ಶುಕ್ರವಾರ, ಮೇ 20, 2022
19 °C
ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ಲಭ್ಯ, ರೈತರಿಗೆ ಹೊರೆ

ಸೂರ್ಯಕಾಂತಿ; ಬಿತ್ತನೆ ಬೀಜ ಬೆಲೆ ದುಪ್ಪಟ್ಟು

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆಯ ಬೆಲೆಯಲ್ಲಾಗುತ್ತಿರುವ ಹೆಚ್ಚಳದ ಪರಿಣಾಮವಾಗಿ ಈ ವರ್ಷ ಸೂರ್ಯಕಾಂತಿ ಬಿತ್ತನೆ ಬೀಜದ ಬೆಲೆ ಗಣನೀಯವಾಗಿ ಏರಿಕೆ ಕಂಡಿದೆ.

ಕೃಷಿ ಇಲಾಖೆಯು ರೈತ ಸಂಪರ್ಕ ಕೇಂದ್ರಗಳ ಮೂಲಕ ಸಬ್ಸಿಡಿ ದರದಲ್ಲಿ ವಿತರಿಸುವ ಬೀಜದ ಬೆಲೆ ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿ ಬಹುತೇಕ ಎರಡು ಪಟ್ಟು ಹೆಚ್ಚಾಗಿದೆ.

ಎರಡು ಕೆಜಿ ಪ್ಯಾಕೆಟ್‌ಗೆ ₹1,790 ಬೆಲೆ ನಿಗದಿ ಪಡಿಸಲಾಗಿದೆ (ಕೆಜಿಗೆ ₹895). ಕಳೆದ ವರ್ಷ ₹485 ಇತ್ತು. ಅಂದರೆ, ಈ ವರ್ಷ ಕೆಜಿಗೆ ₹410 ಹೆಚ್ಚಿದಂತಾಗಿದೆ.

ಇದು ಸಬ್ಸಿಡಿ ರಹಿತ ಬೆಲೆ. ಕೃಷಿ ಇಲಾಖೆಯು ಸಾಮಾನ್ಯ ರೈತರಿಗೆ ಕೆಜಿಗೆ ₹80 ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೈತರಿಗೆ ₹120 ಸಬ್ಸಿಡಿ ನೀಡುತ್ತದೆ.

ಸಾಮಾನ್ಯ ವರ್ಗದ ರೈತರು ಎರಡು ಕೆಜಿ ಬೀಜಕ್ಕೆ ₹1,630 ಹಾಗೂ ಪರಿಶಿಷ್ಟ, ಪರಿಶಿಷ್ಟ ಪಂಗಡಗಳಿಗೆ ಸೇರಿದ ರೈತರು ₹1,550 ಪಾವತಿಸಬೇಕಾಗಿದೆ.

ಜಿಲ್ಲೆಯಲ್ಲಿ ಕೃಷಿ ಇಲಾಖೆಯು ಜಿಕೆ 2002 ತಳಿಯ ಬೀಜವನ್ನು ವಿತರಿಸುತ್ತಿದೆ. ಹಲವು ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜ ಲಭ್ಯವಿದ್ದು, ಗುಂಡ್ಲುಪೇಟೆ ತಾಲ್ಲೂಕಿನ ಬೇಗೂರು ಸೇರಿದಂತೆ ಕೆಲವು ಕಡೆಗಳಲ್ಲಿ ರೈತರಿಗೆ ವಿತರಣೆ ಆರಂಭವಾಗಿದೆ.

ರೈತರಿಗೆ ಹೊರೆ: ‘ಕಳೆದ ಬಾರಿ ಬಿತ್ತನೆ ಬೀಜದ ಬೆಲೆ ಕಡಿಮೆ ಇತ್ತು. ಈ ಸಲ ಸರ್ಕಾರ ನಿಗದಿ ಮಾಡಿರುವ ದರ ಹೆಚ್ಚಾಗಿರುವುದರಿಂದ ಇನ್ನಷ್ಟು ಹೊರೆ ಹಾಕಿದಂತಾಗಿದೆ’ ಎಂದು ರೈತರು ಆರೋಪಿಸಿದ್ದಾರೆ. 

‘ಬೇಗೂರು ರೈತ ಸಂಪರ್ಕ ಕೇಂದ್ರದಲ್ಲಿ ಸೋಮವಾರ ಎರಡು ಪ್ಯಾಕೆಟ್‌ (ನಾಲ್ಕು ಕೆಜಿ) ಬೀಜ ಖರೀದಿಸಿದೆ. ಸಬ್ಸಿಡಿ ಮೊತ್ತ ಕಳೆದು ಒಂದು ಪ್ಯಾಕೆಟ್‌ಗೆ ₹1550 ಪಾವತಿಸಿದ್ದೇನೆ. ಕಳೆದ ವರ್ಷ ₹800 ಕೊಟ್ಟಿದೆ. ಬಹುಪಾಲು ಎರಡು ಪಟ್ಟು ಹೆಚ್ಚು ಹಣ ಕೊಟ್ಟಿದ್ದೇನೆ’ ಎಂದು ಗುಂಡ್ಲುಪೇಟೆ ತಾಲ್ಲೂಕಿನ ಬೇಗೂರು ರೈತ ಬಸವಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಿತ್ತನೆ ಬೀಜಕ್ಕೆ ಹೆಚ್ಚು ವೆಚ್ಚವಾಗಿದೆ. ಹೀಗೆ ಬೆಲೆ ಹೆಚ್ಚು ಮಾಡಿದರೆ ಸಣ್ಣ ರೈತರು ಕೃಷಿ ಮಾಡುವುದಾದರೂ ಹೇಗೆ? ಇಳುವರಿ ಚೆನ್ನಾಗಿ ಬಂದರೆ ಸರಿ, ಇಲ್ಲದಿದ್ದರೆ ನಷ್ಟ ಅನುಭವಿಸಬೇಕಾಗುತ್ತದೆ’ ಎಂದು ಹೇಳಿದರು. 

ಎಂಆರ್‌ಪಿಗಿಂತ ಹೆಚ್ಚು ಪಡೆಯುವಂತಿಲ್ಲ: ಖಾಸಗಿ ಅಂಗಡಿಗಳಲ್ಲಿ ಹೈಬ್ರಿಡ್‌ ಸೂರ್ಯಕಾಂತಿ ಬೀಜವನ್ನು ಕೆಜಿಗೆ ₹1,200ರಂತೆ (ಎರಡು ಕೆಜಿ ಪ್ಯಾಕೆಟ್‌ಗೆ ₹2,400) ಮಾರಾಟ ಮಾಡುವುದು ಇತ್ತೀಚೆಗೆ ವರದಿಯಾಗಿತ್ತು. 

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಎಚ್‌.ಟಿ.ಚಂದ್ರಕಲಾ, ‘ಅಡುಗೆ ಎಣ್ಣೆ ಬೆಲೆ ಹೆಚ್ಚಳವಾದ ಕಾರಣದಿಂದ ಬಿತ್ತನೆ ಬೀಜದ ಬೆಲೆ ಏರಿಕೆಯಾಗಿರುವ ಸಾಧ್ಯತೆ ಇದೆ. ಖಾಸಗಿಯವರು ಎಂಆರ್‌ಪಿಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವಂತಿಲ್ಲ ಎಂದು ಸುತ್ತೋಲೆ ಹೊರಡಿಸಲಾಗಿದೆ. ಇಲಾಖೆಯ ಸಹಾಯಕ ನಿರ್ದೇಶಕರು ಮಳಿಗೆಗಳಿಗೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ’ ಎಂದರು.

1,200 ಕ್ವಿಂಟಲ್‌ ದಾಸ್ತಾನು

ಮಳೆ ಬರಲು ಆರಂಭವಾಗುತ್ತಿದ್ದಂತೆ ರೈತರು ಮುಂಗಾರು ಪೂರ್ವ ಬಿತ್ತನೆಗೆ ಸಿದ್ಧತೆ ನಡೆಸುತ್ತಿದ್ದು, ಕೃಷಿ ಇಲಾಖೆ ರೈತ ಸಂಪರ್ಕ ಕೇಂದ್ರಗಳ ಮೂಲಕ ಬಿತ್ತನೆ ಬೀಜ ವಿತರಣೆಗೆ ಕ್ರಮ ಕೈಗೊಂಡಿದೆ. 

400 ಕ್ವಿಂಟಲ್‌ ಸೂರ್ಯಕಾಂತಿ ಬಿತ್ತನೆ ಬೀಜ ಸೇರಿದಂತೆ ಉದ್ದು, ಹೆಸರು, ಅಲಸಂದೆ, ಜೋಳ ಬೆಳೆಗಳ ಬಿತ್ತನೆ ಬೀಜಗಳನ್ನು ಕೃಷಿ ಇಲಾಖೆ ದಾಸ್ತಾನು ಮಾಡಿದೆ‌. 

‘ಸದ್ಯ ನಮ್ಮಲ್ಲಿ 1,200 ಕ್ವಿಂಟಲ್‌ಗಳಷ್ಟು ಬಿತ್ತನೆ ಬೀಜ ದಾಸ್ತಾನು ಇದೆ. ಇನ್ನಷ್ಟು ಬಿತ್ತನೆ ಬೀಜ ಬರಲಿದೆ’ ಎಂದು ಚಂದ್ರಕಲಾ ಹೇಳಿದರು.

‘ರೈತರು ಖಾಸಗಿ ಅಂಗಡಿಗಳಲ್ಲಿ ಎಂಆರ್‌ಪಿಗಿಂತ ಹೆಚ್ಚು ಬೆಲೆ ಬಿತ್ತನೆ ಬೀಜ ಖರೀದಿಸಬಾರದು. ರೈತ ಸಂಪರ್ಕ ಕೇಂದ್ರಗಳಲ್ಲಿ ಸಬ್ಸಿಡಿ ಬೆಲೆಗೆ ಖರೀದಿಸಲು ಗಮನ ಹರಿಸಬೇಕು’ ಎಂದರು.

--

ಮುಂಗಾರು ಪೂರ್ವ ಬಿತ್ತನೆಗಾಗಿ ಹೆಸರು, ಉದ್ದು, ಅಲಸಂದೆ, ಜೋಳ, ಸೂರ್ಯಕಾಂತಿ ಬಿತ್ತನೆ ಬೀಜ ರೈತ ಸಂಪರ್ಕ ಕೇಂದ್ರಗಳಲ್ಲಿ ಲಭ್ಯವಿದೆ
ಎಚ್‌.ಟಿ.ಚಂದ್ರಕಲಾ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು