ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದೇಶ್ವರ ಬೆಟ್ಟ: ರಸ್ತೆ ಇಲ್ಲದೆ ಕಕ್ಕೆ ಹೊಲ ಗ್ರಾಮಸ್ಥರ ಪರದಾಟ

ಇರುವ ಕಾಲುದಾರಿ ಮುಚ್ಚುತ್ತಿರುವ ಜಮೀನು ಮಾಲೀಕರು; ಓಡಾಟವೇ ದುಸ್ತರ
Last Updated 24 ಜೂನ್ 2020, 19:30 IST
ಅಕ್ಷರ ಗಾತ್ರ

ಮಹದೇಶ್ವರ ಬೆಟ್ಟ: ಇಲ್ಲಿಗೆ ಸಮೀಪದ ಪೊನ್ನಾಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಮರೂರು ಗ್ರಾಮಕ್ಕೆ ಹೊಂದಿಕೊಂಡಂತಿರುವ ಕಕ್ಕೆ ಹೊಲ ಗ್ರಾಮಸ್ಥರು ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದಾರೆ.

ಪೊನ್ನಾಚಿಯಿಂದ ನಾಲ್ಕು ಕಿ.ಮೀ. ದೂರದಲ್ಲಿರುವ ಕಕ್ಕೆ ಹೊಲ ಕಾಡಂಚಿನಲ್ಲಿದೆ. 80ರಿಂದ 100 ಕುಟುಂಬಗಳು ವಾಸವಾಗಿವೆ. ಮೂರು ತಲೆಮಾರಿನಿಂದಲೂ ಜನರು ಇಲ್ಲಿ ವಾಸವಿದ್ದರೂ, ಈ ಗ್ರಾಮಕ್ಕೆ ಇದುವರೆಗೆ ಸರಿಯಾದ ರಸ್ತೆ ಸಂಪರ್ಕ ಕಲ್ಪಿಸಿಲ್ಲ. ಇಲ್ಲಿನ ಜನರು ಕಾಲು ದಾರಿಯಲ್ಲೇ ಸಾಗಬೇಕಿದೆ.

ದಶಕಗಳಿಂದಲೂ ನಡೆದಾಡುತ್ತಿದ್ದ ಕಾಲು ದಾರಿಯನ್ನು ಕೆಲವು ಕಡೆ ಜಮೀನಿನ ಮಾಲೀಕರು ಈಗ ಮುಚ್ಚಿದ್ದು, ಗ್ರಾಮಸ್ಥರು ನಡೆದಾಡಲೂ ಕಷ್ಟಪಡಬೇಕಾಗಿದೆ. ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಜನಪ‍್ರತಿನಿಧಿಗಳು ಇಲ್ಲಿನ ಸಮಸ್ಯೆಗಳ ಬಗ್ಗೆ ಗಮನಹರಿಸಿಲ್ಲ ಎಂಬುದು ಸ್ಥಳೀಯರ ಆರೋಪ.

‘ತಲೆಮಾರುಗಳಿಂದ ಇದೇ ಗ್ರಾಮದಲ್ಲಿ ವಾಸವಿದ್ದೇವೆ. ನಮಗೆ ಅಗತ್ಯ ಮೂಲಸೌಕರ್ಯಗಳಲ್ಲೇ ಇಲ್ಲ. ನಡೆದಾಡಲು ಇದ್ದ ದಾರಿಯನ್ನೂ ಮುಚ್ಚಲಾಗಿದೆ.ವೃದ್ದರು ಹಾಗೂ ಗರ್ಭಿಣಿಯರು ಓಡಾಡಲು ಕಷ್ಟಪಡಬೇಕಾಗಿದೆ.ಅನಾರೋಗ್ಯದಿಂದ ಬಳಲುತ್ತಿದ್ದರೆ ಅವರನ್ನು ಮುಖ್ಯರಸ್ತೆವರೆಗೆ ಕರೆದುಕೊಂಡು ಹೋಗುವುದೇ ದೊಡ್ಡ ಸಾಹಸ. ಹೊತ್ತುಕೊಂಡೇ ಹೋಗಬೇಕಿದೆ’ ಎಂದು ಗ್ರಾಮಸ್ಥರಾದ ವೀರಭದ್ರಪ್ಪ, ಬಸಮ್ಮ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಾವು ಓಟು ಹಾಕಿದ ಜನರೂ ನಮ್ಮ ಬಗ್ಗೆ ತಲೆ ಕೆಡಿಸಿಕೊಳ್ಳುತಿಲ್ಲ. ಚುಣಾವಣಾ ಸಂದರ್ಭದಲ್ಲಿ ಮಾತ್ರ ನಮ್ಮ ಹಳ್ಳಿಗೆ ಬರುವ ರಾಜಕಾರಣಿಗಳು, ನಂತರ ನಮ್ಮನ್ನು ಸಂಪೂರ್ಣವಾಗಿ ಮರೆಯುತ್ತಾರೆ’ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

‘45 ವರ್ಷದ ಹಿಂದೆ ಈ ಭಾಗದಲ್ಲಿ ಕರಿಕಲ್ಲು ಕೋರೆ ಪ್ರಾರಂಭವಾದಾಗ, ಅವರ ವಾಹನ ಸಂಚಾರಕ್ಕಾಗಿ ಕಚ್ಚಾ ರಸ್ತೆ ಮಾಡಿದ್ದರಿಂದ ನಮಗೆ ಸ್ವಲ್ಪ ಅನುಕೂಲವಾಗಿತ್ತು. ಈಗ ಆ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ಗ್ರಾಮದಿಂದ 30 ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ. ಆನೆ ಹಾವಳಿಯಿಂದ ಅವರು ಹೋಗುವುದಕ್ಕೂ ಕಷ್ಟವಾಗುತ್ತಿದೆ’ ಎಂದು ಪೋಷಕರು ಆತಂಕ ವ್ಯಕ್ತಪಡಿಸಿದರು.

ಗ್ರಾಮಕ್ಕೆ ರಸ್ತೆ ಸಂಪರ್ಕ ಕಲ್ಪಿಸಿ ಸರ್ಕಾರದ ಎಲ್ಲ ಸೌಕರ್ಯ ತಲುಪಿಸಬೇಕು ಎಂಬುದು ಗ್ರಾಮಸ್ಥರ ಆಗ್ರಹ.

‘ಕಚ್ಚಾ ರಸ್ತೆ ನಿರ್ಮಿಸಲು ಕ್ರಮ’

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಹನೂರು ಶಾಸಕ ಆರ್‌.ನರೇಂದ್ರ, ‘ಕಕ್ಕೆ ಹೊಲ ಗ್ರಾಮಕ್ಕೆ ರಸ್ತೆ ಇಲ್ಲ ಎಂಬುದು ಗಮನಕ್ಕೆ ಬಂದಿದೆ. ಕಾಡಂಚಿನ ಗ್ರಾಮವಾಗಿರುವುದರಿಂದ ರಸ್ತೆ ನಿರ್ಮಿಸಲು ಅರಣ್ಯ ಇಲಾಖೆ ಅನುಮತಿ ಬೇಕು. ನರೇಗಾ ಯೋಜನೆಯಲ್ಲಿ ಕಚ್ಚಾ ರಸ್ತೆ ಮಾಡಲು ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮ ವಹಿಸಲಾಗುವುದು’ ಎಂದು ಹೇಳಿದರು.

ಜಾಗ ಬಿಟ್ಟರೆ ರಸ್ತೆ:‘ಪಟ್ಟಾ ಜಮೀನಿನ ಮಾಲೀಕರು ರಸ್ತೆ ನಿರ್ಮಿಸಲು ಜಾಗ ಬಿಡುವುದಾದರೆ ಪಂಚಾಯಿತಿ ವ್ಯಾಪ್ತಿಯಿಂದ ಗ್ರಾಮಕ್ಕೆ ರಸ್ತೆ ನಿರ್ಮಿಸಬಹುದು. ನರೇಗಾ ಯೋಜನೆಯಡಿಯೇ ರಸ್ತೆಯನ್ನು ನಿರ್ಮಿಸಬಹುದು’ ಎಂದು ಪೊನ್ನಾಚಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿರಾಜೇಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT