ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯಳಂದೂರು | ಸೋನೆ ಮಳೆ ಚಲ್ಲಾಟ: ಬನ ಅಪ್ಪಿದ ಮಂಜು

Published 2 ಜುಲೈ 2024, 15:45 IST
Last Updated 2 ಜುಲೈ 2024, 15:45 IST
ಅಕ್ಷರ ಗಾತ್ರ

ಯಳಂದೂರು: ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿ ಮಂಗಳವಾರ ದಿನವಿಡಿ ಆರ್ದ್ರ ಮಳೆಯ ಸಿಂಚನಕ್ಕೆ ಮೈಮನ ಮುದುಡಿತು. ಸುಳಿಗಾಳಿ, ಬಿಳಿಮೋಡ ಬೆಟ್ಟದ ಸೆರಗನ್ನು ಮುಚ್ಚಿ ಬೆಳ್ನೊರೆ ಮಂಜು ಆವರಿಸಿತ್ತು. ಗಾಳಿಯ ವೇಗದ ಜೊತೆ ಮೇಘಗಳ ಸಾಲು ಬೆಟ್ಟ ಗುಡ್ಡಗಳನ್ನು ಆವರಿಸಿ, ಜನ ಜೀವನವನ್ನು ದಿನವಿಡೀ ಕಾಡಿತು.

ಬೆಟ್ಟದ ಸುತ್ತಮುತ್ತ ಎರಡು ದಿನಗಳಿಂದ ತುಂತುರು ಹನಿ ಚಲ್ಲಾಟ ಮುಂದುವರಿದಿದೆ. ದೇವಳ ಸುತ್ತಮುತ್ತ ಮಳೆ, ಮಂಜು ಆವರಿಸಿದ್ದು, ಭಕ್ತರು ತುಂತುರು ನಡುವೆ ದೇವರ ದರ್ಶನ ಪಡೆದರು.

ತರಗುಟ್ಟುವ ಚಳಿ, ಕುಳಿರ್ಗಾಳಿ ಸ್ಥಳೀಯರನ್ನು ಮನೆಯಿಂದ ಹೊರ ಬರದಂತೆ ತಡೆಯಿತು. ಬೆರಳೆಣಿಕೆಯ ಪ್ರವಾಸಿಗರು ಚಳಿಯಿಂದ ರಕ್ಷಿಸಿಕೊಳ್ಳಲು ಪರದಾಡಿದರು.

‘ಕಾಡಂಚಿನ ಪ್ರದೇಶಗಳಲ್ಲಿ ಮುಂಜಾನೆಯಿಂದ ಮೋಡ ಮುಚ್ಚಿದ ವಾತಾವರಣ ಕಂಡುಬಂದಿದೆ. ಒಂದೆರಡು ಬಾರಿ ಹನಿ ಕಾಣಿಸಿಕೊಂಡಿದೆ. ಆದರೆ, ಭೂಮಿ ಹದಕ್ಕೆ ಬೇಕಾದ ಮಳೆ ಸುರಿದಿಲ್ಲ. ಬದಲಾದ ಹವಾಮಾನದಿಂದ ಚಳಿ, ಜ್ವರ ಮತ್ತು ಗಂಟಲು ನೋವು ಕಾಣಿಸಿಕೊಂಡಿದೆ’ ಎಂದು ಮಲಾರಪಾಳ್ಯ ಪ್ರದೀಪ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT