ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡ್ಲುಪೇಟೆ: ಹೆಸರಿಗಷ್ಟೇ ಪ್ಲಾಸ್ಟಿಕ್ ನಿಷೇಧ

ಎಗ್ಗಿಲ್ಲದೇ ಮುಂದುವರಿದಿದೆ ಪ್ಲಾಸ್ಟಿಕ್‌ ಬಳಕೆ, ಜನರಲ್ಲೂ ಮೂಡದ ಜಾಗೃತಿ
Last Updated 8 ನವೆಂಬರ್ 2019, 19:45 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಪಟ್ಟಣದಲ್ಲಿ ಪ್ಲಾಸ್ಟಿಕ್‌ ಬಳಕೆ ಎಗ್ಗಿಲ್ಲದೇ ಸಾಗಿದೆ. ಪುರಸಭೆ ಅಧಿಕಾರಿಗಳು ಹಲವು ಅಂಗಡಿ, ಹೋಟೆಲ್‌ಗಳಿಗೆ ದಿಢೀರ್‌ ಭೇಟಿ ಕೊಟ್ಟು ತಪಾಸಣೆ ನಡೆಸಿ ಪ್ಲಾಸ್ಟಿಕ್‌ ವಶಪಡಿಸಿಕೊಂಡು ದಂಡ ವಿಧಿಸಿದರೂ ಬಳಕೆ ಮುಂದುವರಿದಿದೆ.

ವ್ಯಾಪಾರಿಗಳು ಮಾತ್ರವಲ್ಲದೇ ಜನರಲ್ಲೂ ಜಾಗೃತಿ ಮೂಡಿಲ್ಲ. ಇಬ್ಬರೂ ಕದ್ದು ಮುಚ್ಚಿ ಬಳಕೆ ಮಾಡುತ್ತಿದ್ದಾರೆ. ಪ‍್ಲಾಸ್ಟಿಕ್‌ ವಿರುದ್ಧ ಪುರಸಭೆ ನಡೆಸುತ್ತಿರುವ ಜಾಗೃತಿ ಕಾರ್ಯಕ್ರಮ ಕೇವಲ ಪ್ರಚಾರಕ್ಕೆ ಎಂಬಂತಾಗಿದೆ.

ಜೀವ ಸಂಕುಲಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಮಾರಾಟಕ್ಕೆ ಕೇಂದ್ರ ಸರ್ಕಾರ ನಿಷೇಧ ಹೇರಿದೆ. ಅಕ್ಟೋಬರ್2 ಗಾಂಧಿ ಜಯಂತಿಯಂದು ಪ್ರಧಾನಿ ಮೋದಿ ಅವರು ’ಪ್ಲಾಸ್ಟಿಕ್ ಮುಕ್ತ ಭಾರತ’ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಆದರೆ, ಪಟ್ಟಣದಲ್ಲಿ ಮಾತ್ರ ಅದು ಜಾರಿಗೆ ಬಂದಿಲ್ಲ.

ಪ್ಲಾಸ್ಟಿಕ್ ಸಂಪೂರ್ಣ ನಿಷೇಧ ಮಾಡುವ ಉದ್ದೇಶದಿಂದ ಪುರಸಭೆ ಮುಖ್ಯಾಧಿಕಾರಿ ಸೇರಿದಂತೆ ಅಧಿಕಾರಿಗಳು ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದ ವ್ಯಾಪಾರಸ್ಥರಿಗೆ ಹಾಗೂ ಸಾರ್ವಜನಿಕರಿಗೆ ಪರಿಸರ ಸ್ನೇಹಿ ಕೈಚೀಲ ಬಳಕೆ ಮಾಡುವಂತೆ ಜಾಗೃತಿ ಮೂಡಿಸಿದ್ದರು. ಪ್ಲಾಸ್ಟಿಕ್ ಕವರ್ ವಶಪಡಿಸಿಕೊಂಡು ದಂಡ ವಿಧಿಸುತ್ತಿದ್ದರೂ ಪ್ರಯೋಜನವಾಗುತ್ತಿಲ್ಲ.

ಹೋಟೆಲ್‌ಗಳಲ್ಲಿ ಬಳಕೆ ಹೆಚ್ಚು:ಬಹುತೇಕ ಹೋಟೆಲ್‌ಗಳಲ್ಲಿ ಇಡ್ಲಿ ತಯಾರಿಕೆ ಸೇರಿದಂತೆ ಗ್ರಾಹಕರಿಗೆ ಊಟ ವಿತರಣೆ ಮಾಡುವ ತಟ್ಟೆಗಳಿಗೆ ಹಾಕಲು ಈಗಲೂ ಪ್ಲಾಸ್ಟಿಕ್ ಅನ್ನೇ ಬಳಸುತ್ತಿದ್ದಾರೆ. ಊಟಪಾರ್ಸೆಲ್ ಮಾಡುವುದಕ್ಕೂ ಪ್ಲಾಸ್ಟಿಕ್ ಬಳಸುತ್ತಿದ್ದಾರೆ.

‘ಬಳಕೆ ಮಾಡಿದ ನಂತರ ಕಸದ ತೊಟ್ಟಿಗಳಿಗೆ ತಂದು ಸುರಿಯುತ್ತಿದ್ದಾರೆ. ಕಸದ ರಾಶಿಗಳಲ್ಲಿ ಆಹಾರ ಹುಡುಕಿಕೊಂಡು ಬರುವ ರಾಸುಗಳ ಹೊಟ್ಟೆಗೂ ಪ್ಲಾಸ್ಟಿಕ್ ಕವರ್ ಸೇರಿಕೊಳ್ಳುತ್ತಿವೆ’ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಪ್ಲಾಸ್ಟಿಕ್ ನಿಷೇಧ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪಟ್ಟಣ ಪುರಸಭೆ ದೊಡ್ಡಮಟ್ಟದ ಅಭಿಯಾನ ಕೈಗೊಂಡಿಲ್ಲ. ಹಾಗಾಗಿ, ಪ್ಲಾಸ್ಟಿಕ್‌ಗೆ ಅಂಕುಶ ಬೀಳುತ್ತದೋ ಇಲ್ಲವೋ ಎಂಬ ಅನುಮಾನ ಕಾಡುತ್ತಿದೆ’ ಎಂದು ಕರವೇ ಜಿಲ್ಲಾ ಘಟಕದ ಉಪಾಧ್ಯಕ್ಷ ರಾಜೇಂದ್ರ ವಿ ನಾಯಕ ಹೇಳಿದರು.

ವ್ಯಾಪಾರಿಗಳು ಒಂದೆಡೆಯಾದರೆ, ಜನರಲ್ಲೂ ಜಾಗೃತಿ ಮೂಡಿಲ್ಲ. ಬರಿ ಕೈಯಲ್ಲಿ ಅಂಗಡಿಗಳಿಗೆ ಹೋಗುವ ಜನರು ಪ್ಲಾಸ್ಟಿಕ್‌ ಕವರ್‌ ಕೊಡುವಂತೆ ಅಂಗಡಿ ಮಾಲೀಕರನ್ನು ಕೇಳುತ್ತಾರೆ. ಗ್ರಾಹಕರು ಕೈ ತಪ್ಪಿ ಹೋಗುವ ಭಯದಿಂದ ಅಂಗಡಿಯವರು ಪ್ಲಾಸ್ಟಿಕ್‌ ಕವರ್‌ ಕೊಡುತ್ತಾರೆ.

ಕೆಲವು ವ್ಯಾಪಾರಸ್ಥರುಪರಿಸರ ಸ್ನೇಹಿ ಚೀಲದಲ್ಲಿ ಸಾಮಗ್ರಿಗಳನ್ನು ಕೊಡುತ್ತಾರೆ. ಆದರೆ, ಅದಕ್ಕೆ ದರ ವಿಧಿಸುತ್ತಾರೆ. ಅದಕ್ಕೆ ಹಣ ಕೊಡಲು ಗ್ರಾಹಕರು ಸಿದ್ಧರಿರುವುದಿಲ್ಲ. ಈ ವಿಚಾರವಾಗಿ ಅಂಗಡಿಯವರೊಂದಿಗೆ ಜಗಳವಾಡುವವರೂ ಇದ್ದಾರೆ.

‘ಪ್ಲಾಸ್ಟಿಕ್‌ ಬಳಕೆ:ಶೇ 80ರಷ್ಟು ಕಡಿಮೆ’

‘ಈಗಾಗಲೇ ಹಲವು ಹೋಟೆಲ್, ಬೇಕರಿ, ಅಂಗಡಿಗಳಿಗೆ ದಿಢೀರ್‌ ಭೇಟಿ ನೀಡಿ ತಪಾಸಣೆ ನಡೆಸಿ ಪ್ಲಾಸ್ಟಿಕ್ ವಶ ಪಡಿಸಿಕೊಂಡು ದಂಡ ವಿಧಿಸಲಾಗಿದೆ. ಮಾಲೀಕರಿಗೆ ಸದ್ಯದಲ್ಲಿ ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧ ಬಗ್ಗೆ ಅರಿವು ಮೂಡಿಸಿ ಪರ್ಯಾಯವಾಗಿ ಬೇರೆ ವಸ್ತುಗಳನ್ನು ಬಳಸುವಂತೆ ಸೂಚನೆ ನೀಡಲಾಗುವುದು. ಪಟ್ಟಣದಲ್ಲಿ ತಿಂಗಳಿಂದ ಶೇ 80ರಷ್ಟು ಪ್ಲಾಸ್ಟಿಕ್ ಬಳಕೆ ಕಡಿಮೆಯಾಗಿದೆ. ಮುಂದಿನ ದಿನಗಳಲ್ಲಿ ಪ್ಲಾಸ್ಟಿಕ್ ಮುಕ್ತ ಪಟ್ಟಣ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಪುರಸಭೆ ಮುಖ್ಯಾಧಿಕಾರಿ ರಮೇಶ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT