ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಗವಂತನ ಸೇವೆಯಿಂದ ಸಮರ್ಪಣಾ ಭಾವ‌: ಸುತ್ತೂರು ಶ್ರೀ

ಕನಕಗಿರಿ ಅತಿಶಯ ಮಹೋತ್ಸವ: ಮಹಾಮಸ್ತಕಾಭಿಷೇಕ ಅಂಗವಾಗಿ ಧಾರ್ಮಿಕ ಸಭೆ
Last Updated 1 ಮೇ 2022, 16:14 IST
ಅಕ್ಷರ ಗಾತ್ರ

ಚಾಮರಾಜನಗರ: ‘ಪ್ರತಿಯೊಂದು ಕೆಲಸವನ್ನೂ ಭಗವಂತನ ಸೇವೆ ಎಂದು ಮಾಡಿದರೆ ನಮಗೆ ಸಮರ್ಪಣಾ ಭಾವ ಸಿಗುತ್ತದೆ. ದೇವರ ಕೆಲಸ ಮಾಡಿದರೆ ಎಲ್ಲ ಕಾರ್ಯಗಳೂ ಕೈಗೂಡುತ್ತವೆ’ ಎಂದು ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಅವರು ಭಾನುವಾರ ತಾಲ್ಲೂಕಿನ ಕನಕಗಿರಿಯಲ್ಲಿ ಹೇಳಿದರು.

ಕನಕಗಿರಿ ಅತಿಶಯ ಮಹೋತ್ಸವದ ಅಂಗವಾಗಿ ಬಾಹುಬಲಿ ಸ್ವಾಮಿಗೆ ಮಹಾಮಸ್ತಕಾಭಿಷೇಕಕ್ಕೆ ಚಾಲನೆ ನೀಡಿದ ನಂತರ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಅವರು, ‘ಗುರುಗಳು ಮತ್ತು ಶಿಷ್ಯರು ಒಂದೇ ನಾಣ್ಯದ ಎರಡು ಮುಖಗಳು ಇದ್ದಂತೆ. ಇಬ್ಬರೂ ಒಟ್ಟಾಗಿ ಕೆಲಸ ಮಾಡಿದರೆ ಮಾತ್ರ ಕೆಲಸಗಳು ನಡೆಯುತ್ತವೆ’ ಎಂದರು.

‘ಬಾಹುಬಲಿ ಸ್ವಾಮಿಗೆ ಮಹಾಮಸ್ತಕಾಭಿಷೇಕ ಮಾಡುವಂತಹ ಪುಣ್ಯ ಕಾರ್ಯ ನಮಗೆ ಸಿಕ್ಕಿದೆ. ವಾತಾವರಣದಲ್ಲಿ ಬಿಸಿಲಿನ ತಾಪ ಹೆಚ್ಚಿದೆ. ನಮಗೆ ಕಷ್ಟವಾಗುತ್ತಿದೆ. ಆದರೆ, ಬಾಹುಬಲಿ ವರ್ಷ ಪೂರ್ತಿ ದಿನದ 24 ಗಂಟೆಗಳ ಕಾಲವೂ ಬಿಸಿಲು, ಮಳೆ ಲೆಕ್ಕಿಸಿದೆ ನಿಲ್ಲುತ್ತಾನೆ. ಎಲ್ಲವನ್ನೂ ಸಹಿಸಿಕೊಳ್ಳುವ ಸಾಮರ್ಥ್ಯ ಇದ್ದುದಕ್ಕೆ ಅವನು ಬಾಹುಬಲಿಯಾಗಿದ್ದಾನೆ. ತ್ಯಾಗದಿಂದ ಜಗತ್ತನ್ನೇ ಗೆದ್ದ ಕಾರಣಕ್ಕೆ ಅವನಿಗೆ ಮಹಾಮಸ್ತಕಾಭಿಷೇಕ ನಡೆಯುತ್ತಿದೆ’ ಎಂದರು.

‘ಚಕ್ರವರ್ತಿ ಆಗುವ ಎಲ್ಲ ಸಾಮರ್ಥ್ಯ ಇದ್ದರೂ ಬಾಹುಬಲಿ ಅದನ್ನೆಲ್ಲ ತ್ಯಾಗ ಮಾಡಿದ್ದಾನೆ. ವೈರಾಗ್ಯ ಯಾವಾಗ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ವೈರಾಗ್ಯ ಬರುವುದು ಕೂಡ ಪುಣ್ಯ ವಿಶೇಷ’ ಎಂದರು.

‘ಕನಕಗಿರಿ ಅತ್ಯಂತ ಪವಿತ್ರ ಕ್ಷೇತ್ರ. 1500 ವರ್ಷಗಳ ಹಿಂದೆ ಆಚಾರ್ಯ ಪೂಜ್ಯಪಾದರು ಅನುಷ್ಠಾನ ಮಾಡಿದ ಕ್ಷೇತ್ರ ಇದು. ತಪಸ್ವಿಗಳು ಲೋಕಕಲ್ಯಾಣಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಿ ನೆಲೆ ನಿಂತ ಸ್ಥಳಗಳೆಲ್ಲ ಪುಣ್ಯಕ್ಷೇತ್ರಗಳಾಗಿವೆ’ ಎಂದು ಸುತ್ತೂರು ಶ್ರೀಗಳು ಬಣ್ಣಿಸಿದರು.

ಕ್ಷೇತ್ರದ ಭುವನಕೀರ್ತಿ ಸ್ವಾಮೀಜಿ ಅವರ ಕಾರ್ಯಗಳು, ಸಾಧನೆಗಳನ್ನು ಶ್ಲಾಘಿಸಿದ ಶ್ರೀಗಳು, ‘ಅವರು ಸ್ವಾಮೀಜಿ ಆಗಿದ್ದ ಅವಧಿ ಕಡಿಮೆ. ಆದರೆ ಸಾಧನೆ ಹೆಚ್ಚು. ಜನರ ಮನಸ್ಸಿನಿಂದ ಮರೆಯಾಗುತ್ತಿದ್ದ ಕನಕಗಿರಿ ಕ್ಷೇತ್ರವನ್ನು ಮತ್ತೆ ಉದ್ದೀಪನೆಗೊಳಿಸಿದ್ದಾರೆ. ಈ ಕ್ಷೇತ್ರ ಮಾತ್ರ ಅಲ್ಲ, ಕರ್ನಾಟಕದ ವಿವಿಧ ಕಡೆಗಳಲ್ಲಿ 50ಕ್ಕೂ ಹೆಚ್ಚು ಬಸದಿ, ಜಿಲ ಆಲಯಗಳ ಅಭಿವೃದ್ಧಿಗೆ ಕಾರಣರಾಗಿದ್ದಾರೆ’ ಎಂದರು.

ಕ್ಷೇತ್ರದ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಮಾತನಾಡಿ, ‘ಕ್ಷೇತ್ರದಲ್ಲಿ ಆರು ವರ್ಷಗಳಿಗೊಮ್ಮೆ ಮಹಾಮಸ್ತಾಭಿಷೇಕ ನಡೆಯುತ್ತದೆ. ಶ್ರವಣಬೆಳಗೊಳದಲ್ಲಿ ಬೆಟ್ಟದ ತುದಿಯಲ್ಲಿ ಬಾಹುಬಲಿ ಮೂರ್ತಿ ಇದೆ. ಅಲ್ಲಿ 12 ವರ್ಷಗಳಿಗೊಮ್ಮೆ ಗೊಮ್ಮಟೇಶ್ವರನಿಗೆ ಮಹಾ ಮಸ್ತಕಾಭಿಷೇಕ ನಡೆಯುತ್ತದೆ. ಅದನ್ನು ಪೂರ್ಣ ಕುಂಭ ಮಸ್ತಕಾಭಿಷೇಕ ಎನ್ನಲಾಗುತ್ತದೆ. ನಮ್ಮಲ್ಲಿ ಬೆಟ್ಟದ ಮಧ್ಯದಲ್ಲಿ ಬಾಹುಬಲಿ ಮೂರ್ತಿ ಇದೆ. ಹಾಗಾಗಿ, ಆರು ವರ್ಷಗಳಿಗೊಮ್ಮೆ ಮಹಾ ಮಜ್ಜನ ನಡೆಯುತ್ತದೆ. ಹಾಗಾಗಿ, ಅರ್ಧ ಕುಂಭದ ರೀತಿಯಲ್ಲಿ ನೆರವೇರಿಸಲಾಗುತ್ತದೆ’ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ ಅವರು ಮಾತನಾಡಿ, ‘ಮಾನವನ ಒಳಿತಿಗಾಗಿ ಎಲ್ಲ ಧರ್ಮಗಳು ಹುಟ್ಟಿವೆ. ಎಲ್ಲವೂ ಸಮಾನತೆ, ಅಹಿಂಸೆ, ಕರುಣೆಯನ್ನು ಪ್ರತಿಪಾದಿಸುತ್ತವೆ. ಆದರೆ, ಧರ್ಮದ ತತ್ವ ಸಿದ್ಧಾಂತಗಳ ಮೇಲೆ ನಡೆಯಬೇಕಾದ ಮನುಷ್ಯರು ಮೇಲು ಕೀಳು ಎಂಬ ತಾರತಮ್ಯ ನಡೆಸುತ್ತಿದ್ದಾರೆ. ಅಶಾಂತಿ ಸೃಷ್ಟಿಸುತ್ತಿದ್ದಾರೆ’ ಎಂದರು.

‘ಪ್ರೀತಿ, ಕರುಣೆ, ಅಹಿಂಸಾ ತತ್ವದ ಮೇಲೆ ನಿಂತಿರುವ ಜೈನ ಧರ್ಮ ಮೊದಲು ಅಲ್ಪಸಂಖ್ಯಾತ ಧರ್ಮವಾಗಿರಲಿಲ್ಲ. 2013ರಲ್ಲಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರು ಈ ಧರ್ಮವನ್ನು ಅಲ್ಪಸಂಖ್ಯಾತರ ಪಟ್ಟಿಗೆ ಸೇರ್ಪಡೆಗೊಳಿಸಿದರು. ಇದರಿಂದ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಅನುಕೂಲವಾಗಿದೆ‌’ ಎಂದರು.

‘ಪವಿತ್ರವಾದ ಕನಕಗಿರಿ ಕ್ಷೇತ್ರದ ಅಭಿವೃದ್ಧಿಯ ನಿಟ್ಟಿನಲ್ಲಿ ನಾನು ಸಂಸದನಾಗಿದ್ದಾಗ ಕೇಂದ್ರ ಪ್ರವಾಸೋದ್ಯಮ ಸಚಿವ ಆಸ್ಕರ್‌ ಫರ್ನಾಂಡಿಸ್‌ ಅವರು, ಸಾಕಷ್ಟು ಸೌಲಭ್ಯಗಳನ್ನು ಕೊಟ್ಟಿದ್ದರು. ಇನ್ನೂ ಹೆಚ್ಚಿನ ಅಭಿವೃದ್ಧಿಯಾಗಬೇಕಿದೆ. ಅದಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದರು.

ಅರಿಹಂತಗಿರಿಯ ಧವಳಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಮಾತನಾಡಿದರು.

ಕನಕಗಿರಿ ಕ್ಷೇತ್ರದಲ್ಲಿ ಬಾಹುಬಲಿ ಮೂರ್ತಿಯ ನಿರ್ಮಾತೃಗಳಾದ ಮೈಸೂರಿನ ವಿಶಾಲೇಂದ್ರ ಹಾಗೂ ಮದನಾವಳಿ ದಂಪತಿಯನ್ನು ಇದೇ ಸಂದರ್ಭದಲ್ಲಿ ಸ್ವಾಮೀಜಿಗಳು ಗೌರವಿಸಿದರು.

ಚಾಮುಲ್‌ ನಿರ್ದೇಶಕ ರವಿಶಂಕರ್‌ ಇದ್ದರು.

‘ಧ್ಯಾನಕ್ಕೆ ಒಂದು ದಿನ ಆಗಲಿ’

’ಕ್ಷೇತ್ರದಲ್ಲಿ ಹೊಸದಾಗಿ ಧ್ಯಾನಮಂದಿರ ನಿರ್ಮಿಸಲಾಗಿದೆ. ಜೈನ ಕ್ಷೇತ್ರಗಳಲ್ಲಿ ಎಲ್ಲೂ ಧ್ಯಾನಕ್ಕೆ ವ್ಯವಸ್ಥೆ ಇಲ್ಲ. ಇಂತಹ ಪ್ರಯತ್ನ ಕನಕಗಿರಿಯಲ್ಲಿ ಆಗಿದೆ. ಧ್ಯಾನವು ಕೋಟಿ ಜಪಕ್ಕೆ ಸಮ ಎಂದು ಹೇಳಲಾಗುತ್ತದೆ. ಯೋಗದ ರೀತಿಯಲ್ಲಿ ಧ್ಯಾನವೂ ಭಾರತದ ಕೊಡುಗೆ. ಭಾರತದ ಪ್ರಯತ್ನದಿಂದ ಈಗ ಯೋಗ ಪ್ರವರ್ಧಮಾನಕ್ಕೆ ಬಂದು ಜಾಗತಿಕ ಮಟ್ಟದಲ್ಲಿ ಅದಕ್ಕೆ ಪ್ರತ್ಯೇಕ ಒಂದು ದಿನ ನಿಗದಿಯಾಗಿದೆ. ಅದೇ ರೀತಿ ಧ್ಯಾನಕ್ಕೂ ವರ್ಷದಲ್ಲಿ ಒಂದು ದಿನವನ್ನು ಮೀಸಲಿಡಬೇಕು. ಈ ಕಾರ್ಯವೂ ಭಾರತದಿಂದಲೇ ಆಗಬೇಕು’ ಎಂದು ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.

‘ಬಾಹುಬಲಿ ತೀರ್ಥಂಕರರಿಗೆ ಸಮ’

ಆಶೀರ್ವಚನ ನೀಡಿದ ಮುನಿಶ್ರೀ 108 ಅಮೋಘಕೀರ್ತಿ ಮಹಾರಾಜರು, ‘ಜೈನ ಧರ್ಮದಲ್ಲಿ ತೀರ್ಥಂಕರರಿಗಿಂತ ದೊಡ್ಡವರು ಇಲ್ಲ. ಆದರೆ, ಬಾಹುಬಲಿ ತೀರ್ಥಂಕರ ಅಲ್ಲದಿದ್ದರೂ, ಅವರಿಗೆ ಸಮನಾಗಿರುವವರು’ ಎಂದು ಬಣ್ಣಿಸಿದರು.

‘ಬಾಹುಬಲಿ ಮಹಾನ್‌ ತ್ಯಾಗಿ ಅವರಷ್ಟು ಸ್ಥಿರತೆ ಯಾರಿಗೂ ಇಲ್ಲ. ಕಲ್ಲಿನಂತೆ ಗಟ್ಟಿ ಅವರು. ಚಿನ್ನ ಬೆಳ್ಳಿ ಸೇರಿದಂತೆ ಎಲ್ಲ ಲೋಹಗಳು ಬಿಸಿಗೆ ಕರಗುತ್ತದೆ. ಆದರೆ, ಕಲ್ಲು ಕರಗದು. ಜೈನ ಧರ್ಮದಲ್ಲಿ ತೀರ್ಥಂಕರರು, ಹಲವು ರಾಜರು ಸಂಸಾರ ಆಡಳಿತವನ್ನು ತೊರೆದು, ಜೀವನದಲ್ಲಿ ಎಲ್ಲವನ್ನೂ ತ್ಯಾಗ ಮಾಡಿ ಮನಸ್ಸನ್ನು ಕಲ್ಲು ಮಾಡಿದರು’ ಎಂದರು.

‘ಬಾಹುಬಲಿಯು ಎಂಟು ಸಾವಿರ ಪತ್ನಿಯರನ್ನು ತೊರೆದು ಸನ್ಯಾಸಿಯಾದವರು. ಈ ರೀತಿಯ ಸಾಧನೆ ಯಾರಿಗೂ ಮಾಡಲು ಸಾಧ್ಯವಿಲ್ಲ. ಅವರಲ್ಲಿ ಎಷ್ಟು ಸ್ಥಿರತೆ ಇತ್ತು ಎಂದರೆ, ಅವರು ಧ್ಯಾನದಲ್ಲಿ ಇದ್ದಾಗ, ಜಿಂಕೆಗಳು ತುರಿಕೆ ಉಂಟಾದ ಸಂದರ್ಭದಲ್ಲಿ ಬಾಹುಬಲಿಯ ದೇಹಕ್ಕೆ ಮೈಉಜ್ಜಿಕೊಳ್ಳುತ್ತಿದ್ದವು. ಆ ಮಟ್ಟಿಗೆ ಬಾಹುಬಲಿ ಶಿಲಾಮಯವಾಗಿದ್ದರು’ ಎಂದರು.

ಮುನಿಶ್ರೀ 108 ಅಮರಕೀರ್ತಿ ಮಹಾರಾಜರು ಆಶೀರ್ವಚನ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT