ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಂಕರರು ತೋರಿದ ಮಾರ್ಗ ಅನುಸರಿಸಿ: ಶೃಂಗೇರಿ ಶ್ರೀ

ಹೆಬ್ಬಸೂರು: ವಿಧುಶೇಖರ ಭಾರತೀ ಸ್ವಾಮೀಜಿಗೆ ಅದ್ದೂರಿ ಸ್ವಾಗತ, ಇಂದು ಕುಂಭಾಭಿಷೇಕ
Last Updated 11 ಮೇ 2022, 16:26 IST
ಅಕ್ಷರ ಗಾತ್ರ

ಚಾಮರಾಜನಗರ: ಶಂಕರ ಭಗವತ್ಪಾದಾಚಾರ್ಯರು ತೋರಿಸಿದ ಮಾರ್ಗವನ್ನು ಎಲ್ಲರೂ ಅನುಸರಿಸಿಕೊಂಡು ಜೀವನ ಸಾರ್ಥಕ ಮಾಡಿಕೊಳ್ಳಬೇಕು ಎಂದು ಶೃಂಗೇರಿ ಶಾರದಾಪೀಠದ ಕಿರಿಯ ಶ್ರೀಗಳಾದ ವಿಧುಶೇಖರ ಭಾರತೀ ಸ್ವಾಮೀಜಿ ಅವರು ಬುಧವಾರ ಹೇಳಿದರು.

ತಾಲ್ಲೂಕಿನ ಹೆಬ್ಬಸೂರಿನ ಶಂಕರಮಠದಲ್ಲಿ ಆಶೀರ್ವಚನ ನೀಡಿದ ಅವರು, ‘ವೇದಗಳಲ್ಲಿ ಅನೇಕ ವಿಷಯಗಳನ್ನು ಪ್ರತಿಪಾದಿಸಲಾಗಿದೆ ಎಂದು ಹೇಳಿರುವ ಶಂಕರಾಚಾರ್ಯರು ಎಲ್ಲರಿಗೂ ಶ್ರೇಯೋ ಮಾರ್ಗಗಳನ್ನು ತೋರಿಸಿಕೊಟ್ಟಿದ್ದಾರೆ. ಅವರ ವಿಷಯದಲ್ಲಿ ಎಲ್ಲರೂ ಅಪಾರವಾದ ಭಕ್ತಿ ಹೊಂದಿರಬೇಕು’ ಎಂದು ಹೇಳಿದರು.

‘ಮನುಷ್ಯನ ಶ್ರೇಯಸ್ಸಿಗಾಗಿ ವೇದಗಳಲ್ಲಿ ಅನೇಕ ವಿಚಾರಗಳನ್ನು ಹೇಳಲಾಗಿದೆ. ಪಾರಮಾರ್ಥಿಕವಾದಂತಹ ಶ್ರೇಯಸ್ಸು ಮಾತ್ರವಲ್ಲ. ಲೌಕಿಕ‌ವಾಗಿಯೂ ನಮಗೆ ಶ್ರೇಯಸ್ಸು ಸಿಗಲು ಏನು ಮಾಡಬೇಕು ಎಂಬುದನ್ನು ಉಪದೇಶ ಮಾಡಲಾಗಿದೆ.ಸಾಮಾನ್ಯ ಮನುಷ್ಯ ಲೌಕಿಕ ಪ್ರಪಂಚದಲ್ಲಿ ಯಾವ ರೀತಿ ವರ್ತಿಸಬೇಕು? ಎಂತಹ ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂಬುದನ್ನೂ ತಿಳಿಸಲಾಗಿದೆ’ ಎಂದರು.

‘ಒಳ್ಳೆಯ ಕೆಲಸಗಳನ್ನು ಮಾಡಲು ಸಂಪತ್ತು ಬೇಕು. ಅದಿಲ್ಲದಿದ್ದರೆ ಯಾವ ಕೆಲಸವನ್ನೂ ಮಾಡಲಾಗದು. ನಮ್ಮಲ್ಲಿರುವ ಸಂಪತ್ತಿನ ವಿನಿಯೋಗಕ್ಕೆ ಮೂರು ದಾರಿಗಳಿವೆ. ಅದರಲ್ಲಿ ಮೊದಲನೆಯದು ದಾನ ಮಾಡುವುದು. ಒಳ್ಳೆಯ ಕೆಲಸಗಳಿಗೆ ದಾನ ಕೊಡಬೇಕು. ಆದರೆ, ತಪ್ಪು ಕೆಲಸಗಳಿಗೆ ಒಂದು ಪೈಸೆಯೂ ಕೊಡಬಾರದು. ದಾನ ಎಷ್ಟು ಕೊಡುತ್ತೇವೆ ಎಂಬುದು ಮುಖ್ಯ ಅಲ್ಲ. ನಮ್ಮ ಶಕ್ತಿಗೆ ಅನುಸಾರ ನೀಡುವುದೇ ಮುಖ್ಯ’ ಎಂದು ಶ್ರೀಗಳು ಅಭಿಪ್ರಾಯಪಟ್ಟರು.

ಶೃಂಗೇರಿ ಶಾರದಾಪೀಠದ ಆಡಳಿತಾಧಿಕಾರಿ ವಿ.ಆರ್‌.ಗೌರಿಶಂಕರ್‌ ಅವರು ಮಾತನಾಡಿ, ಶಂಕರಮಠದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮೆಚ್ಚುಗೆ ಸೂಚಿಸಿ, ಹೆಬ್ಬಸೂರು ಗ್ರಾಮಸ್ಥರಿಗೆ ಕೃತಜ್ಞತೆ ಸಲ್ಲಿಸಿದರು.

ಪೂರ್ಣಕುಂಭ ಸ್ವಾಗತ: ಇದಕ್ಕೂ ಮೊದಲು, ಶ್ರೀಗಳನ್ನು ಪೂರ್ಣಕುಂಭಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು. ನಂತರ ಪಾದಪೂಜೆ ನೆರವೇರಿಸಲಾಯಿತು. ಆಶೀರ್ವಚನದ ಬಳಿಕ ಶ್ರೀಗಳು ಚಂದ್ರಮೌಳೀಶ್ವರ ಪೂಜೆ ನೆರವೇರಿಸಿದರು.

ಶಂಕರ ಮಠದ ಧರ್ಮಾಧಿಕಾರಿ ಎಚ್‌.ಎಸ್‌.ಶ್ರೀಧರಪ್ರಸಾದ್‌, ಮುಡಾ ಅಧ್ಯಕ್ಷ ಎಚ್‌.ವಿ.ರಾಜೀವ್‌, ಜಿಲ್ಲಾ ಬ್ರಾಹ್ಮಣ ಸಂಘದ ಪದಾಧಿಕಾರಿಗಳು, ಗ್ರಾಮದ ಮುಖಂಡರು ಇದ್ದರು.

ಶಂಕರಮಠದ ಕುಂಭಾಭಿಷೇಕ ಗುರುವಾರ (ಮೇ 12) ನಡೆಯಲಿದೆ.ಬೆಳಿಗ್ಗೆ 7.30ರಿಂದ ಮಹಾ ಪವಿತ್ರ ಶ್ರೌತಯಾಗ ಆರಂಭವಾಗಲಿದ್ದು, ಶ್ರೀಗಳು ಶಾರದಾಂಬ ಹಾಗೂ ಪರಿವಾರ ದೇವತೆಗಳ ಕುಂಭಾಭಿಷೇಕ ಹಾಗೂ ರಾಜಗೋಪುರ ವಿಮಾನ ಗೋಪುರ ಕುಂಬಾಭಿಷೇಕ ನೆರವೇರಿಸಲಿದ್ದಾರೆ. ನಂತರ ಶ್ರೀಗಳ ಪಾದಪೂಜಾ ಬಂಧನ ಪುಷ್ಪ ಸಮರ್ಪಣೆ ಕಾರ್ಯಕ್ರಮ ನಡೆಯಲಿದೆ. ಚಂದ್ರಮೌಳೀಶ್ವರ ಪ್ರತಿಷ್ಠೆ ಹಾಗೂ ಶತಚಂಡಿಕಾಯಾಗ ನಡೆಯಲಿದೆ. ಬಳಿಕ ಭಕ್ತರಿಗೆ ಅನ್ನಸಂತರ್ಪಣೆ ನೆರವೇರಲಿದೆ.

ಅಮೃತಮಹೋತ್ಸವಕ್ಕೆ ಚಾಲನೆ

ಶ್ರೀಗಳು ಹೆಬ್ಬಸೂರಿಗೆ ಹೋಗುವ ದಾರಿಯಲ್ಲಿ ಚಾಮರಾಜನಗರದ ಅಗ್ರಹಾರಬೀದಿಯಲ್ಲಿರುವ ಪಟ್ಟಾಭಿ ರಾಮಮಂದಿರಕ್ಕೂ ಭೇಟಿ ನೀಡಿದರು. ಮಂದಿರದ ಆಡಳಿತ ಮಂಡಳಿ ಹಾಗೂ ಬ್ರಾಹ್ಮಣ ಸಮುದಾಯದವರು ಶ್ರೀಗಳನ್ನು ಸ್ವಾಗತಿಸಿದರು.

ಪಟ್ಟಾಭಿರಾಮಮಂದಿರ ಶ್ರೀರಾಮಚಂದ್ರನಿಗೆ ಪೂಜೆ ಸಲ್ಲಿಸಿದ ಶ್ರೀಗಳು, ಇದೇ 15 ಮತ್ತು 16ರಂದು ನಡೆಯಲಿರುವ ಪಟ್ಟಾಭಿ ರಾಮಮಂದಿರದ ಅಮೃತಮಹೋತ್ಸವಕ್ಕೆ ದೀಪ ಬೆಳಗಿಸುವುದರ ಮೂಲಕ ಅಧಿಕೃತವಾಗಿ ಚಾಲನೆ ನೀಡಿದರು.

ಪಟ್ಟಾಭಿ ರಾಮಮಂದಿರದ ಅಧ್ಯಕ್ಷ ಕೆ.ಬಾಲಸುಬ್ರಮಣ್ಯಂ, ವಿಜ್ಞಾನಿ ಡಾ.ಕೆ.ವೆಂಕಟಸ್ವಾಮಿ, ಉದ್ಯಮಿ ಎ.ಜಯಸಿಂಹ, ಎಸ್.ಲಕ್ಷ್ಮಿನರಸಿಂಹ, ವಿ.ಅನಂತಕುಮಾರ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT