ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತೇಮರಹಳ್ಳಿ: ವೈದ್ಯರ ವಸತಿ ಗೃಹಕ್ಕೆ ಅನಾರೋಗ್ಯ!

ಉಮ್ಮತ್ತೂರು: ಪಾಳು ಬಿದ್ದ ಕಟ್ಟಡ, ಪಟ್ಟಣದಲ್ಲಿ ವೈದ್ಯಕೀಯ ಸಿಬ್ಬಂದಿ ವಾಸ
Published 23 ಡಿಸೆಂಬರ್ 2023, 5:56 IST
Last Updated 23 ಡಿಸೆಂಬರ್ 2023, 5:56 IST
ಅಕ್ಷರ ಗಾತ್ರ

ಸಂತೇಮರಹಳ್ಳಿ: ಹೋಬಳಿಯ ಉಮ್ಮತ್ತೂರು ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ವಸತಿ ಗೃಹಗಳು ವಾಸಕ್ಕೆ ಯೋಗ್ಯವಿಲ್ಲದಂತಾಗಿ ಭೂತ ಬಂಗಲೆಗಳಾಗಿವೆ.

ಇಲ್ಲಿನ ವಸತಿ ಗೃಹಗಳಲ್ಲಿ ಐದಾರು ವರ್ಷಗಳ ಹಿಂದೆ ಸ್ಥಳೀಯವಾಗಿ ಕರ್ತವ್ಯ ನಿರ್ವಹಿಸುವ ವೈದ್ಯಾಧಿಕಾರಿ, ನರ್ಸ್‍ಗಳು ಹಾಗೂ ಸಹಾಯಕರು ವಾಸವಾಗಿದ್ದರು. ಈಗ  ಪ್ರಾಥಮಿಕ ಆರೋಗ್ಯ ಕೇಂದ್ರದ ನೌಕರರು ವಾಸಕ್ಕೆ ಪಟ್ಟಣ ಪ್ರದೇಶ ಅವಲಂಬಿಸಿಕೊಂಡ ನಂತರ ಇಲ್ಲಿನ ವಸತಿ ಗೃಹಗಳು ನಿರ್ವಹಣೆ ಇಲ್ಲದೆ ಪಾಳು ಬಿದ್ದಿವೆ. 

ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಒಬ್ಬರು ವೈದ್ಯಾಧಿಕಾರಿ, ಒಬ್ಬರು ಸ್ಟಾಫ್‌ ನರ್ಸ್, ಅರೆ ವೈದ್ಯಕೀಯ ಸಿಬ್ಬಂದಿ ಇಬ್ಬರು, ಆರೋಗ್ಯ ನಿರೀಕ್ಷಕರು ಒಬ್ಬರು, ಕೇಂದ್ರ ಆರೋಗ್ಯ ಅಧಿಕಾರಿ ಮೂವರು,  ಒಬ್ಬರು ಗುಮಾಸ್ತ ಮತ್ತು ಇಬ್ಬರು ಸಹಾಯಕರು ಇದ್ದಾರೆ.

ಈ ಹುದ್ದೆಗಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ಮಗ್ಗುಲಲ್ಲಿಯೇ ಏಳು ವಸತಿಗೃಹಗಳು ಇವೆ. ಆರೋಗ್ಯ ಕೇಂದ್ರದ ನೌಕರರು ವಾಸಿಸುತ್ತಿದ್ದ ವಸತಿ ಗೃಹಗಳ ನಿರ್ವಹಣೆ ಇಲ್ಲದ್ದರಿಂದ ಕಟ್ಟಡ ಶಿಥಿಲಾವಸ್ಥೆ ತಲುಪಿದ್ದವು. ಈಗ ಸಿಬ್ಬಂದಿಯೂ ವಸತಿ ಗೃಹಗಳಲ್ಲಿ ವಾಸವಿಲ್ಲದಿರುವುದರಿಂದ ಅವುಗಳನ್ನು ನಿರ್ವಹಣೆ ಮಾಡುವವರೇ ಇಲ್ಲದಂತಾಗಿದೆ. 

‘ಆರೋಗ್ಯ ಕೇಂದ್ರಸ್ಥಾನದಲ್ಲಿ ವಸತಿ ಗೃಹಗಳಿದ್ದರೂ ಆರೋಗ್ಯ ಅಧಿಕಾರಿಗಳು ಇಲ್ಲಿ ವಾಸವಿಲ್ಲ. ಈಗ ಮನೆಗಳು ಸರಿ ಇಲ್ಲ ಎಂಬ ಕಾರಣವನ್ನೇ ಮುಂದಿಡುತ್ತಿದ್ದಾರೆ. ಅವರು ದೂರದ ಊರುಗಳಿಂದ ಆಸ್ಪತ್ರೆಗೆ ಬರುವವರೆಗೂ ರೋಗಿಗಳು ಕಾಯಬೇಕಾಗಿದೆ’ ಎನ್ನುವುದು ಗ್ರಾಮಸ್ಥರ ದೂರು.

ಬಾಗಳಿ, ಜನ್ನೂರು, ಹೊಸೂರು, ಮೂಡಲ ಅಗ್ರಹಾರ, ದೇಮಹಳ್ಳಿ, ಮೋಳೆ, ಕೋಣನಹುಂಡಿ ಸೇರಿದಂತೆ ಹಲವು ಗ್ರಾಮಗಳ ಜನರು ಚಿಕಿತ್ಸೆಗಾಗಿ ಈ ಆರೋಗ್ಯ ಕೇಂದ್ರವನ್ನು ನೆಚ್ಚಿಕೊಂಡಿದ್ದಾರೆ. ಸುತ್ತಲಿನ ಕೆಲವು ಕಡೆಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಆರಂಭಗೊಳ್ಳುವುದಕ್ಕೂ ಮೊದಲು ಚಾಮರಾಜನಗರ ಬಿಟ್ಟರೆ, ಈ ಆಸ್ಪತ್ರೆಯೇ ಹೆರಿಗೆ ಕೇಂದ್ರವಾಗಿತ್ತು.

ದೂರದ ಗ್ರಾಮಗಳ ಮಹಿಳೆಯರು ಈ ಆಸ್ಪತ್ರೆಗೆ ಹೆರಿಗೆಗಾಗಿ ದಾಖಲಾಗುತ್ತಿದ್ದರು. ಜತೆಗೆ ದಿನದ 24 ಗಂಟೆಗಳಲ್ಲಿ ರೋಗಿಗಳಿಗೆ ಇಲ್ಲಿ ಸೇವೆ ಲಭ್ಯವಿತ್ತು. ಸಿಬ್ಬಂದಿ ಕೂಡ  ಕೇಂದ್ರಸ್ಥಾನದಲ್ಲಿದ್ದು ಸೇವೆ ಸಲ್ಲಿಸುತ್ತಿದ್ದರು.

‘ಈಗ ವಸತಿ ಗೃಹಗಳು ಸಂಪೂರ್ಣವಾಗಿ ಶಿಥಿಲಾವಸ್ಥೆ ತಲುಪಿವೆ. ಕಾಡು ಗಿಡಗಳು ಕಟ್ಟಡಗಳನ್ನು ಆವರಿಸಿಕೊಂಡಿವೆ. ಕಿಟಕಿ, ಬಾಗಿಲುಗಳು ಮುರಿದು ಬಿದ್ದಿವೆ. ಈ ವಸತಿ ಗೃಹಗಳಿಗೆ ದಾರಿಯೇ ಇಲ್ಲದಂತಾಗಿದೆ. ಆವರಣವು ಬೀಡಾಡಿ ದನಗಳು ಹಾಗೂ ನಾಯಿಗಳ ವಾಸ ಸ್ಥಾನವಾಗಿದೆ. ಸಂಜೆ ಹೊತ್ತು ಮದ್ಯ ವ್ಯಸನಿಗಳ ತಾಣವಾಗಿ ಬದಲಾಗುತ್ತದೆ.  ಮದ್ಯದ ಬಾಟಲಿಗಳು, ಪೌಚುಗಳು ಸ್ಥಳದಲ್ಲಿಯೇ ಬಿದ್ದಿದ್ದು, ಅನೈತಿಕ ಚಟುವಟಿಕೆಗಳಿಗೂ ಕಾರಣವಾಗಿದೆ.

‘ಹಿಂದಿನ ಸರ್ಕಾರದ ಅವಧಿಯಲ್ಲಿ ಅಂದಿನ ಶಾಸಕ ಎನ್.ಮಹೇಶ್ ಅವರು ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಸರ್ಕಾರಕ್ಕೆ ಪತ್ರ ಬರೆದಿದ್ದರು. ಆದರೆ, ಏನೂ ಕ್ರಮ ಆಗಿರಲಿಲ್ಲ. ಈಗಿನ ಸರ್ಕಾರದ ಗಮನ ಹರಿಸುವ ರೀತಿಯಲ್ಲಿ ಒತ್ತಡ ಹಾಕಬೇಕಾಗಿದೆ’ ಎಂದು ಸ್ಥಳೀಯ ಮುಖಂಡ ಚಿಕ್ಕಬಸಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು. 

ಆಸ್ಪತ್ರೆ ಇರುವ ಕೇಂದ್ರಸ್ಥಾನದಲ್ಲಿಯೇ ವಸತಿ ಗೃಹಗಳಿವೆ. ಇವುಗಳನ್ನು ದುರಸ್ತಿಗೊಳಿಸಿ ಆಸ್ಪತ್ರೆ ಸಿಬ್ಬಂದಿ ವಾಸಿಸುವಂತೆ ಮಾಡಬೇಕು

-ಬಸವಣ್ಣ ಉಮ್ಮತ್ತೂರು

ವರ್ಷದೊಳಗೆ ಕ್ರಮ: ಡಿಎಚ್‌ಒ

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಸ್‌.ಚಿದಂಬರ ‘ಇದೇ ರೀತಿಯ ಸಮಸ್ಯೆ ಜಿಲ್ಲೆಯ ಹಲವು ಕಡೆಗಳಲ್ಲಿದೆ. ಲೋಕೋಪಯೋಗಿ ಇಲಾಖೆ ಮೂಲಕ ಮಾಹಿತಿ ತರಿಸಿಕೊಂಡು ಇನ್ನು ಆರು ತಿಂಗಳು ಅಥವಾ ವರ್ಷದೊಳಗೆ ವಸತಿ ಗೃಹಗಳನ್ನು ತೆರವುಗೊಳಿಸಿ ಹೊಸ ಕಟ್ಟಡಗಳಿಗೆ ಕ್ರಮ ಕೈಗೊಳ್ಳಲಾಗುವುದು. ಆಸ್ಪತ್ರೆ ವಸತಿ ಗೃಹಗಳ ಆವರಣದಲ್ಲಿ ಮದ್ಯ ವ್ಯಸನಿಗಳ ಹಾವಳಿತಡೆಯುವ ಸಂಬಂಧ ಪೊಲೀಸರಿಗೆ ತಿಳಿಸಲಾಗುವುದು’ ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT