ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಸ್ಯೆಗಳ ಸುಳಿಯಲ್ಲಿ ಹಂಗಳ ಆಸ್ಪತ್ರೆ

ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೇಕಿದೆ ಚಿಕಿತ್ಸೆ
Last Updated 20 ಡಿಸೆಂಬರ್ 2018, 19:40 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ದಿನದ 24 ಗಂಟೆಯೂ ಚಿಕಿತ್ಸೆ ದೊರೆಯುತ್ತದೆ ಎಂದು ಅಳವಡಿಸಿರುವ ನಾಮಫಲಕ ಈ ಆಸ್ಪತ್ರೆಯ ಮುಂಭಾಗ ರಾರಾಜಿಸುತ್ತದೆ. ಆದರೆ, ಆಸ್ಪತ್ರೆಯ ಒಳಗೆ ಚಿಕಿತ್ಸೆ ನೀಡಲು ವೈದ್ಯರೇ ಇರುವುದಿಲ್ಲ!

ಇಂತಹದ್ದೂ ಸೇರಿದಂತೆ ಅನೇಕ ಸಮಸ್ಯೆಗಳನ್ನು ಹೊದ್ದಿರುವುದು ಹಂಗಳ ಹೋಬಳಿ ಕೇಂದ್ರ ಸ್ಥಾನದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರ.

ಕಳೆದೆರಡು ತಿಂಗಳಿನಿಂದ ಆಸ್ಪತ್ರೆಗೆ ಕಾಯಂ ವೈದ್ಯರ ನೇಮಕವಾಗಿಲ್ಲ, ತುರ್ತು ಸಂದರ್ಭಗಳಲ್ಲಿ 108 ವಾಹನವೇ ಸಿಗುವುದಿಲ್ಲ, ರಾತ್ರಿ ವೇಳೆ ಶುಶ್ರೂಷಕಿಯರೂ. ಜನರು ತುರ್ತು ಚಿಕಿತ್ಸೆಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಅಥವಾ ಖಾಸಗಿ ಆಸ್ಪತ್ರೆಯನ್ನು ಅವಲಂಬಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ರಾಷ್ಟ್ರೀಯ ಹೆದ್ದಾರಿ 67 ಹಂಗಳದ ಮೂಲಕವೇ ಹಾದುಹೋಗುತ್ತದೆ. ಕೇರಳ, ತಮಿಳುನಾಡು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಇದಾಗಿದ್ದು, ಅಗ್ಗಿಂದಾಗೆ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ಅಪಘಾತದಲ್ಲಿ ಗಾಯಗೊಂಡವರು ಆಸ್ಪತ್ರೆಗೆ ಬಂದರೆ ಅಟೆಂಡರ್‌ಗಳೇ ಬ್ಯಾಂಡೇಜ್‌ ಹಾಕಿ ಕಳುಹಿಸುತ್ತಿದ್ದಾರೆ.

ಅಲ್ಲದೇ, ಹಂಗಳ ಹೋಬಳಿಯಲ್ಲಿ ಅತಿ ಹೆಚ್ಚು ಗಿರಿಜನ ಮತ್ತು ಬುಡಕಟ್ಟು ಜನರ ಕಾಲೊನಿಗಳು ಇರುವುದರಿಂದ ತುರ್ತು ಪರಿಸ್ಥಿತಿ ವೇಳೆ ಅವರಿಗೆ ಚಿಕಿತ್ಸೆ ದೊರಕುತ್ತಿಲ್ಲ. ಹೆರಿಗೆ ಸೇರಿದಂತೆ ಇನ್ನಿತರ ಪ್ರಕರಣಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರೆಯುವುದಿಲ್ಲ. ಉಚಿತ 108 ಅಂಬ್ಯುಲೆನ್ಸ್‌ ವ್ಯವಸ್ಥೆಯೂ ಇಲ್ಲವಾಗಿದೆ, ಹಣ ನೀಡಿ ವಾಹನವನ್ನು ಬಾಡಿಗೆ ಪಡೆದು ಹೋಗುವಂತಹ ಪಡಿಪಾಟಲು ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ಸ್ಥಳೀಯರು.

‘ಆಸ್ಪತ್ರೆಯ ವೈದ್ಯರು ಉನ್ನತ ಶಿಕ್ಷಣಕ್ಕಾಗಿ ದೀರ್ಘ ರಜೆಯಲ್ಲಿ ಹೋಗುತ್ತಾರೆ. ಇಲ್ಲಿನ ಆಸ್ಪತ್ರೆಗೆ ತಾಲ್ಲೂಕಿನ ಪಡಗೂರು ಮತ್ತು ಕಗ್ಗಳದ ಹುಂಡಿಯಲ್ಲಿ ಕಾರ್ಯನಿರ್ಹಿವಸುವ ವೈದ್ಯರನ್ನು ಮೂರು ದಿನಗಳಿಗೊಮ್ಮೆ ಕರ್ತವ್ಯ ನಿರ್ವಹಿಸುವಂತೆ ಆದೇಶ ಮಾಡಲಾಗಿದೆ. ಆದರೂ ವೈದ್ಯರು ಇಲ್ಲಿಗೆ ಬರುತ್ತಿಲ್ಲ ಇದರಿಂದ ಕಾಡಂಚಿನಿಂದ ಬರುವ ರೋಗಿಗಳಿಗೆ ತೊಂದರೆಯಾಗುತ್ತಿದೆ’ ಎಂದು ಸಾಮಾಜಿಕ ಹೋರಾಟಗಾರ ರಾಜೇಶ್ ಆರೋಪಿಸಿದ್ದಾರೆ.

ಕಾಡಂಚಿನ ಮತ್ತು ಬುಡಕಟ್ಟು ಜನರಿಗೆ ಈ ಆರೋಗ್ಯ ಕೇಂದ್ರ ಹತ್ತಿರ ಇರುವುದರಿಂದ ಹೆಚ್ಚಿನ ಜನರು ಇಲ್ಲಿಗೆ ಬರುತ್ತಾರೆ. ಇಲ್ಲಿಗೆ ಬಂದರೂ ಚಿಕಿತ್ಸೆ ಸಿಗುತ್ತಿಲ್ಲ, ಉಚಿತ ಆಂಬ್ಯುಲೆನ್ಸ್‌ ಸೇವೆ ಸಿಗದೆ ಹಣ ನೀಡಿ ಹೋಗಬೇಕು ಶೀಘ್ರವಾಗಿ ಸಮಸ್ಯೆಗಳನ್ನು ಪರಿಹರಿಸದಿದ್ದರೆ ರಸ್ತೆ ತಡೆ ನಡೆಸಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಸಿಬ್ಬಂದಿ ಕೊರತೆ ಇದೆ

‘ಬೇರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರನ್ನು ಇಲ್ಲಿಗೆ ನಿಯೋಜನೆ ಮಾಡಲಾಗಿದೆ. ಅವರು ವಾರದಲ್ಲಿ ಎರಡು ಮೂರು ದಿನದಂತೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ರಾತ್ರಿ ಸಮಯದಲ್ಲಿ ಸಿಬ್ಬಂದಿ ಕೊರತೆ ಇದೆ. ಮೂರು ಜನ ಶುಶ್ರೂಷಕಿಯರ ಜಾಗದಲ್ಲಿ ಒಬ್ಬರು ಕಾರ್ಯ ನಿರ್ವಹಿಸುತ್ತಿದ್ದಾರೆ’ ಎಂದು ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ರವಿಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ತುರ್ತು ಪರಿಸ್ಥಿತಿಯಲ್ಲಿ ಇಲ್ಲಿನ ಸಿಬ್ಬಂದಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ತಲುಪಿಸುವ ಕೆಲಸವನ್ನು ಮಾಡುತ್ತಿದ್ದಾರೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT