ಚಾಮರಾಜನಗರ: ಏಳು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಯುವಕನಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ನಗರದ ಮಕ್ಕಳ ಸ್ನೇಹಿ ಹಾಗೂ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಗುರುವಾರ ಆದೇಶ ಹೊರಡಿಸಿದೆ.
ಕೊಳ್ಳೇಗಾಲ ತಾಲ್ಲೂಕಿನ ಸತೀಶ ಅಲಿಯಾಸ್ ಕ್ವಾಟ್ಲೆ ಸತೀಶ) (24) ಶಿಕ್ಷೆಗೆ ಗುರಿಯಾದ ಅಪರಾಧಿ.
2021ರ ಜುಲೈ 25ರಂದು ಈ ಘಟನೆ ನಡೆದಿತ್ತು. ಒಂದು ವರ್ಷ ಎಂಟು ತಿಂಗಳ ಅವಧಿಯಲ್ಲಿ ಪ್ರಕರಣದ ಆದೇಶ ಹೊರ ಬಿದ್ದಿದೆ.
ರಾತ್ರಿ 8.30ರ ಸುಮಾರಿಗೆ ಮಾತ್ರೆ ತರುವುದಕ್ಕಾಗಿ ಅಂಗಡಿಗೆ ಹೋಗಿದ್ದ ಬಾಲಕಿಯನ್ನು ಸತೀಶ, ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದ. ಕಿರುಚಾಡಿದರೆ ಕೊಲೆ ಮಾಡುವ ಬೆದರಿಕೆ ಒಡ್ಡಿದ್ದ.
ಕೊಳ್ಳೇಗಾಲ ಗ್ರಾಮಾಂತರ ಠಾಣೆ ಯಲ್ಲಿ ಆರೋಪಿ ವಿರುದ್ಧ ಪೋಕ್ಸೊ ಅಡಿ ಪ್ರಕರಣ ದಾಖಲಿಸಲಾಗಿತ್ತು.
ತನಿಖೆ ನಡೆಸಿದ್ದ ಸರ್ಕಲ್ ಇನ್ ಸ್ಪೆಕ್ಟರ್ ಶಿವರಾಜ್ ಆರ್.ಮುಧೋಳ್, ಸತೀಶನ ವಿರುದ್ಧ ಆರೋಪಪಟ್ಟಿ ದಾಖಲಿಸಿದ್ದರು.
ಆರೋಪಿ ವಿರುದ್ಧದ ಎಲ್ಲ ಆರೋಪಗಳು ಸಾಕ್ಷ್ಯಾಧಾರಗಳಿಂದ ಸಾಬೀತಾಗಿರುವುದರಿಂದ ನಗರದ ಮಕ್ಕಳ ಸ್ನೇಹಿ ಹಾಗೂ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಧೀಶರಾದ ಎ.ಸಿ. ನಿಶಾರಾಣಿ ಅವರು ಸತೀಶನಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು ₹30 ಸಾವಿರ ದಂಡ ವಿಧಿಸಿದ್ದಾರೆ.
30 ದಿನಗಳ ಒಳಗಾಗಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಸಂತ್ರಸ್ತ ಬಾಲಕಿಗೆ ₹2 ಲಕ್ಷ ಪರಿಹಾರ ಧನ ನೀಡುವಂತೆಯೂ ಆದೇಶಿಸಿದ್ದಾರೆ. ಪ್ರಾಸಿಕ್ಯೂಷನ್ ಪರವಾಗಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಕೆ. ಯೋಗೇಶ್ ವಾದಿಸಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.