ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಮೂಲಸೌಕರ್ಯ ಕೊರತೆಗೆ ನಲುಗಿದ ಆಶ್ರಯ ಬಡಾವಣೆ

3ನೇ ವಾರ್ಡ್‌ನಲ್ಲಿರುವ ಬಡಾವಣೆ, ನೀರು, ರಸ್ತೆ ವಿದ್ಯುತ್‌ ಸೌಲಭ್ಯವಿಲ್ಲದೆ ಜೀವನ ದುಸ್ತರ
Last Updated 24 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

ಚಾಮರಾಜನಗರ: ಇಲ್ಲಿನ ನಗರಸಭೆ ವ್ಯಾಪ್ತಿಯ ಮೂರನೇ ವಾರ್ಡ್‌ನಲ್ಲಿ ಬರುವ ಆಶ್ರಯ ಬಡಾವಣೆಯಲ್ಲಿ ಕನಿಷ್ಠ ಮೂಲ ಸೌಕರ್ಯಗಳಿಲ್ಲದೆ ನಿವಾಸಿಗಳ ಬದುಕು ದುಸ್ತರವಾಗಿದೆ.

ನೆಮ್ಮದಿಯ ಜೀವನಕ್ಕೆ ಅತಿ ಅಗತ್ಯವಾಗಿ ಬೇಕಾಗಿರುವರಸ್ತೆ, ಕುಡಿಯುವ ನೀರು, ವಿದ್ಯುತ್‌ ಸಂಪರ್ಕದಂತಹ‌ಮೂಲಸೌಕರ್ಯಗಳು ಇಲ್ಲಿಲ್ಲ. ಇವುಗಳೇ ಇಲ್ಲದ ಮೇಲೆ ಇನ್ನೂ ಚರಂಡಿ, ಒಳಚರಂಡಿ ಸೌಲಭ್ಯ ಇರಲು ಸಾಧ್ಯವೇ? ಅವುಗಳೂ ಇಲ್ಲ.

ನಗರದ ಪ್ರಮುಖ ಪ್ರದೇಶವಾದ ಗಾಳಿಪುರ ವ್ಯಾಪ್ತಿಯಲ್ಲೇ ಈ ಬಡಾವಣೆ ಬರುತ್ತದೆ. ಬಡವರೇ ನೆಲೆಸಿರುವ ಆಶ್ರಯ ಬಡಾವಣೆಗೆ ಮೂಲಸೌಕರ್ಯ ಕಲ್ಪಿಸಲು ನಗರಸಭೆ ಕ್ರಮ ಕೈಗೊಂಡಿಲ್ಲ ಎಂಬುದು ನಿವಾಸಿಗಳ ದೂರು.

ಆಶ್ರಯ ಯೋಜನೆಯ ಬಡಾವಣೆ: ಗಾಳಿಪುರ ಪ್ರದೇಶದಲ್ಲಿ ಕರಿವರದರಾಜನಬೆಟ್ಟಕ್ಕೆ ಹೋಗುವ ರಸ್ತೆಯಲ್ಲಿ ಬಲ ಭಾಗದಲ್ಲಿರುವ 396 ನಿವೇಶನಗಳನ್ನು ಅಟಲ್‌ ಬಿಹಾರಿ ವಾಜಪೇಯಿ ಆವಾಸ್‌ ಯೋಜನೆ ಅಡಿಯಲ್ಲಿ 2009ರಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತ ಸಮುದಾಯದ ಬಡವರಿಗೆ ಹಂಚಿಕೆ ಮಾಡಲಾಗಿತ್ತು. ಆ ಬಳಿಕ ಆರು ವರ್ಷಗಳ ಬಳಿಕ ಅಂದರೆ 2015–16ರಲ್ಲಿ ಫಲಾನುಭವಿಗಳ ನಿವೇಶನಗಳನ್ನು ಗುರುತಿಸಲಾಗಿತ್ತು.

ಆ ಬಳಿಕ ಇಲ್ಲಿ 250ಕ್ಕೂ ಹೆಚ್ಚು ಜನರು ಅಂಬೇಡ್ಕರ್‌ ಆವಾಸ್‌ ಯೋಜನೆ, ಅಟಲ್‌ ಬಿಹಾರಿ ಆವಾಸ್‌ ಯೋಜನೆಗಳ ಅಡಿಯಲ್ಲಿ ರಾಜೀವ್‌ ಗಾಂಧಿ ವಸತಿ ನಿಗಮದ ಮೂಲಕ ಮನೆಗಳನ್ನು ಕಟ್ಟಿಸಿಕೊಂಡಿದ್ದಾರೆ. ಇನ್ನೂ ಹಲವು ಮನೆಗಳ ಕಾಮಗಾರಿ ಪೂರ್ಣಗೊಂಡಿಲ್ಲ. ಕೆಲವರು ತಮ್ಮ ಸ್ವಂತ ದುಡ್ಡು ಹಾಕಿ ಮನೆಯ ಕಾಮಗಾರಿಯನ್ನು ಮುಕ್ತಾಯ ಮಾಡಿದ್ದಾರೆ. ಯೋಜನೆಯ ಅಡಿಯಲ್ಲಿ ಬಹುತೇಕರಿಗೆ ಬಿಲ್‌ ಮೊತ್ತ ಇನ್ನೂ ಪಾವತಿಯಾಗಿಲ್ಲ. ಬಿಲ್‌ಗಳು ಬಾರದಿರುವ ಕಾರಣಕ್ಕೆ ಅರ್ಧದಲ್ಲೇ ನಿಂತಿರುವ ಮನೆಗಳು ಸುಮಾರಿವೆ.

ಬಡಾವಣೆ ನಿರ್ಮಾಣ ಮಾಡುವಾಗಲೇ, ಅಲ್ಲಿ ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್‌ ಸಂಪರ್ಕ, ಚರಂಡಿ, ಒಳಚರಂಡಿ ವ್ಯವಸ್ಥೆ ಸೇರಿದಂತೆ ಎಲ್ಲ ಮೂಲ ಸೌಕರ್ಯಗಳನ್ನು ನಗರಸಭೆ ಕಲ್ಪಿಸಬೇಕಿತ್ತು. ಆದರೆ, ಯಾವುದನ್ನೂ ಮಾಡಿಲ್ಲ. ಇದರಿಂದಾಗಿ ನಿವಾಸಿಗಳು ತೊಂದರೆ ಅನುಭವಿಸುವಂತಾಗಿದೆ.

ನೀರು, ವಿದ್ಯುತ್‌, ರಸ್ತೆ ಸೌಲಭ್ಯ ಇಲ್ಲದಿರುವ ಕಾರಣಕ್ಕೆ ಹಲವರು ಇನ್ನೂ ಮನೆಗಳನ್ನು ನಿರ್ಮಿಸಿಲ್ಲ. ಕೆಲವರು ಮನೆ ನಿರ್ಮಾಣವನ್ನು ಅರ್ಧದಲ್ಲೇ ನಿಲ್ಲಿಸಿದ್ದಾರೆ.

ದಿನನಿತ್ಯದ ಬಳಕೆಗೆ ಅಗತ್ಯವಿರುವ ನೀರನ್ನು ತರಲು ನಿವಾಸಿಗಳು ಪ್ರತಿ ದಿನ ಹರಸಾಹಸ ಮಾಡಬೇಕು. ತೊಂಬೆಗಳಿರುವ ಬೀದಿಗೆ ತೆರಳಬೇಕಾಗಿದೆ. ಅಲ್ಲಿನ ನಿವಾಸಿಗಳು ನೀರು ಸಂಗ್ರಹಿಸಿದ ಬಳಿಕ ಇವರು ತರಬೇಕು. ಬೇರೆ ಬೀದಿಗೆ ನೀರು ಪೂರೈಕೆಯಾಗದಿದ್ದರೆ ಇವರಿಗೂ ನೀರಿಲ್ಲ. ಬೆಳಕಿನ ವ್ಯವಸ್ಥೆ ಇಲ್ಲದಿರುವುದರಿಂದ ರಾತ್ರಿ ಹೊತ್ತು ಸೀಮೆಎಣ್ಣೆ ದೀಪ, ಸೋಲಾರ್‌ ದೀಪಗಳನ್ನೇ ನಿವಾಸಿಗಳು ಅವಲಂಬಿಸಿದ್ದಾರೆ. ಜನರು ನಡೆದಾಡುವ, ದ್ವಿಚಕ್ರವಾಹನಗಳು ಓಡಾಡುವ ದಾರಿಯೇ ಇಲ್ಲಿ ರಸ್ತೆಯಾಗಿವೆ. ಚರಂಡಿ ಇಲ್ಲದಿರುವುದರಿಂದ ಮನೆಗಳಲ್ಲಿ ಉತ್ಪತ್ತಿಯಾಗುವ ಕೊಳಚೆ ನೀರು ಹರಿಯುವುದಕ್ಕೆ ಜಾಗ ಇಲ್ಲದಾಗಿದೆ.

‘ನಮ್ಮ ಮನೆಯಲ್ಲಿ ಮೂವರು ಚಿಕ್ಕ ಮಕ್ಕಳಿದ್ದಾರೆ. ಗಂಡಸರು ಯಾರೂ ಇಲ್ಲ. ನೀರು, ಕರೆಂಟ್‌ ಇಲ್ಲದೆ ತುಂಬಾ ಸಮಸ್ಯೆಯಾಗಿದೆ. ಪ್ರತಿ ದಿನ ನೀರಿಗಾಗಿ ಪರದಾಡಬೇಕು. ಜೀವನ ನಡೆಸುವುದೇ ಕಷ್ಟವಾಗಿದೆ. ಕರೆಂಟ್‌ ಇಲ್ಲದಿರುವುದರಿಂದ ಮಕ್ಕಳಿಗೆ ಓದುವುದಕ್ಕೂ ತೊಂದರೆಯಾಗಿದೆ’ ಎಂದು ಬಡಾವಣೆ ನಿವಾಸಿ ಜಯಲಕ್ಷ್ಮಿ ಅವರು ‘ಪ್ರಜಾವಾಣಿ’ ಮುಂದೆ ಅಳಲು ತೋಡಿಕೊಂಡರು.

‘ನಾವಿಲ್ಲಿ ಬಾಡಿಗೆ ಮನೆಯಲ್ಲಿದ್ದೇವೆ. ರಸ್ತೆ ಇಲ್ಲ. ವಿದ್ಯುತ್‌ ಇಲ್ಲ. ಸೋಲಾರ್‌ ದೀಪದ ಬೆಳಕಲ್ಲಿ ರಾತ್ರಿ ಕಳೆಯುತ್ತಿದ್ದೇವೆ. ಸೌಲಭ್ಯಗಳು ಇಲ್ಲದಿರುವುದರಿಂದ ಬದುಕು ಕಷ್ಟವಾಗಿದೆ. ನಗರಸಭೆಯವರು ನಮ್ಮ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ವಹಿಸಬೇಕು’ ಎಂದು ಒತ್ತಾಯಿಸಿದರು.

ಆಶ್ರಯ ಬಡಾವಣೆಗೆ ಹೊಂದಿಕೊಂಡು ಇರುವ ಎಪಿಎಂಸಿ ಬಡಾವಣೆಯ ಪರಿಸ್ಥಿತಿ ಭಿನ್ನವಾಗಿಲ್ಲ. ಇಲ್ಲಿ 48 ಮನೆಗಳಿವೆ. ಪ್ರತಿ ಮನೆಗೆ ಪೈಪ್‌ಲೈನ್‌ ಅಳವಡಿಸಿ ನಾಲ್ಕು ವರ್ಷಗಳಾದರೂ ಕಾವೇರಿ ನೀರು ಪೂರೈಕೆಯಾಗುತ್ತಿಲ್ಲ. ಬೀದಿಗೆ ಒಂದು ತೊಂಬೆ ಇದೆ. ಅದರಲ್ಲಿ ನೀರು ಬಂದಾಗ ಹಿಡಿದುಕೊಳ್ಳಬೇಕು. ಬೀದಿ ದೀಪ, ರಸ್ತೆ ಸೌಕರ್ಯವೂ ಸರಿಯಾಗಿಲ್ಲ.

ವಿದ್ಯುತ್‌, ಪೈಪ್‌ಲೈನ್‌ ಯೋಜನೆ ಪ್ರಗತಿಯಲ್ಲಿ

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ 3ನೇ ವಾರ್ಡ್‌ ಸದಸ್ಯ ಮಹಮ್ಮದ್‌ ಅಮೀಕ್‌ ಅವರು, ‘ಆಶ್ರಯ ಬಡಾವಣೆಯಲ್ಲಿ ಸಮಸ್ಯೆ ಇರುವುದು ನಿಜ. ನಗರಸಭೆ ಅಧ್ಯಕ್ಷರು ಹಾಗೂ ಆಯುಕ್ತರ ಗಮನಕ್ಕೆ ತಂದಿದ್ದೇನೆ. ಈಗಾಗಲೇ ವಿದ್ಯುತ್‌ ಸಂಪರ್ಕಕ್ಕಾಗಿ ₹12 ಲಕ್ಷದ ಯೋಜನೆ ರೂಪಿಸಲಾಗಿದೆ. ₹8 ಲಕ್ಷ ವೆಚ್ಚದಲ್ಲಿ ನೀರು ಪೂರೈಸುವ ಪೈಪ್‌ಲೈನ್‌ ನಿರ್ಮಾಣವಾಗಿದೆ. ಸಂಪರ್ಕ ಕಲ್ಪಿಸುವುದಷ್ಟೇ ಬಾಕಿ ಇದೆ’ ಎಂದು ಹೇಳಿದರು.

ಕ್ರಿಯಾ ಯೋಜನೆಯಲ್ಲಿ ಸೇರ್ಪಡೆ

‘ಬಡಾವಣೆಯಲ್ಲಿ ಮೂಲ ಸೌಕರ್ಯಗಳು ಇಲ್ಲದಿರುವ ಬಗ್ಗೆ ಮಾಹಿತಿ ಇದೆ. ವಿದ್ಯುತ್‌, ಪೈಪ್‌ಲೈನ್‌ ಕಾಮಗಾರಿ ಪ್ರಗತಿಯಲ್ಲಿದೆ. ಚರಂಡಿ ಹಾಗೂ ಒಳಚರಂಡಿ ನಿರ್ಮಾಣ ಕೆಲಸವನ್ನು ಹೊಸ ಕ್ರಿಯಾ ಯೋಜನೆಯಲ್ಲಿ ಸೇರಿಸಲಾಗುವುದು’ ಎಂದು ನಗರಸಭೆ ಅಧ್ಯಕ್ಷೆ ಸಿ.ಎಂ.ಆಶಾ ತಿಳಿಸಿದರು.

***

ಮನೆ ಕಟ್ಟಿಸುತ್ತಿದ್ದೇವೆ. ಬಿಲ್‌ಗಳು ಇನ್ನೂ ಪಾವತಿಯಾಗಿಲ್ಲ. ಮೂಲಸೌಕರ್ಯಗಳು ಇಲ್ಲದಿರುವುದರಿಂದ ತುಂಬಾ ಸಮಸ್ಯೆಯಾಗಿದೆ

-ಗಣೇಶ್‌, ಫಲಾನುಭವಿ

***

ಕನಿಷ್ಠ ಸೌಕರ್ಯಗಳಿಲ್ಲದೇ ಬದುಕುವುದು ಕಷ್ಟವಾಗಿದೆ. ನಲ್ಲಿ ಹಾಗೂ ವಿದ್ಯುತ್‌ ಸಂಪರ್ಕ ಕಲ್ಪಿಸಿ ಕೊಡಿ. ಅನುಕೂಲವಾಗುತ್ತದೆ

- ಜಯಲಕ್ಷ್ಮಿ, ಬಡಾವಣೆ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT