ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣನ ಒಲುಮೆಗೆ ರಾಧೆ ಕಟ್ಟಿದ ಕಲೆ ‘ಸಾಂಝಿ’!

ಯಳಂದೂರು: ಆದರ್ಶ ವಿದ್ಯಾರ್ಥಿಗಳ ಕರದಲ್ಲಿ ಅರಳಿದ ಕಾಗದ ಕತ್ತರಿ ಕಲೆ  
ನಾ.ಮಂಜುನಾಥಸ್ವಾಮಿ
Published 13 ಜನವರಿ 2024, 6:13 IST
Last Updated 13 ಜನವರಿ 2024, 6:13 IST
ಅಕ್ಷರ ಗಾತ್ರ

ಯಳಂದೂರು: ಕತ್ತರಿ ಆಡಿಸುತ್ತಾ ಹೋದಂತೆ ಅಂದ-ಚಂದದ ಅಂಬಾರಿ ಮೂಡುತ್ತದೆ. ರಾಧೆ-ಕೃಷ್ಣೆಯರ ಪ್ರೇಮ ಸಲ್ಲಾಪ ಸೊಗಸಾಗಿ ಕಾಣುತ್ತದೆ. ನವಿಲಿನ ನಲಿವು, ಗಂಢ ಭೇರುಂಡದ ಚೆಲುವು, ಗಣೇಶನ ನಿಲುವು ಬಣ್ಣದ ಕಾಗದದಲ್ಲಿ  ಸಾಕ್ಷಾತ್ಕಾರ ಪಡೆಯುತ್ತದೆ...

ಭಾರತದ ಸಾಂಸ್ಕೃತಿಕ ಚರಿತ್ರೆಯಲ್ಲಿ ಅನನ್ಯವಾಗಿ ಅರಳಿದ ಸುಂದರ ಚಿತ್ರ ಕಾವ್ಯ ‘ಸಾಂಝಿ’ ಕಾಗದ ಕಲೆಯ ವಿವರಣೆ ಇದು.     

ತಾಲ್ಲೂಕಿನ ಆದರ್ಶ ವಿದ್ಯಾಲಯದಲ್ಲಿ ಈಚೆಗೆ ಏರ್ಪಡಿಸಿದ್ದ ಎರಡು ದಿನಗಳ ಕಲಿಕಾ ಕಾರ್ಯಾಗಾರದಲ್ಲಿ ಸಾಂಝಿ ಕಲೆಯ ಸೊಬಗಿನೊಂದಿಗೆ ಮಕ್ಕಳ ಜಾತ್ರೆಯೂ ಅನಾವರಣಗೊಂಡಿತ್ತು. ಕಲಾವಿದ ಮೈಸೂರು ಹುಸೇನಿ ಕಾಲದ ಕುಲುಮೆಯಲ್ಲಿ ವಿಕಾಸವಾದ ಅಪರೂಪದ ಕಲೆಯನ್ನು ಕಲಿಕಾರ್ಥಿಗಳ ಮುಂದೆ ಬಿಡಿಸಿಟ್ಟರು. ಅವರ ಮನೋವಿಕಾಸದ ಸಾಧನವಾಗಿ ಬಣ್ಣದ ಕಾಗದ ಬಳಸಿ, ಕಲಿಸಿ ಅಂದವಾದ ಚಿತ್ರಗಳನ್ನು ಗಾಳಿಯಲ್ಲಿ ತೇಲಿಬಿಟ್ಟರು!

‘ಕಾಗದದ ಮೇಲೆ ಬೇಕಾದ ವಿನ್ಯಾಸಕ್ಕೆ ತಕ್ಕಂತೆ ರೇಖಾ ಚಿತ್ರಗಳನ್ನು ಬರೆದುಕೊಳ್ಳಬೇಕು. ನಂತರ ಕತ್ತರಿ ಬಳಸಿ ಕತ್ತರಿಸುತ್ತಾ ಹೋಗಬೇಕು. ಕಾಗದ ಕಿತ್ತು ಬರದಂತೆ ಮಧ್ಯದಲ್ಲಿ ಮಧ್ಯೆಮಧ್ಯೆ ಸೇತುವೆ ಇರುವಂತೆ ನೋಡಿಕೊಳ್ಳಬೇಕು. ಹೀಗೆ ತಮ್ಮ ಕಲೆಯ ಬಲೆಯನ್ನು ಹೆಣೆಯುತ್ತ, ಕಾಗದವನ್ನು ಆಚೀಚೆ ಆಡಿಸುತ್ತ ಅದನ್ನು ಒಪ್ಪ ಓರಣವಾಗಿ ಕತ್ತರಿಸುವ ರೀತಿ ಸೋಜಿಗವನ್ನು ಉಂಟು ಮಾಡುತ್ತದೆ’ ಎಂದು ರಂಗ ಶಿಕ್ಷಕ ಮಧುಕರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಕಾರ್ಯಾಗಾರ ಮಕ್ಕಳಿಗೆ ವಿಶಿಷ್ಟ ಅನುಭವ ಕಟ್ಟಿಕೊಟ್ಟಿತು. ಮಕ್ಕಳು ಲಘು ಬಗೆಯಿಂದ ಕೆಂಪು, ಬಿಳುಪು, ಹಸಿರು, ಗುಲಾಬಿ ಬಣ್ಣದ ಕಾಗದಗಳಲ್ಲಿ  ಜೋಡಿ ನವಿಲು, ಎಲೆ, ಮುಖವಾಡ, ಚಿಟ್ಟೆಯ ಚಿತ್ರಗಳನ್ನು ಕೊರೆದು ಗಮನ ಸೆಳೆದರು’ ಎಂದು ಹೇಳಿದರು.

‘ಹೊಸ ಶಿಕ್ಷಣ ನೀತಿ ನವೀನ ಕಲಿಕೆಗೆ ಒತ್ತು ನೀಡಿದೆ. ಸದಾ ಹೊಸತನ, ಆಲೋಚನೆ, ವೈಚಾರಿಕ ಚಿಂತನೆ ಮೂಡಿಸಲು ಪಠ್ಯಕ್ರಮ ಚೌಕಟ್ಟಿನಲ್ಲಿ ವಿಪುಲ ಅವಕಾಶ ಕಲ್ಪಿಸಲಾಗಿದೆ. ಇದೇ ರೀತಿ ತರಗತಿ ಕಲಿಕೆಯಲ್ಲಿ ಸಾಂಝಿ ಕಲೆ ಒತ್ತಡ ನಿರ್ವಹಣೆಯ ಭಾಗವಾಗಿ, ಲವಲವಿಕೆಯ ಕಲಿಕೆಯ ಭಾಗವಾಗಿ ಮಕ್ಕಳಿಗೆ ಕಾಗದದಲ್ಲಿ ಪ್ರಾಣಿ, ಪಕ್ಷಿ, ಪರಂಪರೆ ಬಿಂಬಿಸುವ ರಾಮಾಯಣ, ಮಹಾಭಾರತದ ಚಿತ್ರ ತಯಾರಿಸಿ ಬಳಸಬಹುದು. ಶಿಕ್ಷಕರು ಕಡಿಮೆ ವೆಚ್ಚದ ಪಾಠೋಪಕರಣವಾಗಿ ಬಳಸಬಹುದು’ ಎಂದು ವಿದ್ಯಾಲಯದ ಮುಖ್ಯ ಶಿಕ್ಷಕ ಗುರುಮೂರ್ತಿ ಹೇಳಿದರು.

ಸಾಂಝಿ ವಿಶೇಷ: 'ಸಾಂಝ್ ಎಂದರೆ ಸಂಧ್ಯಾಕಾಲ. ಗೋಧೂಳಿ ಸಮಯ. ಗೋವುಗಳನ್ನು ಕೃಷ್ಣ ಮನೆಗೆ ಕರೆತರುವ ಸಮಯದಲ್ಲಿ ರಾಧೆ ಗೋಪಿಕೆಯ ಸಹಾಯದಿಂದ ಎಲೆ ರಂಗೋಲಿ ಹಾಸಿ, ಬಣ್ಣದ ಹೂಗಳನ್ನು ಇಟ್ಟು, ಅಂಗಳವನ್ನು ಸಿಂಗರಿಸುತ್ತಿದ್ದರು. ಮಥುರಾದ ಯಮುನೆಯ ಅಂಗಳದ ಪರಿಸರದಲ್ಲಿ ಸೀಮಿತವಾಗಿದ್ದ ಸಾಂಝಿ ನಂತರ ಭಾರತದ ಗ್ರಾಮೀಣ ಪ್ರದೇಶಗಳಿಗೂ ವ್ಯಾಪಿಸಿತು. ಹಬ್ಬಗಳಲ್ಲಿ ಈಗಲೂ ಜನರು ಕಾಗದಗಳಲ್ಲಿ ನೂರಾರು ವಿನ್ಯಾಸಗಳನ್ನು ಅರಳಿಸಿ, ವಿವಿಧ ದೃಶ್ಯಾವಳಿಗಳ ಚಿತ್ತಾರ ಮಾಡಿ, ಬೀದಿ ಬೀದಿಗಳಲ್ಲಿ ಅಲಂಕರಿಸುವ ಪರಂಪರೆ ಇದೆ’ ಎಂದು ಹೇಳುತ್ತಾರೆ ಕಲಾವಿದ ಹುಸೇನಿ.

ವಿದ್ಯಾರ್ಥಿಗಳ ಕೈಯಲ್ಲಿ ಅರಳಿದ ಸಾಂಝಿ ಕಲಾಕೃತಿಗಳು
ವಿದ್ಯಾರ್ಥಿಗಳ ಕೈಯಲ್ಲಿ ಅರಳಿದ ಸಾಂಝಿ ಕಲಾಕೃತಿಗಳು
ಎಸ್‌.ಎಫ್‌.ಹುಸೇನಿ
ಎಸ್‌.ಎಫ್‌.ಹುಸೇನಿ

ಬಲು ವಿಶಿಷ್ಟ ಕಾಗದ ಕತ್ತರಿಸುವ ಕಲೆ ವಿದ್ಯಾರ್ಥಿಗಳಿಗೆ ವಿಶಿಷ್ಟ ಅನುಭವ ಕಾಗದ ಕಲಾಕೃತಿ ರಚಿಸಿದ ಮಕ್ಕಳು

‘ಸಾಂಝಿ’ ಕಲೆಯೊಡನೆ ಅರಳಿದ ಹುಸೇನಿ ಕಲಾವಿದ ಎಸ್.ಎಫ್.ಹುಸೇನಿ ಬಾಲ್ಯದಿಂದಲೇ ಚಿತ್ರಕಲೆಗೆ ಮನಸೋತವರು. ಕಲೆಯಲ್ಲಿ ಬಿಎಫ್ಎ ಪದವಿ ಪಡೆದಿರುವ ಇವರು ಹಲವು ಪ್ರಯೋಗಗಳಿಗೆ ಒಡ್ಡಿಕೊಂಡವರು. ವಿಶಿಷ್ಟ ಬಗೆಯ ಕಾಗದ ಬಿತ್ತಿಶಿಲ್ಪ ಏಕರೇಖಾ ಚಿತ್ರಗಳು  ಪ್ರಯೋಗಾತ್ಮಕ ಅಮೂರ್ತ ಛಾಯಾಚಿತ್ರ ಮತ್ತು ಸಾಂಝಿ ಕಲೆಯಲ್ಲಿ ದೇಶ-ವಿದೇಶಗಳಲ್ಲಿ ಹೆಸರು ಮಾಡಿದ್ದಾರೆ. 15 ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ 110ಕ್ಕೂ ಹೆಚ್ಚು ಸಮೂಹ ಕಲಾ ಪ್ರದರ್ಶನ ಕಾರ್ಯಾಗಾರದಲ್ಲಿ ಭಾಗವಹಿಸಿದ್ದಾರೆ. ಹಲವು ದೇಶಗಳಲ್ಲಿ ಇವರ ಸಾಂಝಿ ಚಿತ್ರಗಳು ಪ್ರದರ್ಶನಗೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT