ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನೂರು | ಹೊಗೆನಕಲ್ ಜಲಪಾತ ರಸ್ತೆ ಅಧೋಗತಿ

ಗುಂಡಿ ಬಿದ್ದ ರಸ್ತೆ: ಕೇಳುವವರಿಲ್ಲ ಪ್ರವಾಸಿಗರ ಗೋಳು
Last Updated 9 ಸೆಪ್ಟೆಂಬರ್ 2022, 19:31 IST
ಅಕ್ಷರ ಗಾತ್ರ

ಹನೂರು: ಜಿಲ್ಲೆಯ ಸುಪ್ರಸಿದ್ಧ ಪ್ರವಾಸಿ ತಾಣ ಹೊಗೆನಕಲ್ ಜಲಪಾತಕ್ಕೆ ತೆರಳುವ ರಸ್ತೆ ಸಂಪೂರ್ಣ ಹದಗೆಟ್ಟಿದೆ. ವಾಹನ ಸವಾರರು ಬಿದ್ದು ಗಾಯಗೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ರಾಜ್ಯದ ಗಡಿ ಪಾಲಾರ್‌‌‌ನಿಂದ ಹೊಗೆನಕಲ್ ಜಲಪಾತಕ್ಕೆ 28ಕಿ.ಮೀ ದೂರವಿದೆ. ಅರಣ್ಯದೊಳಗೆ ರಸ್ತೆ ಹಾಳಾಗಿರುವುದು ಒಂದೆಡೆಯಾದರೆ, ಅತ್ಯಂತ ಕಿರಿದಾದ ರಸ್ತೆಯಲ್ಲಿ ಆಗಾಗ್ಗೆ ಸಂಭವಿಸುವ ಸರಣಿ ಅಪಘಾತ ಸಾರ್ವಜನಿಕರನ್ನು ಆತಂಕಕ್ಕೀಡು ಮಾಡಿದೆ. ತೀವ್ರ ತಿರುವುಗಳಿರುವ ರಸ್ತೆ ದಶಕಗಳಿಂದಲೂ ದುರಸ್ತಿ ಭಾಗ್ಯವನ್ನೇ ಕಂಡಿಲ್ಲ.

ಪಾಲಾರ್‌‌‌ನಿಂದ ಗೋಪಿನಾಥಂ ರಸ್ತೆ 15 ವರ್ಷಗಳ ಹಿಂದೆ ನಿರ್ಮಾಣವಾಗಿದೆ, ಗೋಪಿನಾಥಂನಿಂದ ಹೊಗೆನಕಲ್‌‌‌ವರೆಗಿನ ರಸ್ತೆ ನಿರ್ಮಾಣವಾಗಿ 20 ವರ್ಷಗಳಾಗಿವೆ. ಎರಡೂ ರಸ್ತೆಗಳು ಒಮ್ಮೆಯೂ ದುರಸ್ತಿಯಾಗಿಲ್ಲ. ಪ್ರತಿನಿತ್ಯ ಸಾಧಾರಣ ವಾಹನ ಸಂಚಾರವಿದ್ದು, ವಾರಾಂತ್ಯದಲ್ಲಿ ಸಂಚರಿಸುವ ನೂರಾರು ವಾಹನಗಳ ಚಾಲಕರು ಆಡಳಿತ ವ್ಯವಸ್ಥೆಗೆ ಹಿಡಿಶಾಪ ಹಾಕುತ್ತಾರೆ.

‘15 ವರ್ಷಗಳ ಹಿಂದೆ ಅಭಿವೃದ್ಧಿಗೆ ವೀರಪ್ಪನ್ ಅಡ್ಡಿ ಎನ್ನುತ್ತಿತ್ತು ಸರ್ಕಾರ. ಆತ ಸತ್ತು ಒಂದೂವರೆ ದಶಕ ಕಳೆದರೂ ಅಭಿವೃದ್ಧಿ ಮರೀಚಿಕೆಯಾಗಿಯೇ ಉಳಿದಿದೆ’ ಎನ್ನುತ್ತಾರೆ ಗೋಪಿನಾಥಂ ಗ್ರಾಮದ ಮಾಣಿಕ್ಯಂ.

ರಸ್ತೆಯಲ್ಲಿ ಭಾರಿ ಗಾತ್ರದ ಗುಂಡಿ ನಿರ್ಮಾಣವಾಗಿರುವ ಬಗ್ಗೆ ಪ್ರವಾಸಿಗರು ಹಾಗೂ ಗೋಪಿನಾಥಂ ಗ್ರಾಮಸ್ಥರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದರಿಂದ ಕೇವಲ 2 ರಿಂದ 3 ಕಿ.ಮೀ ನಷ್ಟು ತೇಪೆ ಹಾಕುವ ಕಾಮಗಾರಿ ನಡೆಸಲಾಗಿತ್ತು. ವಾರದೊಳಗೆ ಅದೆಲ್ಲಾ ಕಿತ್ತುಬಂದು ಮೊದಲಿನಂತಾಗಿದೆ. ಹೀಗಾಗಿ ಜಲಪಾತ ವೀಕ್ಷಿಸಲು ಪ್ರವಾಸಿಗರು ಹಿಂದೇಟು ಹಾಕುತ್ತಿದ್ದಾರೆ.

ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಸ್.ಸುರೇಶ್ ಕುಮಾರ್ 2 ಬಾರಿ ಶಾಲಾ ವಾಸ್ತವ್ಯ ಹೂಡಿದ್ದರೂ ಪ್ರಯೋಜನವಾಗಿಲ್ಲ. ಜಿಲ್ಲಾಧಿಕಾರಿಗಳಿಗೆ 2 ಬಾರಿ ಮನವಿ ಕೊಟ್ಟರೂ ಪರಿಸ್ಥಿತಿ ಸುಧಾರಿಸಿಲ್ಲ.

ರಾತ್ರಿ ವೇಳೆ ತುರ್ತು ಸಂದರ್ಭ ಗ್ರಾಮದ ಜನರು ತಮಿಳುನಾಡಿನ ಆಸ್ಪತ್ರೆಗೆ ತೆರಳುತ್ತಾರೆ. ಅರಣ್ಯದ ರಸ್ತೆಯಾಗಿರುವುದರಿಂದ ವಾಹನ ಕೆಟ್ಟು ನಿಂತರೆ ವನ್ಯಪ್ರಾಣಿಗಳ ದಾಳಿಗೆ ತುತ್ತಾಗುವುದು ಖಚಿತ. ಗುಂಡಿಗಳಿರುವುದರಿಂದ ನಿಧಾನವಾಗಿ ಬರುವ ವಾಹನ ಸವಾರರು ವನ್ಯಪ್ರಾಣಿಗಳ ದಾಳಿಗೆ ತುತ್ತಾಗಿರುವ ಘಟನೆಗಳೂ ನಡೆದಿವೆ.

ವಾರಾಂತ್ಯದಲ್ಲಿ ಸಾವಿರಾರು ಪ್ರವಾಸಿಗರು ಪ್ರಕೃತಿ ಸೊಬಗು ಸವಿಯಲು ಬರುತ್ತಾರೆ. ವಿಶೇಷ ದಿನಗಳು ಹಾಗೂ ಜಾತ್ರೆಗಳಲ್ಲಿ ಮಹದೇಶ್ವರ ಬೆಟ್ಟಕ್ಕೆ ಬರುವ ಜನರು ಹೊಗೆನಕಲ್ ಜಲಪಾತ ವೀಕ್ಷಣೆಗೂ ತೆರಳುತ್ತಾರೆ. ಆದರೆ ಇಲ್ಲಿನ ರಸ್ತೆಯ ಸ್ಥಿತಿ ಕಂಡು ವಾಪಸಾಗುತ್ತಾರೆ. ಕೂಡಲೇ ಸಂಬಂಧಪಟ್ಟ ಇಲಾಖೆ ರಸ್ತೆ ದುರಸ್ತಿಗೆ ಮುಂದಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

*

ಪಾಲಾರ್ ನಿಂದ ಹೊಗೆನಕಲ್‌ವರೆಗೆ ರಸ್ತೆ ನಿರ್ವಹಣೆಗೆ ಅನುದಾನಕ್ಕೆ ಮನವಿ ಸಲ್ಲಿಸಲಾಗಿದೆ. ಕೂಡಲೇ ದುರಸ್ತಿ ಮಾಡಲಾಗುವುದು.
–ಸದಾಶಿವಮೂರ್ತಿ, ಎಇಇ, ಲೋಕೋಪಯೋಗಿ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT