ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಲಕ್ಷ ಮನೆಗಳಿಗೆ ಹರಿಯಲಿದ್ದಾಳೆ ‘ಗಂಗೆ’

ಜಲ ಮಿಷನ್‌ ಅಡಿಯಲ್ಲಿ 424 ಗ್ರಾಮಗಳ ಮನೆಗಳಿಗೆ ನಲ್ಲಿ ಸಂಪರ್ಕ, ಶೀಘ್ರ ಕಾಮಗಾರಿ ಆರಂಭ
Last Updated 19 ಜನವರಿ 2021, 2:29 IST
ಅಕ್ಷರ ಗಾತ್ರ

ಚಾಮರಾಜನಗರ: ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಜಂಟಿಯಾಗಿ ಅನುಷ್ಠಾನಗೊಳಿಸುತ್ತಿರುವ ಜಲ ಮಿಷನ್‌ ಅಡಿಯಲ್ಲಿ ಮನೆ ಮನೆಗೆ ಗಂಗೆ ಯೋಜನೆ ಜಿಲ್ಲೆಯಲ್ಲಿ ಶೀಘ್ರದಲ್ಲಿ ಜಾರಿಗೆ ಬರಲಿದೆ. ಇದರ ಅಡಿಯಲ್ಲಿ ಜಿಲ್ಲೆಯ ಗ್ರಾಮೀಣ ಭಾಗಗಳ ಪ್ರತಿ ಮನೆಗೂ ನಲ್ಲಿ ಸಂಪರ್ಕ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತದೆ.

ಯೋಜನೆಯ ಮೊದಲ ಹಂತದಲ್ಲಿ ಚಾಮರಾಜನಗರ, ಗುಂಡ್ಲುಪೇಟೆ ಹಾಗೂ ಹನೂರು ತಾಲ್ಲೂಕುಗಳ 424 ಗ್ರಾಮಗಳ ₹1,00,366 ಮನೆಗಳಿಗೆ ಜಿಲ್ಲಾ ಪಂಚಾಯಿತಿಯು ನಲ್ಲಿ ಸಂಪರ್ಕ ಕಲ್ಪಿಸಲಿದೆ. ₹165 ಕೋಟಿ ವೆಚ್ಚದಲ್ಲಿ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ.

ಚಾಮರಾಜನಗರ ತಾಲ್ಲೂಕಿನ 242 ಗ್ರಾಮಗಳ 57,208 ಮನೆಗಳು, ಗುಂಡ್ಲುಪೇಟೆ ತಾಲ್ಲೂಕಿನ 174 ಗ್ರಾಮಗಳ 35,414 ಮನೆಗಳು ಹಾಗೂ ಹನೂರು ತಾಲ್ಲೂಕಿನ ಎಂಟು ಗ್ರಾಮಗಳ 6,741 ಮನೆಗಳಿಗೆ ಪೈಪ್‌ಲೈನ್‌ ಅಳವಡಿಸಿ ನಲ್ಲಿಗಳ ಮೂಲಕ ಕುಡಿಯುವ ನೀರು ಪೂರೈಕೆಯಾಗಲಿದೆ.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ನೇತೃತ್ವದ ಜಿಲ್ಲಾ ಕುಡಿಯುವ ನೀರು ಮತ್ತು ನೈರ್ಮಲ್ಯ ಸಮಿತಿಯು ಯೋಜನೆಯ ಮೇಲ್ವಿಚಾರಣೆ ಹಾಗೂ ಅನುಷ್ಠಾನದ ಜವಾಬ್ದಾರಿ ಹೊತ್ತಿದೆ.

‘ಈಗಾಗಲೇ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದ್ದು, ಈ ತಿಂಗಳ ಅಂತ್ಯ ಅಥವಾ ಫೆಬ್ರುವರಿ ಮೊದಲ ವಾರದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗುವುದು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಹರ್ಷಲ್‌ ಭೊಯರ್‌ ನಾರಾಯಣರಾವ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರು ಕೂಡ ಯೋಜನೆ ಬಗ್ಗೆ ಹೆಚ್ಚು ಆಸಕ್ತಿ ತೋರಿಸಿದ್ದು, ಜೂನ್‌ ಒಳಗಾಗಿ ಕಾಮಗಾರಿ ಪೂರ್ಣಗೊಳಿಸುವ ಉದ್ದೇಶ ಹೊಂದಲಾಗಿದೆ ಎಂದು ಅವರು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಕಾಮಗಾರಿಗೆ ಚಾಲನೆ ನೀಡುವ ಕಾರ್ಯಕ್ರಮ ಸೋಮವಾರ ನಿಗದಿಯಾಗಿತ್ತು. ಆದರೆ, ಕೊನೆ ಕ್ಷಣದಲ್ಲಿ ಕಾರ್ಯಕ್ರಮವನ್ನು ಮುಂದೂಡಲಾಗಿದೆ.

ಪ್ರಾಯೋಗಿಕವಾಗಿ ಅನುಷ್ಠಾನ: ‘ತಾಲ್ಲೂಕಿನ ಅಮಚವಾಡಿ ಗ್ರಾಮದಲ್ಲಿ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ. ಗ್ರಾಮದ ಒಂದು ಬೀದಿಯಲ್ಲಿರುವ ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸಲಾಗಿದೆ. ನಿವಾಸಿಗಳಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ’ ಎಂದು ಅವರು ಮಾಹಿತಿ ನೀಡಿದರು.

ದಿನಪೂರ್ತಿ ನೀರು: ಚಾಮರಾಜನಗರ ಹಾಗೂ ಗುಂಡ್ಲುಪೇಟೆ ತಾಲ್ಲೂಕುಗಳಲ್ಲಿ ಈಗಾಗಲೇ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನ ಮಾಡಲಾಗಿದೆ. ಗ್ರಾಮಗಳಲ್ಲಿ ಓವರ್‌ ಹೆಡ್‌ ಟ್ಯಾಂಕ್‌ಗಳನ್ನು ನಿರ್ಮಿಸಿ, ಜಲಮೂಲಗಳಿಂದ ಅವುಗಳಿಗೆ ಪೂರೈಸಲಾಗುತ್ತಿದೆ.ಮನೆ ಮನೆಗೆ ಗಂಗೆ ಯೋಜನೆಯಲ್ಲಿ ಈ ಟ್ಯಾಂಕ್‌ಗಳಿಂದ ಪೈಪ್‌ಲೈನ್‌ ಮೂಲಕ ಪ್ರತಿ ಮನೆಗೂ ನೀರನ್ನು ತಲುಪಿಸಲಾಗುತ್ತದೆ.

‘ಗ್ರಾಮೀಣ ಭಾಗದ ಪ್ರತಿ ಮನೆಗೂ ದಿನದ 24 ಗಂಟೆಗಳ ಕಾಲ ವಾರದಲ್ಲಿ ಏಳು ದಿನವೂ ಕುಡಿಯುವ ನೀರು ಪೂರೈಸುವುದು ನಮ್ಮ ಉದ್ದೇಶ. ಎರಡು ತಾಲ್ಲೂಕುಗಳಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಪೂರ್ಣಗೊಂಡಿದೆ. ಹನೂರಿನ 8 ಎಂಟು ಗ್ರಾಮಗಳಲ್ಲಿ ಯೋಜನೆ ಅನುಷ್ಠಾನವಾಗಿದೆ. ಮೊದಲ ಹಂತದಲ್ಲಿ ಈ ಮೂರು ತಾಲ್ಲೂಕುಗಳ ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ’ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಕುಡಿಯುವ ನೀರು ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ಶಿವಶಂಕರ್‌ ಎಚ್‌.ಎಂ. ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘424 ಗ್ರಾಮಗಳಲ್ಲಿ ಡ್ರೋನ್‌ ಸರ್ವೆ ನಡೆಸಲಾಗಿದೆ. ಗುಣಮಟ್ಟದ ಕಾಮಗಾರಿಗೆ ಒತ್ತು ನೀಡಲಾಗುತ್ತಿದ್ದು, ಪಿವಿಸಿಗಿಂತಲೂ ಹೆಚ್ಚಿನ ಗುಣಮಟ್ಟದ ಎಚ್‌ಡಿಪಿವಿ (ಹೈ ಡೆನ್ಸಿಟಿ ಪಾಲಿ ಎಥಿಲೀನ್‌) ಪೈಪ್‌ಗಳನ್ನು ಅಳವಡಿಸಲಾಗುತ್ತದೆ. ಪೈಪ್‌ಲೈನ್‌ ನಿರ್ಮಿಸುವಾಗ ರಸ್ತೆ ಹಾಳಾಗದಂತೆ ಮಾಡಲು ಆಧುನಿಕ ಯಂತ್ರವನ್ನೇ ಬಳಸಲು ನಿರ್ಧರಿಸಲಾಗಿದೆ’ ಎಂದು ಅವರು ವಿವರಿಸಿದರು.

ಫಲಾನುಭವಿಗಳಿಂದ ಶೇ 10ರಷ್ಟು ವೆಚ್ಚ ಸಂಗ್ರಹ
ಜಲ ಮಿಷನ್‌ ಯೋಜನೆಯ ವೆಚ್ಚದಲ್ಲಿ ಶೇ 10ರಷ್ಟು ಫಲಾನುಭವಿಗಳು ಭರಿಸಬೇಕಾಗುತ್ತದೆ. ಕಾಮಗಾರಿ ಮುಕ್ತಾಯವಾದ ಬಳಿಕ ನಿರ್ವಹಣೆ ಜವಾಬ್ದಾರಿಯನ್ನು ಆಯಾ ಗ್ರಾಮ ಪಂಚಾಯಿತಿಗಳಿಗೆ ನೀಡಲಾಗುವುದು. ಕಾಮಗಾರಿ ಪೂರ್ಣಗೊಂಡ ನಂತರನಿವಾಸಿಗಳಿಂದ ಅವರ ಪಾಲಿನ ಮೊತ್ತವನ್ನು ಸಂಗ್ರಹಿಸಲಾಗುವುದು ಎಂದು ಸಿಇಒ ಹರ್ಷಲ್‌ ಭೊಯರ್‌ ಅವರು ಹೇಳಿದರು.

ಪ್ರತಿ ಮನೆಯ ನಲ್ಲಿ ಸಂಪರ್ಕಕ್ಕೂ ಮೀಟರ್‌ ಅಳವಡಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ನಿವಾಸಿಗಳು ನೀರಿನ ಶುಲ್ಕವನ್ನೂ ಪಾವತಿಸಬೇಕಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಾಲೆ, ಅಂಗನವಾಡಿಗಳಿಗೂ ನೀರು ಪೂರೈಕೆ
ಜಲ ಮಿಷನ್‌ ಯೋಜನೆ ಅಡಿಯಲ್ಲಿ ನೀರಿನ ಸೌಲಭ್ಯ ಇಲ್ಲದ ಸರ್ಕಾರಿ ಶಾಲೆಗಳು ಹಾಗೂ ಅಂಗನವಾಡಿ ಕೇಂದ್ರಗಳಿಗೆ ನೀರಿನ ಸಂಪರ್ಕ ನೀಡಲು ಜಿಲ್ಲಾ ಪಂಚಾಯಿತಿ ನಿರ್ಧರಿಸಿದೆ.

ಇದಕ್ಕಾಗಿ 100 ದಿನಗಳ ಕಾರ್ಯಕ್ರಮವನ್ನು ಅಧಿಕಾರಿಗಳು ಹಾಕಿಕೊಂಡಿದ್ದಾರೆ.

‘ಜಿಲ್ಲೆಯ 878 ಅಂಗನವಾಡಿಗಳು ಹಾಗೂ 151 ಸರ್ಕಾರಿ ಶಾಲೆಗಳನ್ನು ಗುರುತಿಸಲಾಗಿದ್ದು, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಇತರ ಬಳಕೆಗಾಗಿ ಅಲ್ಲಿಗೆ ನೀರು ಪೂರೈಸುವ ಕೆಲಸವನ್ನು ಕೈಗೆತ್ತಿಕೊಳ್ಳಲಾಗಿದೆ’ ಎಂದು ಹರ್ಷಲ್‌ ಭೊಯರ್‌ ನಾರಾಯಣರಾವ್‌ ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT