ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತನಲ್ಲಿ ‘ಕಾಂತಿ’ ಮೂಡಿಸುವುದೇ ಸೂರ್ಯಕಾಂತಿ?

ಬೆಳೆ ಪ್ರದೇಶ ವಿಸ್ತಾರ, ಬೆಳೆಗಾರರಲ್ಲಿ ಉತ್ತಮ ಇಳುವರಿ, ಬೆಲೆಯ ನಿರೀಕ್ಷೆ
Last Updated 16 ಜುಲೈ 2022, 8:10 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಸೂರ್ಯಕಾಂತಿ ಬೆಳೆಯುವ ಪ್ರದೇಶ ವಿಸ್ತಾರವಾಗುತ್ತಿದ್ದು, ಮಾರುಕಟ್ಟೆಯಲ್ಲಿ ಸೂರ್ಯಕಾಂತಿ ಅಡುಗೆ ಎಣ್ಣೆ ಬೆಲೆ ಹೆಚ್ಚಿರುವುದರಿಂದ ಈ ಬಾರಿ ಸೂರ್ಯಕಾಂತಿಗೆ ಹೆಚ್ಚಿನ ಬೆಲೆ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ರೈತರಿದ್ದಾರೆ.

ಮಳೆ ಚೆನ್ನಾಗಿ ಆಗಿರುವುದರಿಂದ ಉತ್ತಮ ಇಳುವರಿಯೂ ಬರಬಹುದು ಎಂಬ ಲೆಕ್ಕಾಚಾರದಲ್ಲೂ ಅವರಿದ್ದಾರೆ.

ಜಿಲ್ಲೆಯಲ್ಲಿ ಸಾಮಾನ್ಯವಾಗಿ 12,450 ಹೆಕ್ಟೇರ್‌ ಪ್ರದೇಶದಲ್ಲಿ ಸೂರ್ಯಕಾಂತಿ ಬಿತ್ತನೆ ಮಾಡಲಾಗುತ್ತದೆ. ಆದರೆ ಎರಡು ಮೂರು ವರ್ಷಗಳಿಂದ ಸೂರ್ಯ ಕಾಂತಿ ಬೆಳೆ ಪ್ರದೇಶ ವಿಸ್ತರಣೆಯಾಗಿದೆ. 2021ರಲ್ಲಿ 16 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ರೈತರು ಸೂರ್ಯಕಾಂತಿ ಬಿತ್ತನೆ ಮಾಡಿದ್ದರು. ಈ ಬಾರಿ ಈ ವ್ಯಾಪ್ತಿ ₹16,696 ಹೆಕ್ಟೇರ್‌ಗೆ ಹಿಗ್ಗಿದೆ.

ಬಹುತೇಕ ರೈತರು ಮಳೆಯನ್ನು ಆಶ್ರಯಿಸಿ ಸೂರ್ಯಕಾಂತಿ ಬೆಳೆಯುತ್ತಿದ್ದಾರೆ. ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಅತಿ ಹೆಚ್ಚು ಅಂದರೆ 14,589 ಪ್ರದೇಶದಲ್ಲಿ ಸೂರ್ಯಕಾಂತಿ ಬಿತ್ತನೆ ಮಾಡಲಾಗಿದೆ. ಚಾಮರಾಜನಗರ ತಾಲ್ಲೂಕಿನಲ್ಲಿ 1,700 ಹೆಕ್ಟೇರ್‌ ವ್ಯಾಪ್ತಿಯಲ್ಲಿ ರೈತರು ಬಿತ್ತನೆ ಮಾಡಿದ್ದಾರೆ.

ಮಾರುಕಟ್ಟೆಯಲ್ಲಿ ಸೂರ್ಯಕಾಂತಿ ಅಡುಗೆ ಎಣ್ಣೆಗೆ ಬೆಲೆ ಹೆಚ್ಚಾಗುತ್ತಿದ್ದಂತೆಯೇ, ಸೂರ್ಯಕಾಂತಿ ಬಿತ್ತನೆ ಬೀಜದ ಬೆಲೆಯೂ ಹೆಚ್ಚಿತ್ತು. ಕೃಷಿ ಇಲಾಖೆ ಸಬ್ಸಿಡಿ ದರದಲ್ಲಿ ಪೂರೈಕೆ ಮಾಡಲು ಆರಂಭಿಸಲು ನಂತರ ಬೆಲೆ ಕಡಿಮೆಯಾಗಿತ್ತು. ಹಾಗಿದ್ದರೂ ಸಾಕಷ್ಟು ರೈತರಿಗೆ ಸಬ್ಸಿಡಿ ಬೆಲೆಯಲ್ಲಿ ಸಿಕ್ಕಿಲ್ಲ. ಖಾಸಗಿಯವರಿಂದಲೇ ಖರೀದಿಸಿ ಬಿತ್ತನೆ ಮಾಡಿದ್ದಾರೆ.

ಫಸಲು ಚೆನ್ನಾಗಿ ಬೆಳೆದಿದೆ. ಒಂದು ತಿಂಗಳಲ್ಲಿ ಸೂರ್ಯಕಾಂತಿ ಕಟಾವಿಗೆ ಬರಲಿದ್ದು, ಉತ್ತಮ ಬೆಲೆಯ ಸಿಗಬಹುದು ಎಂಬ ನಿರೀಕ್ಷೆ ರೈತರದ್ದು.

‘ನಾನು ಎರಡು ಎಕರೆಯಲ್ಲಿ ಸೂರ್ಯಕಾಂತಿ ಬಿತ್ತನೆ ಮಾಡಿದ್ದೇನೆ. ಸಬ್ಸಿಡಿ ದರದ ಬಿತ್ತನೆ ಬೀಜ ಸಿಕ್ಕಿಲ್ಲ. ಖಾಸಗಿಯವರಿಂದ ಖರೀದಿಸಿದ್ದೆ. ಇನ್ನು ಒಂದೂವರೆ ತಿಂಗಳಲ್ಲಿ ಬೆಳೆ ಕಟಾವಿಗೆ ಬರಲಿದೆ’ ಎಂದು ಗುಂಡ್ಲುಪೇಟೆ ಮಗುವಿನಹಳ್ಳಿಯ ರೈತ ಚಿನ್ನಸ್ವಾಮಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಳೆದ ವರ್ಷ ಕ್ವಿಂಟಲ್‌ ಸೂರ್ಯಕಾಂತಿ ಬೀಜಕ್ಕೆ ಮಾರುಕಟ್ಟೆಯಲ್ಲಿ ₹7,000 ಬೆಲೆ ಇತ್ತು. ಸದ್ಯ ಈಗಲೂ ಅದೇ ಬೆಲೆ ಇದೆ. ಫಸಲು ಕೈ ಸೇರಿದ ಬಳಿಕ ಎಷ್ಟು ಬೆಲೆ ಸಿಗುತ್ತದೆ ಎಂಬುದು ಗೊತ್ತಿಲ್ಲ. ಈ ಬಾರಿ ಬಿತ್ತನೆ ಬೀಜಕ್ಕೇ ₹5000 ಖರ್ಚು ಮಾಡಿದ್ದೇನೆ. ಗೊಬ್ಬರಕ್ಕೆ ₹10 ಸಾವಿರದಷ್ಟಾಗಿದೆ. ಕೂಲಿಗಳ ಸಂಬಳ ಸೇರಿದಂತೆ ಎಕರೆಗೆ ₹25 ಸಾವಿರದಷ್ಟು ಖರ್ಚಾಗಿದೆ’ ಎಂದು ಅವರು ಮಾಹಿತಿ ನೀಡಿದರು.

‘ಸಂಸ್ಕರಣಾ ವ್ಯವಸ್ಥೆ ಇಲ್ಲಿಲ್ಲ’

‘ನಮ್ಮಲ್ಲಿ ಸೂರ್ಯಕಾಂತಿಯನ್ನು ಬೆಳೆಯುತ್ತಾರೆ. ಆದರೆ, ಅದರ ಬೀಜವನ್ನು ಸಂಸ್ಕರಣೆ ಮಾಡುವ ವ್ಯವಸ್ಥೆ ಇಲ್ಲ. ಘಟಕಗಳನ್ನು ಸ್ಥಾಪನೆ ಮಾಡಲು ಬರುವವರಿಗೆ ಇಲಾಖೆಯು ವಿವಿಧ ಯೋಜನೆಗಳ ಅಡಿಯಲ್ಲಿ ಸೌಲಭ್ಯ ಒದಗಿಸಿಕೊಡಲಿದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ಮಧುಸೂದನ್‌ ಹೇಳಿದರು.

‘ಜಿಲ್ಲೆಯಲ್ಲಿ ರಸಗೊಬ್ಬರದ ಕೊರತೆ ಇಲ್ಲ. ರೈತರ ಬೇಡಿಕೆಗೆ ತಕ್ಕಂತೆ ಪೂರೈಸಲಾಗುತ್ತಿದೆ. ರೈತರು ಡಿಎಪಿ ಬದಲಿಗೆ ಸಂಯುಕ್ತ (ಎನ್‌ಪಿಕೆ) ಗೊಬ್ಬರಗಳನ್ನು ಬಳಸುವುದು ಉತ್ತಮ. ಡಿಎಪಿಯಲ್ಲಿ ಪೊಟ್ಯಾಶ್‌ ಇರುವುದಿಲ್ಲ. ಪೊಟ್ಯಾಶ್‌ನಲ್ಲಿ ರೋಗ ನಿರೋಧಕ ಶಕ್ತಿ, ಪೋಷಕಾಂಶಗಳು ಹೆಚ್ಚಿರುತ್ತವೆ. ಬಿತ್ತನೆಯ ಬಳಿಕ ಪೈರುಗಳು ಸದೃಢವಾಗಿ ಬೆಳೆಯಲು ಇದರ ಅವಶ್ಯಕತೆ ಇದೆ. ಹಾಗಾಗಿ ರೈತರು ಸಂಯುಕ್ತ ಗೊಬ್ಬರಗಳನ್ನು ಬಳಸಬೇಕು ಎಂದು ಅವರು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT