ಬುಧವಾರ, ಮೇ 18, 2022
24 °C
ಬಿಆರ್‌ಟಿಯಲ್ಲಿ ಇದೇ 27ರಿಂದ ಗಣತಿ; ಈ ಬಾರಿ ಆ್ಯಪ್‌ ಬಲ

ಬಂಡೀಪುರ: ಶನಿವಾರದಿಂದ ಹುಲಿ ಗಣತಿ, ವ್ಯಾಘ್ರನ ಜೊತೆಗೆ ಆನೆ, ಕಾಟಿಯ ಲೆಕ್ಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ/ಗುಂಡ್ಲುಪೇಟೆ: ಜಿಲ್ಲೆಯ ಬಂಡೀಪುರ ಹಾಗೂ ಬಿಳಿಗಿರಿ ರಂಗನಾಥ ಸ್ವಾಮಿ ದೇವಾಲಯ (ಬಿಆರ್‌ಟಿ) ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿ ಗಣತಿಗೆ ಸಿದ್ಧತೆ ನಡೆದಿದೆ. 

ಬಂಡೀಪುರದಲ್ಲಿ ಶನಿವಾರದಿಂದ (ಜ.22) ಹುಲಿ ಗಣತಿ ಆರಂಭವಾಗಲಿದ್ದು, ಬಿಆರ್‌ಟಿಯಲ್ಲಿ ಇದೇ 27ರಿಂದ ವ್ಯಾಘ್ರಗಳ ಗಣತಿ ಶುರುವಾಗಲಿದೆ. 

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಫೆ.8ರವರಗೆ ಮೂರು ಹಂತಗಳಲ್ಲಿ ಹುಲಿ ಗಣತಿ ನಡೆಯಲಿದೆ. ಇಲಾಖೆಯ 300 ಸಿಬ್ಬಂದಿ ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. 

ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಹುಲಿ ಗಣತಿ ನಡೆಯುತ್ತದೆ. 2018ರ ಹುಲಿ ಗಣತಿ ಪ್ರಕಾರ, ಬಂಡೀಪುರದಲ್ಲಿ 173 ಹುಲಿಗಳಿವೆ. ಬಿಆರ್‌ಟಿಯಲ್ಲಿ 52ರಿಂದ 80ರವರೆಗೂ ಹುಲಿಗಳಿವೆ ಎಂದು ವರದಿ ಹೇಳಿದೆ. 

ಆ್ಯಪ್‌ ಮೂಲಕ ಗಣತಿ: ಈ ಬಾರಿ ಪೂರ್ಣ ಪ್ರಮಾಣದಲ್ಲಿ ಎಂ–ಸ್ಟ್ರೈಪ್ಸ್‌ (M-STrIPES– ಮಾನಿಟರಿಂಗ್ ಸಿಸ್ಟಮ್ ಫಾರ್‌ ಟೈಗರ್ಸ್‌: ಇಂಟೆನ್ಸಿವ್‌ ಪ್ರೊಟೆಕ್ಷನ್‌ ಹಾಗೂ ಇಕಾಲಾಜಿಕಲ್‌ ಸ್ಟೇಟಸ್‌’)‌ ಎಂಬ ಆ್ಯಪ್ ಮೂಲಕ ಗಣತಿ ನಡೆಯಲಿದೆ.

ಹುಲಿ ಮಾತ್ರವಲ್ಲದೆ ಆನೆ, ಕಾಟಿಗಳ ಗಣತಿಯನ್ನೂ ಅರಣ್ಯ ಇಲಾಖೆ ಸಿಬ್ಬಂದಿ ಮಾಡಲಿದ್ದಾರೆ. 

ಗಣತಿ ಹೇಗೆ?: ಬಂಡೀಪುರದಲ್ಲಿ 300 ಸಿಬ್ಬಂದಿ ಗಣತಿಯಲ್ಲಿ ಭಾಗವಹಿಸಲಿದ್ದಾರೆ. ಪ್ರತಿ ತಂಡದಲ್ಲಿ ಮೂವರು ಇರುತ್ತಾರೆ. ವೀಕ್ಷಕರು, ಮೊಬೈಲ್‌ ನಿರ್ವಹಣೆ ಮಾಡುವವರು ಹಾಗೂ ಒಬ್ಬ ಗಾರ್ಡ್‌ ಇರುತ್ತಾರೆ. ಲಭ್ಯವಾದ ಮಾಹಿತಿಯನ್ನು ಎಂ ಸ್ಟ್ರೈಪ್ಸ್‌ ಆ್ಯಪ್‌ನಲ್ಲಿ ಅಪ್‌ಲೋಡ್‌ ಮಾಡಲಾಗುತ್ತದೆ. 

ಬಂಡೀಪುರವನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದ್ದು, ಮೊದಲ ಬ್ಲಾಕ್‌ನಲ್ಲಿ ಶನಿವಾರದಿಂದ 27ರವರೆಗೆ, ಎರಡನೇ ಬ್ಲಾಕ್‌ನಲ್ಲಿ ಇದೇ 28ರಿಂದ ಫೆ.2, 3ನೇ ಬ್ಲಾಕ್‌ನಲ್ಲಿ ಫೆ.3ರಿಂದ 8ರವರೆಗೆ ಗಣತಿ ನಡೆಯಲಿದೆ. 

ಗಣತಿ ಪ್ರಕ್ರಿಯೆ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಬಂಡೀಪುರ ಹುಲಿ ಯೋಜನೆಯ ಪ್ರಭಾರ ನಿರ್ದೇಶಕ ಕರಿಕಾಳನ್‌, ‘ಕೋವಿಡ್ ಕಾರಣದಿಂದ ಈ ಬಾರಿಯ ಗಣತಿ ಕಾರ್ಯದಲ್ಲಿ ಸ್ವಯಂ ಸೇವಕರು ಭಾಗವಹಿಸುತ್ತಿಲ್ಲ. ಇಲಾಖೆಯ 300 ಜನ ಸಿಬ್ಬಂದಿ ಪಾಲ್ಗೊಳ್ಳಲಿದ್ದಾರೆ. ಮೂರು ವಿಭಾಗವಾಗಿ ವಿಂಗಡಿಸಿಕೊಂಡು ಗಣತಿ ಮಾಡಲಾಗುತ್ತದೆ’ ಎಂದರು. 

‘ಪ್ರತಿ ವಿಭಾಗದಲ್ಲೂ ಆರು ದಿನ ಗಣತಿ ನಡೆಯುತ್ತದೆ. ಮೊದಲ ಮೂರು ದಿನ ನಿಗದಿಯಾದ ಸ್ಥಳದಲ್ಲಿ ಆನೆ, ಜಿಂಕೆ, ಕಡವೆ, ಕಾಡೆಮ್ಮೆ ಮತ್ತು ಹುಲಿ ವಾಸಕ್ಕೆ ಬೇಕಾದ ಪರಿಸ್ಥಿತಿ ಗಮನಿಸಲಾಗುತ್ತದೆ. ನಂತರದ ಮೂರು ಟ್ರಾಂಜೆಕ್ಟ್ ಲೈನಿನಲ್ಲಿ 5 ಕಿ.ಮೀ. ದೂರ ಕ್ರಮಿಸಿ ವಿವಿಧ ಮಾಹಿತಿ ಕಲೆ ಹಾಕಲಾಗುತ್ತದೆ’ ಎಂದು ಅವರು ವಿವರಿಸಿದರು. 

‘ಆಯಾ ವಿಭಾಗದಲ್ಲಿನ ಅನುಭವವುಳ್ಳ, ತರಬೇತಿ ಪಡೆದ, ಐಸಿಟಿ ಪದವೀಧರರು, ಎಸ್‌ಟಿಪಿಎಫ್, ಉಪ ವಲಯ ಅರಣ್ಯಾಧಿಕಾರಿ ಹಾಗೂ ಮುಂಚೂಣಿ ಸಿಬ್ಬಂದಿಯನ್ನು ಗಣತಿಗೆ ಬಳಸಿಕೊಳ್ಳಲಾಗುತ್ತದೆ’ ಎಂದು ಕರಿಕಾಳನ್ ಮಾಹಿತಿ ನೀಡಿದರು.

ನಾಗರಹೊಳೆಯಲ್ಲಿ ಭಾನುವಾರದಿಂದ ಗಣತಿ

ಮೈಸೂರು: ಜಿಲ್ಲೆಯ ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಜ.23 ರಿಂದ ಫೆ.5ರ ವರೆಗೆ ಹುಲಿ ಗಣತಿ ನಡೆಯಲಿದೆ.

‘ನಾಗರಹೊಳೆ ಅರಣ್ಯದಲ್ಲಿ 2018 ರಲ್ಲಿ ಒಟ್ಟು 125 ಹುಲಿಗಳು ಪತ್ತೆಯಾಗಿದ್ದವು. ಪ್ರತಿ ನೂರು ಚದರ ಕಿ.ಮೀ.ಗೆ 12 ಹುಲಿಗಳು ವಾಸವಿರುವುದು ದೃಢಪಟ್ಟಿದೆ. ಹುಲಿಗಳ ಸಾಂದ್ರತೆಯಲ್ಲಿ ನಾಗರಹೊಳೆ, ದೇಶದಲ್ಲಿ ಮೂರನೇ ಸ್ಥಾನದಲ್ಲಿದೆ’ ಎಂದು ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಹುಲಿ ಯೋಜನಾ ನಿರ್ದೇಶಕ ಮಹೇಶ್ ಕುಮಾರ್ ತಿಳಿಸಿದರು.

ಮಹದೇಶ್ವರ ವನ್ಯಧಾಮದಲ್ಲೂ ಸಿದ್ಧತೆ

ಹುಲಿ ಸಂರಕ್ಷಿತ ಪ್ರದೇಶ ಎಂದು ಗುರುತಿಸಿಕೊಳ್ಳಲು ತುದಿಗಾಲಿನಲ್ಲಿ ನಿಂತಿರುವ ಮಲೆ ಮಹದೇಶ್ವರ ವನ್ಯಧಾಮದಲ್ಲಿ ಫೆಬ್ರುವರಿಯಲ್ಲಿ ಹುಲಿಗಣತಿ ನಡೆಯಲಿದೆ ಎಂದು ಹೇಳುತ್ತಾರೆ ಅಧಿಕಾರಿಗಳು.

ಇಲ್ಲಿ 15 ಹುಲಿಗಳಿವೆ ಎಂದು ಅಂದಾಜಿಸಲಾಗಿದೆ. ವನ್ಯಧಾಮದಲ್ಲಿ ಕ್ಯಾಮೆರಾ ಟ್ರ್ಯಾಪ್‌ ಮೂಲಕ ಈಗಾಗಲೇ ಗಣತಿ ನಡೆಸಲಾಗಿದೆ. 

ಕ್ಯಾಮೆರಾರಾ ಟ್ರ್ಯಾಪ್‌ನಲ್ಲಿ ವನ್ಯಧಾಮದ ಏಳು ವಲಯಗಳಲ್ಲೂ ಹುಲಿಗಳು ಕಾಣಿಸಿಕೊಂಡಿದ್ದು, ಅವುಗಳ ಜತೆಗೆ ಮರಿಗಳು ಕಂಡು ಬಂದಿವೆ ಎಂದು ಡಿಸಿಎಫ್‌ ವಿ.ಏಡುಕುಂಡಲು ಅವರು ’ಪ್ರಜಾವಾಣಿ‘ಗೆ ತಿಳಿಸಿದರು. 

ಸಮೀಪದ ಕಾವೇರಿ ವನ್ಯಧಾಮದಲ್ಲಿ ಕೂಡ ಕ್ಯಾಮೆರಾ ಟ್ರ್ಯಾಪ್‌ ಮೂಲಕ ಗಣತಿ ಕಾರ್ಯ ನಡೆಸಲಾಗುತ್ತಿದೆ. ಹಿಂದಿನ ಗಣತಿಯಲ್ಲಿ ಒಂದು ಹುಲಿ ಕಂಡು ಬಂದಿದೆ. 

’ವನ್ಯಧಾಮದ ಹನೂರು ಉಪವಿಭಾಗದಲ್ಲಿ ಮಾತ್ರ ಕ್ಯಾಮೆರಾ ಟ್ರ್ಯಾಪಿಂಗ್‌ ಮುಗಿದಿದೆ. ಶೀಘ್ರದಲ್ಲಿ ಕನಕಪುರ ಉಪ ವಿಭಾಗದಲ್ಲೂ ಕ್ಯಾಮೆರಾ ಟ್ರ್ಯಾಪಿಂಗ್‌ ನಡೆಸಲಾಗುವುದು‘ ಎಂದು ಡಿಸಿಎಫ್‌ ಎಚ್.ಸಿ.ಗಿರೀಶ್ ಅವರು ಹೇಳಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು