ಗುಂಡ್ಲುಪೇಟೆ: ತಾಲ್ಲೂಕಿನ ಮಲ್ಲಮ್ಮನಹುಂಡಿ ಗ್ರಾಮದಲ್ಲಿ ಮೂರು ಹಸುಗಳನ್ನು ಕೊಂದಿದ್ದ ಹುಲಿಯ ಸೆರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದ್ದರೂ, ವ್ಯಾಘ್ರನ ಜಾಡು ಪತ್ತೆಯಾಗಿಲ್ಲ.
ಹುಲಿಯು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ. ಹೊರಗಡೆ ಓಡಾಡುವುದಕ್ಕೆ ಭಯ ಪಡುವಂತಾಗಿದೆ.
ಗ್ರಾಮದ ಗುರುಸಿದ್ದಯ್ಯ ಎಂಬುವವರಿಗೆ ಸೇರಿದ ಮೂರು ಹಸುಗಳನ್ನು ಮಲ್ಲಮ್ಮನಹುಂಡಿ ಗ್ರಾಮದ ಹೊರವಲಯದ ಕೆರೆ ಬಳಿ ಹುಲಿ ಕೊಂದು ಹಾಕಿತ್ತು. ಹುಲಿಯನ್ನು ಸೆರೆ ಹಿಡಿಯಬೇಕು ಎಂದು ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದರು.
ಅರಣ್ಯ ಸಿಬ್ಬಂದಿ ವ್ಯಾಘ್ರನ ಸೆರೆಗಾಗಿ ಗ್ರಾಮದ ವ್ಯಾಪ್ತಿಯಲ್ಲಿ ಎರಡು ಬೋನುಗಳನ್ನು ಇರಿಸಿದ್ದರು. ಬೋನಿನಲ್ಲಿ ಅದು ಕೊಂದಿದ್ದ ಹಸುವಿನ ದೇಹದ ತುಂಡುಗಳನ್ನೇ ಹಾಕಲಾಗಿತ್ತು. ಹುಲಿ ಬೋನಿಗೆ ಬಿದ್ದಿಲ್ಲ.
ಅಲ್ಲದೇ, ಶನಿವಾರ ಮತ್ತು ಭಾನುವಾರ ಗುಂಡ್ಲುಪೇಟೆ ಬಫರ್ ಜೋನ್ ವಲಯ ಮತ್ತು ವಿಶೇಷ ಹುಲಿ ಸಂರಕ್ಷಣಾ ದಳದ ಡಿಆರ್‌ಎಫ್‍ಒಗಳಾದ ರಾಮಲಿಂಗಪ್ಪ, ಕಿರಣ್ ನೇತೃತ್ವದಲ್ಲಿ ಸಿಬ್ಬಂದಿ ಹುಲಿ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದಾರೆ. ಆದರೆ ಹುಲಿಯ ಹೆಜ್ಜೆ ಗುರುತು ಸೇರಿದಂತೆ ಹುಲಿಯ ಚಲನವಲನದ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ.
ಇತ್ತ, ಹುಲಿಯ ಕಾರಣದಿಂದ ಗ್ರಾಮದ ಜನರು ಭಯಗೊಂಡಿದ್ದಾರೆ. ದನಕರು, ಮೇಕೆಗಳನ್ನು ಜಮೀನಿನಲ್ಲಿ ಮೇಯಲು ಬೀಡಲು ಹೆದರುತ್ತಿದ್ದಾರೆ.
‘ಕೃಷಿ ಚಟುವಟಿಕೆ ಮಾಡಲು ಜಮೀನುಗಳಿಗೆ ಹೋಗಲೂ ಹೆದರಿಕೆ ಆಗುತ್ತಿದೆ. ಹುಲಿ ಎಲ್ಲಿದೆಯೋ, ಏನು ಮಾಡುತ್ತದೋ ಎಂಬ ಭಯದಿಂದ ಬದುಕಬೇಕಿದೆ’ ಎಂದು ಗ್ರಾಮದ ನಾಗರಾಜು ‘ಪ್ರಜಾವಾಣಿ’ಗೆ ತಿಳಿಸಿದರು.
ಅನೇಕ ರೈತರ ಜಮೀನಿನಲ್ಲಿ ಬೆಳೆಗಳು ಕಟಾವಿಗೆ ಬಂದಿದೆ. ಆದರೆ, ಹುಲಿ ಭಯದಿಂದಾಗಿ ಜಮೀನುಗಳಿಗೆ ಹೋಗುತ್ತಿಲ್ಲ. ಹುಲಿಯ ಭಯದಿಂದಾಗಿ ಆಲೂಗಡ್ಡೆ, ಟೊಮೆಟೊ, ಬೀನ್ಸ್ ಮೊದಲಾದ ಬೆಳೆಗಳನ್ನು ಕಟಾವು ಮಾಡಲು ಕೂಲಿಯಾಳೂ ಬರುತ್ತಿಲ್ಲ’ ಎಂದು ಗ್ರಾಮದ ರೈತ ಮಹದೇವಸ್ವಾಮಿ ತಿಳಿಸಿದರು.
ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ವಲಯ ಅರಣ್ಯ ಅಧಿಕಾರಿ ನವೀನ್ ಕುಮಾರ್, ‘ಜಾನುವಾರುಗಳನ್ನು ಕೊಂದ ಹುಲಿ ಕುಂದುಕೆರೆ ಭಾಗದಿಂದ ಬಂದಿದೆ. ಎರಡು ದಿನಗಳಿಂದ ಹುಲಿಯ ಜಾಡಿಗಾಗಿ ಸಿಬ್ಬಂದಿ ಹುಡುಕಾಟ ನಡೆಸಿದ್ದರೂ ಪತ್ತೆಯಾಗಿಲ್ಲ. ಮಳೆಯಾಗಿದ್ದರೆ ಹೆಜ್ಜೆ ಗುರುತು ಸಿಗುತ್ತಿತ್ತು. ಎಲ್ಲೂ ಗುರುತು ಪತ್ತೆಯಾಗಿಲ್ಲ. ಅದು ಈ ಭಾಗದಲ್ಲಿ ಓಡಾಡುವ ಹುಲಿಯಾಗಿರುವ ಸಾಧ್ಯತೆ ಇದೆ. ದಾರಿ ತಪ್ಪಿ ಮಲ್ಲಮ್ಮನಹುಂಡಿ ಕಡೆಗೆ ಬಂದಿರಬಹುದು. ಸತತ ಇಷ್ಟು ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ ಎಂದರೆ ಹುಲಿ ಕಾಡಿನ ಕಡೆಗೆ ಹೋಗಿರಬಹುದು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.