ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರೊ ಎಂಡಿಎನ್ ನೆನಪು: 10ರಂದು ಬೆಂಗಳೂರಿನಲ್ಲಿ ರೈತ ಸಮಾವೇಶ

Published 6 ಫೆಬ್ರುವರಿ 2024, 15:32 IST
Last Updated 6 ಫೆಬ್ರುವರಿ 2024, 15:32 IST
ಅಕ್ಷರ ಗಾತ್ರ

ಚಾಮರಾಜನಗರ: ರೈತ ನಾಯಕ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ಜನ್ಮದಿನಾಚರಣೆ ಅಂಗವಾಗಿ ರಾಜ್ಯ ರೈತ ಸಂಘವು ಇದೇ 10ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ  ಬೃಹತ್‌ ರೈತ ಸಮಾವೇಶ ಹಮ್ಮಿಕೊಂಡಿದೆ. 

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಎ.ಎಂ.ಮಹೇಶ್‌ ಪ್ರಭು, ‘ಪ್ರೊಫೆಸರ್‌ ಎಂಡಿಎನ್‌ ಅವರ ನೆನಪಿನಲ್ಲಿ ಈ ಸಮಾವೇಶದ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 11 ಗಂಟೆಗೆ ಸಮಾವೇಶದ ಉದ್ಘಾಟನೆ ನಡೆಯಲಿದೆ. ರಾಜ್ಯದಾದ್ಯಂತ ರೈತ ಸಂಘದ ಕಾರ್ಯಕರ್ತರು, ರೈತರು ಇದರಲ್ಲಿ ಭಾಗವಹಿಸಲಿದ್ದಾರೆ’ ಎಂದರು. 

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಾವೇಶವನ್ನು ಉದ್ಘಾಟಿಸುವರು. ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಅಧ್ಯಕ್ಷತೆ ವಹಿಸುವರು. ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ, ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ, ಬಿ.ಆರ್.ಪಾಟೀಲ ರೈತಸಂಘದ ಯುವಘಟಕದ ಅಧ್ಯಕ್ಷ ವಿನೋದ್, ಕಾರ್ಯಾಧ್ಯಕ್ಷ ಜೆ.ಎಂ.ವೀರಸಂಗಯ್ಯ, ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪುಣಚ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ.  ಸಂಘದ ಗೌರವಾಧ್ಯಕ್ಷ ಚಾಮರಸ ಮಾಲೀ ಪಾಟೀಲ ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ’ ಎಂದರು. 

ಸಮಾವೇಶದಲ್ಲಿ ರಾಜ್ಯ ಸರ್ಕಾರ ರೈತಪರ ಬಜೆಟ್‌ ಮಂಡಿಸಬೇಕು ಎಂಬುದೂ ಸೇರಿದಂತೆ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮುಖ್ಯಮಂತ್ರಿಯವರನ್ನು ಒತ್ತಾಯಿಸಲಾಗುವುದು ಮತ್ತು ರೈತ ಸಮುದಾಯದ ಪರವಾಗಿ ಹಲವು ನಿರ್ಣಯಗಳನ್ನೂ ತೆಗೆದುಕೊಳ್ಳಲಾಗುವುದು’ ಎಂದರು. 

ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶೈಲೇಂದ್ರ ಮಾತನಾಡಿ, ‘ಸಮಾವೇಶಕ್ಕೆ ಜಿಲ್ಲೆಯಿಂದ 1,200 ಮಂದಿ ರೈತರು ತೆರಳಲಿದ್ದಾರೆ’ ಎಂದರು.

ಜಿಲ್ಲಾಧ್ಯಕ್ಷ ಟಿ.ಎಸ್.ಶಾಂತಮಲ್ಲಪ್ಪ, ಭಾಸ್ಕರ್, ಚಿನ್ನಸ್ವಾಮಿ ಗೌಂಡರ್ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT