ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾದಪ್ಪನಿಗೆ ಬೆಳ್ಳಿಯ ತೇರು ನಿರ್ಮಾಣಕ್ಕೆ ಸಿದ್ಧತೆ

ಮಹದೇಶ್ವರ ಬೆಟ್ಟ: 450 ಶುದ್ಧ ಬೆಳ್ಳಿ ಅಗತ್ಯ, ದಾನ ನೀಡಲು ಭಕ್ತರಿಗೆ ಪ್ರಾಧಿಕಾರ ಮನವಿ
Last Updated 3 ಡಿಸೆಂಬರ್ 2020, 11:18 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯ ಪ್ರಸಿದ್ಧ ಯಾತ್ರಾಸ್ಥಳ ಮಹದೇಶ್ವರ ಬೆಟ್ಟದ ಮಲೆ ಮಹದೇಶ್ವರಸ್ವಾಮಿಗೆ ಬೆಳ್ಳಿ ರಥ ನಿರ್ಮಾಣ ಮಾಡಲು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಸಿದ್ಧತೆ ನಡೆಸಿದೆ.

ಈಗಾಗಲೇ ನಿರ್ಮಿಸಲಾಗಿರುವ ತೇಗ ಮರದ 17 ಅಡಿ ಎತ್ತರದರಥಕ್ಕೆ ಬೆಳ್ಳಿಯ ಕವಚ ಅಳವಡಿಸಲು ಪ್ರಾಧಿಕಾರದ ಸಭೆಯಲ್ಲಿ ಒಪ್ಪಿಗೆ ಸೂಚಿಸಿದ್ದು, ಹೊಸ ವರ್ಷದಲ್ಲಿ ಕೆಲಸ ಆರಂಭಿಸಲು ಯೋಜಿಸಿದೆ.

ಬೆಳ್ಳಿ ಕವಚ ನಿರ್ಮಾಣ ಮಾಡಲು 450 ಕೆಜಿ ಶುದ್ಧ ಬೆಳ್ಳಿ ಅಗತ್ಯವಿದ್ದು, ದಾನಿಗಳು ನಗದು ಅಥವಾ ಬೆಳ್ಳಿ ರೂಪದಲ್ಲಿ ಕಾಣಿಕೆ ಸಲ್ಲಿಸಬಹುದು ಎಂದು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಅವರು ಹೇಳಿದ್ದಾರೆ.

‘ದಾನಿಗಳು ಶುದ್ಧ ಬೆಳ್ಳಿ ಗಟ್ಟಿ ಖರೀದಿಸಿ (ಅಥವಾ ತಮ್ಮಲ್ಲಿದ್ದರೆ) ದೇವಾಲಯದ ಪಾರುಪತ್ತೇಗಾರರಿಗೆ ನೀಡಿ ರಶೀದಿ ಪಡೆಯಬಹುದು.ಭಕ್ತಾದಿಗಳಲ್ಲಿ ಅನುಪಯುಕ್ತ ಬೆಳ್ಳಿ ಇದ್ದಲ್ಲಿ ಅದನ್ನು ನೇರವಾಗಿ ದೇವಾಲಯದ ಪಾರುಪತ್ತೇಗಾರರಿಂದ‌ ತೂಕ ಹಾಕಿಸಿ ನೀಡಿ, ರಶೀದಿ ಪಡೆಯಬಹುದು.ನಮ್ಮ ವೆಬ್‌ಸೈಟ್
mmhillstemple.com ಗೆ‌ ಲಾಗಿನ್ ಆಗಿ ದಾನದ ರೂಪದಲ್ಲಿ ಹಣ ಆನ್‌ಲೈನ್‌ನಲ್ಲಿ ಪಾವತಿಸಿ, ಆನ್‌ಲೈನ್ ರಶೀದಿಯನ್ನೂ ಪಡೆಯಬಹುದು’ ಎಂದು ಅವರು ಹೇಳಿದ್ದಾರೆ.

‘ಭಕ್ತರು ದೇವಾಲಯದ ಪಾರುಪತ್ತೆಗಾರರಿಗೆ ಮಾತ್ರ ಬೆಳ್ಳಿ/ಹಣವನ್ನು ನೀಡಬೇಕು. ಬೆಟ್ಟದ ಇತರ ಕಡೆಗಳಲ್ಲಿ ಅಥವಾ ಬೇರೆ ಊರುಗಳಲ್ಲಿ ಬೆಳ್ಳಿ ತೇರಿಗೆ ದಾನ ನೀಡಲು ಹಣ ಅಥವಾ ಬೆಳ್ಳಿ ಕೇಳಿದರೆ ನೀಡಬಾರದು. ದಾನ ನೀಡುವವರು ಈ ತಿಂಗಳ 31ರ ಒಳಗಾಗಿ ನೀಡಲು ಮನವಿ’ ಎಂದು ಜಯವಿಭವಸ್ವಾಮಿ ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.

₹24 ಲಕ್ಷ ಮಜೂರಿ: ಬೆಳ್ಳಿ ಕವಚ ನಿರ್ಮಿಸಲು ₹22ರಿಂದ ₹24 ಲಕ್ಷ ಮಜೂರಿಯಾಗುತ್ತದೆ ಎಂದು ಅಂದಾಜಿಸಲಾಗಿದ್ದು, ಇದನ್ನು ಭರಿಸಲು ಈಗಾಗಲೇ ಇಬ್ಬರು ಭಕ್ತರು ಮುಂದೆ ಬಂದಿದ್ದಾರೆ.

‘ಬೆಂಗಳೂರಿನ ಭಕ್ತರಾದ ಎಚ್‌.ಎಸ್‌.ಸೋಮಶೇಖರ್‌ ಅವರು ಅರ್ಧ ಮೊತ್ತವನ್ನು ನೀಡುವುದಾಗಿ ಪ್ರಾಧಿಕಾರಕ್ಕೆ ತಿಳಿಸಿದ್ದಾರೆ. ಅದೇ ರೀತಿ ಉಳಿದ ಅರ್ಧ ಮೊತ್ತವನ್ನು ತಮಿಳುನಾಡಿನ ಕೊಯಮತ್ತೂರಿನ ಮೋಹನ್ ರಾಮ್‌ ಅವರು ಪಾವತಿಸಲು ಮುಂದೆ ಬಂದಿದ್ದಾರೆ’ ಎಂದು ಜಯವಿಭವಸ್ವಾಮಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ತೇರಿನ ಎತ್ತರನೆಲದಿಂದ (ಧ್ವಜದವರೆಗೆ)‌ 17 ಅಡಿಗಳಷ್ಟಿದೆ. ಆ್ಯಕ್ಸಲ್‌ನ ಕೆಳಭಾಗ ಮೂರು ಅಡಿ ಇದೆ. ಇಷ್ಟು ಎತ್ತರವನ್ನು ಬಿಟ್ಟು,ಪೀಠ ಸೇರಿ ಬೆಳ್ಳಿ ಕವಚ ಪೂರ್ಣವಾದಾಗ ತೇರಿನ ಎತ್ತರ‌ 12 ಅಡಿ 6 ಇಂಚಿನಷ್ಟು ಇರಲಿದೆ’ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT