ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲೂ ಟ್ರಕ್‌ ಟರ್ಮಿನಲ್‌ ನಿರ್ಮಾಣ

ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಡಿ.ಎಸ್.ವೀರಯ್ಯ; ಸೂಕ್ತ ಜಾಗ ಗುರುತಿಸಲು ಸೂಚನೆ
Last Updated 3 ಜುಲೈ 2022, 1:58 IST
ಅಕ್ಷರ ಗಾತ್ರ

ಚಾಮರಾಜನಗರ: ‘ಹೆದ್ದಾರಿಗಳಲ್ಲಿ ಹೆಚ್ಚಾಗುತ್ತಿರುವ ವಾಹನ ದಟ್ಟಣೆ ಹಾಗೂ ಹೆದ್ದಾರಿ ಬದಿಗಳಲ್ಲಿ ಟ್ರಕ್‌ ನಿಲ್ಲಿಸುವುದನ್ನು ತಡೆಯುವ ಉದ್ದೇಶದಿಂದ ಎಲ್ಲ ಜಿಲ್ಲೆಗಳಲ್ಲಿ ಟ್ರಕ್‌ ಟರ್ಮಿನಲ್‌ ನಿರ್ಮಾಣ ಮಾಡಲಾಗುವುದು. ಜಿಲ್ಲೆಯಲ್ಲೂ ಸರ್ಕಾರ ಜಾಗ ಒದಗಿಸಿದರೆ ಟರ್ಮಿನಲ್‌ ನಿರ್ಮಿಸುವ ಕೆಲಸ ಆರಂಭಿಸಲಾಗುವುದು’ ಎಂದುಡಿ. ದೇವರಾಜ ಅರಸು ಟ್ರಕ್ ಟರ್ಮಿನಲ್ ನಿಗಮದ ಅಧ್ಯಕ್ಷ ಡಿ.ಎಸ್.ವೀರಯ್ಯ ಶನಿವಾರ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ಜಿಲ್ಲೆ ಸೇರಿದಂತೆ ಎಲ್ಲ ಕಡೆಗಳಲ್ಲೂ ಹೆದ್ದಾರಿಗಳಲ್ಲಿ ವಾಹನ ದಟ್ಟಣೆ ಹೆಚ್ಚುತ್ತಿದೆ.ಲಾರಿಗಳು ಸೇರಿದಂತೆ ಇತರೆ ವಾಹನಗಳು ರಸ್ತೆಯ ಇಕ್ಕೆಲಗಳಲ್ಲಿ ನಿಂತು ಜನಸಂಚಾರಕ್ಕೆ ತೊಂದರೆಯಾಗುತ್ತಿದೆ. ಟರ್ಮಿನಲ್‌ ನಿರ್ಮಿಸಿದರೆ ಲಾರಿಗಳನ್ನು ನಿಲ್ಲಿಸಲು, ಚಾಲಕರಿಗೆ ಅಗತ್ಯ ಸೌಲಭ್ಯ, ಗೋದಾಮು ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಕಲ್ಪಿಸಬೇಕು.ಟರ್ಮಿನಲ್‌ ನಿರ್ಮಾಣಕ್ಕೆ ನಮ್ಮಲ್ಲಿ ದುಡ್ಡು ಇದೆ. ಆದರೆ, ಅದಕ್ಕೆ ಸರ್ಕಾರ ಉದಾರವಾಗಿ ಜಾಗ ನೀಡಬೇಕು. ಒಂದು ಟರ್ಮಿನಲ್‌ ನಿರ್ಮಾಣಕ್ಕೆ 30ರಿಂದ 40 ಎಕರೆಗಳಷ್ಟು ಜಾಗಬೇಕು’ ಎಂದು ಅವರು ತಿಳಿಸಿದರು.

‘ನಾನು ಈ ನಿಗಮದ ಅಧ್ಯಕ್ಷನಾದ ನಂತರ ವಿವಿಧ ಕಡೆಗಳಲ್ಲಿ ಹೊಸ ಟರ್ಮಿನಲ್‌ ನಿರ್ಮಾಣಕ್ಕೆ ಪ್ರಸ್ತಾವ ಕಳುಹಿಸಲಾಗಿದೆ. ಅದೇ ರೀತಿ ಚಾಮರಾಜನಗರದಲ್ಲೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಸ್ಥಳ ಗುರುತಿಸುವಂತೆ ಸೂಚಿಸಿದ್ದೇನೆ. ಚಾಮರಾಜನಗರ ತಾಲ್ಲೂಕಿನ ಶಿವಪುರದ ಬಳಿ, ಬದನಗುಪ್ಪೆ– ಕೆಲ್ಲಂಬಳ್ಳಿಯ ಕೈಗಾರಿಕಾ ಪ್ರದೇಶ, ಸತ್ತಿ ರಸ್ತೆ ಸೇರಿದಂತೆ ಇತರೆ ಕಡೆಗಳಲ್ಲಿ ಟ್ರಕ್ ಟರ್ಮಿನಲ್ ನಿರ್ಮಿಸಲು ಸ್ಥಳ ಯೋಗ್ಯವಾಗಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಭೂಮಿ ನೀಡಿದರೆ ಮೂರು ತಿಂಗಳಲ್ಲೇ ನಿರ್ಮಾಣ ಕಾರ್ಯ ಆರಂಭಿಸಲಾಗುವುದು ಆರು ತಿಂಗಳಲ್ಲಿ ಕೆಲಸ ಪೂರ್ಣವಾಗಲಿದೆ’ ಎಂದು ವೀರಯ್ಯ ಹೇಳಿದರು.

ಪ್ರಸ್ತಾವ ಸಲ್ಲಿಸಲು ಸೂಚನೆ

ಇದಕ್ಕೂ ಮೊದಲು ಕಂದಾಯ, ಸಾರಿಗೆ, ಕೈಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ವೀರಯ್ಯ ಅವರು ಟ್ರಕ್‌ ಟರ್ಮಿನಲ್‌ ನಿರ್ಮಿಸಲು ಸೂಕ್ತವಾದ ಜಾಗ ಗುರುತಿಸಿ ಪ್ರಸ್ತಾವ ಸಲ್ಲಿಸುವಂತೆ ಸೂಚಿಸಿದರು.

‘ಜಿಲ್ಲೆಯ ಅಭಿವೃದ್ಧಿ ಹಾಗೂ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ಹಿತದೃಷ್ಟಿಯಿಂದ ಜಿಲ್ಲೆಯಲ್ಲಿ ಅಗತ್ಯ ಇರುವ ಕಡೆಗಳಲ್ಲಿ ಸರ್ಕಾರದ ವತಿಯಿಂದ ಉಚಿತವಾಗಿ ಭೂಮಿ ಒದಗಿಸಿದರೆ ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು. ಕುಡಿಯುವ ನೀರು, ಶೌಚಾಲಯ, ಆಸ್ಪತ್ರೆ, ಬ್ಯಾಂಕ್ ವ್ಯವಸ್ಥೆ, ಡಾರ್ಮಿಟರಿ, ರೆಸ್ಟೋರೆಂಟ್, ಎ.ಟಿ.ಎಂ, ಪೆಟ್ರೋಲ್ ಬಂಕ್, ಸೇರಿದಂತೆ ಇತರೆ ವ್ಯವಸ್ಥೆಗಳನ್ನು ಒಂದೇ ಸೂರಿನಡಿ ಒದಗಿಸುವುದು ಟ್ರಕ್ ಟರ್ಮಿನಲ್ ನಿರ್ಮಾಣದ ಉದ್ದೇಶವಾಗಿದೆ’ ಎಂದರು.

‘ನಗರದ ಸತ್ಯಮಂಗಲರಸ್ತೆ ಹಾಗೂ ಗುಂಡ್ಲುಪೇಟೆ ರಸ್ತೆ, ನಂಜನಗೂಡು– ಗುಂಡ್ಲುಪೇಟೆ ಮಾರ್ಗ ಮಧ್ಯದ ಸ್ಥಳದಲ್ಲಿ ಟ್ರಕ್ ಟರ್ಮಿನಲ್‌ನ ಅಗತ್ಯವಿದೆ. ಚಾಮರಾಜನಗರದ ಶಿವಪುರದ ಬಳಿ 5 ಎಕರೆ, ಬದನಗುಪ್ಪೆ– ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದಲ್ಲಿ 70 ಎಕರೆ ಸ್ಥಳ ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ಲಭ್ಯವಿರುವ ಬಗ್ಗೆ ಮಾಹಿತಿಯಿದೆ. ಜಿಲ್ಲೆಯ ಇತರೆಡೆ ಸ್ಥಳ ಪರೀಶೀಲನೆ ನಡೆಸಿ’ ಎಂದು ವೀರಯ್ಯ ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಭೀಮನಗೌಡ ಪಾಟೀಲ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ರಾಜೇಂದ್ರ ಪ್ರಸಾದ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ರವಿಕುಮಾರ್, ಗ್ರೇಡ್-2 ತಹಶೀಲ್ದಾರ್ ನಂಜಯ್ಯ, ನಗರಸಭೆ ಕಂದಾಯ ನಿರೀಕ್ಷಕ ಶರವಣ, ಡಿ.ದೇವರಾಜ ಅರಸು ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಶಿವಣ್ಣ, ಬೆಂಗಳೂರಿನ ಟ್ರಕ್ ಟರ್ಮಿನಲ್‌ನ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ದೇವರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT