ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕ ಅದಾಲತ್: ದಾಖಲೆಯ 3,271 ಪ್ರಕರಣ ಇತ್ಯರ್ಥ

Last Updated 1 ಏಪ್ರಿಲ್ 2021, 12:48 IST
ಅಕ್ಷರ ಗಾತ್ರ

ಚಾಮರಾಜನಗರ: ಮಾರ್ಚ್‌ 27ರಂದು ಜಿಲ್ಲೆಯ ನ್ಯಾಯಾಲಯಗಳಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ದಾಖಲೆಯ 3,271 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ.

ನ್ಯಾಯಾಲಯದಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ಸದಾಶಿವ ಎಸ್‌.ಸುಲ್ತಾನ್‌ಪುರಿ ಅವರು, ‘ಲೋಕ ಅದಾಲತ್ ಮೂಲಕ ರಾಜ್ಯದಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಜಿಲ್ಲೆಯ ನ್ಯಾಯಾಲಯಗಳಲ್ಲಿ 20,051 ಪ್ರಕರಣಗಳು ಬಾಕಿ ಇತ್ತು. ರಾಜಿ ಆಗಬಹುದಾದ 6878 ಪ್ರಕರಣಗಳನ್ನು ಅದಾಲತ್‌ಗೆ ತೆಗೆದುಕೊಳ್ಳಲಾಗಿತ್ತು’ ಎಂದು ಹೇಳಿದರು.

‘ಲೋಕ ಅದಾಲತ್‌ನಲ್ಲಿ 342 ಸಿವಿಲ್ ಪ್ರಕರಣಗಳು, 2,505 ಕ್ರಿಮಿನಲ್ ಪ್ರಕರಣಗಳು ಹಾಗೂ 425 ಪಿಎಲ್‌ಸಿ ಪ್ರಕರಣ ಸೇರಿ ಒಟ್ಟು 3,271 ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸಲಾಗಿದೆ. ಇಷ್ಟು ಪ್ರಕರಣಗಳಲ್ಲಿ ಸಂಗ್ರಹವಾದ ₹13.46 ಕೋಟಿ ಜನರು, ಬ್ಯಾಂಕ್ ಹಾಗೂ ಸರ್ಕಾರಕ್ಕೆ ಪರಿಹಾರವಾಗಿ ನೀಡಲಾಗಿದೆ. 3,000ಕ್ಕೂ ಹೆಚ್ಚು ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥವಾಗಿದ್ದರಿಂದ ಜನರಿಗೆ ಸಮಯ, ಹಣ ಉಳಿತಾಯವಾಗಿದೆ’ ಎಂದರು.

‘ಜಿಲ್ಲಾ ವ್ಯಾಪ್ತಿಯಲ್ಲಿ ಇದೇ ಮೊದಲ ಬಾರಿಗೆ ಇಷ್ಟು ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕೈಗೊಂಡ ಕಾನೂನು ಅರಿವು ಕಾರ್ಯಕ್ರಮಗಳು ಹಾಗೂ ಹೋಬಳಿ ವ್ಯಾಪ್ತಿಯಲ್ಲಿ ಲೋಕ ಅದಾಲತ್ ಕಾರ್ಯಕ್ರಮದ ಬಗ್ಗೆ ಕೈಗೊಂಡ ಅರಿವು ಮೂಡಿಸುವ ಕಾರ್ಯಕ್ರಮಗಳು ಜನರಿಗೆ ತಲುಪಿ ಆ ಮೂಲಕ ಜನರು ತಮಗೆ ಸಂಬಂಧಿಸಿದಂತೆ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಮುಂದೆ ಬಂದರು’ ಎಂದು ನ್ಯಾಯಾಧೀಶರು ಹೇಳಿದರು.

ಹೋಬಳಿ ಮಟ್ಟದಲ್ಲಿ ಕಾರ್ಯಾಗಾರ

‘ನ್ಯಾಯಾಲಯದಲ್ಲಿ ಪ್ರಕರಣಗಳು ಹೆಚ್ಚಾಗಿರುವ ಗ್ರಾಮಗಳಿಗೆ ತೆರಳಿ ಅರಿವು ಮೂಡಿಸುವ ಕಾರ್ಯ ಮಾಡಲಾಗಿತ್ತು. ಅದರಂತೆ, ಚಾಮರಾಜನಗರ ತಾಲ್ಲೂಕಿನ ಹರದನಹಳ್ಳಿ, ಹರವೆ ಹೋಬಳಿ ವ್ಯಾಪ್ತಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕೊಳ್ಳೇಗಾಲ, ಯಳಂದೂರು, ಗುಂಡ್ಲುಪೇಟೆ ನ್ಯಾಯಾಲಯ ವ್ಯಾಪ್ತಿಯಲ್ಲಿನ ಹೋಬಳಿಗಳ ಗ್ರಾಮಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿ ಅರಿವು ಮೂಡಿಸುವ ಕಾರ್ಯ ಮಾಡಲಾಗಿತ್ತು’ ಎಂದು ಮಾಹಿತಿ ನೀಡಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಜಿ.ವಿಶಾಲಾಕ್ಷಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್, ಪ್ರಧಾನ ಕಾರ್ಯದರ್ಶಿ ಮಂಜು ಎಸ್‌.ಹರವೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT