ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2ಬಿ ಮೀಸಲಾತಿ ರದ್ದು: ಎಸ್‌ಡಿಪಿಐ ಪ್ರತಿಭಟನೆ

Last Updated 27 ಮಾರ್ಚ್ 2023, 13:21 IST
ಅಕ್ಷರ ಗಾತ್ರ

ಚಾಮರಾಜನಗರ: 2ಬಿ ಅಡಿಯಲ್ಲಿ ಮುಸ್ಲಿಂ ಸಮುದಾಯಕ್ಕಿದ್ದ ಮೀಸಲಾತಿ ರದ್ದು ಪಡಿಸಿರುವುದನ್ನು ಖಂಡಿಸಿ, ಮೀಸಲಾತಿ ಪುನರ್‌ ಸ್ಥಾಪಿಸುವಂತೆ ಆಗ್ರಹಿಸಿ ಎಸ್‌ಡಿಪಿಐ ವತಿಯಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.

ಡೀವಿಯೇಷನ್‌ ರಸ್ತೆಯಲ್ಲಿರುವ ಲಾರಿ ನಿಲ್ದಾಣದ ಬಳಿ ಸಮಾವೇಶಗೊಂಡ ಪ್ರತಿಭಟನಕಾರರು ಭುವನೇಶ್ವರಿ ವೃತ್ತದವರೆಗೂ ಮೆರವಣಿಗೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಮುಸ್ಲಿಂ ಸಮುದಾಯಕ್ಕಿದ್ದ 2ಬಿ ಮೀಸಲಾತಿಯನ್ನು ಬಿಜೆಪಿ ಸರ್ಕಾರ ರದ್ದು ಮಾಡಿರುವುದು ಅಸಂವಿಧಾನಿಕ. ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ಮಾಡಿರುವ ಉದ್ದೇಶಿತ ದಾಳಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಸಂವಿಧಾನದದಲ್ಲಿ ಧರ್ಮಾಧಾರಿತ ಮೀಸಲಾತಿ ಇಲ್ಲದಿರುವುದರಿಂದ 2ಬಿ ಪ್ರವರ್ಗದಡಿಯಲ್ಲಿ ಇತರೆ ಹಿಂದುಳಿದ ವರ್ಗಗಳಂತೆ, ಕರ್ನಾಟಕದ ಮುಸ್ಲಿಂ ಸಮುದಾಯ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗವೆಂದು ವೈಜ್ಞಾನಿಕ ಅಧ್ಯಯನದ ಮೂಲಕ ಗುರುತಿಸಿ 2ಬಿ ಮೀಸಲಾತಿ ನೀಡಲಾಗಿತ್ತು’ ಎಂದರು.

‘ಸ್ವಾತಂತ್ರ್ಯ ನಂತರ ನಾಗನಗೌಡ ಸಮಿತಿ, ವೆಂಕಟಸ್ವಾಮಿ ಆಯೋಗ ಮತ್ತು 1990ರ ಚನ್ನಪ್ಪ ರೆಡ್ಡಿ ಆಯೋಗ ಕೂಡ ಮುಸ್ಲಿಮರನ್ನು ಹಿಂದುಳಿದ ವರ್ಗಗಳಿಗೆ ಸೇರಿಸಿದೆ. ವಾಸ್ತವಾಂಶ ಹೀಗಿದ್ದರೂ ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ ತಡೆಯೊಡ್ಡುವ ಹಾಗೂ ಮುಖ್ಯವಾಹಿನಿಗೆ ಬರದಂತೆ ನೋಡಿಕೊಳ್ಳುವ ಷಡ್ಯಂತ್ರದ ಮುಂದುವರಿದ ಭಾಗವಾಗಿ 2ಬಿ ಮೀಸಲಾತಿ ರದ್ದುಪಡಿಸಲಾಗಿದೆ’ ಎಂದು ದೂರಿದರು.

‘ಸಂವಿಧಾನದ ಆಶಯಗಳಂತೆ ಸರ್ಕಾರ ತನ್ನ ಆಡಳಿತ ನಡೆಸಬೇಕೆ ವಿನಾ ತನ್ನ ಗುಪ್ತ ಕಾರ್ಯಸೂಚಿಯನ್ನು ಜಾರಿಗೊಳಿಸುವುದಕ್ಕಲ್ಲ. ಸರ್ಕಾರ ತನ್ನ ನಿರ್ಧಾರ ವಾಪಸ್‌ ಪಡೆಯಬೇಕು. ಮುಸ್ಲಿಮರಿಗೆ ನಿಗದಿಯಾಗಿದ್ದ 2ಬಿ ಮೀಸಲಾತಿಯನ್ನು ಮರು ಸ್ಥಾಪಿಸಬೇಕು’ ಎಂದು ಆಗ್ರಹಿಸಿದರು.

ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ಮುಸ್ಲಿಮರ ಹಿತ ದೃಷ್ಟಿಯಿಂದ ಸರ್ಕಾರ ಕರ್ತವ್ಯ ನಿರ್ವಹಿಸಬೇಕು. ಈ ಸಂಬಂಧ ಸರ್ಕಾರಕ್ಕೆ ನಿರ್ದೇಶನ ನೀಡಬೇಲಿ’ ಎಂದು ಪ್ರತಿಭಟನಕಾರ‌ರು ರಾಜ್ಯಪಾಲರನ್ನು ಒತ್ತಾಯಿಸಿದರು.

ಎಸ್‌ಡಿಪಿಐ ಜಿಲ್ಲಾ ಘಟಕದ ಅಧ್ಯಕ್ಷ ಅಬ್ರಾರ್‌ ಅಹಮದ್‌, ಜಿಲ್ಲಾ ಉಪಾಧ್ಯಕ್ಷ ಸೈಯದ್ ಆರೀಫ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ ಎಂ., ಜಿಲ್ಲಾ ಕಾರ್ಯದರ್ಶಿ ಜಬೀ ನೂರ್, ಜಿಲ್ಲಾ ಖಜಾಂಚಿ ಸೈಯದ್ ನಯಾಜ್, ನಗರಸಭಾ ಸದಸ್ಯರಾದ ಮೊಹಮ್ಮದ ಅಮೀಕ್, ಕಲೀಲ್ ಉಲ್ಲಾ, ಅಫ್ಸರ್ ಪಾಷ, ಡಿ.ಎಸ್.ಎಸ್ ಸಂಘಸೇನಾ, ಬಿ.ಎಸ್.ಪಿ ಬಸವಣ್ಣ ಹಾಗೂ ಮದೀನ ಮಸೀದಿ ಅಧ್ಯಕ್ಷ ನಯೀಮ್ ಉಲ್ಲಾ ಹಕ್, ಮಕ್ಕಾ ಮಸೀದಿ ಅಧ್ಯಕ್ಷ ಸರ್ದಾರ್ ಸಾಬ್ ಮತ್ತು ರಂಗಕರ್ಮಿ ಕೆ.ವೆಂಕಟರಾಜು ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT