ಬುಧವಾರ, ಜುಲೈ 28, 2021
21 °C
ಜಿಲ್ಲೆಯ ಅಧಿಕಾರಿಗಳೊಂದಿಗೆ ಕಂದಾಯ ಸಚಿವ ಆರ್‌.ಅಶೋಕ ಸಭೆ

ಹಳ್ಳಿಗಳಿಗೆ ತೆರಳಿ ಜನರ ಕಷ್ಟಗಳಿಗೆ ಸ್ಪಂದಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ‘ಇಲಾಖೆಯ ಅಧಿಕಾರಿಗಳು ಹಳ್ಳಿಗಳಿಗೆ ಭೇಟಿ ನೀಡಿ ಗ್ರಾಮೀಣ ಜನರ ಕುಂದುಕೊರತೆ, ಸಮಸ್ಯೆಗಳನ್ನು ಆಲಿಸಿ ಆದ್ಯತೆ ಮೇರೆಗೆ ಪರಿಹರಿಸಲು ಕ್ರಮ ಕೈಗೊಳ್ಳಬೇಕು’ ಎಂದು ಕಂದಾಯ ಸಚಿವ ಆರ್.ಅಶೋಕ ಅವರು ಸೂಚಿಸಿದರು. 

ನಗರದಲ್ಲಿ ಬುಧವಾರ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ನಡೆಸಿದ ಅವರು, ‘ಗ್ರಾಮೀಣ ಪ್ರದೇಶಗಳಿಗೆ ಅಧಿಕಾರಿಗಳು ತೆರಳಿ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಭೇಟಿ ನೀಡುವ ಬಗ್ಗೆ ಮೊದಲೇ ಜನರಿಗೆ ಮಾಹಿತಿ ನೀಡಬೇಕು. ಕುಂದುಕೊರತೆಗಳನ್ನು ಆಲಿಸಿ ಸ್ಥಳದಲ್ಲಿಯೇ ಪರಿಹಾರ ನೀಡಲು ಕ್ರಮ ವಹಿಸಬೇಕು. ಸಾಧ್ಯವಾಗದಿದ್ದಲ್ಲಿ ಕಚೇರಿಯಲ್ಲಿ ಅಗತ್ಯ ಪ್ರಕ್ರಿಯೆ ಕೈಗೊಂಡು ಪರಿಹರಿಸಬೇಕು’ ಎಂದು ಹೇಳಿದರು. 

‘ಕೋವಿಡ್‌–19 ಜೊತೆಯಲ್ಲಿಯೇ ಅಭಿವೃದ್ಧಿ ಕೆಲಸಗಳು ಸಹ ಆಗಬೇಕಿದೆ. ಹೀಗಾಗಿ, ಜನರ ಆರೋಗ್ಯ ಹಾಗೂ ಅಭಿವೃದ್ಧಿ ಕಾರ್ಯಗಳು ಆರಂಭವಾಗಿದ್ದು, ಎಲ್ಲ ಅನುಕೂಲಗಳನ್ನು ಕಲ್ಪಿಸಬೇಕು. ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಎಲ್ಲ ಮುಂಜಾಗ್ರತಾ ಕ್ರಮಗಳೊಂದಿಗೆ ಕಚೇರಿಗಳಿಂದಲೇ ಮಾದರಿಯಾಗುವ ಹಾಗೆ ಕಾರ್ಯನಿರ್ವಹಣೆ ಆರಂಭವಾಗಬೇಕು. ಜನರಿಗೆ ತೊಂದರೆಯಾಗಬಾರದು’ ಎಂದರು.

ಪ್ರವಾಹ ಪೀಡಿತ ಗ್ರಾಮಗಳಲ್ಲಿ ಉಂಟಾಗಿರುವ ಮನೆ, ಬೆಳೆಹಾನಿ ಸಂಬಂಧ ಒದಗಿಸಲಾಗಿರುವ ಪರಿಹಾರ ಕಾರ್ಯಗಳನ್ನು ಪರಿಶೀಲಿಸಿದ ಸಚಿವರು, ‘ಬಾಕಿ ಇರುವ ಮನೆ ನಿರ್ಮಾಣ ಕಾಮಗಾರಿಯನ್ನು ಎರಡು ತಿಂಗಳಲ್ಲಿ ಪೂರ್ಣಗೊಳಿಸಬೇಕು’ ಎಂದು ಸೂಚಿಸಿದರು.

ಜಿಲ್ಲೆಯಲ್ಲಿ ಆಗಿರುವ ಮಳೆ, ಬೆಳೆ, ಕುಡಿಯುವ ನೀರು ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದ ಅವರು, ‘ರೈತರಿಗೆ ಅಗತ್ಯವಿರುವ ಬಿತ್ತನೆಬೀಜ, ರಸಗೊಬ್ಬರ ಸೇರಿದಂತೆ ಅಗತ್ಯ ಪರಿಕರಗಳಿಗೆ ಕೊರತೆಯಾಗಬಾರದು. ಮೇವು ದಾಸ್ತಾನು ಲಭ್ಯವಿರುವಂತೆ ನೋಡಿಕೊಳ್ಳಬೇಕು. ರಾಸುಗಳ ಆರೋಗ್ಯಕ್ಕೆ ಕಾಲಕಾಲಕ್ಕೆ ಅಗತ್ಯವಿರುವ ಲಸಿಕೆ ಇನ್ನಿತರ ಔಷಧೋಪಚಾರಗಳಿಗೆ ಮುಂದಾಗಬೇಕು. ಕುಡಿಯುವ ನೀರಿಗೂ ತೊಂದರೆಯಾಗಬಾರದು’ ಎಂದು ತಿಳಿಸಿದರು. 

ಇದೇ ವೇಳೆ ಶಾಸಕರಾದ ಆರ್. ನರೇಂದ್ರ, ಸಿ.ಎಸ್. ನಿರಂಜನಕುಮಾರ್ ಅವರು ಮಾತನಾಡಿ, ‘ರೈತರ ಬೇಡಿಕೆಗಳಿಗೆ ಅನುಸಾರವಾಗಿ ಬಿತ್ತನೆಬೀಜ ಪೂರೈಕೆ ಮಾಡಬೇಕಿದೆ. ಬಿತ್ತನೆ ಸಂದರ್ಭದಲ್ಲಿ ಯಾವ ಬೆಳೆಗಳನ್ನು ರೈತರು ಬೆಳೆಯಲಿದ್ದಾರೆ ಎಂಬ ಮಾಹಿತಿಯನ್ನು ಮುಂಚಿತವಾಗಿಯೇ ಪಡೆದುಕೊಂಡು ಇದಕ್ಕೆ ಅನುಗುಣವಾಗಿ ಕೃಷಿ ಇಲಾಖೆ ಪೂರಕ ಸಿದ್ಧತೆ ಮಾಡಿಕೊಳ್ಳಬೇಕು’ ಎಂದರು. 

ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಕೋವಿಡ್‌ ನಿಯಂತ್ರಣಕ್ಕೆ ಜಿಲ್ಲೆಯಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದರು. 

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಎಂ.ಅಶ್ವಿನಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೋಯರ್ ನಾರಾಯಣರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್.ಆನಂದ್, ಉಪವಿಭಾಗಾಧಿಕಾರಿ ನಿಖಿತಾ ಎಂ.ಚಿನ್ನಸ್ವಾಮಿ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಸರ್ವರ್‌ ಸಮಸ್ಯೆ: ವಾರದಲ್ಲಿ ಸಭೆ

ಕಂದಾಯ ಇಲಾಖೆಯ ಕಚೇರಿಗಳಲ್ಲಿ ಸರ್ವರ್‌ ಸಮಸ್ಯೆಗಳಿಂದಾಗಿ ಸೇವೆಗಳು ವಿಳಂಬವಾಗುತ್ತಿದೆ ಎಂಬ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಸಭೆಯಲ್ಲಿ ಶಾಸಕರು ಕೂಡ ಈ ಬಗ್ಗೆ ಗಮನ ಸೆಳೆದಿದ್ದಾರೆ.  ಒಂದು ವಾರದಲ್ಲಿ ಈ ವಿಚಾರವಾಗಿ ಅಧಿಕಾರಿಗಳ ಸಭೆ ಕರೆದು ‌ಚರ್ಚಿಸಿ, ಪರಿಹರಿಸಲು ಯತ್ನಿಸುತ್ತೇನೆ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.