ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive| ಪ್ರತಿಭಟನೆ ಸಂಸ್ಕೃತಿ: ಚಾಮರಾಜನಗರದ ಮಣ್ಣಿನ ಗುಣ

Last Updated 7 ಅಕ್ಟೋಬರ್ 2020, 6:39 IST
ಅಕ್ಷರ ಗಾತ್ರ
ADVERTISEMENT
""
""
""

ಎರಡು ವಾರಗಳಿಂದ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಪ್ರತಿಭಟನೆಗಳ ಸರಮಾಲೆ. ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ಕೃಷಿ, ಕಾರ್ಮಿಕರಿಗೆ ಸಂಬಂಧಿಸಿದ ವಿವಿಧ ಕಾಯ್ದೆಗಳನ್ನು ವಿರೋಧಿಸಿ ವಾರಕ್ಕೂ ಹೆಚ್ಚು ಕಾಲ ನಡೆದ ನಿರಂತರ ಪ್ರತಿಭಟನೆಗಳ ಕಾವು ಆರುತ್ತಿದ್ದಂತೆಯೇ, ತಕ್ಷಣ ಉತ್ತರ ಪ್ರದೇಶದ ಹಾಥರಸ್‌ ನಡೆದ ಯುವತಿಯ ಅತ್ಯಾಚಾರ, ಕೊಲೆ ಪ್ರಕರಣದ ವಿರುದ್ಧ ಸರಣಿ ಪ್ರತಿಭಟನೆಗಳೇ ಆರಂಭವಾಗಿವೆ. ಐದು ದಿನಗಳ ಅವಧಿಯಲ್ಲಿ 10ಕ್ಕೂ ಹೆಚ್ಚು ಪ್ರತಿಭಟನೆಗಳು ನಡೆದಿವೆ. ಒಂದೇ ದಿನ ಮೂರ್ನಾಲ್ಕು ನಡೆದದ್ದೂ ಇದೆ.

ಮಾಧ್ಯಮಗಳಲ್ಲಿ ಪ್ರತಿ ದಿನ ಒಂದಿಲ್ಲೊಂದು ಪ್ರತಿಭಟನೆ ಸುದ್ದಿ ಕಾಯಂ. ಜಿಲ್ಲಾ ಕೇಂದ್ರ ಚಾಮರಾಜನಗರ ಹಾಗೂ ಕೊಳ್ಳೇಗಾಲದಲ್ಲಿ ವಾರಕ್ಕೆ ಕನಿಷ್ಠ ಮೂರು ಪ್ರತಿಭಟನೆಗಳು ನಡೆಯುತ್ತವೆ. ತಾಲ್ಲೂಕು, ಹೋಬಳಿ ಕೇಂದ್ರಗಳಿಗೂ ಪ್ರತಿಭಟನೆಯ ನಂಟು ಇದೆ.

ಜಿಲ್ಲೆಯಲ್ಲಿ ಸಂಘಟನೆಗಳಿಗೆ ಬರವಿಲ್ಲ. ಪರಿಶಿಷ್ಟ ಜಾತಿ, ಪ್ರಗತಿಪರ ಸಂಘಟನೆಗಳು, ರೈತ ಸಂಘಟನೆಗಳು ಇಲ್ಲಿ ಪ್ರಬಲವಾಗಿವೆ. ಕನ್ನಡ ಸಂಘಟನೆಗಳು, ವಿವಿಧ ನೌಕರರ ಸಂಘಟನೆಗಳು, ರಾಜಕೀಯ ಪಕ್ಷಗಳು, ಧರ್ಮಾಧರಿತ ಸಂಘಟನೆಗಳೂ ಸಾಕಷ್ಟು ‍ಸಂಖ್ಯೆಯಲ್ಲಿವೆ. ಒಂದಿಲ್ಲೊಂದು ಒಂದು ಸಂಘಟನೆ ಅಥವಾ ಪಕ್ಷಗಳು ಬೇರೆ ಬೇರೆ ಕಾರಣಕ್ಕೆ ಪ್ರತಿಭಟನೆ, ರಸ್ತೆ ತಡೆ, ಧರಣಿಗಳನ್ನು ನಡೆಸುತ್ತಲೇ ಇರುತ್ತವೆ.

ಅಂದ ಹಾಗೆ, ಎಲ್ಲ ಪ್ರತಿಭಟನೆಯಲ್ಲಿ ನೂರಾರು ಜನರು ಇರುವುದಿಲ್ಲ. ಎಂಟು ಹತ್ತು ಜನರೂ ಪ್ರತಿಭಟನೆ ನಡೆಸುತ್ತಾರೆ. ನಾಲ್ಕೈದು ಮಂದಿ ಇದ್ದ ಧರಣಿಗಳೂ ನಡೆಯುತ್ತವೆ.

‘ಜಿಲ್ಲೆಯಲ್ಲಿ ಬೇರೆ ಸುದ್ದಿಗಳು ಇದೆಯೇ ಇಲ್ಲವೇ ಗೊತ್ತಿಲ್ಲ; ಆದರೆ, ಪ್ರತಿಭಟನೆ ಸುದ್ದಿಯಂತು ಖಂಡಿತ ಇದೆ’ ಎಂದು ಇಲ್ಲಿನ ಮಾಧ್ಯಮ ಮಂದಿ ಯಾವಾಗಲೂ ಆಡಿಕೊಳ್ಳುವ ಮಾತು. ಆ ಮಟ್ಟಿಗೆ ಜಿಲ್ಲೆಯಲ್ಲಿ ಪ್ರತಿಭಟನೆ ಸಂಸ್ಕೃತಿ ಆಳವಾಗಿ ಬೇರೂರಿದೆ.

ದೇವಸ್ಥಾನಗಳ ಅಭಿವೃದ್ಧಿಗೆ ಆಗ್ರಹಿಸಿ ಅಘೋರಿ ವೇಷ ಧರಿಸಿಪ್ರತಿಭಟನೆನಡೆಸಿದ್ದ ಶಾ ಮುರಳಿ

ಸ್ವಾತಂತ್ರ್ಯ ನಂತರದ ಚಾಮರಾಜನಗರದ ಇತಿಹಾಸವನ್ನು ನೋಡಿದರೆ, ಪ್ರತಿಭಟನೆ, ಚಳವಳಿಗಳು ಇಲ್ಲಿಗೆ ಹೊಸತೇನಲ್ಲ. ಸ್ವಾತಂತ್ರ್ಯ ಚಳವಳಿಯೂ ಇಲ್ಲಿ ದೊಡ್ಡ ಮಟ್ಟದಲ್ಲಿ ನಡೆದಿದೆ. ಅದೇ ಪರಂಪರೆ ನಂತರವೂ ಮುಂದುವರಿದಿದೆ. 1970ರ ದಶಕದ ನಂತರ ನಡೆದಿದ್ದ ಬೂಸಾ ಚಳವಳಿ, ದಲಿತ ಚಳವಳಿ, ರೈತ ಚಳವಳಿ, ಕನ್ನಡ ಪರ ಹೋರಾಟ, ಕಾವೇರಿ ಚಳವಳಿ... ಹೀಗೆ ರಾಜ್ಯಕಂಡ ಪ್ರಮುಖ ಹೋರಾಟಗಳಿಗೆ ಚಾಮರಾಜನಗರ ವೇದಿಕೆಯಾಗಿದೆ.

‘ರಾಜ್ಯದ ದಕ್ಷಿಣದಲ್ಲಿರುವ ಕಟ್ಟ ಕಡೆಯ ಜಿಲ್ಲೆ ಇದು. ಅಭಿವೃದ್ಧಿಯಲ್ಲಿ ಕೊಂಚ ಹಿಂದಿದೆ. ಜಿಲ್ಲೆಯ ಭೂಭಾಗದ ಶೇ 49ರಷ್ಟು ಪ್ರದೇಶ ಅರಣ್ಯದಿಂದ ಕೂಡಿದೆ. ಪರಿಶಿಷ್ಟ ಜಾತಿಯವರೇ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ದಲಿತ ಸಂವೇದನೆ ಹೆಚ್ಚು. ಗಡಿ ಜಿಲ್ಲೆಯಾಗಿರುವುದರಿಂದ ಕನ್ನಡ ಭಾಷೆ, ನೆಲ, ಜಲದ ವಿಚಾರಗಳು ಹೆಚ್ಚು ಗಮನಸೆಳೆಯುತ್ತವೆ. ಅಭಿವೃದ್ಧಿಯಾಗದಿರುವುದರಿಂದ ಸರ್ಕಾರ ಅಥವಾ ರಾಜಕೀಯ ಪಕ್ಷಗಳು ಈ ಭಾಗವನ್ನು ನಿರ್ಲಕ್ಷ್ಯ ಮಾಡುತ್ತಿವೆ ಎಂಬ ಭಾವನೆ ಜನರಲ್ಲಿದೆ. ಹಾಗಾಗಿ, ಆಡಳಿತದ ವಿರುದ್ಧ ಪ್ರತಿರೋಧದ ಭಾವ ಇಲ್ಲಿನ ಜನರಲ್ಲಿ ಜಾಗೃತವಾಗಿದೆ. ಸರ್ಕಾರದ ನಿರ್ಧಾರಗಳು ಸರಿ ಕಂಡಿಲ್ಲ ಎಂದಾದರೆ ಪ್ರತಿಭಟನೆಯ ಮೂಲಕ ಪ್ರತಿರೋಧ ತೋರಿಸುತ್ತಲೇ ಇರುತ್ತಾರೆ’ ಎಂದು ಹೇಳುತ್ತಾರೆರಂಗಕರ್ಮಿ ಹಾಗೂ ನಾಗರಿಕ ಹಕ್ಕುಗಳಿಗಾಗಿ ಜನರ ಒಕ್ಕೂಟದ ಕೆ.ವೆಂಕಟರಾಜು.

‘ಪ್ರತಿರೋಧ ಎನ್ನುವುದು ಈ ಮಣ್ಣಿನಲ್ಲೇ ಬೆರೆತಿದೆ. ಡಿ.ದೇವರಾಜು ಅರಸು ಅವರ ಸಂಪುಟದಲ್ಲಿ ಸಚಿವರಾಗಿದ್ದ ಬಸವಲಿಂಗಪ್ಪ ಅವರು ಕನ್ನಡ ಸಾಹಿತ್ಯ ಬೂಸಾ (1973ರಲ್ಲಿ) ಎಂದು ಹೇಳಿದ್ದಕ್ಕೆ ವಿರುದ್ಧವಾಗಿ ರಾಜ್ಯದಾದ್ಯಂತ ನಡೆದ ಪ್ರತಿಭಟನೆಗೆ ಪ್ರತಿಯಾಗಿ, ಬಸವಲಿಂಗಪ್ಪ ಅವರನ್ನು ಬೆಂಬಲಿಸಿ ಪರಿಶಿಷ್ಟ ಜಾತಿಯ ಸಮುದಾಯವರು ಆರಂಭಿಸಿದ್ದ ಚಳವಳಿಯಿಂದ ಜಿಲ್ಲೆಯಲ್ಲೂ ಪ್ರತಿಭಟನಾ ಸಂಸ್ಕೃತಿಯನ್ನು ಇನ್ನಷ್ಟು ಬೆಳೆಸಿತು. ದಲಿತ ಸಂಘರ್ಷ ಸಮಿತಿ (ದಸಂಸ) ರಚನೆಯಾದ ನಂತರ ಸಮಿತಿಯ ಅಡಿಯಲ್ಲಿ ನಡೆದ ಹೋರಾಟಗಳು, ಕನ್ನಡ ಪರ ಹೋರಾಟಗಳು, ರೈತ ಸಂಘಟನೆಗಳು ನಡೆಸಿದ ಚಳವಳಿಗಳು, ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವುದನ್ನು ವಿರೋಧಿಸಿ ನಡೆದ ಚಳವಳಿ... ಹೀಗೆ ಎಲ್ಲ ಹೋರಾಟಗಳು ಜಿಲ್ಲೆಯಲ್ಲಿ ನಡೆದಿವೆ. ಬಹುತೇಕ ಎಲ್ಲ ಸಂಘಟನೆಗಳು ಈಗ ಒಡೆದು ಹೋಗಿವೆ. ಇದರಿಂದ ಪ್ರತಿಭಟನೆಗಳು ಹೆಚ್ಚಾಗಿದೆಯೇ ವಿನಾ ಕಡಿಮೆಯಾಗಿಲ್ಲ’ ಎಂದು ಅವರು ಪ್ರತಿಪಾದಿಸುತ್ತಾರೆ.

‘ಪ್ರಶ್ನಿಸುವ ಗುಣ ಚಾಮರಾಜನಗರ ಮಣ್ಣಿನ ವಿಶೇಷ. ಯಾವುದೇ ವಿಚಾರ ಆಗಿರಲಿ. ಸರಿ ಇಲ್ಲ ಎಂದರೆ ಅದನ್ನು ವಿರೋಧಿಸಿಯೇ ತೀರಬೇಕು ಎಂಬ ನಿಲುವು ಇಲ್ಲಿನವರದ್ದು. ಚಾಮರಾಜನಗರ ಮತ್ತು ಕೊಳ್ಳೇಗಾಲ ಭಾಗದಲ್ಲಿ ಇವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 1970ರ ದಶಕದಿಂದಲೇ ಈ ಪರಂಪರೆಯನ್ನು ಕಾಣಬಹುದು. ವಿದ್ಯಾರ್ಥಿ ಜೀವನದಲ್ಲೇ ಹೋರಾಟಗಾರರಾಗಿ ರೂಪುಗೊಂಡವರು ಹಲವರಿದ್ದಾರೆ. ಆ ಕಾಲದಲ್ಲಿ ಮೈಸೂರಿನ ಯುವರಾಜ, ಮಹಾರಾಜ ಕಾಲೇಜುಗಳಲ್ಲಿ ಓದುತ್ತಿದ್ದಾಗಲೇ ಚಳವಳಿ ನಡೆಸುತ್ತಿದ್ದವರೆಲ್ಲ ನಮ್ಮೂರಿನ ಹುಡುಗರು. ದಲಿತ ಸಂಘರ್ಷ ಸಮಿತಿ ಹುಟ್ಟು ಹಾಕಿದ ನಂತರ, ಚಾಮರಾಜನಗರದಲ್ಲೂ ಅದು ಪ್ರಬಲ ಸಂಘಟನೆಯಾಯಿತು. ಪರಿಶಿಷ್ಟ ಜಾತಿ ಸಮುದಾಯದವರಿಗೆ ತೊಂದರೆಯಾದಾಗಲೆಲ್ಲ, ಜಿಲ್ಲೆಯಲ್ಲಿರುವ ಸಮುದಾಯದವರು ಧ್ವನಿ ಎತ್ತಿದ್ದಾರೆ. ಆ ನಂತರ ನಡೆದ ಗೋಕಾಕ್‌ ಚಳವಳಿ, ರೈತ ಚಳವಳಿ, ಕಾವೇರಿ ಚಳವಳಿಗಳೆಲ್ಲ ನಮ್ಮಲ್ಲಿ ತೀವ್ರವಾಗಿ ನಡೆದಿದೆ’ ಎಂದು ಜಿಲ್ಲಾ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಸಿ.ಎಂ.ಕೃಷ್ಣಮೂರ್ತಿ ಅಭಿಪ್ರಾಯ ಪಡುತ್ತಾರೆ.

ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧ ಚಾಮರಾಜನಗರದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಜನಸ್ತೋಮ

ಪ್ರಶ್ನಿಸುವ ಜನರಿದ್ದಾರೆ: ‘ಜಿಲ್ಲೆಯಲ್ಲಿ ವ್ಯವಸ್ಥೆಯನ್ನು ಪ್ರಶ್ನಿಸುವ ಜನರು ಹೆಚ್ಚು ಜನರಿದ್ದಾರೆ. ಗಡಿ ಜಿಲ್ಲೆಯಾಗಿರುವ ನಮ್ಮಲ್ಲಿ ಹಲವು ಜ್ವಲಂತ ಸಮಸ್ಯೆಗಳಿವೆ. ಸರ್ಕಾರ ಅಥವಾ ಆಡಳಿತದಲ್ಲಿರುವವರು ನಮ್ಮನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದಾಗ ಹೋರಾಟ ಮಾಡಲೇ ಬೇಕಾಗುತ್ತದೆ. ಸಂಕಷ್ಟದಲ್ಲಿರುವ ರೈತರ ಏಳಿಗೆಗಾಗಿ ಹುಟ್ಟಿಕೊಂಡ ರೈತ ಚಳವಳಿ ನಮ್ಮ ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆದಿತ್ತು. ಪ್ರೊ.ನಂಜುಂಡಸ್ವಾಮಿ ಅವರ ಮಾತುಗಳು, ಅವರ ರೈತ ಕಾಳಜಿಯನ್ನು ಕಂಡು ಚಳವಳಿಗೆ ಧುಮುಕಿದವರು ನಾವು. ರೈತರಿಗೆ ತೊಂದರೆಯಾದಾಗ ನಾವು ಹೋರಾಟ ಮಾಡಲೇಬೇಕಾಗುತ್ತದೆ. ಅದನ್ನು ನಾವು ನಿರಂತರವಾಗಿ ಮಾಡುತ್ತಿದ್ದೇವೆ. ಮುಂದೆಯೂ ಮಾಡುತ್ತೇವೆ’ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಪ್ರಕಾಶ್‌ ಅಭಿಪ್ರಾಯಪಡುತ್ತಾರೆ.

ಜಿಲ್ಲಾಧಿಕಾರಿ ಕಚೇರಿ ಮುಂದೆ ಆಶಾ ಕಾರ್ಯಕರ್ತರ ಧರಣಿ

ಪ್ರತಿಭಟನೆಗೆ ಜನರು ಮುಖ್ಯ ಅಲ್ಲ!

‘ನಮ್ಮ ಜಿಲ್ಲೆಯಲ್ಲಿ ಚಳವಳಿಗೆ ಒಂದು ಪರಂಪರೆ ಇದೆ. ಸ್ವಾತಂ‌ತ್ರ್ಯ ಪೂರ್ವದಲ್ಲೇ ದೊಡ್ಡ ಹೋರಾಟಗಳನ್ನು ಮಾಡಿದ ಜನರು ನಮ್ಮವರು. ಅವರ ನಂತರದ ಪೀಳಿಗೆಯವರ ರಕ್ತದಲ್ಲೂ ಅದೇ ಗುಣ ಇದೆ. ಗಡಿ ಜಿಲ್ಲೆಯಾಗಿರುವುದರಿಂದ ನೆಲ, ಜಲ, ಭಾಷೆ ಬಗ್ಗೆ ಅಭಿಮಾನ ಹೆಚ್ಚು. ಕನ್ನಡ ಪರ ಹೋರಾಟ ಮಾತ್ರ ಅಲ್ಲ, ನಮ್ಮಲ್ಲಿ ಎಲ್ಲ ಚಳವಳಿಗಳೂ ನಡೆದಿವೆ. ನಾನು ಆರಂಭದಿಂದಲೂ ಕನ್ನಡ ಪರ ಚಳವಳಿಯಲ್ಲಿ ತೊಡಗಿಕೊಂಡು ಬಂದಿದ್ದೇನೆ. ಕನ್ನಡಕ್ಕೆ ತೊಂದರೆಯಾದಾಗಲೆಲ್ಲ ಧ್ವನಿ ಎತ್ತಿದ್ದೇನೆ. ತಮಿಳುನಾಡಿನ ತಾಳವಾಡಿ ಕರ್ನಾಟಕಕ್ಕೆ ಸೇರ್ಪಡೆಯಾಗಬೇಕು ಎಂದು ವಾಟಾಳ್‌ ನಾಗರಾಜ್‌, ಎಸ್‌.ಪುಟ್ಟಸ್ವಾಮಿ ಅವರ ನೇತೃತ್ವದಲ್ಲಿ ನಡೆದ ಹೋರಾಟ ನಮಗೆ ಪ್ರೇರಣೆಯಾಯಿತು. ಗೋಕಾಕ್‌ ಚಳವಳಿ, ಕಾವೇರಿ ಚಳವಳಿ ನಾವು ಭಾಗವಹಿಸಿದ್ದ ದೊಡ್ಡ ಚಳವಳಿಗಳು. 1991ರಲ್ಲಿ ನಡೆದಿದ್ದ ಕಾವೇರಿ ಗಲಾಟೆಯಲ್ಲಿ ₹6 ಕೋಟಿ ಮೌಲ್ಯದ ನಷ್ಟವೂ ಆಗಿತ್ತು’ ಎಂದು ಸ್ಮರಿಸುತ್ತಾರೆ ಕನ್ನಡ ಹೋರಾಟಗಾರ ಶಾ ಮುರಳಿ.

‘ಈಗೀಗ, ಚಳವಳಿಗಳು ಹಾದಿ ತಪ್ಪಿವೆ ಎಂಬ ಮಾತುಗಳು ಕೇಳಿಬರುತ್ತಿರುತ್ತಿವೆ. ಹಿಂದೆ ಪ್ರತಿಭಟನೆ ಇದ್ದರೆ ತುಂಬಾ ಜನ ಸೇರುತ್ತಿದ್ದರು. ಈಗ ಬೆರಳೆಣಿಕೆಯಷ್ಟು ಜನ ಇರುತ್ತಾರೆ ಎಂದೆಲ್ಲ ಹೇಳುತ್ತಾರೆ. ಜನರ ಸಂಖ್ಯೆ ಕಡಿಮೆಯಾಗಿರುವುದು ನಿಜ. ವರನಟ ಡಾ.ರಾಜ್‌ಕುಮಾರ್‌ ಅವರ ಮೇಲೆ ಊಟಿಯಲ್ಲಿ ದಾಳಿಯಾಗಿದ್ದನ್ನು ಖಂಡಿಸಿ ನಾವು ಪ್ರತಿಭಟನೆ ನಡೆಸಿದ್ದಾಗ 5000ಕ್ಕೂ ಹೆಚ್ಚು ಜನ ಸೇರಿದ್ದರು. ಈಗ ಅಂತಹದ್ದೆಲ್ಲ ಸಾಧ್ಯವಿಲ್ಲ. ನನ್ನ ಪ್ರಕಾರ, ಪ್ರತಿಭಟನೆಯಲ್ಲಿ ಜನರು ಮುಖ್ಯ ಅಲ್ಲ. ನಾವು ಯಾಕೆ ಪ್ರತಿಭಟನೆ ಮಾಡುತ್ತಿದ್ದೇವೆ ಎನ್ನುವುದೇ ಮುಖ್ಯ. ಅನ್ಯಾಯ, ದಬ್ಬಾಳಿಕೆಯ ವಿರುದ್ಧ ಪ್ರತಿರೋಧ ದಾಖಲು ಮಾಡುವ ವಿಧಾನ ಅದು. 10 ಜನರಾದರೂ ಇರಲಿ, 100 ಜನರಾದರೂ ಇರಲಿ. ಪ್ರತಿಭಟನೆ ಪ್ರತಿಭಟನೆಯೇ. ನಾನು ಒಬ್ಬನೇ ಹಲವು ಪ್ರತಿಭಟನೆಗಳನ್ನು ಮಾಡಿದ್ದೇನೆ. ಆಡಳಿತದ ಗಮನಸೆಳೆಯುವ ಸೆಳೆಯುದಷ್ಟೇ ಹೋರಾಟದ ಉದ್ದೇಶ’ ಎಂದು ಅವರು ಪ್ರತಿಪಾದಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT