ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಟೆಯನ್ನೇ ಜೀವಿಸುವ ಕಲಾವಿದ ರಾಜಣ್ಣ

ತಮಟೆ ನಾದವನ್ನು ಪದವಿ ವಿದ್ಯಾರ್ಥಿಗಳಲ್ಲಿ ಪಸರಿಸುವ ಧಾವಂತ
Last Updated 8 ಫೆಬ್ರುವರಿ 2023, 7:22 IST
ಅಕ್ಷರ ಗಾತ್ರ

ಯಳಂದೂರು: ಗ್ರಾಮೀಣ ಪ್ರದೇಶಗಳಲ್ಲಿ ಮಾರಿಹಬ್ಬ, ಕೊಂಡೋತ್ಸವ ಸಡಗರ ಬಿಚ್ಚಿಕೊಳ್ಳುವುದೇ ತಮಟೆ ನಾದದೊಂದಿಗೆ. ಹಟ್ಟಿ ಮಂದಿಯನ್ನು ಊರೊಟ್ಟಿನ ಕಾಯಕಕ್ಕೆ ಬೆಸೆಯುವ ತಮಟೆ ಜನಪದರ ಜೀವ. ಇದರ ನುಡಿ ಸಾಣಿಕೆಯಿಂದ ಕಿವಿಗಳು ನಿಮಿರುತ್ತವೆ. ಗ್ರಾಮ ಜೀವನದ ಏರಿಳಿತದೊಂದಿಗೆ ತಮಟೆ ನುಡಿಸುವವರ ಬದುಕಿನಲ್ಲೂ ಪಲ್ಲಟಗಳಾಗಿವೆ.

ಆದರೆ, ಹತ್ತಾರು ವಿದ್ಯೆಗಳನ್ನು ಕಲಿತರು, ಮನೆತನದ ಪರಂಪಪರೆಯನ್ನು ಬಿಡದೆ, ಜತನದಿಂದ ತಮಟೆ ನುಡಿಸುತ್ತಿರುವ ರಾಜಣ್ಣ ಅಪರೂಪದ ಕಲಾವಿದ.

ತಾಲ್ಲೂಕಿನ ಬೂದಿತಿಟ್ಟು ಗ್ರಾಮದ ರಾಜಣ್ಣ ಸದಾ ಸಂಚಾರಿ. ಬೀದಿ ನಾಟಕಗಳ ಮೂಲ ಗುರುತಾದವರು. ಕುಲ ಕಸುಬನ್ನು ಬಿಟ್ಟು ಸಾಕ್ಷರತೆ ಬಿತ್ತಲು ಟೊಂಕಕಟ್ಟಿ ನಿಂತರು. ಆದರೆ, ತಮಟೆ ವಾದನದ ಹುಚ್ಚು ಅವರ ಮನವನ್ನು ಬಿಡಲಿಲ್ಲ. ತಮಟೆ ವಿಚಾರ ಬಂದರೆ ಮೊದಲು ತಮಟೆಯನ್ನೇ ಧ್ಯಾನಿಸುತ್ತಾರೆ. ತಮಟೆ ಸದ್ದು ಕೇಳುತ್ತಲೇ ದೇಹ ಮತ್ತು ಮನಸ್ಸಿನಲ್ಲಿ ಉತ್ಸಾಹದ ಬುಗ್ಗೆ ಪುಟಿಯುತ್ತದೆ. ತಮಟೆ ಮತ್ತು ಅದರ ನಾದಲೀಲೆ ಬಗೆಗಿನ ಮಾತುಗಳಲ್ಲಿ ಮತ್ತು ತಮಟೆ ಕಲಿಸುವಾಗ ನೋಡುಗರಿಗೆ ಹಬ್ಬದ ಸಡಗರ ತುಂಬುತ್ತಾರೆ.

'ಬಾಲ್ಯದಲ್ಲಿ ಮನೆಯ ಸುತ್ತಮುತ್ತ ತಮಟೆ ನುಡಿಸುವ ಕಲಾವಿದರ ಹವಾ ಮನಸ್ಸನ್ನು ಸೆಳೆಯುತ್ತಿತ್ತು. ಅಪ್ಪ-ಅಮ್ಮ ರಂಗನಾಥನ ಪಾದುಕೆ ತಯಾರಿಸಿ ಅರ್ಪಿಸುವ ಸಂಪ್ರದಾಯವೂ ಕಾಣುತ್ತಿತ್ತು. ಆರಂಭದಲ್ಲಿ ಕುಲಕಸಬು ಬಿಟ್ಟು ಎರಡು ಪದವಿ ಪೂರೈಸಿದೆ. ವಿವಿಧ ತಂಡಗಳ ಜೊತೆ ಸೇರಿ ಅಂಗವಿಕಲರು ಹಾಗೂ ಶಾಲೆ ಬಿಟ್ಟ ಚಿಣ್ಣರ ಬಗ್ಗೆ ಜಾಗೃತಿ ಮೂಡಿಸಲು ರಾಜ್ಯದಾದ್ಯಂತ ಸಂಚರಿಸಿದೆ. ಈ ಸಮಯದಲ್ಲಿ ಜನ ಸಮುದಾಯವನ್ನು ಆಕರ್ಷಿಸಲು ಹಾಡು, ರಂಗಗೀತೆ, ಭಜನೆ ಹಾಡಿದೆ. ಇದೇ ವೇಳೆ ಸ್ನೃತಿ ಪಟಲದಲ್ಲಿ ಅಚ್ಚಳಿಯದ ಕುಳಿತಿದ್ದ ತಮಟೆ ನನ್ನ ಕೈಸೇರಿತು. ನಗಾರಿ, ಡೋಲು, ಢಕ್ಕೆಗಳ ನಡುವೆ ತಮಟೆಯೂ ಸದ್ದು ಮಾಡಿತು. ನನ್ನ ಎದೆ, ಹೆಗಲನ್ನು ಅಪ್ಪಿತು' ಎಂದು ವಿನಮ್ರವಾಗಿ ನೆನಪುಗಳನ್ನು ಹೆಕ್ಕಿ ತೆಗೆಯುತ್ತಾರೆ ರಾಜಣ್ಣ.

‘ನಾಡಿನಾದ್ಯಂತ 300ಕ್ಕೂ ಹೆಚ್ಚು ಸಾಂಸ್ಕೃತಿಕ ವೇದಿಕೆಗಳಲ್ಲಿ ರಾಜಣ್ಣನ ತಮಟೆ ಮೋಡಿ ಮಾಡಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ದಸರಾ ವೇದಿಕೆಗಳಲ್ಲಿ ತಮಟೆ ಸದ್ದು ಸಂಚಲನ ತಂದಿದೆ. ಯುವಕರ ತಂಡ ಕಟ್ಟಿಕೊಂಡು ತಮಟೆ ಕಲಾವಿದರನ್ನು ಸಿದ್ಧಗೊಳಿಸುತ್ತಿದ್ದಾರೆ. ನನಗೆ ಶಿಷ್ಯ ಪಡೆಯೇ ಸುತ್ತಲೂ ಇದೆ. ತಮಟೆಯಲ್ಲಿ ಜೀವವಿದೆ. ಅದನ್ನು ತಿಳಿಯುವ ಸೂಕ್ಷ್ಮ ಮನಸ್ಸು ಬೇಕಷ್ಟೆ. ಈಗಲೂ ಕಲಿಕೆಯಲ್ಲಿ ಆಸಕ್ತಿ ಇದ್ದವರಿಗೆ ತಮಟೆ ತಾಯಿ ಒಲಿಯುತ್ತಾಳೆ’ ಎಂದು ಹೇಳುತ್ತಾರೆ ಅವರು.

ತಮಟೆಯಲ್ಲೂ ಸಪ್ತ ಸ್ವರ!

ರಾಜಣ್ಣ ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಎಂ.ಎ. ಸಮಾಜಶಾಸ್ತ್ರ ಪೂರೈಸಿದ್ದಾರೆ. 1996 ರಿಂದ ಜಿಲ್ಲಾ ಸಾಕ್ಷರತಾ ಆಂದೋಲನ, 2001-2016 ಜಲಾನಯನ ಅಭವೃದ್ಧಿ ಇಲಾಖೆ, 2015ರವರೆವಿಗೆ ರಾಜ್ಯ ಮಟ್ಟದ ನಿರ್ದೇಶಕರಾಗಿ ಬೀದಿ ನಾಟಕಗಳನ್ನು ಆಯೋಜಿಸಿದ್ದಾರೆ. ಸುಗಮ ಸಂಗೀತ ಹಾಗೂ ಸೌರಭ ಕಾರ್ಯಕ್ರಮಗಳಲ್ಲಿ ನೂರಾರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿದ್ದಾರೆ. ಈಗ ಊರಿನಲ್ಲಿ ಪದವಿ ವಿದ್ಯಾರ್ಥಿಗಳಿಗೆ ತಮಟೆ ಕಲಿಸುತ್ತಿದ್ದಾರೆ. ಜನಪದರ ಕಲೆ ಮಗನಿಗೂ ಒಲಿದಿದ್ದು, ಮೂಲ ಕಲೆಯ ಸೊಬಗು ಉಳಿಸುವ ಪಣ ತೊಟ್ಟಿದ್ದಾರೆ.

ತಮಟೆ ಕಲಿತ ಮಂದಿ ಅಲ್ಲೊಬ್ಬ, ಇಲ್ಲೊಬ್ಬ ಇರಬಹುದು. ಅದರೆ ಕಲೆ ಎಲ್ಲರನ್ನು ಒಳಗೊಳ್ಳಬೇಕು. ನಾದದ ಹರವು ಮತ್ತಷ್ಟು ವಿಸ್ತರಿಸಬೇಕು. ತಮಟೆಯನ್ನು ವ್ರತದಂತೆ ಕಂಡವರ ಕರದಲ್ಲಿ ಸಪ್ತಸ್ವರಗಳ ನೀನಾದ ತಾನೇ ತಾನಾಗಿ ಹೊಮ್ಮುತ್ತದೆ. ತಮಟೆ ಕಲಿಯುವ ಯುವ ಜನರ ಕ್ರೇಜ್ ಈಗ ಹೆಚ್ಚಾಗುತ್ತಿದೆ ಎನ್ನುವ ಆಶಾಭಾವ ಇವರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT