ಗುರುವಾರ , ಆಗಸ್ಟ್ 11, 2022
24 °C

ಕೋಡಿಹಳ್ಳಿ ವಿರುದ್ಧ ಮಲ್ಲೇಶ್‌ ಆರೋಪ: ಕ್ಷಮೆಯಾಚನೆಗೆ ರೈತ ಸಂಘ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಅವರ ಮೇಲೆ ಬಿಜೆಪಿ ಮುಖಂಡ ಅಮ್ಮನಪುರ ಮಲ್ಲೇಶ್‌ ಅವರು ಮಾಡಿರುವ ಆರೋಪವನ್ನು ಖಂಡಿಸಿರುವ ರೈತ ಸಂಘ, ಮಲ್ಲೇಶ್‌ ಅವರು ತಕ್ಷಣ ಕೋಡಿಹಳ್ಳಿಯವರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ತಾಲ್ಲೂಕು ಘಟಕದ ಉಪಾಧ್ಯಕ್ಷ ಪೃಥ್ವಿ ಅವರು, ‘ಚಂದ್ರಶೇಖರ್‌ ಅವರು ಹಸಿರು ಟವೆಲ್‌ ಹಾಕಿಕೊಂಡು ದಂಧೆ ಮಾಡುತ್ತಿದ್ದಾರೆ ಎಂದು ಮಲ್ಲೇಶ್‌ ಆರೋಪಿಸಿದ್ದಾರೆ. ಆದರೆ, ಹಸಿರು ಟವೆಲ್‌ ಹಾಕಿಕೊಂಡು, ಅವರನ್ನು ನಂಬಿದ್ದ ನೂರಾರು ರೈತರನ್ನು ಅರ್ಧದಲ್ಲೇ ಬಿಟ್ಟು ರಾಜಕೀಯ ಸೇರಿ ದಂಧೆ ನಡೆಸುತ್ತಿರುವವರು ಮಲ್ಲೇಶ್‌. ಈಗ ಕೃಷಿ ಸಚಿವ ಬಿ.ಸಿ.ಪಾಟೀಲ ಅವರ ಚಮಚಾಗಿರಿ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು. ‌

‘ಕೋಡಿಹಳ್ಳಿಯವರ ಆಸ್ತಿ ಬಗ್ಗೆ ಮಲ್ಲೇಶ್‌ ಮಾತನಾಡಿದ್ದಾರೆ. ಅದರ ಬಗ್ಗೆ ತನಿಖೆ ನಡೆಸಲಿ ತೊಂದರೆ ಇಲ್ಲ. ಮಲ್ಲೇಶ್‌ ಅವರು ಕೂಡ ಮೈಸೂರಿನಲ್ಲಿ ಬಂಗಲೆಯಲ್ಲೇ ವಾಸ ಮಾಡುತ್ತಿದ್ದಾರೆ. ಅವರು ರೈತ ಸಂಘದಲ್ಲಿರುವಾಗ ಎಷ್ಟು ಆಸ್ತಿ ಹೊಂದಿದ್ದರು? ರಾಜಕೀಯಕ್ಕೆ ಸೇರಿದ ಮೇಲೆ ಎಷ್ಟು ಆಸ್ತಿ ಸಂಪಾದಿಸಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ’ ಎಂದು ಸವಾಲು ಹಾಕಿದರು.

‘ಕೆಎಸ್‌ಆರ್‌ಟಿಸಿಯಲ್ಲಿ ಐಎಎಸ್‌, ಐಪಿಎಸ್‌ ಅಧಿಕಾರಿಗಳು, ರಾಜಕಾರಣಿಗಳ ಮಕ್ಕಳು ಕೆಲಸದಲ್ಲಿ ಇಲ್ಲ. ರೈತರ ಮಕ್ಕಳೇ ಇದ್ದಾರೆ. ರೈತ ಸಂಘದ ಮುಖಂಡರಾಗಿ ಅವರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸುವುದು ತಪ್ಪೇ? ಮಲ್ಲೇಶ್‌ ಅವರು ನಮ್ಮ ಸಂಘದ ಮುಖಂಡರ ಬಗ್ಗೆ ಹಗುರವಾಗಿ, ಅವಹೇಳನಕಾರಿಯಾಗಿ ಮಾತನಾಡುವುದನ್ನು ಬಿಡಬೇಕು’ ಎಂದು ಆಗ್ರಹಿಸಿದರು.

ರೈತ ಸಂಘದ ಹಿರಿಯ ಮುಖಂಡ ಎಚ್‌.ಎಸ್‌.ಲಿಂಗಸ್ವಾಮಿ ಹೆಗ್ಗೋಠಾರ ಅವರು ಮಾತನಾಡಿ, ‘ರೈತ ಸಂಘದಲ್ಲಿದ್ದುಕೊಂಡು ಅರ್ಧದಲ್ಲೇ ಎಲ್ಲರನ್ನು ನಡು ನೀರಿನಲ್ಲಿ ಕೈಬಿಟ್ಟು ಹೋದ ಮಲ್ಲೇಶ್‌ ಅವರು ಈಗ ಪ್ರಚಾರಕ್ಕಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ’ ಎಂದು ಆರೋಪಿಸಿದರು.

ಮುಖಂಡರಾದ ಕುಮಾರ್‌, ಶಿವಕುಮಾರ್‌, ಮಹೇಶ್‌ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು