ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಂಗ್ರೆಸ್‌ಗೆ ಅಧಿಕಾರದ ಅಹಂ: ವಿಜಯೇಂದ್ರ

ಎನ್‌ಡಿಎ ಅಭ್ಯರ್ಥಿ ಬಿಜೆಪಿಯ ಎಸ್‌.ಬಾಲರಾಜು ನಾಮಪತ್ರ, ಒಗ್ಗಟ್ಟು ಪ್ರದರ್ಶಿಸಿದ ಬಿಜೆಪಿ, ಜೆಡಿಎಸ್‌
Published 4 ಏಪ್ರಿಲ್ 2024, 6:15 IST
Last Updated 4 ಏಪ್ರಿಲ್ 2024, 6:15 IST
ಅಕ್ಷರ ಗಾತ್ರ

ಚಾಮರಾಜನಗರ: ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿ ಬಿಜೆಪಿಯ ಎಸ್‌.ಬಾಲರಾಜು ಅವರು ಬುಧವಾರ ನಾಮಪತ್ರ ಸಲ್ಲಿಸಿದರು. 

ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಸಿ.ಟಿ.ಶಿಲ್ಪಾ ನಾಗ್‌ ಅವರಿಗೆ ಮೂರು ಬಾರಿ ನಾಮಪತ್ರ ಸಲ್ಲಿಸಿದರು.

ಬೆಳಿಗ್ಗೆ ಲೋಕಸಭಾ ಕ್ಷೇತ್ರದ ಬಿಜೆಪಿ ಪ್ರಭಾರಿ ಫಣೀಶ್‌, ಸಂಚಾಲಕ ಪ್ರೊ. ಮಲ್ಲಿಕಾರ್ಜುನಪ‍್ಪ ಹಾಗೂ ಕುಟುಂಬದ ಸದಸ್ಯರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದರೆ, ಮಧ್ಯಾಹ್ನ ರೋಡ್‌ ಶೋ ನಡೆಸಿದ ಬಳಿಕ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ, ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ, ಸಂಸದ ಡಿ.ವಿ.ಸದಾನಂದ ಗೌಡ, ಜೆಡಿಎಸ್‌ ಶಾಸಕರಾದ ಜಿ.ಟಿ.ದೇವೇಗೌಡ, ಎಂ.ಆರ್‌.ಮಂಜುನಾಥ್‌, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಎಸ್‌.ನಿರಂಜನಕುಮಾರ್‌ ಹಾಗೂ ಸ್ಥಳೀಯ ಮುಖಂಡರೊಂದಿಗೆ ಮತ್ತೆ ಎರಡು ಬಾರಿ ನಾಮಪತ್ರ ಸಲ್ಲಿಸಿದರು. 

ನಾಮ‍ಪತ್ರ ಸಲ್ಲಿಕೆಗೂ ಮುನ್ನ ನಗರದ ಚಾಮರಾಜೇಶ್ವರ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. 

ರೋಡ್‌ ಶೋ: ಕಾಂಗ್ರೆಸ್‌ ರೀತಿಯಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳೂ ಮೈತ್ರಿ ಅಭ್ಯರ್ಥಿ ಪರ ನಗರದಲ್ಲಿ ರೋಡ್‌ ಶೋ ಹಮ್ಮಿಕೊಂಡಿತ್ತು. ಭುವನೇಶ್ವರಿ ವೃತ್ತದಿಂದ ಆರಂಭಗೊಂಡ ರೋಡ್‌ ಶೋ, ಜೋಡಿ ರಸ್ತೆಯಲ್ಲಿರುವ ಜಿಲ್ಲಾಡಳಿತ ಭವನದ ಗೇಟ್‌ವರೆಗೂ ನಡೆಯಿತು. ಅಲ್ಲಿಂದ ಜಿಲ್ಲಾಡಳಿತ ಭವನಕ್ಕೆ ಕಾಲ್ನಡಿಗೆಯಲ್ಲಿ ತೆರಳಿ ಉಮೇದುವಾರಿಕೆ ಸಲ್ಲಿಸಿದರು.

ಸಂಸದ ಡಿ.ವಿ.ಸದಾನಂದ ಗೌಡ ಅವರು ರೋಡ್‌ ಶೋ ಆರಂಭದಲ್ಲಿದ್ದರು. ಭುವನೇಶ್ವರಿ ವೃತ್ತದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ ಅವರು ತೆರಳಿದರು. 

ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ: ರೋಡ್‌ ಶೋ ನಡುವೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ‘ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಒಗ್ಗಟ್ಟಿನಿಂದ ಚುನಾವಣೆ ಎದುರಿಸುತ್ತಿರುವುದನ್ನು ಕಂಡು ದಿನದಿಂದ ದಿನಕ್ಕೆ ಕಾಂಗ್ರೆಸ್‌ನ ‘ಬ್ಯಾಟರಿ’ ಇಳಿಯುತ್ತಿದೆ’ ಎಂದು ವ್ಯಂಗ್ಯವಾಡಿದರು. 

‘ಕಾಂಗ್ರೆಸ್‌ ಅಧಿಕಾರದ ಅಮಲು, ಅಹಂಕಾರದಲ್ಲಿ ಹಣ, ಹೆಂಡ ಬಳಸಿ ಚುನಾವಣೆಯಲ್ಲಿ ಗೆಲ್ಲಬಹುದು ಎಂಬ ಭ್ರಮೆಯಲ್ಲಿದೆ. ಕ್ಷೇತ್ರದ ಪ್ರಜ್ಞಾವಂತ ಜನರು ಮೈತ್ರಿ ಅಭ್ಯರ್ಥಿ ಎಸ್‌.ಬಾಲರಾಜು ಅವರನ್ನು ದೊಡ್ಡ ಅಂತರದಿಂದ ಗೆಲ್ಲಿಸುವುದರ ಮೂಲಕ ಹಣ ಹೆಂಡದಿಂದ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎಂಬುದನ್ನು ಕಾಂಗ್ರೆಸ್‌ನವರಿಗೆ ತೋರಿಸಬೇಕು’ ಎಂದು ಹೇಳಿದರು. 

ಕೇಂದ್ರದೆಡೆಗೆ ಬೊಟ್ಟು: ‘ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗಲೆಲ್ಲಾ ಬರಗಾಲ ಕಾಡುತ್ತದೆ. ಜೆಡಿಎಸ್‌ನ ಜಿ.ಟಿ.ದೇವೇಗೌಡ ಅವರು ಕೂಡ ಇದನ್ನೇ ಹೇಳಿದ್ದಾರೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಉತ್ತರ ಕರ್ನಾಟಕದಲ್ಲಿ ಪ್ರವಾಹ ಉಂಟಾಗಿತ್ತು. ಅಷ್ಟರ ಮಟ್ಟಿಗೆ ಮಳೆಯಾಗಿತ್ತು’ ಎಂದು ವಿಜಯೇಂದ್ರ ಹೇಳಿದರು. 

‘ಕಾಂಗ್ರೆಸ್‌ ಸರ್ಕಾರ ಬಂದು 10 ತಿಂಗಳು ಕಳೆದಿವೆ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಆಗಿಲ್ಲ. ಬರದಿಂದ ತೊಂದರೆಗೆ ಒಳಗಾಗಿರುವ ರೈತರ ನೆರವಿಗೆ ಬಾರದ ರಾಜ್ಯ ಸರ್ಕಾರ, ಕೇಂದ್ರವು ಬರ ಪರಿಹಾರ ನೀಡಿಲ್ಲ ಎಂದು ದೂರುತ್ತಿದೆ. ಎಲ್ಲವನ್ನೂ ಕೇಂದ್ರವೇ ಮಾಡುವುದಾದರೆ ಇವರದ್ದೇನಿದೆ’ ಎಂದು ಪ್ರಶ್ನಿಸಿದರು. 

‘ರಾಜ್ಯದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಸರ್ಕಾರದವರು ಗ್ಯಾರಂಟಿ ಯೋಜನೆಗಳ ಬಗ್ಗೆ ಹೇಳಿಕೊಂಡು ತಿರುಗಾಡುತ್ತಿದ್ದಾರೆ’ ಎಂದು ದೂರಿದರು.

‘ಬರದ ಈ ಸಂದರ್ಭದಲ್ಲಿ ಜಿಲ್ಲೆಯ ಜನರು ಸ್ಮರಿಸುವಂತಹ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಜಾರಿಗೆ ತಂದಿದ್ದರು. ಇಂತಹ ಕೆಲಸಗಳನ್ನು ನೋಡಿ ರಾಜ್ಯದ ಮತದಾರರು ಚಾಮರಾಜನಗರ ಸೇರಿದಂತೆ ರಾಜ್ಯದ 28 ಕ್ಷೇತ್ರಗಳಲ್ಲೂ ಎನ್‌ಡಿಎ ಅಭ್ಯರ್ಥಿಗಳನ್ನು ಗೆಲ್ಲಿಸಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ಜೆಡಿಎಸ್‌ ಶಾಸಕ ಹರೀಶ್‌ ಗೌಡ ಮಾತನಾಡಿ, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವರಿಗೆ ಚುನಾವಣೆಯಲ್ಲಿ ಸೋಲುವ ಭಯ ಕಾಡುತ್ತಿದೆ. ಅದಕ್ಕಾಗಿ ಚುನಾವಣೆಯಲ್ಲಿ ಗೆದ್ದರೆ ನಮ್ಮನ್ನು ಮುಟ್ಟುವುದಕ್ಕೆ ಆಗುವುದಿಲ್ಲ. ಕುರ್ಚಿ ಉಳಿಯುತ್ತದೆ ಎಂದೆಲ್ಲಾ ಹೇಳುತ್ತಿದ್ದಾರೆ. ವಿಜಯೇಂದ್ರ ಮತ್ತು ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ರಾಜ್ಯದಾದ್ಯಂತ ಮೈತ್ರಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ’ ಎಂದರು. 

ಶಾಸಕರಾದ ಜಿ.ಟಿ.ದೇವೇಗೌಡ, ಹರೀಶ್‌ ಗೌಡ, ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಎನ್.ಮಹೇಶ್, ಎ.ರಾಮದಾಸ್, ಬಿಜೆಪಿ ಜಿಲ್ಲಾ ಘಕಟದ ಅಧ್ಯಕ್ಷ ಸಿ.ಎಸ್‌.ನಿರಂಜನ್‌ಕುಮಾರ್‌ ಮಾತನಾಡಿದರು. 

ಹನೂರು ಶಾಸಕ ಎಂ.ಆರ್‌.ಮಂಜುನಾಥ್‌, ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ಪ್ರಭಾರಿ ಜಿಲ್ಲಾ ಉಪಾಧ್ಯಕ್ಷ ಮಂಗಲಶಿವಕುಮಾರ್, ಜಿಲ್ಲಾ ವಕ್ತಾರ ಕಾಡಳ್ಳಿ ಕುಮಾರ್, ಮುಖಂಡರಾದ ಮಹದೇವಯ್ಯ ಇತರರು ಪಾಲ್ಗೊಂಡಿದ್ದರು. 

ಮೈತ್ರಿ ಅಭ್ಯರ್ಥಿ ಎಸ್‌.ಬಾಲರಾಜು ಪರವಾಗಿ ನಡೆದ ರೋಡ್‌ ಶೋನಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ ಸಂಸದ ಡಿ.ವಿ.ಸದಾನಂದ ಗೌಡ ಜೆಡಿಎಸ್‌ ಶಾಸಕರಾದ ಜಿ.ಟಿ.ದೇವೇಗೌಡ ಎಂ.ಆರ್‌.ಮಂಜುನಾಥ್‌ ಹರೀಶ್‌ ಗೌಡ ಇತರರು ಪಾಲ್ಗೊಂಡಿದ್ದರು
ಮೈತ್ರಿ ಅಭ್ಯರ್ಥಿ ಎಸ್‌.ಬಾಲರಾಜು ಪರವಾಗಿ ನಡೆದ ರೋಡ್‌ ಶೋನಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ ಸಂಸದ ಡಿ.ವಿ.ಸದಾನಂದ ಗೌಡ ಜೆಡಿಎಸ್‌ ಶಾಸಕರಾದ ಜಿ.ಟಿ.ದೇವೇಗೌಡ ಎಂ.ಆರ್‌.ಮಂಜುನಾಥ್‌ ಹರೀಶ್‌ ಗೌಡ ಇತರರು ಪಾಲ್ಗೊಂಡಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT