ಸೋಮವಾರ, 3 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ| ಹಲವು ಗ್ರಾಮಗಳಲ್ಲಿಲ್ಲ ಸ್ಮಶಾನ: ಗೌರವಯುತ ಅಂತ್ಯ ಸಂಸ್ಕಾರಕ್ಕೂ ತೊಡಕು

13 ಗ್ರಾಮಗಳಿಲ್ಲ ಸ್ಮಶಾನ, ದುಡ್ಡಿದ್ದರೂ ಸಿಗುತ್ತಿಲ್ಲ ಭೂಮಿ, ಜಾತಿವಾರು ಸ್ಮಶಾನಕ್ಕಾಗಿ ಹೆಚ್ಚಿದ ಕೂಗು
Last Updated 18 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯ ಯಳಂದೂರು ತಾಲ್ಲೂಕಿನ ಮಾಂಬಳ್ಳಿ ಗ್ರಾಮಸ್ಥರು, ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲೇ ಇತ್ತೀಚೆಗೆ ಶವ ಸಂಸ್ಕಾರ ಮಾಡಿದ್ದು ದೊಡ್ಡ ಸುದ್ದಿಯಾಗಿತ್ತು.

ಮಾಂಬಳ್ಳಿ ಗ್ರಾಮದಲ್ಲಿ ಪರಿಶಿಷ್ಟ ಜಾತಿಯವರಿಗೆ ಸ್ಮಶಾನ ಇಲ್ಲ. ಖಾಸಗಿ ಜಮೀನಿನಲ್ಲಿ ಅಂತ್ಯಸಂಸ್ಕಾರ ಮಾಡುತ್ತಾ ಬಂದಿದ್ದಾರೆ. ಗ್ರಾಮದಲ್ಲಿ ಮೃತಪಟ್ಟ ಮಹಿಳೆಯ ಅಂತ್ಯಸಂಸ್ಕಾರ ಮಾಡಲು ಮಳೆಯಿಂದಾಗಿ ಆ ಜಾಗಕ್ಕೂ ಹೋಗಲು ಸಾಧ್ಯವಾಗದೇ ಇದ್ದುದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಆವರಣದಲ್ಲೇ ಮಾಡಿದ್ದರು. ‌‌

ಮಾಂಬಳ್ಳಿ ಮಾತ್ರ ಅಲ್ಲ, ಜಿಲ್ಲೆಯ ಹಲವು ಕಡೆಗಳಲ್ಲಿ ಸ್ಮಶಾನದ ಸಮಸ್ಯೆ ಇದೆ.ಸಮಪರ್ಕ ಸ್ಮಶಾನ ವ್ಯವಸ್ಥೆ ಇಲ್ಲ ಎಂದು ಆರೋಪಿಸಿ ವಿವಿಧ ಜನಾಂಗದವರು ಜಿಲ್ಲೆಯ ವಿವಿಧ ಕಡೆಗಳಲ್ಲಿ ಆಗಾಗ ಪ್ರತಿಭಟನೆ ಮಾಡುತ್ತಿರುತ್ತಾರೆ.

ಕೆಲವು ಗ್ರಾಮಗಳಲ್ಲಿ ಸ್ಮಶಾನಕ್ಕೆ ಜಾಗವಿಲ್ಲ. ಇರುವ ಕಡೆಗಳಲ್ಲಿ ಸೌಕರ್ಯಗಳ ಕೊರತೆ ಕಾಡುತ್ತಿದೆ. ನಿರ್ವಹಣೆ ಸಮರ್ಪಕವಾಗಿರದೆ ಇರುವುದರಿಂದ ಮೃತಪಟ್ಟವರಿಗೆ ಗೌರವಯುತ ಅಂತ್ಯಸಂಸ್ಕಾರವೂ ಸಾಧ್ಯವಾಗುತ್ತಿಲ್ಲ ಎಂಬುದು ಸಾರ್ವಜನಿಕರ ದೂರು.

13 ಗ್ರಾಮಗಳಲ್ಲಿ ಸ್ಮಶಾನ ಇಲ್ಲ: ಜಿಲ್ಲೆಯಲ್ಲಿ 483 ಕಂದಾಯ ಗ್ರಾಮಗಳಿವೆ. ಈ ಪೈಕಿ 76ರಲ್ಲಿ ಜನವಸತಿ ಇಲ್ಲ. ಜನವಸತಿ ಇರುವ 407 ಕಂದಾಯ ಗ್ರಾಮಗಳಲ್ಲಿ 394 ಗ್ರಾಮಗಳಲ್ಲಿ ರುದ್ರಭೂಮಿಗಳಿವೆ. 13 ಗ್ರಾಮಗಳಲ್ಲಿ ಸ್ಮಶಾನ ಇಲ್ಲ.

ಚಾಮರಾಜನಗರ ತಾಲ್ಲೂಕಿನ ಎಂಟು ಹಾಗೂ ಯಳಂದೂರು ತಾಲ್ಲೂಕಿನ ಐದು ಗ್ರಾಮಗಳಲ್ಲಿ ಸ್ಮಶಾನಗಳಿಲ್ಲ.ಜಿಲ್ಲಾಡಳಿತದ ಬಳಿ ಹಣ ಇದ್ದರೂ ಜಮೀನು ಸಿಗುತ್ತಿಲ್ಲ. ಈ ಗ್ರಾಮಗಳಲ್ಲಿ ಸರ್ಕಾರಿ ಜಮೀನು ಇಲ್ಲ. ಮಾರುಕಟ್ಟೆ ಮೌಲ್ಯದ ಮೂರು ಪಟ್ಟು ದುಡ್ಡು ಕೊಡುವ ಭರವಸೆ ನೀಡಿದರೂ, ಖಾಸಗಿಯವರು ಜಮೀನು ನೀಡಲು ಮುಂದೆ ಬಂದಿಲ್ಲ.

ಜಾತಿವಾರು ಸ್ಮಶಾನಕ್ಕೆ ಬೇಡಿಕೆ: ತಮ್ಮ ಜಾತಿಗೆ ಪ್ರತ್ಯೇಕವಾಗಿ ರುದ್ರಭೂಮಿ ಕಲ್ಪಸಿಕೊಡಿ ಎಂಬ ಮನವಿಗಳು ಜಿಲ್ಲಾಡಳಿತಕ್ಕೆ ಬರುತ್ತಲೇ ಇರುತ್ತವೆ. ಆದರೆ, ಸರ್ಕಾರದ ಆದೇಶದ ಪ್ರಕಾರ, ಜಾತಿವಾರು ಸ್ಮಶಾನಕ್ಕೆ ಭೂಮಿ ನೀಡಲು ಅವಕಾಶ ಇಲ್ಲ. ಸಾರ್ವಜನಿಕ ಸ್ಮಶಾನಕ್ಕೆ ಮಾತ್ರ ಅವಕಾಶ. ವಿಶೇಷ ಸಂದರ್ಭಗಳಲ್ಲಿ ಮಾತ್ರ ಜಿಲ್ಲಾಧಿಕಾರಿ ಅವರು ತಮ್ಮ ವಿವೇಚನೆ ಬಳಸಿ ಈ ಬಗ್ಗೆ ನಿರ್ಧಾರ ಕೈಗೊಳ್ಳಬಹುದು. ಧರ್ಮವಾರು ಸ್ಮಶಾನಗಳಿಗೆ ಜಾಗ ಕೊಡಲು ಅವಕಾಶ ಇದೆ ಎಂದು ಹೇಳುತ್ತಾರೆ ಅಧಿಕಾರಿಗಳು.

ಸ್ಮಶಾನ ಒತ್ತುವರಿ ಸಮಸ್ಯೆಯೂ ಜಿಲ್ಲೆಯಲ್ಲಿದೆ. ಸ್ಮಶಾನದ ಜಾಗ ಖಾಸಗಿಯವರ ಹೆಸರಿಗೆ ಪರಭಾರೆಯಾದ ನಿದರ್ಶನಗಳೂ ಇವೆ.

ಮಾದರಿ ಸ್ಮಶಾನ ಇಲ್ಲ: ಜಿಲ್ಲೆಯಲ್ಲಿ ಮಾದರಿಯಾಗುವಂತಹ ಸ್ಮಶಾನಗಳು ಇಲ್ಲ. ನಗರ ಪ್ರದೇಶಗಳಲ್ಲಿ ಸಮುದಾಯಗಳು ನಿರ್ವಹಿಸುವ ಸ್ಮಶಾನಗಳು ತಕ್ಕ ಮಟ್ಟಿಗೆ ಚೆನ್ನಾಗಿವೆ. ಸರ್ಕಾರದ ಸುಪರ್ದಿಯಲ್ಲಿರುವ ಸ್ಮಶಾನಗಳಲ್ಲಿ ಬಹುತೇಕವೂ ನಿರ್ವಹಣೆ ಕೊರತೆಯನ್ನು ಎದುರಿಸುತ್ತಿವೆ.

ಹಿಂದಿನ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ತಾಲ್ಲೂಕಿಗೆ ಒಂದು ಮಾದರಿ ಸ್ಮಶಾನ ಅಭಿವೃದ್ಧಿ ಪಡಿಸುವ ಯೋಜನೆಯನ್ನು ಪ್ರಸ್ತಾಪಿಸಿದ್ದರು. ಅದಕ್ಕಾಗಿ ಜಾಗಗಳನ್ನೂ ಗುರುತಿಸಲಾಗಿತ್ತು. ಆದರೆ, ಈಗ ಆ ಯೋಜನೆ ನನೆಗುದಿಗೆ ಬಿದ್ದಿದೆ.

ಕೆರೆಯಲ್ಲೇ ಅಂತ್ಯಸಂಸ್ಕಾರ

ಕೊಳ್ಳೇಗಾಲ: ತಾಲ್ಲೂಕಿನಲ್ಲಿ ಮಾದರಿಯಾಗುವಂತಹ ಸ್ಮಶಾನಗಳಿಲ್ಲ.ಸ್ಮಶಾನಗಳಲ್ಲಿ ಸ್ವಚ್ಚತೆ, ಇಲ್ಲ ಆಳೆತ್ತರದ ಗಿಡಗಳು ಬೆಳೆದಿವೆ. ಕುಡಿಯುವ ನೀರು ಇಲ್ಲ, ವಿದ್ಯುತ್ ಇಲ್ಲ, ಕುಳಿತುಕೊಳ್ಳಲು ಸ್ಥಳವಿಲ್ಲ. ಹಲವು ಗ್ರಾಮಗಳಲ್ಲಿ ಮಳೆಗಾಲದಲ್ಲಿ ಸ್ಮಶಾನಗಳು ನೀರಿನಿಂದ ಜಲಾವೃತವಾಗುತ್ತವೆ. ಸುವರ್ಣಾವತಿ ನದಿಯಲ್ಲಿ ನೀರು ಬಂದರೆ ಮುಡಿಗುಂಡದಲ್ಲಿ ಸ್ಮಶಾನ ಜಾಗ ಜಲಾವೃತವಾಗುತ್ತದೆ.ಇದರಿಂದ ಮಣ್ಣು ಮಾಡಲು ಆಗುವುದಿಲ್ಲ. ಹೊಸಅಣಗಳ್ಳಿಯವರಿಗೆ ಸ್ಮಶಾನ ಇಲ್ಲದೆ ಪಾಪನ ಕೆರೆಯಲ್ಲಿ ಹೂಳುತ್ತಿದ್ದಾರೆ. ಮಳೆ ಬಂದಾಗ ಕೆರೆ ತುಂಬುತ್ತದೆ. ಆಗ ಅವರು ಕೆರೆಯ ಏರಿ ಮೇಲೆ ಅಂತ್ಯಸಂಸ್ಕಾರ ಮಾಡುತ್ತಾರೆ.

ಸ್ಮಶಾನ ಒತ್ತುವರಿ

ಯಳಂದೂರು:ತಾಲ್ಲೂಕಿನಲ್ಲಿ 28 ಕಂದಾಯ ಗ್ರಾಮಗಳಿವೆ. ಕೆಲವು ಊರುಗಳಲ್ಲಿ ಅಂತ್ಯ ಸಂಸ್ಕಾರಕ್ಕೆ ಸ್ಮಶಾನದ ಸ್ಥಳದ ಇದೆ. ಕೆಲವು ಹಳ್ಳಿಗಳಲ್ಲಿ ರುದ್ರಭೂಮಿ ಒತ್ತುವರಿಯಾಗಿದೆ. ಸ್ಮಶಾನ ಭೂಮಿಗೆ ಸಮರ್ಪಕ ರಸ್ತೆ ಸಂಪರ್ಕ ಇಲ್ಲದಿರುವುದರಿಂದ ಅಂತ್ಯ ಸಂಸ್ಕಾರದ ವೇಳೆ ಶವ ಸಾಗಿಸಲು ಪರದಾಡುವ ಪರಿಸ್ಥಿತಿ ಕಾಡಿದೆ. ಗ್ರಾಮಸ್ಥರು ಸ್ಮಶಾನ ಭೂಮಿಗಾಗಿ ಪ್ರತಿಭಟನೆ, ರಸ್ತೆ ತಡೆ ಅನಿವಾರ್ಯತೆ ಸೃಷ್ಟಿಯಾಗಿದೆ.

ಕೆಲವರು ಕೃಷಿ ಇಲ್ಲವೇ ತೋಟದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸುತ್ತಾರೆ. ಆದರೆ, ಸ್ವಂತ ಭೂಮಿ ಇಲ್ಲದವರು ಸಾರ್ವಜನಿಕ ಸ್ಥಳಗಳಲ್ಲಿ ಶವವನ್ನು ಹೂಳಬೇಕಿದೆ.

ತಹಶೀಲ್ದಾರ್‌ ಕೆ.ಬಿ.ಆನಂದಪ್ಪ ನಾಯಕ ಪ್ರತಿಕ್ರಿಯಿಸಿ, ‘ಕೆ.ದೇವರಹಳ್ಳಿ, ಕಂದಹಳ್ಳಿ, ಕೊಮಾರನಪುರ ಗ್ರಾಮಗಳಲ್ಲಿ ಸ್ಮಶಾನ ಜಾಗ ಇಲ್ಲ. ಈ ಗ್ರಾಮಗಳಿಗೆ ಭೂಮಿ ಖರೀದಿಸುವ ಪ್ರಕ್ರಿಯೆ ನಡೆಯುತ್ತಿದೆ. ಮಾಂಬಳ್ಳಿ ಗ್ರಾಮದ ಸರ್ವೆ ನಂ.505ರಲ್ಲಿ ಸ್ಮಶಾನ ಭೂಮಿ ಇದೆ. ಈ ಸ್ಥಳ ಬಳಕೆ ಆಗುತ್ತಿಲ್ಲ. ಬದಲಾಗಿ, ಸರ್ವೆ ನಂ. 887 ಮತ್ತು 888 ಭೂಮಿಯಲ್ಲಿ ಶವ ಸಂಸ್ಕಾರ ಮಾಡಲು ಗ್ರಾಮಸ್ಥರು ಮನವಿ ಸಲ್ಲಿಸಿದ್ದಾರೆ. ಕೆ. ದೇವರಳ್ಳಿಯ ಸ್ಮಶಾನ ಭೂಮಿ ಸಾಗುವಳಿ ಭೂಮಿಯಾಗಿ ಬದಲಾಗಿದೆ. ಈ ಭೂಮಿಯನ್ನು ಪರಿಶೀಲಿಸಿ, ಮತ್ತೆ ರುದ್ರಭೂಮಿಯ ಸ್ಥಳವನ್ನು ಗ್ರಾಮಸ್ಥರಿಗೆ ಬಿಟ್ಟುಕೊಡುವಂತೆ ಶಿಫಾರಸು ಮಾಡಲಾಗಿದೆ’ ಎಂದರು.

ಹಳ್ಳಕೊಳ್ಳಗಳಲ್ಲಿ ಅಂತ್ಯಸಂಸ್ಕಾರ

ಹನೂರು: ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಇಂದಿಗೂ ಸಮರ್ಪಕ ಸ್ಮಶಾನ ವ್ಯವಸ್ಥೆಯಿಲ್ಲದೇ ಅಂತ್ಯ ಸಂಸ್ಕಾರಕ್ಕಾಗಿ ಜನರು ಹಳ್ಳ, ಕೊಳ್ಳ, ಅರಣ್ಯ ಪ್ರದೇಶಗಳನ್ನು ಅವಲಂಬಿಸಿದ್ದಾರೆ. ಕಂದಾಯ ಗ್ರಾಮಗಳನ್ನು ಬಿಟ್ಟು ದಾಖಲೆ ಗ್ರಾಮಗಳಲ್ಲಿ ಇಂದಿಗೂ ಸ್ಮಶಾನ ಇಲ್ಲ.

ಹೂಗ್ಯಂ ಗ್ರಾಮಪಂಚಾಯಿತಿ ಕೇಂದ್ರ ಸೇರಿದಂತೆ ಕೂಡ್ಲೂರು, ಪೆದ್ದನಪಾಳ್ಯ, ನೆಲ್ಲೂರು, ಹಂಚಿಪಾಳ್ಯ, ಜಲ್ಲಿ ಪಾಳ್ಯ ಹಾಗೂ ಮಾರ್ನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಹುತೇಕ ಗ್ರಾಮಗಳಲ್ಲಿ ಇಂದಿಗೂ ಸ್ಮಶಾನ ವ್ಯವಸ್ಥೆಯಿಲ್ಲದೇ ಪಾಲಾರ್ ಹಳ್ಳದಲ್ಲಿ ಅಂತ್ಯಕ್ರಿಯೆ ಮಾಡುತ್ತಿದ್ದಾರೆ. ಒಮ್ಮೊಮ್ಮೆ ಹಳ್ಳ ತುಂಬಿ ಬಂದರೆ ಅಂತ್ಯಕ್ರಿಯೆ ಮಾಡಲು ಪರದಾಡುವ ಪಪರಿಸ್ಥಿತಿ ಇದೆ.

ಜನರು ಏನು ಹೇಳುತ್ತಾರೆ?

ಜನಸಂಖ್ಯೆಗೆ ಅನುಗುಣವಾಗಿ ಸ್ಮಶಾನ ಬೇಕು

ಸಂತೇಮರಹಳ್ಳಿ ದೊಡ್ಡ ಗ್ರಾಮ. ಇಲ್ಲಿನ ಜನಸಂಖ್ಯೆಗೆ ಅನುಗುಣವಾಗಿ ಸ್ಮಶಾನ ಇಲ್ಲ. ಯಾರಾದರೂ ಮೃತಪಟ್ಟರೆ ಕಬಿನಿ ನಾಲೆ ಮಗ್ಗುಲಲ್ಲಿ ಶವ ಸಂಸ್ಕಾರ ನಡೆಸಲಾಗುತ್ತಿದೆ. ಅಲ್ಲಿಯೂ ನೀರಾವರಿ ಅಧಿಕಾರಿಗಳಿಂದ ವಿರೋಧವಿದೆ. ಸ್ಮಶಾನಕ್ಕಾಗಿ ಅಧಿಕಾರಿಗಳಿಗೆ ಮನವಿ ನೀಡಿದ್ದರೂ ಗಮನ ಹರಿಸಿಲ್ಲ.

–ಮಹೇಶ್, ಸಂತೇಮರಹಳ್ಳಿ, ಚಾಮರಾಜನಗರ ತಾಲ್ಲೂಕು

ಮಾಂಬಳ್ಳಿ ಘಟನೆ ನಡೆಯಬಹುದು

ಜನರು ಮೃತಪಟ್ಟಾಗ ಹೂಳಲು ಜಾಗವಿಲ್ಲ. ಹಾಗಾಗಿ ಅನೇಕರು ಕೆರೆಯಲ್ಲೇ ಹೂಳುತ್ತಾರೆ. ಇದು ನಿಲ್ಲಬೇಕಾದರೆ ಜನಾಂಗದವರಿಗೆ ಸ್ಮಶಾನ ನೀಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಮಾಂಬಳ್ಳಿ ಗ್ರಾಮದಲ್ಲಿ ನಡೆದ ಘಟನೆ ಇಲ್ಲೂ ನಡೆಯಬಹುದು.

–ಜೀವನ್,ಮುಳ್ಳೂರು, ಕೊಳ್ಳೇಗಾಲ ತಾಲ್ಲೂಕು

25 ವರ್ಷಗಳ ಹೋರಾಟ

ನಮ್ಮ ಗ್ರಾಮಸ್ಥರು 25 ವರ್ಷಗಳಿಂದ ರುದ್ರ ಭೂಮಿಗಾಗಿ ಹೋರಾಟ ನಡೆಸುತ್ತಾ ಬಂದಿದ್ದಾರೆ. ಭೂಮಿ ಮಾತ್ರ ಮಂಜೂರಾಗಿಲ್ಲ. ಜನ ಪ್ರತಿನಿಧಿಗಳಿಗೆ ಮನವಿ ನೀಡುತ್ತಾ ಬಂದರೂ ಪ್ರಯೋಜನ ಶೂನ್ಯ. ಬಡವರು, ಭೂ ರಹಿತರು ಕೆರೆ, ಕಟ್ಟೆಗಳ ಬಳಿ ಅಂತ್ಯ ಸಂಸ್ಕಾರ ನಡೆಸಬೇಕಿದೆ. ಇದರಿಂದ ಪರಿಶಿಷ್ಟರು ಮೃತಪಟ್ಟ ದಿನಗಳಲ್ಲಿ ಸ್ಥಳ ಹುಡುಕಲು ಪರದಾಡುವುದು ತಪ್ಪಿಲ್ಲ.

–ಅಂಗಡಿ ರಾಜಣ್ಣ,ಅಂಬಳೆ, ಯಳಂದೂರು ತಾಲ್ಲೂಕು

ಅಧಿಕಾರಿಗಳು ಶಾಮೀಲು

ಸೋಲಿಗರಿಗೆ ಮೀಸಲಾಗಿದ್ದ ರುದ್ರಭೂಮಿ ಏಕಾಏಕಿ ಖಾಸಗಿ ವ್ಯಕ್ತಿಗಳ ಹೆಸರಿಗೆ ಖಾತೆ ಆಗಿದೆ. ಅಧಿಕಾರಿಗಳ ಕರಾಮತ್ತಿನಿಂದ ಸಾಗುವಳಿ ಚೀಟಿ ನೀಡಲಾಗಿದೆ. ಅಕ್ರಮವಾಗಿ ಭೂಮಿಯನ್ನು ವರ್ಗಾಯಿಸಿದವರ ವಿರುದ್ಧ ಪ್ರತಿಭಟನೆಗೂ ಗ್ರಾಮಸ್ಥರು ಸಿದ್ಧತೆ ನಡೆಸಿದ್ದಾರೆ. ಈ ಬಗ್ಗೆ ತಹಶೀಲ್ದಾರ್ ಅವರ ಗಮನಕ್ಕೆ ತರಲಾಗಿದೆ. ತಕ್ಷಣ ಬುಡಕಟ್ಟು ಜನರ ಸ್ಮಶಾನ ಭೂಮಿಯನ್ನು ಅವರಿಗೆ ವಾಪಸ್‌ ನೀಡಲು ಕ್ರಮವಹಿಸಲಿ.

– ಗೆಡ್ಡೇಗೌಡ,ಕೆ.ದೇವರಹಳ್ಳಿ, ಯಳಂದೂರು ತಾಲ್ಲೂಕು

ಸ್ಮಶಾನ ವ್ಯವಸ್ಥೆ ಮಾಡಿ

ಹೂಗ್ಯಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಇಂದಿಗೂ ಸ್ಮಶಾನ ವ್ಯವಸ್ಥೆಯಿಲ್ಲದೆ ಜನರು ಪರದಾಡುವಂತಾಗಿದೆ. ಅಧಿಕಾರಿಗಳು ಕೂಡಲೇ ಸ್ಮಶಾನ ವ್ಯವಸ್ಥೆ ಮಾಡಿಕೊಡಬೇಕು.

–ಮಣಿ, ಪೆದ್ದನಪಾಳ್ಯ, ಹನೂರು ತಾಲ್ಲೂಕು

ಸ್ಮಶಾನ ಇಲ್ಲದ ಕಂದಾಯ ಗ್ರಾಮಗಳು‌

ಚಾಮರಾಜನಗರ: ಅಂಚಿತಾಳಪುರ, ಚಂದಕವಾಡಿ, ನಲ್ಲೂರು, ಸರಗೂರು, ಕರಿಯನಕಟ್ಟೆ, ಕೇತಹಳ್ಳಿ, ಮೂಕನಪಾಳ್ಯ, ಬ್ಯಾಡಮೂಡ್ಲು

ಯಳಂದೂರು: ಅವಲ್‌ ಕಂದಹಳ್ಳಿ, ದುಯುಂ ಕಂದಹಳ್ಳಿ, ವೈ.ಕೆ.ಮೋಳೆ, ಕೋಮಾರನಪುರ, ಕೆ.ದೇವರಹಳ್ಳಿ

ಜಮೀನಿಗಾಗಿ ಹುಡುಕಾಟ: ಡಿ.ಸಿ.

‘ಜಿಲ್ಲೆಯಲ್ಲಿ ಚಾಮರಾಜನಗರ ಹಾಗೂ ಯಳಂದೂರು ತಾಲ್ಲೂಕುಗಳಲ್ಲಿ ಸ್ಮಶಾನ ತಲಾ ಎಂಟು ಹಾಗೂ ಐದು ಗ್ರಾಮಗಳಲ್ಲಿ ಕೊರತೆ ಇದೆ. ಅಲ್ಲಿ ಸರ್ಕಾರಿ ಜಮೀನು ಇಲ್ಲ. ಖಾಸಗಿ ಜಮೀನು ಕೊಡುವುದಕ್ಕೆ ಮಾಲೀಕರು ಮುಂದೆ ಬರುತ್ತಿಲ್ಲ. ಮಾರುಕಟ್ಟೆ ಮೌಲ್ಯದ ಮೂರು ಪಟ್ಟು ಬೆಲೆ ನೀಡುವುದಾಗಿ ಹೇಳಿದರೂ ಯಾರೂ ಮುಂದೆ ಬಂದಿಲ್ಲ. ಭೂಸ್ವಾಧೀನ ಕಾಯ್ದೆ ಅಡಿಯಲ್ಲಿ ಜಮೀನು ಸ್ವಾಧೀನ ಪಡಿಸಿಕೊಂಡು ಸ್ಮಶಾನಕ್ಕೆ ಹಂಚಿಕೆ ಮಾಡುವುದಕ್ಕೆ ಅವಕಾಶ ಇದೆ. ಸ್ವಾಧೀನ ಮಾಡಿಕೊಳ್ಳುವ ಭೂಮಿಗೆ ಪರಿಹಾರ ನೀಡುವ ವಿಚಾರದಲ್ಲಿ ಇನ್ನೂ ಸ್ಪಷ್ಟತೆ ಬೇಕಾಗಿದೆ. 2013ರ ಕಾಯ್ದೆ ಅಡಿಯಲ್ಲಿ ಪರಿಹಾರ ನೀಡಬೇಕೇ ಅಥವಾ ತಿದ್ದುಪಡಿ ಕಾಯ್ದೆಯ ಪ್ರಕಾರ ನೀಡಬೇಕೆ ಎಂಬುದರ ಬಗ್ಗೆ ಸರ್ಕಾರ ತಿಳಿಸಬೇಕು. ಇದನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ.’

–ಚಾರುಲತಾ ಸೋಮಲ್‌,ಜಿಲ್ಲಾಧಿಕಾರಿ

ನಿರ್ವಹಣೆ: ಸೂರ್ಯನಾರಾಯಣ ವಿ.

ಪೂರಕ ಮಾಹಿತಿ: ನಾ.ಮಂಜುನಾಥಸ್ವಾಮಿ, ಮಹದೇವ್‌ ಹೆಗ್ಗವಾಡಿಪುರ, ಅವಿನ್‌ ಪ್ರಕಾಶ್‌ ವಿ., ಬಿ.ಬಸವರಾಜು

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT