ಗುರುವಾರ , ಫೆಬ್ರವರಿ 9, 2023
30 °C

ರಾಜ್ಯದ ಬಸ್‌ಗಳಿಗೆ ಮಸಿ, ಕಲ್ಲು ತೂರಾಟ ಖಂಡಿಸಿ ಪೊರಕೆ ಚಳವಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಮಹಾರಾಷ್ಟ್ರದಲ್ಲಿ ಕರ್ನಾಟಕದ ಸಾರಿಗೆ ಬಸ್‌ಗಳಿಗೆ ಮಸಿ ಬಳಿದಿರುವುದು, ಕಲ್ಲು ತೂರಾಟ ನಡೆಸಿರುವುದನ್ನು ಖಂಡಿಸಿ ಕರ್ನಾಟಕ ಸೇನಾ ಪಡೆಯ ಕಾರ್ಯಕರ್ತರು ಸೋಮವಾರ ನಗರದಲ್ಲಿ ಪೊರಕೆ ಚಳವಳಿ ನಡೆಸಿದರು. 

ಚಾಮರಾಜೇಶ್ವರ ದೇವಾಲಯದ ಆವರಣದಿಂದ ಪೊರಕೆ ಹಿಡಿದುಕೊಂಡು ಭುವನೇಶ್ವರಿ ವೃತ್ತದವರೆಗೂ ಮೆರವಣಿಗೆ ನಡೆಸಿ ಪ್ರತಿಭಟನಕಾರರು, ಮಹಾರಾಷ್ಟ್ರ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗುತ್ತಾ, ಕೆಲಕಾಲ ಪ್ರತಿಭಟನೆ ನಡೆಸಿದರು.

ಕರ್ನಾಟಕ ಸೇನಾಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ‘ಮಹಾರಾಷ್ಟ್ರ ಸರ್ಕಾರ ಪದೇ ಪದೇ ಗಡಿ ಕ್ಯಾತೆ ತೆಗೆಯುತ್ತಲೇ ಬಂದಿದ್ದು, ಗಡಿವಿಚಾರ ಹೊರತು ಪಡಿಸಿ, ಬೇರೆ ವಿಚಾರಕ್ಕೆ ಅದು ತಲೆಕೆಡಿಸಿಕೊಳ್ಳುತ್ತಿಲ್ಲ. ಗಡಿ ವಿವಾದವನ್ನೇ ಮುಂದಿಟ್ಟುಕೊಂಡು, ರಾಜಕೀಯ ಮಾಡುತ್ತಿದೆ’ ಎಂದು ದೂರಿದರು. 

ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಸಂಚರಿಸುವ ಬಸ್‌ಗಳಿಗೆ ಎಂಇಎಸ್ ಪುಂಡರು ಮಸಿ ಬಳಿದು, ಬಸ್‌ಗಳಿಗೆ ಕಲ್ಲು ತೂರಾಟ ನಡೆಸಿದ್ದಾರೆ. ರಾಜ್ಯದ ಪ್ರಯಾಣಿಕರು ಆತಂಕದಿಂದಲೇ ಸಂಚರಿಸುವ ವಾತಾವರಣ ಉಂಟು ಮಾಡಿದ್ದಾರೆ. ಮಹಾರಾಷ್ಟ್ರ ಸರ್ಕಾರ ಗಡಿ ಕ್ಯಾತೆ ತೆಗೆಯುತ್ತಿದ್ದರೂ, ರಾಜ್ಯದ 28 ಸಂಸದರು ಈ ಬಗ್ಗೆ ಚಕಾರವೆತ್ತುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು. 

‘ಮಹಾರಾಷ್ಟ್ರ ಸರ್ಕಾರವನ್ನು ವಜಾಮಾಡುವುದಕ್ಕೆ ಕೇಂದ್ರ ಸರ್ಕಾರ ಮುಂದಾಗಬೇಕು. ಇಲ್ಲದಿದ್ದಲ್ಲಿ ರಾಜ್ಯದಾದ್ಯಂತ ಕನ್ನಡ ಪರ ಸಂಘಟನೆಗಳು ನಾನಾ ರೀತಿಯ ಚಳವಳಿಗಳನ್ನು ಹಮ್ಮಿಕೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಕರ್ನಾಟಕ ಸೇನಾಪಡೆ ರಾಜ್ಯ ಪ್ರಧಾನ ಕಾರ್ಯದರ್ಶಿ ಚಾ.ವೆಂ.ರಾಜಗೋಪಾಲ್, ಗೌರವಾಧ್ಯಕ್ಷ ಶಾ.ಮುರಳಿ, ನಿಜಧನಿಗೋವಿಂದರಾಜು, ಗು.ಪುರುಷೋತ್ತಮ್, ಅರುಣ್ ಕುಮಾರ್‌ಗೌಡ, ಮಹಮದ್ ಅಸ್ಗರ್ ಮುನ್ನಾ, ಸಯ್ಯದ್ ನವೀದ್, ತಾಂಡವಮೂರ್ತಿ, ಮರಿಯಾಲದಹುಂಡಿ ಕುಮಾರ್, ನಂಜುಂಡಸ್ವಾಮಿ, ಮಿಮಿಕ್ರಿಮಲ್ಲಣ್ಣ ಇತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು