ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರದಲ್ಲಿ ಖಾಸಗಿ ಶಾಲೆ ಮಕ್ಕಳು ಸರ್ಕಾರಿ ಶಾಲೆಗೆ ಸೇರ್ಪಡೆ

ಕೋವಿಡ್‌–19 ಪರಿಣಾಮ, ವಿದ್ಯಾಗಮ ಕಾರ್ಯಕ್ರಮ‌ಕ್ಕೂ ಪೋಷಕರ ಮೆಚ್ಚುಗೆ
Last Updated 31 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

ಚಾಮರಾಜನಗರ: 2020–21ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಪ್ರವೇಶಾತಿ ಆರಂಭಗೊಂಡಿದ್ದು, ಖಾಸಗಿ ಶಾಲೆಗಳಲ್ಲಿ ಓದುತ್ತಿದ್ದ ಮಕ್ಕಳನ್ನು ಪೋಷಕರು ಸರ್ಕಾರಿ ಶಾಲೆಗಳಿಗೆ ಸೇರಿಸಲು ಆರಂಭಿಸಿದ್ದಾರೆ.

ಜಿಲ್ಲೆಯಲ್ಲಿ ಶನಿವಾರದವರೆಗೆ, ಖಾಸಗಿ ಶಾಲೆಗಳ 381 ಮಕ್ಕಳು ಸರ್ಕಾರಿ ಶಾಲೆಗಳಿಗೆ ದಾಖಲಾಗಿದ್ದಾರೆ. ಐದು ತಾಲ್ಲೂಕುಗಳ ಪೈಕಿ ಚಾಮರಾಜನಗರದಲ್ಲಿ ಅತಿ ಹೆಚ್ಚು 170, ಗುಂಡ್ಲುಪೇಟೆಯಲ್ಲಿ 137 ಮಕ್ಕಳು ಸ್ಥಳೀಯ ಸರ್ಕಾರಿ ಪ್ರಾಥಮಿಕ ಶಾಲೆಗಳ ವಿವಿಧ ತರಗತಿಗಳಿಗೆ ಸೇರಿದ್ದಾರೆ. ಹನೂರು ತಾಲ್ಲೂಕಿನಲ್ಲಿ ಕಡಿಮೆ ಅಂದರೆ 16 ಮಂದಿ ದಾಖಲಾಗಿದ್ದಾರೆ. ಯಳಂದೂರಿನಲ್ಲಿ 34, ಕೊಳ್ಳೇಗಾಲದಲ್ಲಿ 24 ಮಕ್ಕಳು ಸರ್ಕಾರಿ ಶಾಲೆಗಳಿಗೆ ಸೇರ್ಪಡೆಗೊಂಡಿದ್ದಾರೆ.

ಕೋವಿಡ್‌–19 ಕಾರಣದಿಂದ ಶಾಲೆಗಳು ಇನ್ನೂ ಆರಂಭವಾಗಿಲ್ಲ. ಖಾಸಗಿ ಶಾಲೆಗಳು ಆನ್‌ಲೈನ್‌ನಲ್ಲಿ ತರಗತಿ ಆರಂಭಿಸಿವೆ. ಆದರೆ, ಗ್ರಾಮೀಣ ಪ್ರದೇಶದವರು, ಕಂಪ್ಯೂಟರ್‌, ಸ್ಮಾರ್ಟ್‌ಫೋನ್‌ಗಳಿಲ್ಲದವರಿಗೆ ಪಾಠ ಕೇಳಲು ಆಗುತ್ತಿಲ್ಲ. ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಶುಲ್ಕ ಪಾವತಿಸುವಂತೆಯೂ ಪೋಷಕರಿಗೆ ಸೂಚಿಸುತ್ತಿವೆ. ಕೋವಿಡ್‌ ಕಾರಣದಿಂದ ತರಗತಿಗಳು ಆರಂಭವಾಗುವ ಬಗ್ಗೆ ಗೊಂದಲ ಇನ್ನೂ ಮುಂದುವರಿದಿರುವುದರಿಂದ ಒಂದು ವೇಳೆ ಶುಲ್ಕ ಪಾವತಿಸಿದ್ದು ಪ್ರಯೋಜನಕ್ಕೆ ಬಾರದೇ ಇದ್ದರೆ... ಎಂಬ ಯೋಚನೆಯೂ ಅವರಲ್ಲಿದೆ.

ಇದರ ಜೊತೆಗೆ ಕೋವಿಡ್‌–19 ಭಯವೂ ಮಕ್ಕಳ ತಂದೆ ತಾಯಿಯರನ್ನು ಕಾಡುತ್ತಿದೆ. ಪಟ್ಟಣ, ನಗರಗಳಲ್ಲಿರುವ ಖಾಸಗಿ ಶಾಲೆಗಳಿಗೆ ಬಸ್‌ಗಳಲ್ಲಿ ಅಥವಾ ಶಾಲಾ ವಾಹನದಲ್ಲಿ ಮಕ್ಕಳನ್ನು ಕಳುಹಿಸುವುದು ಸುರಕ್ಷಿತವಲ್ಲ ಎಂಬ ಭಾವನೆಯೂ ಅವರಲ್ಲಿದೆ. ಹಾಗಾಗಿ, ಮನೆಗೆ ಹತ್ತಿರವಿರುವ ಶಾಲೆಗಳಿಗೆ ಮಕ್ಕಳು ಸೇರಿಸುವುದೇ ಸೂಕ್ತ ಎಂಬ ನಿಲುವನ್ನು ಅವರು ಹೊಂದಿದ್ದಾರೆ.

ಈ ನಡುವೆ, ಶಿಕ್ಷಣ ಇಲಾಖೆ ಆರಂಭಿಸಿರುವ ವಿದ್ಯಾಗಮ ಎಂಬ ಕಾರ್ಯಕ್ರಮ ಜಿಲ್ಲೆಯಲ್ಲಿ ಅನುಷ್ಠಾನವಾಗುತ್ತಿದ್ದು, ಪೋಷಕರ ಗಮನವನ್ನೂ ಸೆಳೆದಿದೆ. ಶಿಕ್ಷಕರೇ ಖುದ್ದಾಗಿ ಗ್ರಾಮಗಳಿಗೆ ತೆರಳಿ, ಸುತ್ತಮುತ್ತಲಿನ ಮಕ್ಕಳನ್ನು ಒಂದೆಡೆ ಸೇರಿಸಿ ಅವರಿಗೆ ಪಾಠಗಳನ್ನು ಹೇಳುತ್ತಿದ್ದಾರೆ. ಪೋಷಕರ ಜೊತೆಗೆ ಮಾತನಾಡಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ನೀಡಲಾಗುತ್ತಿರುವ ಸೌಕರ್ಯಗಳ ಬಗ್ಗೆಯೂ ತಿಳಿ ಹೇಳುತ್ತಿದ್ದಾರೆ.

‘ಜಿಲ್ಲೆಯಲ್ಲಿ ಶನಿವಾರದವರೆಗೆ ಖಾಸಗಿ ಶಾಲೆಗಳಲ್ಲಿ ಓದುತ್ತಿದ್ದ 381 ಮಕ್ಕಳು ಸರ್ಕಾರಿ ಶಾಲೆಗಳಿಗೆ ದಾಖಲಾಗಿದ್ದಾರೆ. ಈ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ (ಡಿಡಿಪಿಐ) ಎಸ್‌.ಟಿ.ಜವರೇಗೌಡ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಖಾಸಗಿ ಶಾಲೆಗಳಲ್ಲಿ ಆಡಳಿತ ಮಂಡಳಿಗಳು ಶುಲ್ಕವನ್ನು ಕೇಳುತ್ತಿವೆ. ಕೆಲವು ಪೋಷಕರು ಶಾಲೆಗಳು ಆರಂಭವಾಗುವುದಕ್ಕೂ ಮುನ್ನ ಪಾವತಿಸಲು ಸಿದ್ಧರಿಲ್ಲ. ಜೊತೆಗೆ ಹಲವು ಮಕ್ಕಳಿಗೆ ಆನ್‌ಲೈನ್‌ ಪಾಠಗಳನ್ನು ಕೇಳಲು ಆಗುತ್ತಿಲ್ಲ. ವಿದ್ಯಾಗಮ ಕಾರ್ಯಕ್ರಮದ ಅಡಿಯಲ್ಲಿ ಶಿಕ್ಷಕರು ನೇರವಾಗಿ ಮಕ್ಕಳ ಬಳಿಗೆ ಹೋಗಿ ಪಾಠಗಳನ್ನು ಮಾಡುತ್ತಿರುವುದು ಪೋಷಕರ ಮೆಚ್ಚುಗೆ ಗಳಿಸಿದೆ. ‘ಶಿಕ್ಷಕರೇ ಊರಿಗೆ ಬಂದು ಪಾಠ ಮಾಡುತ್ತಿದ್ದಾರೆ. ಹಾಗಾಗಿ, ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸೋಣ’ ಎಂಬ ಯೋಚನೆ ಪೋಷಕರ ಮನದಲ್ಲಿದೆ’ ಎಂದು ಅವರು ವಿವರಿಸಿದರು.

‘ವಿದ್ಯಾಗಮ’ ಪರಿಣಾಮಕಾರಿ ಅನುಷ್ಠಾನ

‘ಜಿಲ್ಲೆಯಲ್ಲಿ ವಿದ್ಯಾಗಮ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಗೊಳಿಸಲಾಗಿದ್ದು, ಶಿಕ್ಷಕರು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಗ್ರಾಮಗಳಲ್ಲಿರುವ ಅರಳಿ ಕಟ್ಟೆ, ಸಭಾಂಗಣ, ಮನೆಗಳ ವಠಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಮಕ್ಕಳಿಗೆ ಬೋಧನೆ ಮಾಡಲಾಗುತ್ತಿದೆ. ತರಗತಿಗಳು ಆರಂಭಗೊಳ್ಳದಿದ್ದರೂ ಮಕ್ಕಳು ಶೈಕ್ಷಣಿಕ ಚಟುಚಟಿಕೆಗಳಲ್ಲಿ ನಿರತರಾಗುವಂತೆ ಮಾಡಲು ಇದು ನೆರವಾಗಿದೆ’ ಎಂದು ಜವರೇಗೌಡ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT