ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದೇಶ್ವರ ಬೆಟ್ಟ: ಬೆಳ್ಳಿ ರಥ ಸೇವೆಗೆ ಮುಕ್ತ

Published 25 ಜೂನ್ 2023, 12:50 IST
Last Updated 25 ಜೂನ್ 2023, 12:50 IST
ಅಕ್ಷರ ಗಾತ್ರ

ಮಹದೇಶ್ವರ ಬೆಟ್ಟ: ಇಲ್ಲಿನ ಮಲೆ ಮಹದೇಶ್ವರ ಸ್ವಾಮಿ ದೇವಾಲಯದ ಹೊಸ ಬೆಳ್ಳಿ ರಥ ಭಾನುವಾರದಿಂದ ಭಕ್ತರ ಸೇವೆಗೆ ಮುಕ್ತವಾಗಿದೆ. 

ಪ್ರತಿ ದಿನ ಬೆಳಿಗ್ಗೆ 9 ಗಂಟೆಗೆ ಬೆಳ್ಳಿ ತೇರಿನ ಉತ್ಸವ ನಡೆಯಲಿದ್ದು, ಉತ್ಸವಕ್ಕೆ ₹2001 ಶುಲ್ಕ ನಿಗದಿಪಡಿಸಲಾಗಿದೆ. 

ಮಾರ್ಚ್‌ 18ರಂದು, 108 ಅಡಿ ಎತ್ತರದ ಮಹದೇಶ್ವರ ಸ್ವಾಮಿಯ ಪ್ರತಿಮೆ ಅನಾವರಣ ಮಾಡಿದ ದಿನ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಳ್ಳಿ ರಥವನ್ನು ಉದ್ಘಾಟಿಸಿದ್ದರು. ಮೂರು ತಿಂಗಳಾಗಿದ್ದರೂ ರಥ ಭಕ್ತರ ಸೇವೆಗೆ ಮುಕ್ತವಾಗಿರಲಿಲ್ಲ. ಪಾಲಿಶಿಂಗ್‌ ಮತ್ತು ಕಳಶಕ್ಕೆ ಚಿನ್ನದ ಲೇಪ‍ನ ಕಾರಣಕ್ಕೆ ವಿಳಂಬವಾಗಿತ್ತು. ಮಣ್ಣೆತ್ತಿನ ಅಮಾವಾಸ್ಯೆದಿನದಿಂದ ಬೆಳ್ಳಿ ರಥೋತ್ಸವ ಆರಂಭಿಸಲಾಗುವುದು ಎಂದು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಹೇಳಿದ್ದರು. ಅದಾಗಿ ವಾರದ ನಂತರ ಬೆಳ್ಳಿ ರಥ ಭಕ್ತರ ಸೇವೆಗೆ ಸಮರ್ಪಿತವಾಗಿದೆ. 

ಸಾಲೂರು ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಹನೂರು ಶಾಸಕ ಎಂ.ಆರ್‌.ಮಂಜುನಾಥ್‌, ಜಿಲ್ಲಾಧಿಕಾರಿ ಡಿ.ಎಸ್‌.ರಮೇಶ್‌, ಸೆಸ್ಕ್‌ ವ್ಯವಸ್ಥಾಪಕ ನಿರ್ದೇಶಕ, ಪ್ರಾಧಿಕಾರದ ಹಿಂದಿನ ಕಾರ್ಯದರ್ಶಿ ಜಯ ವಿಭವಸ್ವಾಮಿ, ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಸ್‌.ಕಾತ್ಯಾಯಿನಿದೇವಿ ಹಾಗೂ ಇತರ ಅಧಿಕಾರಿಗಳು, ಭಕ್ತರ ಉಪಸ್ಥಿತಿಯಲ್ಲಿ ಭಾನುವಾರ ಬೆಳಿಗ್ಗೆ ಬೆಳ್ಳಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. 

ಬಾಳೆಕಂದು, ಹೂವುಗಳಿಂದ ಅಲಂಕರಿಸಲಾಗಿದ್ದ ಬೆಳ್ಳಿ ರಥದಲ್ಲಿ ಉತ್ಸವ ಮೂರ್ತಿಯನ್ನು ಕೂರಿಸಿ ಪೂಜೆ ಸಲ್ಲಿಸಲಾಯಿತು. ಬಳಿಕ ದೇವಾಲಯದ ಹೊರ ಆವರಣದಲ್ಲಿ ರಥವನ್ನು ಒಂದು ಸುತ್ತು ತರಲಾಯಿತು. 

ಭಕ್ತರು ದಾನ, ಕಾಣಿಕೆ ರೂಪದಲ್ಲಿ ನೀಡಿರುವ ಬೆಳ್ಳಿಯ ಪದಾರ್ಥಗಳನ್ನು ಬಳಸಿಕೊಂಡು 17 ಅಡಿ 11 ಇಂಚು ಎತ್ತರದ ತೇಗದ ಮರದಿಂದ ಮಾಡಿದ ರಥಕ್ಕೆ ಬೆಳ್ಳಿ ಕವಚವನ್ನು ಅಳವಡಿಸಲಾಗಿದೆ. ಬೆಳ್ಳಿಯ ಕೆಲಸದ ಕೂಲಿ ₹20ಲಕ್ಷವನ್ನು ಭಕ್ತರಾದ ಕೊಯಮತ್ತೂರಿನ ಮೋಹನ್ ರಾಮ್ ಹಾಗೂ ಬೆಂಗಳೂರಿನ ಸೋಮಶೇಖರ್ ಭರಿಸಿದ್ದರು.

ದೇವಾಲಯದಲ್ಲಿ ಚಿನ್ನದ ತೇರು ಕೂಡ ಇದ್ದು, ಪ್ರತಿ ದಿನ ರಾತ್ರಿ 7 ಗಂಟೆಗೆ ಚಿನ್ನದ ರಥೋತ್ಸವ ನಡೆಯುತ್ತದೆ. ಉತ್ಸವದ ಶುಲ್ಕ ₹3001 ಇದೆ.

ವೃದ್ಧರಿಗೆ ನೇರ ದರ್ಶನ, ಜೊತೆಗಿರುವವರಿಗೆ ₹500 ಶುಲ್ಕ

ಈ ಮಧ್ಯೆ, ಮುಜರಾಯಿ ಇಲಾಖೆಯ ಆದೇಶದಂತೆ 65 ವರ್ಷಕ್ಕಿಂತ ಹೆಚ್ಚು ವಯಸ್ಸಿನ ವೃದ್ಧರಿಗೆ ದೇವರ ದರ್ಶನಕ್ಕಾಗಿ ಮಹದೇಶ್ವರ ಬೆಟ್ಟದಲ್ಲಿ ಪ್ರತ್ಯೇಕ ಸಾಲಿನ ವ್ಯವಸ್ಥೆ ಮಾಡಲಾಗಿದೆ. ಆಧಾರ್‌ ಕಾರ್ಡ್‌ ಇಲ್ಲವೇ ವಯಸ್ಸಿನ ಪುರಾವೆಯ ಇತರೆ ದಾಖಲೆಗಳನ್ನು ತೋರಿಸಿ ನೇರವಾಗಿ ದರ್ಶನ ಮಾಡಬಹುದು. ವೃದ್ಧರ ಜೊತೆಗೆ ದರ್ಶಕ್ಕೆ ಹೋಗುವವರಿಗೆ ₹500 ಶುಲ್ಕ ನಿಗದಿ ಪಡಿಸಲಾಗಿದೆ. 

ದೇವಾಲಯದ ರಾಜಗೋಪುರದ ಬಲಭಾಗದಲ್ಲಿ ₹500 ಶುಲ್ಕದ ವಿಶೇಷ ಸರತಿ ಸಾಲಿಗೆ ವ್ಯವಸ್ಥೆ ಮಾಡಲಾಗುತ್ತಿತ್ತು. ಈಗ ಆ ಸ್ಥಳದಲ್ಲಿ ವೃದ್ದರ ನೇರ ದರ್ಶನಕ್ಕಾಗಿ ಅವಕಾಶ ಕಲ್ಪಿಸಲಾಗಿದೆ. ಅಂಗವಿಕಲ ವೃದ್ದರ ಜೊತೆ ಒಬ್ಬ ಸಹಾಯಕನಿಗೂ ಅವಕಾಶ ನೀಡಲಾಗಿದೆ.

‘ವಯಸ್ಸಿನ ದಾಖಲೆ ಹೊಂದಿರುವ ಹಿರಿಯ ನಾಗರಿಕರಿಗೆ ಮಾತ್ರ ಅವಕಾಶ ನೇರದರ್ಶನಕ್ಕೆ ಕಲ್ಪಿಸಲಾಗಿದೆ. ಅವರ ಜೊತೆಯಲ್ಲಿ ಬೇರೆ ಯಾರಾದರೂ ದರ್ಶನಕ್ಕೆ ಹೋಗುತ್ತಿದ್ದರೆ, ₹500 ಟಿಕೆಟ್‌ ಪಡೆಯಬೇಕು’ ಎಂದು ಮಲೆ ಮಹದೇಶ್ವರಸ್ವಾಮಿ ದೇವಾಲಯ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಸ್‌.ಕಾತ್ಯಾಯಿನಿದೇವಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT