ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರಾಂತ್ಯದಲ್ಲೂ ಭರಚುಕ್ಕಿಯತ್ತ ಮುಖ ಮಾಡದ ಪ್ರವಾಸಿಗರು

ಕೋವಿಡ್‌–19 ಭಯ: ಜಲಪಾತ ವೀಕ್ಷಣೆಗೆ ಬಾರದ ಜನ
Last Updated 21 ಜೂನ್ 2020, 19:30 IST
ಅಕ್ಷರ ಗಾತ್ರ

ಕೊಳ್ಳೇಗಾಲ: ಕೋವಿಡ್‌–19 ತಡೆಗೆ ಹೇರಲಾಗಿದ್ದ ಲಾಕ್‌ಡೌನ್‌ ಸಡಿಲಿಕೆ ಮಾಡಿದ್ದರೂ ತಾಲ್ಲೂಕಿನ ಸುಪ್ರಸಿದ್ಧ ಭರಚುಕ್ಕಿ ಜಲಪಾತ ಪ್ರವಾಸಿಗರಿಲ್ಲದೇ ಭಣಗುಡುತ್ತಿದೆ.

ಮಳೆಗಾಲ ನಿಧಾನವಾಗಿ ಕಾಲಿಟ್ಟಿದೆ. ವಾತಾವರಣವೂ ತಂಪಾಗಿದೆ. ಈ ಸಮಯದಲ್ಲಿ ಜಲಪಾತ ವೀಕ್ಷಣೆಗೆ ಬರುವವರ ಸಂಖ್ಯೆ ಸಾಮಾನ್ಯವಾಗಿ ಹೆಚ್ಚಿರುತ್ತಿದೆ. ಆದರೆ, ಪ್ರವಾಸಿಗರು ಬರುತ್ತಿಲ್ಲ. ಬೆರಳೆಣಿಕೆಯಷ್ಟು ಮಂದಿ ಕಾಣಿಸುತ್ತಿದ್ದಾರೆ.

ಲಾಕ್‌ಡೌನ್‌ನಿಂದಾಗಿ ಎರಡೂವರೆ ತಿಂಗಳ ಕಾಲ ಪ್ರವಾಸಿತಾಣವನ್ನು ಬಂದ್‌ ಮಾಡಲಾಗಿತ್ತು. ಜೂನ್‌ 8ರಿಂದ ಪ್ರವಾಸಿಗರಿಗೆ ಮತ್ತೆ ಮುಕ್ತವಾಗಿದೆ.

ಜನರಲ್ಲಿ ಇನ್ನೂ ಕೋವಿಡ್‌–19 ಭಯ ಇರುವುದರಿಂದ ಜನರು ಬರುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಬೇಸಿಗೆ ರಜೆ, ವಾರಾಂತ್ಯದಲ್ಲಿ ಭರಚುಕ್ಕಿಯಲ್ಲಿ ನೀರು ಇದ್ದರೂ ಇಲ್ಲದಿದ್ದರೂ ದಿನಕ್ಕೆ ಸಾವಿರಕ್ಕಿಂತ ಹೆಚ್ಚು ಪ್ರವಾಸಿಗರು ಬರುತ್ತಿದ್ದರು. ಈಗ 50 ಮಂದಿ ಬಂದರೆ ಹೆಚ್ಚು.

‘ಈಗ ಬರುತ್ತಿರುವವರಲ್ಲಿ ಹೆಚ್ಚಿನವರು ಸ್ಥಳೀಯರು. ಹೊರ ಜಿಲ್ಲೆಗಳಿಂದ ಯಾರೂ ಬರುತ್ತಿಲ್ಲ. ಮಾಸ್ಕ್‌ ಧರಿಸುವವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸುತ್ತೇವೆ. ನಿಯಮ ಪಾಲಿಸದಿದ್ದವರನ್ನು ವಾಪಸ್‌ ಕಳುಹಿಸುತ್ತಿದ್ದೇವೆ’ ಎಂದು ಸಿಬ್ಬಂದಿ ಹೇಳಿದರು.

‘ಪ್ರವಾಸಿಗರು ಮಾಸ್ಕ್ ಧರಿಸುವುದು ಕಡ್ಡಾಯ ಹಾಗೂ ಸುರಕ್ಷಿತ ಅಂತರವನ್ನೂ ಕಾಯ್ದುಕೊಳ್ಳಬೇಕು. ಇಲ್ಲಿ ಸಾಹಸ ಪ್ರದರ್ಶನ, ಕಾನೂನು ಉಲ್ಲಂಘನೆಗೆ ಅವಕಾಶ ಇಲ್ಲ’ ಎಂದು ವಲಯ ಅರಣ್ಯ ಅಧಿಕಾರಿಪ್ರವೀಣ್ ರಾಮಪ್ಪ ಛಲವಾದಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ವ್ಯಾಪಾರಸ್ಥರು ಬೀದಿ ಪಾಲು: ಈ ಪ್ರವಾಸಿ ತಾಣವನ್ನೇ ನಂಬಿಕೊಂಡು ಹತ್ತಾರು ಸಣ್ಣ ವ್ಯಾಪಾರಿಗಳು ಬದುಕು ಕಟ್ಟಿಕೊಂಡಿದ್ದಾರೆ. ಪ್ರವಾಸಿಗರು ಇಲ್ಲದಿರುವುದರಿಂದ ಅವರು ಈಗ ಜೀವನೋಪಾಯಕ್ಕೆ ಬೇರೆ ದಾರಿ ಹಿಡಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

‘ನಮ್ಮ ಜೀವನಕ್ಕೆ ತುಂಬಾ ತೊಂದರೆಯಾಗಿದೆ. ಎರಡೂವರೆ ತಿಂಗಳುಗಳಿಂದ ವ್ಯಾಪಾರ ಮಾಡುತ್ತಿಲ್ಲ. ಊಟ ತಿಂಡಿಗೂ ಕಷ್ಟಪಡಬೇಕಾದ ಪರಿಸ್ಥಿತಿಯಲ್ಲಿದ್ದೇವೆ. ಪ್ರವಾಸಿ ತಾಣ ತೆರೆದರೂ ಜನರು ಬರುತ್ತಿಲ್ಲ. ವ್ಯಾಪಾರಕ್ಕಾಗಿ ಇನ್ನೆಷ್ಟು ಸಮಯ ಕಾಯಬೇಕೋ ಎಂದು ಗೊತ್ತಿಲ್ಲ’ ಎಂದು ವ್ಯಾಪಾರಿ ಮಹದೇವಮ್ಮ ಅವರು ಅಳಲು ತೋಡಿಕೊಂಡರು.

ಸಮೂಹ ದೇವಾಲಯಗಳಿಗೂ ಭಕ್ತರ ಕೊರತೆ

ಭರಚುಕ್ಕಿ ಜಲಪಾತಕ್ಕೆ ಬರುವ ಪ್ರವಾಸಿಗರು, ಶಿವನ ಸಮುದ್ರದಲ್ಲಿ ದಾರಿ ಮಧ್ಯೆ ಸಿಗುವ ಶಿವನ ಸಮುದ್ರದ ಮಾರಮ್ಮ ದೇವಸ್ಥಾನ, ಮದ್ಯರಂಗ ದೇವಸ್ಥಾನ, ಸೋಮೇಶರ್ವ ಮೀನಾಕ್ಷಿ ಪ್ರಸನ್ನ ದೇವಸ್ಥಾನ, ಐತಿಹಾಸಿಕ ವೇಸ್ಲಿ ಸೇತುವೆ ಹಾಗೂ ಮುಸ್ಲಿಮರ ದರ್ಗಾಕ್ಕೂ ಭೇಟಿ ನೀಡುತ್ತಾರೆ.

ಪ್ರವಾಸಿಗರು ಬರದೇ ಇರುವುದರಿಂದ ಇಲ್ಲೂ ಭಕ್ತರ ಕೊರತೆ ತೀವ್ರವಾಗಿ ಕಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT