ಗುರುವಾರ , ನವೆಂಬರ್ 14, 2019
18 °C
ಜಿಲ್ಲೆಯಲ್ಲಿ ಶೈಕ್ಷಣಿಕ ಪ್ರಗತಿ: ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಿಂದ ಅಧಿಕಾರಿಗಳಿಗೆ ಹಲವು ಸಲಹೆ

ಎಸ್ಸೆಸ್ಸೆಲ್ಸಿ: ಉತ್ತಮ ಸಾಧನೆಗೆ ‘ಸುರೇಶ’ ಸೂತ್ರ

Published:
Updated:
Prajavani

ಚಾಮರಾಜನಗರ: ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಫಲಿತಾಂಶದಲ್ಲಿ ರಾಜ್ಯದಲ್ಲಿ 10ರ ಒಳಗೆ ರ‍್ಯಾಂಕ್‌ ಪಡೆಯಲು ಶತಾಯ ಗತಾಯ ಯತ್ನಿಸುತ್ತಿರುವ ಜಿಲ್ಲಾಡಳಿತಕ್ಕೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಹಲವು ಸಲಹೆಗಳನ್ನು ನೀಡಿದ್ದಾರೆ. ಶೈಕ್ಷಣಿಕ ಪ್ರಗತಿಗಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ನಿರ್ದಿಷ್ಟ ಸೂಚನೆಗಳನ್ನೂ ಕೊಟ್ಟಿದ್ದಾರೆ.

ಮೂರು ದಿನಗಳ ಹಿಂದೆ ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸಚಿವರು, ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎಚ್‌.ನಾರಾಯಣರಾವ್‌, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಜುನಾಥ್‌ ಪಿ., ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆಯ ವಿವಿಧ ಅಧಿಕಾರಿಗಳೊಂದಿಗೆ ಎಸ್ಸೆಸ್ಸೆಲ್ಸಿ ಪರೀಕ್ಷಾ ಸಿದ್ಧತೆಯ ಬಗ್ಗೆ ಪ್ರತ್ಯೇಕ ಸಭೆ ನಡೆಸಿದ್ದರು. 

ನಿವೃತ್ತರ ನೆರವು ಪಡೆಯಿರಿ: ಅವಕಾಶ ಇರುವ ಕಡೆಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಬೋಧನೆ ಮಾಡಲು ಸೇವೆಯಿಂದ ನಿವೃತ್ತರಾಗಿರುವ ಶಿಕ್ಷಕರನ್ನು ಬಳಸಿಕೊಳ್ಳಲು ಎಸ್‌.ಸುರೇಶ್‌ಕುಮಾರ್‌ ಅವರು ಸಲಹೆ ನೀಡಿದ್ದಾರೆ. ಅನುದಾನರಹಿತ ಶಾಲೆಗಳ ಶಿಕ್ಷಕರ ನೆರವನ್ನೂ ಪಡೆದುಕೊಳ್ಳಬಹುದು ಎಂದೂ ಅವರು ಹೇಳಿದ್ದಾರೆ. 

ಅವಕಾಶ ಇರುವ ಕಡೆಗಳಲ್ಲಿ ಗಂಡುಮಕ್ಕಳನ್ನು ಶಾಲೆಯಲ್ಲಿಯೇ ಉಳಿಸಿಕೊಂಡು ದಿನಕ್ಕೊಬ್ಬ ಶಿಕ್ಷಕರನ್ನು ನಿಯೋಜಿಸಿ ಮಾರ್ಗದರ್ಶನ ನೀಡುವ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ.

ಮಕ್ಕಳಲ್ಲಿ ಗಣಿತ, ವಿಜ್ಞಾನ, ಸಾಮಾನ್ಯ ಜ್ಞಾನದ ಬಗ್ಗೆ ಅರಿವು ಮೂಡಿಸಲು ಕೌನ್ ಬನೇಗಾ ಕರೋಡ್‌ ಪತಿ ಮಾದರಿಯಲ್ಲಿ ಕೌನ್‌ ಬನೇಗಾ ಗಣಿತಾಧಿಪತಿ, ಕೌನ್‌ ಬನೇಗಾ ಶತಾಧಿಪತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಸಚಿವರು ಸೂಚನೆ ನೀಡಿದ್ದಾರೆ. ಶಾಲಾ ಹಂತದಲ್ಲಿ ವಿಷಯ ಪರೀಕ್ಷಕರಿಗೆ ಜಾವಾಬ್ದಾರಿ ನೀಡಿ ಗುರಿ ನಿಗದಿಪಡಿಸುವಂತೆಯೂ ಅವರು ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಇದಕ್ಕೂ ಮೊದಲು ಅವರು, ಕಳೆದ ಸಾಲಿನ ಪರೀಕ್ಷೆಯಲ್ಲಿ ಜಿಲ್ಲೆಯಲ್ಲೇ ಅತಿ ಹೆಚ್ಚು ಫಲಿತಾಂಶ ಬಂದಿದ್ದ ಹನೂರು ಶೈಕ್ಷಣಿಕ ವಲಯ ಹಾಗೂ ಕಡಿಮೆ ಫಲಿತಾಂಶ ದಾಖಲಿಸಿದ್ದ ಗುಂಡ್ಲುಪೇಟೆ ವಲಯಗಳಲ್ಲಿ ಶಿಕ್ಷಣದ ಸ್ಥಿತಿಗತಿಯ ಬಗ್ಗೆ ಹಾಗೂ ಈ ವರ್ಷ ಫಲಿತಾಂಶ ಉತ್ತಮಪಡಿಸಲು ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಬಗ್ಗೆಯೂ ಮಾಹಿತಿ ಪಡೆದಿದ್ದರು.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಜುನಾಥ್‌ ಪಿ. ಅವರು, ‘ಕಳೆದ ವರ್ಷದ ಫಲಿತಾಂಶದ ವಿಶ್ಲೇಷಣೆಯನ್ನು ಈಗಾಗಲೇ ನಾವು ಮಾಡಿದ್ದೇವೆ. ಎಲ್ಲಿ ಏನು ತಪ್ಪಾಗಿದೆ ಎಂಬುದೂ ಗೊತ್ತಾಗಿದೆ. ಪ್ರೌಢ ಶಿಕ್ಷಕರ ಸಭೆಯನ್ನೂ ಹಮ್ಮಿಕೊಳ್ಳಲಾಗಿದೆ. ಶಿಕ್ಷಕರಿಗಾಗಿ ವಿಷಯವಾರು ಕಾರ್ಯಾಗಾರಗಳನ್ನು ನಡೆಸಲಾಗುತ್ತಿದೆ’ ಎಂದು ಹೇಳಿದರು. 

‘ಈ ವರ್ಷ 10ರೊಳಗೆ ಸ್ಥಾನ ಪಡೆಯುವ ಗುರಿ ಹೊಂದಲಾಗಿದ್ದು, ಅದಕ್ಕಾಗಿ ವಿಶೇಷ ಕಾಳಜಿ ಇಟ್ಟುಕೊಂಡು ಕಾರ್ಯನಿರ್ವಹಿಸಲಾಗುತ್ತದೆ. ಸಚಿವರ ಸೂಚನೆಗಳನ್ನೂ ಪಾಲಿಸುತ್ತೇವೆ’ ಎಂದು ಅವರು ಹೇಳಿದರು. 

ಮನೋಸ್ಥೈರ್ಯ ತುಂಬಲು ಸಲಹೆ

ಜಿಲ್ಲೆಯ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ವಿಷಯ ಪರೀಕ್ಷಕರು ಮುಂದಿನ ನಾಲ್ಕು ತಿಂಗಳ ಕಾಲ ವ್ರತದಂತೆ ಕಾರ್ಯನಿರ್ವಹಿಸಬೇಕು ಎಂದೂ ಸುರೇಶ್‌ ಕುಮಾರ್‌ ಅವರು ಕರೆ ನೀಡಿದ್ದಾರೆ.

‘ಈ ಅವಧಿಯಲ್ಲಿ ಶಾಲೆಗಳಿಗೆ ಭೇಟಿ ನೀಡಿ 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳೊಡನೆ ಸಂವಾದ ನಡೆಸಬೇಕು. ಅವರಿಗೆ ಅಗತ್ಯ ಮಾರ್ಗದರ್ಶನ ನೀಡಿ ಮನೋಸ್ಥೈರ್ಯ ತುಂಬ‌ಬೇಕು’ ಎಂದು ಸೂಚನೆ ನೀಡಿದ್ದಾರೆ. 

ಮಕ್ಕಳಲ್ಲಿ ಮನೋಸ್ಥೈರ್ಯ ತುಂಬುವಂತಹ ವಿನೂತನ ಕಾರ್ಯಕ್ರಮಗಳನ್ನೂ ನಡೆಸುವಂತೆಯೂ ಸಲಹೆ ನೀಡಿದ್ದಾರೆ. 

ಸ್ವಯಂಸೇವಾ ಸಂಸ್ಥೆಗಳ (ಎನ್‌ಜಿಒ) ನೆರವು ಪಡೆದುಕೊಂಡು ವಿದ್ಯಾರ್ಥಿಗಳಿಗಾಗಿ ಮನೋವಿಕಸನ ಕಾರ್ಯಕ್ರಮಗಳನ್ನು ನಡೆಸುವಂತೆಯೂ ಸುರೇಶ್‌ ಕುಮಾರ್‌ ನಿರ್ದೇಶನ ನೀಡಿದ್ದಾರೆ. 

ಈ ಬಾರಿ ಏರುವುದೇ ಸ್ಥಾನ? 

ಕಳೆದ ವರ್ಷದ (2018–19) ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆ ತಕ್ಕಮಟ್ಟಿನ ಸಾಧನೆ ಮಾಡಿತ್ತು. ಶೇ 80.58ರಷ್ಟು ಫಲಿತಾಂಶ ದಾಖಲಿಸುವ ಮೂಲಕ ರಾಜ್ಯಕ್ಕೆ 15ನೇ ಸ್ಥಾನ ಗಳಿಸಿತ್ತು. 

2017–18ನೇ ಸಾಲಿನಲ್ಲಿ ಜಿಲ್ಲೆಯ ಸಾಧನೆ ಕಳಪೆಯಾಗಿತ್ತು. ರಾಜ್ಯದಲ್ಲಿ 24ನೇ ಸ್ಥಾನಗಳಿಸಿತ್ತು. ಆ ವರ್ಷ ಶೇ 74.46ರಷ್ಟು ಫಲಿತಾಂಶ ದಾಖಲಾಗಿತ್ತು. 

ಈ ಬಾರಿ ಇನ್ನಷ್ಟು ಉತ್ತಮ ಸ್ಥಾನಗಳನ್ನು ಗಳಿಸುವ ನಿರೀಕ್ಷೆಯಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು ಇದ್ದಾರೆ. 

ಪ್ರತಿಕ್ರಿಯಿಸಿ (+)