ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಕಾಳಸಂತೆಯಲ್ಲಿ ಸರ್ಕಾರಿ ಔಷಧ ಮಾರಾಟ

ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರ ಆರೋಪ
Last Updated 8 ಫೆಬ್ರುವರಿ 2020, 10:02 IST
ಅಕ್ಷರ ಗಾತ್ರ

ಚಾಮರಾಜನಗರ: ‘ತಾಲ್ಲೂಕು, ಹೋಬಳಿ ಕೇಂದ್ರಗಳು ಸೇರಿದಂತೆ ಅನೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧ ಗಳನ್ನು ಮಾರಾಟ ಮಾಡಲಾಗುತ್ತಿದೆ. ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಇರುವುದಿಲ್ಲ. ಖಾಸಗಿ ಔಷಧ ಅಂಗಡಿ ಹಾಗೂ ಆಸ್ಪತ್ರೆಗಳಿಗೆ ಚಿಕಿತ್ಸೆ ಹಾಗೂ ಔಷಧ ಪಡೆದುಕೊಳ್ಳುವಂತೆ ಸೂಚಿಸುತ್ತಾರೆ. ಇದರಿಂದ ಬಡವರಿಗೆ ಹೆಚ್ಚಿನ ತೊಂದರೆಯಾಗುತ್ತಿದೆ’ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಚಾಮರಾಜನಗರ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷೆ ಎಚ್‌.ಎಸ್‌.ಶೋಭಾ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

‘ಜಿಲ್ಲೆ, ತಾಲ್ಲೂಕು ಹಾಗೂ ಹೋಬಳಿ ಕೇಂದ್ರದ ಆಸ್ಪತ್ರೆಗಳಲ್ಲಿ ಸಣ್ಣಪುಟ್ಟ ಪರೀಕ್ಷೆಗಳಿಗೂ ಸರ್ಕಾರಿ ವೈದ್ಯರು ಖಾಸಗಿ ಆಸ್ಪತ್ರೆಗಳನ್ನೇ ಸೂಚಿಸಿ ಕಮಿಷನ್‌ ಪಡೆಯುತ್ತಿದ್ದಾರೆ. ಸರ್ಕಾರ ಪೂರೈಸುವ ಔಷಧಗಳನ್ನು ರೋಗಿಗಳಿಗೆ ನೀಡುತ್ತಿಲ್ಲ. ರೋಗಿಗಳಿಂದ₹5ರಿಂದ₹10 ಹಣ ಪಡೆದು ಚಿಕಿತ್ಸೆ ನೀಡುತ್ತಿದ್ದಾರೆ’ ಎಂದು ಉಪಾಧ್ಯಕ್ಷ ಜಿ. ಬಸವಣ್ಣ, ಸದಸ್ಯರಾದ ಎಚ್.ಎಂ.ಮಹದೇವಶೆಟ್ಟಿ, ನಂದೀಶ್‌, ದೊಡ್ಡಮ್ಮ, ಸಿ.ಮಹದೇವಯ್ಯ ಆರೋಪಿಸಿದರು.

ತಾಲ್ಲೂಕು ವೈದ್ಯಾಧಿಕಾರಿ ಡಾ.ಶ್ರೀನಿವಾಸ್‌ ಮಾತನಾಡಿ, ‘ಔಷಧಗಳ ಇಂಡೆಂಟ್‌ ನೀಡಿ ಮೈಸೂರಿನಿಂದ ತರಿಸಿಕೊಳ್ಳಲಾಗುತ್ತಿದೆ. ಔಷಧಗಳನ್ನು ಮಾರಾಟ ಮಾಡಲು ಸಾಧ್ಯವಿಲ್ಲ. ಸರ್ಕಾರಿ ಔಷಧಗಳು ಲಭ್ಯವಿಲ್ಲದಿದ್ದರೆ ಮಾತ್ರ ಖಾಸಗಿ ಔಷಧ ಅಂಗಡಿಗಳಿಗೆ ಶಿಫಾರಸು ಮಾಡುತ್ತಾರೆ. ತಾಲ್ಲೂಕು, ಹೋಬಳಿ ಕೇಂದ್ರಗಳಲ್ಲಿ ಸಮರ್ಪಕ ವೈದ್ಯರು, ಲ್ಯಾಬ್‌ ತಂತ್ರಜ್ಞರು ಇದ್ದಾರೆ. ಯಾವುದೇ ತೊಂದರೆ ಇಲ್ಲ. ಹಣ ಪಡೆದು ಚಿಕಿತ್ಸೆ ನೀಡುವ ಬಗ್ಗೆ ಮಾಹಿತಿ ಪಡೆದು ಕ್ರಮವಹಿಸುತ್ತೇನೆ. ಔಷಧ ಮಾರಾಟ ವಿಚಾರವಾಗಿ ಜಿಲ್ಲಾ ಆಸ್ಪತ್ರೆಯ ಡೀನ್‌ ಅವರಿಗೆ ದೂರು ನೀಡಿ ಕ್ರಮವಹಿಸುವಂತೆ ಮನವಿ ಮಾಡುತ್ತೇನೆ’ ಎಂದು ಸಭೆಗೆ ತಿಳಿಸಿದರು.

ವೈರಸ್‌ ಮುನ್ನೆಚ್ಚರಿಕೆ ಕ್ರಮ

‘ಕೇರಳದಲ್ಲಿ ಕೊರೊನಾ ವೈರಸ್‌ ಸೋಂಕು ದೃಢಪಟ್ಟಿದೆ. ಯಾವುದೇ ಸಂದರ್ಭದಲ್ಲೂ ಜಿಲ್ಲೆಗೆ ಹರಡಬಹುದು. ಈ ಬಗ್ಗೆ ಮುನ್ನೆಚ್ಚರಿಕೆಯ ಕ್ರಮಗಳನ್ನು ವಹಿಸಬೇಕು. ಹೊರಗುತ್ತಿಗೆ ಆಧಾರದಡಿ ಆರೋಗ್ಯ ಇಲಾಖೆಗೆ ನೇಮಕ ಮಾಡಿಕೊಂಡಿರುವ ನೌಕರರಿಗೆ ಸಮರ್ಪಕವಾಗಿ ಸಂಬಳ ನೀಡಬೇಕು’ ಎಂದು ಸದಸ್ಯ ಚಂದ್ರು ಸಲಹೆ ನೀಡಿದರು.

ವಿದ್ಯುತ್‌ ಕಡಿತ ಬೇಡ

‘ಸರ್ಕಾರದ ಭಾಗ್ಯಜ್ಯೋತಿ ಯೋಜನೆಯಡಿ 40 ಯೂನಿಟ್‌ಗಿಂತ ಹೆಚ್ಚು ಬಳಕೆ ಮಾಡಿದವರಿಗೆ ₹14 ಸಾವಿರದಿಂದ ₹18 ಸಾವಿರದವರೆಗೂ ಬಿಲ್‌ ಬರುತ್ತಿದೆ. ಕಟ್ಟದಿದ್ದರೆ ವಿದ್ಯುತ್‌ ಕಡಿತ ಮಾಡಲಾಗುತ್ತಿದೆ. ಇದರಿಂದ ಬಡವರಿಗೆ ಹೆಚ್ಚು ತೊಂದರೆ. ವಿದ್ಯುತ್‌ ಕಡಿತ ಮಾಡಬೇಡಿ’ ಎಂದು ಸದಸ್ಯರು ಸಭೆಗೆ ತಿಳಿಸಿದರು.

ಸೆಸ್ಕ್‌ ಅಧಿಕಾರಿಗಳಾದ ರಾಜು ಹಾಗೂ ಶಶಿಧರ್‌ ಮಾತನಾಡಿ, ‘ಹಣ ಕಟ್ಟಬೇಕು ಎಂದುಯಾರೊಬ್ಬರಿಗೂ ಒತ್ತಡ ಹೇರುವುದಿಲ್ಲ. ಅವರು ನೀಡು ವಂತಹ ಹಣವನ್ನು ಪಡೆಯುತ್ತೇವೆ. ಹಲವರಿಂದ ₹200ರಿಂದ ₹1,000 ರವರೆಗೂ ಹಣ ಪಡೆದು ರಶೀದಿ ನೀಡಿದ್ದೇವೆ. ತಿಂಗಳವರೆಗೂ ಸಮಯ ನೀಡುತ್ತಿದ್ದೇವೆ. ಸೌಜನ್ಯದಿಂದ ವರ್ತಿಸು ವಂತೆಯೂ ಸಿಬ್ಬಂದಿಗೆ ಸೂಚಿಸಿದ್ದೇವೆ’ ಎಂದು ಸಭೆಗೆ ತಿಳಿಸಿದರು.

ಸದಸ್ಯೆ ನಾಗಸುಂದರಮ್ಮ ಮಾತನಾಡಿ, ‘ತಾಲ್ಲೂಕಿನ ಬೂದಿತಿಟ್ಟು ಗ್ರಾಮದ ಅಂಗನವಾಡಿವೊಂದರಲ್ಲಿ ಇಬ್ಬರು ಮಕ್ಕಳಿದ್ದಾರೆ. ಆದರೆ, ಅಂಗನವಾಡಿ ಕಾರ್ಯಕರ್ತೆಯೇ ಇಲ್ಲಿ ಇರುವುದಿಲ್ಲ. ಸಹಾಯಕಿಯರು ಆ ಮಕ್ಕಳನ್ನು ನೋಡಿಕೊಳ್ಳುವಂತಹ ಪರಿಸ್ಥಿತಿ ಇದೆ’ ಎಂದರು.

‘ಅಡುಗೆ ಸಹಾಯಕಿಯರು ಇರುವು ದರಿಂದ ಹೆಚ್ಚಿನ ಕಾರ್ಯಕರ್ತೆಯರಿಗೆ ಸರಾಗವಾಗುತ್ತಿದೆ. ಬೆಳಿಗ್ಗೆ 10 ಗಂಟೆಗೆ ಬಂದು ಸಹಿ ಮಾಡಿ ಹೊರಡುತ್ತಾರೆ. ಅಲ್ಲದೆ ಗರ್ಭಿಣಿಯರು, ಮಕ್ಕಳಿಗೆ ಆಹಾರ ಪದಾರ್ಥಗಳು ಸಮರ್ಪಕವಾಗಿ ಫಲಾನುಭವಿಗಳಿಗೆ ವಿತರಣೆ ಆಗುತ್ತಿಲ್ಲ. ಅನೇಕ ಆಹಾರ ಪದಾರ್ಥಗಳನ್ನು ಕಾರ್ಯಕರ್ತೆಯರು ತಮ್ಮ ಮನೆಗಳಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ ಎಂಬ ದೂರುಗಳೂ ಇವೆ’ ಎಂದು ಉಪಾಧ್ಯಕ್ಷ ಬಸವಣ್ಣ, ಸದಸ್ಯ ಸಿ. ಮಹದೇವಯ್ಯ ಆರೋಪಿಸಿದರು.

ತಾಲ್ಲೂಕು ಶಿಶು ಅಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ರುಕ್ಮಿಣಿ ಮಾತನಾಡಿ, ‘ಅನೇಕ ಯೋಜನೆಗಳ ಕೆಲಸಗಳನ್ನು ಒಬ್ಬರೇ ಮಾಡುವಂತಾಗಿದೆ. ಇದರಿಂದ ಅಂಗನವಾಡಿಗಳಿಗೆ ಭೇಟಿ ನೀಡಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಮೇಲಧಿಕಾರಿಗಳ ಗಮನ ಸೆಳೆಯುತ್ತೇನೆ. ತಡವಾಗಿ ಬರುವ ಹಾಗೂ ಸಹಿ ಮಾಡಿ ಹೊರಡುವ ಕಾರ್ಯಕರ್ತೆಯರಿಗೆ ನೋಟಿಸ್‌ ನೀಡಿ ಕ್ರಮವಹಿಸುತ್ತೇವೆ’ ಎಂದರು.

ಅಧಿಕಾರಿಗಳ ಗೈರು: ಸದಸ್ಯರು ಗರಂ

‘ಸಭೆಗೆ ತಾಲ್ಲೂಕು ಮಟ್ಟದ ಪ್ರಮುಖ ಇಲಾಖಾ ಅಧಿಕಾರಿಗಳು ಬರುವುದಿಲ್ಲ. ಮುಖ್ಯ ಅಧಿಕಾರಿಗಳ ಬದಲು ಅವರ ಸಹಾಯಕ ಅಧಿಕಾರಿಗಳು ಸಭೆಗೆ ಹಾಜರಾದರೆ ಮಾಹಿತಿ ಪಡೆಯುವುದು ಹೇಗೆ? ಕಳೆದ ಬಾರಿ 14 ಇಲಾಖೆಗಳ ಅಧಿಕಾರಿಗಳು ಗೈರಾಗಿದ್ದರು. ಈ ಬಗ್ಗೆ ಅಧಿಕಾರಿಗಳಿಗೆ ನೋಟಿಸ್‌ ಜಾರಿ ಮಾಡಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು’ ಎಂದು ಸದಸ್ಯರಾದ ನಂದೀಶ್, ಸಿ.ಮಹದೇವಯ್ಯ ಸೇರಿದಂತೆ ಎಲ್ಲರೂ ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಿ.ಎಸ್‌.ಪ್ರೇಮ್‌ ಕುಮಾರ್‌, ‘ಗೈರಾದಅಧಿಕಾರಿಗಳಿಗೆ ನೋಟಿಸ್‌ ಜಾರಿ ಮಾಡಿದ್ದೇವೆ. ಎಲ್ಲರೂ ಸಮಜಾಯಿಷಿ ನೀಡಿದ್ದಾರೆ. ಮುಂದಿನ ಸಭೆಗಳಲ್ಲಿ ಗೈರು ಹಾಜರಿಯಾಗುವುದು ಮುಂದುವರಿದರೆ ಅವರ ವಿರುದ್ಧ ಶಿಸ್ತು ಕ್ರಮ ವಹಿಸಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT