ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯ ಪೊಲೀಸರಿಗೊಂದು ಭವನ

₹1.65 ಕೋಟಿ ವೆಚ್ಚದಲ್ಲಿ ನಿರ್ಮಿತಿ ಕೇಂದ್ರದಿಂದ ಸುಸಜ್ಜಿತ ಕಟ್ಟಡ ನಿರ್ಮಾಣ
Last Updated 29 ಜನವರಿ 2019, 20:15 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯ ಪೊಲೀಸ್‌ ಇಲಾ‌ಖೆಯ ಸಿಬ್ಬಂದಿಗಾಗಿ ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತ ಭವನವೊಂದು ತಲೆ ಎತ್ತಲಿದೆ.

ಡಾ.ಬಿ.ಆರ್‌. ಅಂಬೇಡ್ಕರ್‌ ಜಿಲ್ಲಾ ಕ್ರೀಡಾಂಗಣದ ಬಳಿಯಲ್ಲಿ, ಚಾಮರಾಜನಗರ ಗ್ರಾಮಾಂತರ ಪೊಲೀಸ್‌ ಠಾಣೆಯ ಸಮೀಪ ₹1.65 ಕೋಟಿ ವೆಚ್ಚದಲ್ಲಿ ಪೊಲೀಸ್‌ ಭವನ ನಿರ್ಮಾಣವಾಗಲಿದೆ.

ದಕ್ಷಿಣ ವಲಯ ಐಜಿ ಕೆ.ವಿ. ಶರತ್‌ಚಂದ್ರ ಅವರು ಇದೇ 24ರಂದು ಕಟ್ಟಡ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ್ದಾರೆ. ಇನ್ನು ಒಂದೂವರೆ ವರ್ಷದಲ್ಲಿ ಭವನ ಬಳಕೆಗೆ ಮುಕ್ತವಾಗಲಿದೆ ಎಂಬ ವಿಶ್ವಾಸದಲ್ಲಿ ಅಧಿಕಾರಿಗಳು ಇದ್ದಾರೆ.

ಹೇಗಿರಲಿದೆ ಭವನ?:ಅಂದಾಜು 100x60 ಅಳತೆಯ ನಿವೇಶನದಲ್ಲಿ ನಿರ್ಮಾಣವಾಗಲಿರುವ ಭವನವು ನೆಲಮಹಡಿ ಹಾಗೂ ಎರಡು ಅಂತಸ್ತುಗಳನ್ನು ಹೊಂದಿರಲಿದೆ.

500 ಆಸನಗಳ ಸಾಮರ್ಥ್ಯದ ಭವನದ ನೆಲದ ಮಹಡಿಯಲ್ಲಿ ಊಟದ ಹಾಲ್‌ ಇದ್ದರೆ, ಮೊದಲ ಮಹಡಿಯಲ್ಲಿ ವೇದಿಕೆ ಹಾಗೂ ಸಭಾಂಗಣ ಇರಲಿದೆ. ಎರಡನೇ ಮಹಡಿಯಲ್ಲಿ ಕೊಠಡಿಗಳು ನಿರ್ಮಾಣಗೊಳ್ಳಲಿವೆ.

‘ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪೊಲೀಸ್‌ ಭವನಗಳು ಇವೆ. ಆದರೆ, ನಮ್ಮಲ್ಲಿ ಇಲ್ಲ. ಇಲಾಖೆಗೆ ಪ್ರತ್ಯೇಕ ಭವನ ಇಲ್ಲದೇ ಇದ್ದರಿಂದ ಅನನುಕೂಲವಾಗುತ್ತಿತ್ತು. ಹಾಗಾಗಿ, ನಿರ್ಮಿತಿ ಕೇಂದ್ರದಿಂದ ಪ್ರಸ್ತಾವ ಸಿದ್ಧಪಡಿಸಿ ರಾಜ್ಯ ಪೊಲೀಸ್‌ ಮಹಾನಿರ್ದೇಶಕರಿಗೆ 2018ರ ಜುಲೈನಲ್ಲಿ ಕಳುಹಿಸಿದ್ದೆವು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ (ಎಸ್‌ಪಿ) ಧರ್ಮೇಂದರ್‌ ಕುಮಾರ್‌ ಮೀನಾ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಕೇಂದ್ರ ಕಲ್ಯಾಣ ನಿಧಿಯಿಂದ ಅನುದಾನ: ಪೊಲೀಸ್‌ ಇಲಾಖೆಯಲ್ಲಿನ ಕೇಂದ್ರ ಕಲ್ಯಾಣ ನಿಧಿಯಿಂದ ಪೊಲೀಸ್‌ ಭವನಕ್ಕೆ ₹1.65 ಕೋಟಿ ಅನುದಾನ ಮಂಜೂರು ಮಾಡಲಾಗಿದೆ.

‘ಕೇಂದ್ರ ಕಲ್ಯಾಣ ನಿಧಿಗೆ ಡಿಜಿಪಿ ಅವರು ಅಧ್ಯಕ್ಷರು. ಈ ವರ್ಷದ ಸೆಪ್ಟೆಂಬರ್‌ನಲ್ಲಿ ಭವನ ನಿರ್ಮಾಣಕ್ಕೆ ಅವರು ಆಡಳಿತಾತ್ಮಕ ಅನುಮೋದನೆ ನೀಡಿದ್ದಾರೆ’ ಎಂದು ಧರ್ಮೇಂದರ್‌ ಕುಮಾರ್‌ ಮೀನಾ ತಿಳಿಸಿದರು.

ಪ್ರಯೋಜನ ಏನು?: ಪೊಲೀಸ್‌ ಇಲಾಖೆಯ ಯಾವುದೇ ಕಾರ್ಯಕ್ರಮಗಳು, ಮದುವೆ, ಆರತಕ್ಷತೆಯಂತಹ ಸಮಾರಂಭಗಳು, ತರಬೇತಿ ಕಾರ್ಯಕ್ರಮಗಳು, ಯೋಗ ಕಾರ್ಯಕ್ರಮ, ಬಂದೋಬಸ್ತ್‌ಗಾಗಿ ಬರುವ ಸಿಬ್ಬಂದಿಗೆ ಉಳಿದು ಕೊಳ್ಳುವ ವ್ಯವಸ್ಥೆ, ಎನ್‌ಸಿಸಿ ಕಾರ್ಯಕ್ರಮ ಸೇರಿದಂತೆ ಹಲವು ಕಾರ್ಯಗಳಿಗೆ ಭವನ ಉಪಯೋಗವಾಗಲಿದೆ.

ಖಾಸಗಿಯವರೂ ಬಳಸುವುದಕ್ಕೆ ಅವಕಾಶ

ನಿರ್ಮಾಣವಾಗಲಿರುವ ಭವನವನ್ನು ಪೊಲೀಸ್‌ ಇಲಾಖೆ, ಅದರ ಸಿಬ್ಬಂದಿಗೆ ಮಾತ್ರವಲ್ಲದೇ, ಖಾಸಗಿಯವರಿಗೂ ಬಳಸುವುದಕ್ಕೆ ಅವಕಾಶ ಇದೆ. ಅದಕ್ಕೆ ಇಲಾಖೆ ಬಾಡಿಗೆಯನ್ನು ನಿಗದಿ ಪಡಿಸಲಿದೆ.

‘ಮದುವೆ ಸೇರಿದಂತೆ ಇನ್ನಿತರ ಶುಭ ಸಮಾರಂಭಗಳಿಗಾಗಿ ಪೊಲೀಸ್‌ ಸಿಬ್ಬಂದಿ ಭವನವನ್ನು ಬಳಸಿದರೆ ಅವರಿಗೆ ಬಾಡಿಗೆಯಲ್ಲಿ ರಿಯಾಯಿತಿ ಇರುತ್ತದೆ. ಸಿಬ್ಬಂದಿ ಅಲ್ಲದೇ ಇತರರಿಗೂ ಭವನವನ್ನು ವಿವಿಧ ಕಾರ್ಯಕ್ರಮಗಳಿಗೆ ಬಾಡಿಗೆ ನೀಡುವ ವ್ಯವಸ್ಥೆ ಇರಲಿದೆ’ ಎಂದು ಧರ್ಮೇಂದರ್‌ ಕುಮಾರ್‌ ಮೀನಾ ಅವರು ಹೇಳಿದರು.

‘ಕಟ್ಟಡ ನಿರ್ಮಾಣ ಕಾರ್ಯ ಮುಗಿದ ಮೇಲೆ ಭವನದ ಬಳಕೆಗೆ ಸಂಬಂಧಿಸಿದಂತೆ ನಿಯಮಗಳನ್ನು ರೂಪಿಸುತ್ತೇವೆ. ಅದರ ಆಧಾರದಲ್ಲೇ ಭವನ ಕಾರ್ಯನಿರ್ವಹಿಸಲಿದೆ. ಬಾಡಿಗೆ ಸೇರಿದಂತೆ ಇನ್ನಿತರ ಎಲ್ಲ ವಿಚಾರಗಳು ನಂತರವೇ ನಿರ್ಧಾರವಾಗಲಿದೆ’ ಎಂದು ಅವರು ವಿವರಿಸಿದರು.

ಸಿಬ್ಬಂದಿಗೆ ಅನುಕೂಲ: ಭವನದ ನಿರ್ಮಾಣದಿಂದ ಇಲಾಖೆಯ ಸಿಬ್ಬಂದಿಗೆ ಅನುಕೂಲವಾಗಲಿದೆ. ತಮ್ಮ ಕುಟುಂಬದ ಸದಸ್ಯರ ಮದುವೆ ಸೇರಿದಂತೆ ಇತರ ಕಾರ್ಯಕ್ರಮಗಳನ್ನು ಭವನದಲ್ಲಿ ನೆರವೇರಿಸಬಹುದಾಗಿದೆ. ಬಾಡಿಗೆಯಲ್ಲಿ ರಿಯಾಯಿತಿ ಇರುವುದರಿಂದ ಆರ್ಥಿಕ ಹೊರೆಯೂ ಕೊಂಚ ಇಳಿಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT