ಯಳಂದೂರು: ಮಳೆ ಬರುವ ಕಾಲಕ್ಕ ಒಳಗ್ಯಾಕ ಕುಂತೇವೋ, ಇಳಿಯೊಡನೆ ಜಳಕ ಮಾಡೋಣ, ನಾವೂನು ಮೋಡಗಳ ಆಟ ಆಡೋಣ…ಈ ಕವನಗಳ ಸಾಲು ಅಲೆ ಅಲೆಯಾಗಿ ತೇಲಿ ಬರುತ್ತಿದ್ದರೆ ಹೊರಗೆ ಬಣ್ಣದ ಚಿಟ್ಟೆಗಳ ಆಟೋಟದ ಚೆಲ್ಲಾಟ ಮೈಮನ ತುಂಬಿಕೊಳ್ಳುತಿತ್ತು.
ಆಷಾಢದ ಗಾಳಿ, ಮಂಜಿನ ಮುತ್ತು ಉದುರುವ ಹೊತ್ತಿನಲ್ಲಿ ಪಾತರಗಿತ್ತಿಗಳ ಸರಸ ಸಲ್ಲಾಪ ಗಮನ ಸೆಳೆಯುತ್ತದೆ. ಪೂರ್ವ ರೇಖಾಂಶದಿಂದ ಪಶ್ಚಿಮದ ಮಳೆಯ ನೆರಳು ಹುಡುಕುತ್ತ ಬರುವ ಚಿಟ್ಟೆಗಳನ್ನು ನೋಡಲು ಕಾದು ಕುಳಿತುಕೊಳ್ಳುವ ಮಂದಿ ಸಾಕಷ್ಟಿದ್ದಾರೆ. ಹೀಗೆ ಚಿಟ್ಟೆಗಳ ದರ್ಶನಕ್ಕಾಗಿ ಕಾದುಕುಂತವರಿಗೆ ಚಿಟ್ಟೆಗಳ ದಿಬ್ಬಣ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತಿದೆ.
ತಾಲ್ಲೂಕಿನ ಪಶ್ಚಿಮಘಟ್ಟದ ಕಾಡಿಗೆ ಮುಂಗಾರು ಬರುವುದು ತುಸು ನಿಧಾನ. ಈ ಸಮಯ ಇಳೆಗೆ ಮೊದಲ ಮಳೆ ಬಿದ್ದು, ಮಣ್ಣಿನ ಸೂಕ್ಷ್ಮ ಕೋಶ ಅರಳಿದಾಗ ತರುಲತೆಗಳಿಗೂ ಜೀವ ತುಂಬುತ್ತದೆ. ಮಣ್ಣಿನ ವಿಶಿಷ್ಟ ಘಮವೂ ಪಾತರಗಿತ್ತಿಗಳ ಮೂಗರಳಿಸುವಂತೆ ಪ್ರೇರೇಪಿಸುತ್ತದೆ.
ನಿಶ್ಚಲವಾಗಿ ನಿಂತ ಹೂ ಗಿಡ, ಪೊದೆ, ಸಸ್ಯಗಳನ್ನು ಅಪ್ಪಿ ಕುಳಿತು ಚಿಟ್ಟೆಗಳು ಮಕರಂದ ಹೀರುವ ದೃಶ್ಯ ಅದ್ಭುತ ದೃಶ್ಯಕಾವ್ಯದಂತೆ ಗೋಚರಿಸುತ್ತದೆ. ಹೀಗೆ, ಕಣ್ಮನ ಸೆಳೆಯುವ ಚಿಟ್ಟೆಗಳ ಬದುಕು ಮಾತ್ರ ಅತ್ಯಲ್ಪ. ಅವುಗಳ ನೆಲೆಯೂ ಈಗ ಶಿಥಿಲ. ಮಾನವನ ದುರಾಸೆಗೆ ಸಸ್ಯವರ್ಗವನ್ನು ವಿಷಮಯಗೊಳಿಸುವ ಮಾನವನ ಪ್ರವೃತಿಯಿಂದ ಚಿಟ್ಟೆ ಸಂಕುಲ ಅಳಿನತ್ತ ಸಾಗುತ್ತಿದೆ.
ಬಿಳಿಗಿರಿಬೆಟ್ಟದ ಸುತ್ತಮುತ್ತ ಜುಲೈ-ಆಗಸ್ಟ್‌ನಲ್ಲಿ ಕೀಟವರ್ಗಕ್ಕೆ ಸೇರಿದ ಪಾತರಗಿತ್ತಿಗಳ ವಲಸೆ ನಡೆಯುತ್ತದೆ. ಇವು ರೆಕ್ಕೆ ಬಿಚ್ಚಿ ಸಾಗುವಾಗ ವರ್ಣ ವೈಭವದ ದರ್ಶನ ಮಾಡಿಸುತ್ತವೆ. ಒಂದು ಕ್ಷಣವೂ ವಿರಮಿಸದೆ ಹೂ ಅರಸಿ ಹಾರುತ್ತವೆ. ಪುಟ್ಟ ಸಸಿಗಳ ಮೇಲೆ ಕುಳಿತು ಪರಾಗ ಸ್ಪರ್ಶಿಸಿ, ಮಕರಂದ ಹೀರಿ ಮರೆಯಾಗುತ್ತವೆ ಎನ್ನುತ್ತಾರೆ ಏಟ್ರೀ ವಿಜ್ಞಾನಿ ಸಿದ್ದಪ್ಪಶೆಟ್ಟಿ.
ಚಿಟ್ಟೆ ಸ್ನೇಹದ ಮೋಹ:
ಈವರೆಗೆ ಜಗತ್ತಿನಲ್ಲಿ 1.40 ಲಕ್ಷ ಪತಂಗಗಳ ಪ್ರಭೇದ ಗುರುತಿಸಲಾಗಿದೆ. ಅವುಗಳಲ್ಲಿ ಚಿಟ್ಟೆ ಸಂತತಿ 15 ಸಾವಿರ ಮಾತ್ರ. ಬಿಆರ್‌ಟಿ ಸುತ್ತಮುತ್ತಲೇ ನೂರಾರು ಚಿಟ್ಟೆಗಳು ಮುಂಗಾರು ಋತುವಿನಲ್ಲಿ ರೆಕ್ಕೆ ಅಗಲಿಸುವುದನ್ನು ಕಾಣಬಹುದು. ಹೂ ಅರಳಿಸುವ ವನಗಳಲ್ಲಿ ಪಾತರಗಿತ್ತಿಯ ದಟ್ಟಣೆ ಹೆಚ್ಚಾಗಿ ಕಾಣಬಹುದು. ನೀರ ಹಾಡಿನ ನಡುವೆ ಮಕ್ಕಳು ಪತಂಗದ ಸ್ನೇಹಕ್ಕೆ ಬಿದ್ದು ಬಣ್ಣದ ಏರೋಪ್ಲೇನ್ ಚಿಟ್ಟೆ ಇಡಿದು ಸಂಭ್ರಮಿಸುವ ಸಮಯ ಈಗ ಮತ್ತೆ ಬಂದಿದೆ ಎನ್ನುತ್ತಾರೆ ಜೀವವಿಜ್ಞಾನ ಶಿಕ್ಷಕ ಟಗರಪುರ ಮಹದೇವಸ್ವಾಮಿ.
ಗಂಡು ಚಿಟ್ಟೆಗಳ ಮೋಹಕ ಲೋಕ:
ಮಧ್ಯಮ ಗಾತ್ರದ ಸೆಪೋರಾ ನೆರಿಸ್ಸಾ, ಸಣ್ಣದಾದ ಕಡುಗೆಂಪು ತುದಿಯ ಕೊಲೊಟಿಸ್ ಡಾನೆ, ಸದರ್ನ್ ಬರ್ಡ್ವಿಂಗ್, ಅಟ್ಲಾಸ್ ಪತಂಗ ಸೇರಿದಂತೆ ನೂರಾರು ಜಾತಿಯ ಸಾವಿರಾರು ಸಂಖ್ಯೆಯ ಚಿಟ್ಟೆಗಳು ಕೆಸರು, ಕೊಳೆತ ಮರದ ಸುತ್ತಮುತ್ತ ಕುಳಿತು ಮಣ್ಣಿನ ಲವಣಾಂಶ ಹೀರುತ್ತಿವೆ.
ಹೆಣ್ಣು ಚಿಟ್ಟೆ ಆಕರ್ಷಿಸಲು ಬೇಕಾದ ದೇಹ ವ್ಯವಸ್ಥೆಯನ್ನು ಪಡೆಯಲು ಗಂಡು ಚಿಟ್ಟೆಗಳು ಈ ಕ್ರಿಯೆ ನಡೆಸುತ್ತವೆ. ದೇಹಕ್ಕೆ ಶಕ್ತಿ, ವರ್ಣರಂಜಿತ ರೆಕ್ಕೆಗಳನ್ನು ಪಡೆಯುವ ಈ ಕ್ರಿಯೆಯನ್ನು ಚಿಟ್ಟೆ ಶಾಸ್ತ್ರಜ್ಞರು ‘ಮಡ್ ಪಡ್ಲಿಂಗ್’ ಎಂದು ಕರೆದಿದ್ದಾರೆ.
ಜಾಗತಿಕ ತಾಪಮಾನದ ಸೂಚಿ:
ಭಾರತದ ಅತ್ಯಂತ ದೊಡ್ಡ ಗಾತ್ರದ ಪತಂಗಗಳು ಇತ್ತ ಬರುತ್ತವೆ. ಜಾಗತಿಕ ತಾಪಮಾನದ ಸೂಚಿಯಾಗಿ ಕಾರ್ಯನಿರ್ವಹಿಸುತ್ತವೆ. ವಿಪರೀತ ಮಳೆ, ಚಳಿಯಿಂದ ರಕ್ಷಿಸಿಕೊಳ್ಳಲು ನೂರಾರು ಮೈಲು ಪ್ರಯಾಣಿಸುತ್ತವೆ. ಇವುಗಳ ಜೀವಿತಾವಧಿ ಎರಡು-ಮೂರು ತಿಂಗಳಿಂದ ಏಳು-ಎಂಟು ತಿಂಗಳು ಮಾತ್ರ.
ಈ ಅವಧಿಯಲ್ಲಿ ಪೂರ್ವಘಟ್ಟ-ಮೈಸೂರು-ಬಿಳಿಗಿರಿಬೆಟ್ಟದ ನೈಸರ್ಗಿಕ ನೆಲೆ ಪ್ರವೇಶಿಸುತ್ತವೆ. ಈ ವೇಳೆ ಈ ಭಾಗದ ಸಸ್ಯ ಸಂಕುಲಗಳ ಜೀವಾವರಗಳಿಗೆ ಪರಾಗಸ್ಪರ್ಶ ಮಾಡುತ್ತ, ತನ್ನ ವಂಶಾಭಿವೃದ್ಧಿ ಪೂರೈಸಿಕೊಂಡು ಗಮ್ಯ ಸೇರುವ ಚಿಟ್ಟೆಗಳ ಸಂಸಾರಿಕ ಲೋಕ ವಿಸ್ಮಯ ಹಾಗೂ ಅನನ್ಯ ಎನ್ನುತ್ತಾರೆ ಕೀಟ ತಜ್ಞರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.