ ಸಾಲಿನಲ್ಲಿ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ, ಬಿಪಿಎಲ್‌ ಕುಟುಂಬಗಳಿಗೆ 4,920 ಮನೆಗಳನ್ನು ನಿರ್ಮಿಸುವ ಗುರಿಯನ್ನು ಸರ್ಕಾರ ನೀಡಿದೆ. ಈ ಪೈಕಿ 3,853 ಮನೆಗಳ ನಿರ್ಮಾಣಕ್ಕೆ ಒಪ್ಪಿಗೆ ಸಿಕ್ಕಿದೆ.

ಬಸವ ವಸತಿ ಯೋಜನೆ ಸಾಮಾನ್ಯ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವರ್ಗಗಳಿಗೆ ಮೀಸಲಾಗಿದ್ದರೆ, ಡಾ.ಬಿ.ಆರ್‌.ಅಂಬೇಡ್ಕರ್‌ ಯೋಜನೆ ಪರಿಶಿಷ್ಟ ವರ್ಗ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದ ಕುಟುಂಬಗಳಿಗೆ ಮೀಸಲಾಗಿದೆ. ಬಸವ ಯೋಜನೆಯಡಿ ಸರ್ಕಾರ ಮನೆ ನಿರ್ಮಿಸುವವರಿಗೆ ₹1.20 ಲಕ್ಷ ಸಹಾಯಧನ ಕೊಡುತ್ತದೆ. ಅಂಬೇಡ್ಕರ್‌ ವಸತಿ ಯೋಜನೆ ಅಡಿಯಲ್ಲಿ ₹1.75 ಲಕ್ಷ ಸಹಾಯಧನ ಲಭ್ಯವಿದೆ.

ನಗರ ಪ್ರದೇಶದಲ್ಲಿ ಯೋಜನೆ ಜಾರಿ: ಪ್ರಧಾನ ಮಂತ್ರಿ ವಸತಿ ಯೋಜನೆ ನಗರ ಪ್ರದೇಶಗಳಲ್ಲಿ ಜಾರಿಯಲ್ಲಿದೆ. ಕಳೆದ ಸಾಲಿನಲ್ಲಿ ಜಿಲ್ಲೆಯಲ್ಲಿ 375 ಮನೆಗಳ ನಿರ್ಮಾಣಕ್ಕೆ ಗುರಿ ನೀಡಲಾಗಿದೆ. ಈ ಪೈಕಿ 245 ಮನೆಗಳ ನಿರ್ಮಾಣಕ್ಕೆ ಅನುಮತಿ ಸಿಕ್ಕಿದೆ. ಹಲವು ಕುಟುಂಬಗಳಿಗೆ ಈಗಾಗಲೇ ಕಾರ್ಯಾದೇಶಗಳನ್ನೂ ನೀಡಲಾಗಿದೆ ಎಂದು ಹೇಳುತ್ತಾರೆ ಅಧಿಕಾರಿಗಳು.

ಬಾರದ ಅನುದಾನ: ಪ್ರಧಾನ ಮಂತ್ರಿ ವಸತಿ ಯೋಜನೆ ಅಡಿಯಲ್ಲಿ ಸಾಮಾನ್ಯ ಫಲಾನುಭವಿಗಳಿಗೆ ₹1.20 ಲಕ್ಷ
ಹಾಗೂ ಎಸ್‌ಸಿ ಎಸ್‌ಟಿಗಳಿಗೆ ಕೇಂದ್ರದ ₹1.20 ಲಕ್ಷ, ರಾಜ್ಯದ ₹55 ಸಾವಿರ ಸೇರಿ ₹1.75 ಲಕ್ಷ ಸಹಾಯಧನ ಬರುತ್ತದೆ.

2013–14ರ ಸಾಲಿನಿಂದ 2016–17ರವರೆಗೆ ಇಂದಿರಾ ವಸತಿ ಯೋಜನೆ ಅಡಿಯಲ್ಲಿ ಜಿಲ್ಲೆಯಲ್ಲಿ 13,408 ಮನೆಗಳ ನಿರ್ಮಾಣಕ್ಕೆ ಅನುಮತಿ ನೀಡಲಾಗಿತ್ತು. ಈ ಪೈಕಿ 12,251 ಮನೆಗಳ ನಿರ್ಮಾಣ ಪೂರ್ಣಗೊಂಡಿದೆ. 1,188 ಮನೆಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. 509 ಫಲಾನುಭವಿಗಳು ಮನೆ ನಿರ್ಮಿಸಲು ಮುಂದಾಗಿಲ್ಲ.

2016–17ರಿಂದ 2019–20ರ ನಡುವೆ ಪಿಎಂಎವೈ ಅಡಿಯಲ್ಲಿ 9,545 ಮನೆಗಳ ನಿರ್ಮಾಣಕ್ಕೆ ಅನುಮತಿ ನೀಡಲಾಗಿತ್ತು. ಈ ಪೈಕಿ 7,354 ಮನೆಗಳು ಪೂರ್ಣಗೊಂಡಿವೆ. ಉಳಿದ ಮನೆಗಳ ಪೈಕಿ 1,808 ಫಲಾನುಭವಿಗಳ ಅನುದಾನ ತಡೆ ಹಿಡಿಯಲಾಗಿದೆ. ಉಳಿದ ಮನೆಗಳ ಕೆಲಸ ಪ್ರಗತಿಯಲ್ಲಿದೆ.

‘ವಸತಿ ಹಾಗೂ ನಿವೇಶನ ರಹಿತ ಕುಟುಂಬಗಳ ಸಮೀಕ್ಷೆಯಲ್ಲಿ ಗುರುತಿಸಿಲಾಗಿರುವ ಕುಟುಂಬಗಳನ್ನು ಮಾತ್ರ ವಸತಿ ಯೋಜನೆಗೆ ಆಯ್ಕೆ ಮಾಡಬೇಕು ಎಂಬ ನಿಯಮ ಇದೆ. ಆದರೆ, ಸಮೀಕ್ಷೆಯಲ್ಲಿ ಇಲ್ಲದವರ ಹೆಸರುಗಳನ್ನು ಸೇರಿಸಲಾಗಿದೆ ಎಂಬ ಕಾರಣಕ್ಕೆ ಕೆಲವು ಕುಟುಂಬಗಳಿಗೆ ಅನುದಾನ ಬಂದಿಲ್ಲ. ಇಡೀ ರಾಜ್ಯದಲ್ಲಿ ಈ ಸಮಸ್ಯೆಯಾಗಿದ್ದು, ಸರ್ಕಾರದ ಹಂತದಲ್ಲಿ ಪ್ರಯತ್ನಗಳು ನಡೆಯುತ್ತಿವೆ’ ಎಂದು ಹೇಳುತ್ತಾರೆ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು.

ನಗರ ಪ್ರದೇಶದಲ್ಲಿ: ನಗರ ಪ್ರದೇಶಗಳಲ್ಲಿ ಪಿಎಂಎವೈ, ವಾಜಪೇಯಿ ನಗರ ವಸತಿ ಯೋಜನೆ ಹಾಗೂ ಡಾ.ಬಿ.ಆರ್‌.ಅಂಬೇಡ್ಕರ್‌ ವಸತಿ ಯೋಜನೆ ಜಾರಿಯಲ್ಲಿವೆ. ನಗರ ಪ್ರದೇಶದ ವಸತಿ ಯೋಜನೆ ಫಲಾನುಭವಿಗಳಿಗೆ ಅನುಕೂಲ ಹೆಚ್ಚು. ಪಿಎಂಎವೈಯೊಂದಿಗೆ ವಾಜಪೇಯಿ ವಸತಿ ಯೋಜನೆ ಇಲ್ಲವೇ ಅಂಬೇಡ್ಕರ್‌ ವಸತಿ ಯೋಜನೆಯನ್ನು ವಿಲೀನ ಮಾಡುವುದಕ್ಕೆ ಅವಕಾಶ ಇದೆ. ಹೀಗಾಗಿ ಎರಡೂ ಯೋಜನೆಗಳ ಸಹಾಯಧನ ಫಲಾನುಭವಿಗಳಿಗೆ ಸಿಗುತ್ತದೆ.

ಜಿಲ್ಲಾ ನಗರಾಭಿವೃದ್ಧಿ ಕೋಶದಲ್ಲಿರುವ ಮಾಹಿತಿ ಪ್ರಕಾರ, 2015–16ನೇ ಸಾಲಿನಿಂದ 2017–18ರವರೆಗೆ ನಗರ ಪ್ರದೇಶಗಳಲ್ಲಿ 4,‌800 ಮನೆಗಳನ್ನು ನಿರ್ಮಿಸಲು ಗುರಿ ನೀಡಲಾಗಿತ್ತು. 3,754 ಮನೆಗಳ ನಿರ್ಮಾಣಕ್ಕೆ ಮಂಜೂರಾತಿ ಸಿಕ್ಕಿತ್ತು. 2,531 ಮನೆಗಳು ಪೂರ್ಣಗೊಂಡಿವೆ. 756 ಮನೆಗಳಿಗೆ ಇನ್ನೂ ಅನುದಾನ ಬಂದಿಲ್ಲ. ಉಳಿದ ಫಲಾನುಭವಿಗಳು ಮನೆ ನಿರ್ಮಾಣ ಕಾರ್ಯ ಇನ್ನೂ ಆರಂಭಿಸಿಲ್ಲ.

ನಿವೇಶನಗಳ ಕೊರತೆ: ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ನಿವೇಶನಗಳ ಕೊರತೆ ಕಾಡುತ್ತಿದೆ. ಸರ್ಕಾರಿ ಜಮೀನುಗಳು ಸಮರ್ಪಕವಾಗಿ ಸಿಗುತ್ತಿಲ್ಲ. ಇರುವ ಜಾಗ ಮನೆಗಳ ನಿರ್ಮಾಣಕ್ಕೆ ಯೋಗ್ಯವಾಗಿಲ್ಲ ಎಂದು ಹೇಳುತ್ತಾರೆ ಅಧಿಕಾರಿಗಳು.

ಅದಕ್ಕಾಗಿ ನಗರ ಪ್ರದೇಶಗಳಲ್ಲಿ ಗುಂಪು ಮನೆಗಳ ನಿರ್ಮಾಣಕ್ಕಾಗಿ ಅಧಿಕಾರಿಗಳು ಚಿಂತನೆ ನಡೆಸುತ್ತಿದ್ದಾರೆ. ಚಾಮರಾಜನಗರ ಮತ್ತು ಗುಂಡ್ಲುಪೇಟೆಯಲ್ಲಿ ಗುಂಪು ಮನೆಗಳನ್ನು ನಿರ್ಮಿಸಲು ಅಧಿಕಾರಿಗಳು ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿದ್ದಾರೆ.

ಸಮಯಕ್ಕೆ ಬಾರದು: ಮನೆ ನಿರ್ಮಾಣದ ವಿವಿಧ ಹಂತಗಳಲ್ಲಿ ಸರ್ಕಾರ ಸಹಾಯಧನ ಬಿಡುಗಡೆ ಮಾಡುತ್ತದೆ. ‘ಸರ್ಕಾರ ಸಹಾಯಧನ ಕೊಡುತ್ತದೆ. ಆದರೆ, ಅದು ಸಮಯಕ್ಕೆ ಸರಿಯಾಗಿ ಬರುವುದಿಲ್ಲ ಎಂಬುದು ಬಹುತೇಕ ಫಲಾನುಭವಿಗಳ ದೂರು. ಈಗ ಸಿಮೆಂಟ್‌, ಕಬ್ಬಿಣ ಸೇರಿದಂತೆ ಮನೆ ನಿರ್ಮಾಣ ಸಾಮಗ್ರಿಗಳ ಬೆಲೆ ಹೆಚ್ಚಳವಾಗಿದ್ದು, ನಿರ್ಮಾಣ ವೆಚ್ಚವೂ ಜಾಸ್ತಿಯಾಗಿದೆ. ಹಾಗಾಗಿ, ಸರ್ಕಾರ ಸಹಾಯಧನವನ್ನು ಹೆಚ್ಚಳ ಮಾಡಬೇಕು ಎಂಬ ಬೇಡಿಕೆ ಮುಂದಿಡುತ್ತಾರೆ ಫಲಾನುಭವಿಗಳು.

ಯೋಜನೆ ವಿಸ್ತರಿಸಬೇಕಿದೆ
ಪ್ರಧಾನಮಂತ್ರಿ ವಸತಿ ಯೋಜನೆ ಅಡಿಯಲ್ಲಿ ಸರ್ಕಾರ ನಿಗದಿ ಮಾಡಿರುವ ಪಲಾನುಭವಿಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಬೇಕಾಗಿದೆ. ಇದರಿಂದ ಆರ್ಥಿಕವಾಗಿ ನಲುಗಿದ ಜನರಿಗೆ ವಸತಿ ಸೌಕರ್ಯ ಸಿಗಲಿದೆ.
-ಇಂದ್ರಮ್ಮ,ಅಧ್ಯಕ್ಷೆ, ಹೊನ್ನುರು ಗ್ರಾ.ಪಂ., ಯಳಂದೂರು ತಲ್ಲೂಕು

ಸಕಾಲಕ್ಕೆ ಹಣ ಬರಬೇಕು
ಬಡವರಿಗೆ ಮಾತ್ರ ಸೂರು ಕಲ್ಪಿಸುವುದಕ್ಕೆ ನೆರವಾಗುವ ಈ ಯೋಜನೆಯಲ್ಲಿ ಹಣ ಅಗತ್ಯವಿದ್ದಾಗ ಬರುವುದಿಲ್ಲ. ಸಕಾಲಕ್ಕೆ ಬಿಡುಗಡೆಯಾಗದೆ ಸಾಲ ಮಾಡಿ ಸ್ವಂತ ಹಣದಿಂದ ಮನೆ ಕಟ್ಟಿದ್ದೇವೆ. ಇಂತಹ ಯೋಜನೆಗಳು ಯಶಸ್ವಿಯಾಗಬೇಕೆಂದರೆ ಫಲಾನುಭವಿಗಳಿಗೆ ತ್ವರಿತವಾಗಿ ಹಣ ಬಿಡುಗಡೆಯಾಗಬೇಕು‌.
-ಕಲೀಂ ವುಲ್ಲಾ,ಸಾಮಂದಗೇರಿ ನಿವಾಸಿ, ಕೊಳ್ಳೇಗಾಲ

ಮಾಹಿತಿ ಪ್ರತಿದಿನ ಅಪ್‌ಲೋಡ್‌
ತಾಲ್ಲೂಕಿನಲ್ಲಿ ಮೂರು ವರ್ಷಗಳ ಅವಧಿಯಲ್ಲಿ ಪಿಎಂಎವೈ ಅಡಿಯಲ್ಲಿ 1261 ಮನೆಗಳಿಗೆ ಅನುಮೋದನೆ ಸಿಕ್ಕಿದೆ. 655 ಮನೆಗಳ ನಿರ್ಮಾಣ ಈಗಾಗಲೇ ಪೂರ್ಣಗೊಂಡಿದೆ. 258 ಮನೆಗಳ ಕೆಲಸ ಪ್ರಗತಿಯಲ್ಲಿದೆ. ಪ್ರತಿದಿನ ಪ್ರಗತಿಯನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್‌ ಮಾಡಲಾಗುತ್ತಿದೆ.
-ಆರ್.ಉಮೇಶ್‌,ಯಳಂದೂರು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ

ಹಂತ ಹಂತವಾಗಿ ಅನುದಾನ ಬಿಡುಗಡೆ
ಪ್ರಧಾನ ಮಂತ್ರಿ ವಸತಿ ಯೋಜನೆ ಹಾಗೂ ಡಾ.ಬಿ.ಆರ್. ಅಂಬೇಡ್ಕರ್, ವಾಜ‌ಪೇಯಿ ವಸತಿ ಯೋಜನೆ ಅಡಿ ಫಲಾನುಭವಿಗಳಿಗೆ ಹಂತ ಹಂತವಾಗಿ ಹಣ ಬಿಡುಗಡೆ ಮಾಡಲಾಗುತ್ತಿದೆ. ತಾಂತ್ರಿಕ ಕಾರಣಗಳಿಂದ ಕೆಲವರಿಗೆ ಸಹಾಯಧನ ಬಂದಿಲ್ಲ.
-ನಂಜುಂಡಸ್ವಾಮಿ,ಕೊಳ್ಳೇಗಾಲ ನಗರಸಭೆ ಆಯುಕ್ತ

ಗುರಿ ತಲುಪ‍ಲು ಕ್ರಮ: ಸಿಇಒ
ಜಿಲ್ಲೆಯಲ್ಲಿ ನಿವೇಶನ, ಮನೆ ರಹಿತ ಕುಟುಂಬಗಳ ಸಮೀಕ್ಷೆ ನಡೆಸಲಾಗಿದೆ. ಸಮೀಕ್ಷೆಯಲ್ಲಿ ಗುರುತಿಸಲಾಗಿರುವ ಕುಟುಂಬಗಳಿಗೆ ಸರ್ಕಾರದ ವಸತಿ ಯೋಜನೆಗಳ ಅಡಿಯಲ್ಲಿ ಮನೆ ನಿರ್ಮಿಸಿಕೊಡಲು ಪ್ರಯತ್ನಿಸಲಾಗುತ್ತಿದೆ. ಸರ್ಕಾರ ಜಿಲ್ಲೆಗೆ ನೀಡಿರುವ ಗುರಿಯನ್ನು ತ್ವರಿತವಾಗಿ ತಲುಪಲು ಕ್ರಮವಹಿಸಲಾಗಿದೆ. ಕೆಲವು ಕಡೆಗಳಲ್ಲಿ ನಮಗೆ ನಿವೇಶನದ ಕೊರತೆ ಕಂಡು ಬಂದಿದ್ದು, ನಿವೇಶನ ಗುರುತಿಸಿಲು ಕಂದಾಯ ಇಲಾಖೆಯೊಂದಿಗೆ ಸಮನ್ವಯ ಸಾಧಿಸಲಾಗುತ್ತಿದೆ. ಈ ಸಂಬಂಧ ಜಿಲ್ಲಾಧಿಕಾರಿಯವರಿಗೆ ಪ್ರಸ್ತಾವವನ್ನೂ ನೀಡಲಾಗಿದೆ.
–ಕೆ.ಎಂ.ಗಾಯಿತ್ರಿ,ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ

________________

ನಿರ್ವಹಣೆ: ಸೂರ್ಯನಾರಾಯಣ ವಿ.
ಪೂರಕ ಮಾಹಿತಿ: ಅವಿನ್‌ ಪ್ರಕಾಶ್‌ ವಿ., ನಾ.ಮಂಜುನಾಥಸ್ವಾಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT