ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಭ್ರಮ ಸಡಗರದ ಗಣತಂತ್ರ ದಿನ

ಜಿಲ್ಲೆಯಾದ್ಯಂತ ಆಚರಣೆ, ಧ್ವಜಾರೋಹಣ, ರಾಷ್ಟ್ರನಾಯಕರಿಗೆ ಗೌರವ
Last Updated 26 ಜನವರಿ 2023, 16:30 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಾದ್ಯಂತ ಗುರುವಾರ 74ನೇ ಗಣರಾಜ್ಯೋತ್ಸವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು.

ರಾಷ್ಟ್ರ ಧ್ವಜಾರೋಹಣ ನಡೆಸಿ ಗೌರವ ವಂದನೆ ಸಲ್ಲಿಸಲಾಯಿತು. ಡಾ.ಬಿ.ಆರ್.ಅಂಬೇಡ್ಕರ್, ಮಹಾತ್ಮ ಗಾಂಧೀಜಿ ಸೇರಿದಂತೆ ರಾಷ್ಟ್ರನಾಯಕರಿಗೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಲಾಯಿತು.

ನಗರದ‌ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ಪ್ರಧಾನ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಧ್ವಜಾರೋಹಣ ನೆರವೇರಿಸಿದರು.

ಕ್ರೀಡಾಂಗಣದಲ್ಲಿ ತೆರೆದ ವಾಹನದಲ್ಲಿ ಸಾಗಿದ ಅವರು, ವಿವಿಧ ತುಕಡಿಗಳ ಪರಿವೀಕ್ಷಣೆ ನಡೆಸಿದರು. ಪೊಲೀಸ್, ಅರಣ್ಯ, ಅಬಕಾರಿ ಇಲಾಖೆಗಳು, ಪೊಲೀಸ್ ಬ್ಯಾಂಡ್, ಗೃಹರಕ್ಷಕ ದಳ, ಎನ್‌ಸಿಸಿ, ವಿವಿಧ ಶಾಲೆಗಳ 18 ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿದರು.

ಪೊಲೀಸ್ ಬ್ಯಾಂಡ್‌ನ ಸಂಗೀತಕ್ಕೆ ಶಿಸ್ತುಬದ್ಧವಾಗಿ ಹೆಜ್ಜೆ ಹಾಕಿದ ತುಕಡಿಗಳ ಪಥಸಂಚಲನ ಆಕರ್ಷಿಸಿತು. ಮೊದಲ ಬಾರಿಗೆ ಅಬಕಾರಿ ಇಲಾಖೆ ಹಾಗೂ ವೈದ್ಯಕೀಯ ಕಾಲೇಜಿನ ಎನ್‌ಸಿಸಿ ತುಕಡಿಗಳು ಪಥ ಸಂಚಲನದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

ಸನ್ಮಾನ: ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಸೋಲಿಗರ ಮಾದಮ್ಮ ಅವರನ್ನು ಸಚಿವರು ಹಾಗೂ ಗಣ್ಯರು ಸನ್ಮಾನಿಸಿದರು.

15 ವರ್ಷಗಳಿಂದ ಅಪಘಾತ ರಹಿತವಾಗಿ ಬಸ್ ಚಾಲನೆ ಮಾಡಿದ ಕೆಎಸ್‌ಆರ್‌ಟಿಸಿಯ 23 ಚಾಲಕರಿಗೆ ಬೆಳ್ಳಿ ಪದಕ ಹಾಕಿ ಗೌರವಿಸಲಾಯಿತು.

ಗಮನ ಸೆಳೆದ ಸಾಂಸ್ಕೃತಿಕ ಕಾರ್ಯಕ್ರಮ: ಧ್ವಜಾರೋಹಣದ ನಂತರ ನಗರದ ಸಂತಪೌಲರ ಶಾಲೆ, ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಹಾಗೂ ಸೇಂಟ್ ಜೋಸೆಫ್ ಶಾಲಾ ವಿದ್ಯಾರ್ಥಿಗಳು ದೇಶಾಭಿಮಾನ ಸಾರುವ ಹಾಡುಗಳಿಗೆ ನೃತ್ಯ ಪ್ರದರ್ಶಿಸಿದರು.

ಶಾಸಕ ಸಿ.ಪುಟ್ಟರಂಗಶೆಟ್ಟಿ, ಕಾಡಾ ಅಧ್ಯಕ್ಷ ಜಿ.ನಿಜಗುಣರಾಜು, ನಗರ ಸಭೆ ಅಧ್ಯಕ್ಷೆ ಸಿ.ಎಂ.ಆಶಾ, ಜಿಲ್ಲಾಧಿಕಾರಿ ಡಿ.ಎಸ್.ರಮೇಶ್, ಜಿ.ಪಂ ಸಿಇಒ ಕೆ.ಎಂ.ಗಾಯಿತ್ರಿ, ಎಸ್ ಪಿ ಟಿ.ಪಿ.ಶಿವಕುಮಾರ್, ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಡಿಸಿಎಫ್ ದೀಪ್ ಜೆ.ಕಾಂಟ್ರಾಕ್ಟರ್, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಕಾತ್ಯಾಯಿನಿದೇವಿ ಸೇರಿದಂತೆ ಅಧಿಕಾರಿಗಳು, ಜನಪ್ರತಿನಿಧಿಗಳು ಇದ್ದರು.

ಅಭಿವೃದ್ಧಿ ಪಥವೇ ನಮ್ಮ ಗುರಿ

ಜಿಲ್ಲೆಯ ಜನರನ್ನು ಉದ್ದೇಶಿಸಿ ಮಾತನಾಡಿದ ಸಚಿವ ವಿ.ಸೋಮಣ್ಣ, ‘ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ಎಲ್ಲ ವರ್ಗಗಳನ್ನು ಒಗ್ಗೂಡಿಸಿ, ಆರ್ಥಿಕ ಸಾಮಾಜಿಕ ಸದೃಢತೆಯನ್ನು ಸರ್ವರಿಗೂ ನೀಡಿ, ನಾಡನ್ನು ಅಭಿವೃದ್ಧಿ ಪಥದತ್ತ ಹಾಗೂ ಕೊಂಡೊಯ್ಯುವುದು ನಮ್ಮ ಗುರಿ’ ಎಂದರು.

'ಜಿಲ್ಲೆಯಲ್ಲಿ ಪ್ರವಾಹದಿಂದ ಹಾನಿಯಾದ 17,511 ಮನೆಗಳಿಗೆ ₹12.78 ಕೋಟಿ ಪರಿಹಾರ ಮಂಜೂರು ಮಾಡಲಾಗಿದೆ. ನೆರೆಯಿಂದ ಹಾನಿಗೊಳಗಾದ 8,052 ಹೆಕ್ಟೇರ್ ಪ್ರದೇಶದ 14,949 ರೈತರಿಗೆ ಕೃಷಿ ಮತ್ತು ತೋಟಗಾರಿಕೆ ಬೆಳೆ ಪರಿಹಾರವಾಗಿ ₹15 ಕೋಟಿ ವಿತರಿಸಲಾಗಿದೆ' ಎಂದು ಹೇಳಿದರು.

'ಮುಖ್ಯಮಂತ್ರಿಗಳ ಗ್ರಾಮೀಣ ನಿವೇಶನ ಯೋಜನೆಯಡಿ ಜಿಲ್ಲೆಯಲ್ಲಿ 60 ಎಕರೆ ಜಮೀನು ಲಭ್ಯವಿದ್ದು, ಇಲ್ಲಿ ಅರ್ಹ ನಿವೇಶನ ರಹಿತರಿಗೆ 1200 ನಿವೇಶನ ಹಂಚಿಕೆ ಮಾಡಲು ಕ್ರಮವಹಿಸಲಾಗುತ್ತಿದ್ದು, ಈಗಾಗಲೇ 174 ಮಂದಿಗೆ ಹಕ್ಕುಪತ್ರ ನೀಡಲಾಗಿದೆ' ಎಂದು ಸೋಮಣ್ಣ ಹೇಳಿದರು.

'ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆಯಲ್ಲಿ 25 ಕೈಗಾರಿಕಾ ಯೋಜನೆಗಳಿಗೆ ಅನುಮೋದನೆ ನೀಡಿದ್ದು, ಒಟ್ಟು ₹40 ಕೋಟಿಗಳ ಬಂಡವಾಳವನ್ನು ನಿರೀಕ್ಷಿಸಲಾಗಿದೆ. ಇದರಿಂದ 462 ಜನರಿಗೆ ಉದ್ಯೋಗಾವಕಾಶ ದೊರೆಯಲಿದೆ' ಎಂದರು.

ಬಾಹ್ಯ ಶಕ್ತಿ ಮಾತ್ರವಲ್ಲದೇ ದೇಶದ ಆಂತರಿಕ ಭದ್ರತೆಗೆ ಅಪಾಯ ತಂದೊಡ್ಡುವ ಘಾತುಕ ಶಕ್ತಿಗಳ ಬಗ್ಗೆ ಎಲ್ಲರೂ ಜಾಗೃತರಾಗೋಣ
ವಿ.ಸೋಮಣ್ಣ, ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT