ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: 271 ಮಂದಿಗೆ ಸೋಂಕು, ಸಕ್ರಿಯ ಪ್ರಕರಣಗಳು 964ಕ್ಕೆ

Last Updated 22 ಏಪ್ರಿಲ್ 2021, 15:23 IST
ಅಕ್ಷರ ಗಾತ್ರ

ಚಾಮರಾಜನಗರ: ಜಿ‌ಲ್ಲೆಯಲ್ಲಿ ಕೋವಿಡ್‌ ಎರಡನೇ ಅಲೆ ವೇಗವಾಗಿಹರಡುತ್ತಿದ್ದು,ಗುರುವಾರ ಒಂದೇ ದಿನ 271 ಪ್ರಕರಣಗಳು ದೃಢಪಟ್ಟಿವೆ. ಬುಧವಾರಕ್ಕೆ ಹೋಲಿಸಿದರೆ (175) ಒಂದೇ ದಿನದಲ್ಲಿ 96 ಪ್ರಕರಣಗಳು ಏರಿಕೆ ಕಂಡಿವೆ. 33 ಮಂದಿ ಗುಣಮುಖರಾಗಿದ್ದಾರೆ.

ಜಿಲ್ಲಾಡಳಿತ ಗುರುವಾರ ನೀಡಿರುವ ವರದಿಯಲ್ಲಿ ಸಾವಿನ ಪ್ರಕರಣವನ್ನು ಉಲ್ಲೇಖಿಸಿಲ್ಲ. ಆದರೆ, ಹನೂರು ತಾಲ್ಲೂಕಿನ ಬಸಪ್ಪದೊಡ್ಡಿ ವ್ಯಕ್ತಿಯೊಬ್ಬರು ಮೃತ‍ಪಟ್ಟಿದ್ದಾರೆ.

‘ಕೋವಿಡ್‌ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಸರಿಯಾಗಿ ಚಿಕಿತ್ಸೆ ನೀಡಿಲ್ಲ. ರೆಮ್‌ಡೆಸಿವಿರ್‌ ಚುಚ್ಚುಮದ್ದು ನೀಡದೇ ಇರುವುದರಿಂದ ನನ್ನ ಅಣ್ಣ ಮೃತಪಟ್ಟಿದ್ದಾರೆ’ ಎಂದು ಆ ವ್ಯಕ್ತಿಯ ತಮ್ಮ ಮಾಧ್ಯಮಗಳ ಮುಂದೆ ಆರೋಪಿಸಿದ ಪ್ರಕರಣವೂ ನಡೆದಿದೆ.

ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡು ಬಂದಿರುವುದರಿಂದ ಸೋಂಕಿತರ ಸಂಖ್ಯೆ 1000ದ ಸನಿಹಕ್ಕೆ ತಲುಪಿದೆ. ಜಿಲ್ಲೆಯಲ್ಲಿ ಸದ್ಯ 964 ಮಂದಿ ಸೋಂಕಿತರಿದ್ದಾರೆ. ಈ ಪೈಕಿ 593 ಮಂದಿ ಮನೆಯಲ್ಲೇ ಆರೈಕೆ ಪಡೆಯುತ್ತಿದ್ದಾರೆ. 42 ಮಂದಿ ಐಸಿಯುನಲ್ಲಿ ದಾಖಲಾಗಿದ್ದಾರೆ. ಗುರುವಾರ ದೃಢಪಟ್ಟ 271 ಪ್ರಕರಣಗಳ ಪೈಕಿ 153 ಮಂದಿಯನ್ನು ಹೋಂ ಐಸೊಲೇಷನ್‌ಗೆ ಕಳುಹಿಸಲಾಗಿದೆ.

ಜಿಲ್ಲೆಯ ಒಟ್ಟು ಪ್ರಕರಣಗಳ ಸಂಖ್ಯೆ 8,512ಕ್ಕೆ ಏರಿದೆ. 7,409 ಮಂದಿ ಗುಣಮುಖರಾಗಿದ್ದಾರೆ.

ಗುರುವಾರ 1,727 ಮಂದಿಯ ಕೋವಿಡ್‌ ಪರೀಕ್ಷಾ ವರದಿ ಬಂದಿದ್ದು, 1,439 ವರದಿಗಳು ನೆಗೆಟಿವ್‌ ಬಂದಿವೆ. 288 ಮಂದಿಗೆ ಸೋಂಕು ತಗುಲಿರುವುದು ಖಚಿತವಾಗಿದೆ. ಈ ಪೈಕಿ, ಏಳು ಪ್ರಕರಣಗಳು ಬೇರೆ ಜಿಲ್ಲೆಗಳಿಗೆ ಸೇರಿರುವುದರಿಂದ ಆ ಜಿಲ್ಲೆಯ ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ. 10 ಮಂದಿಯ ವಿವರಗಳನ್ನು ಕಲೆಹಾಕಲಾಗುತ್ತಿದೆ ಎಂದು ಜಿಲ್ಲಾಡಳಿತದ ವರದಿ ಹೇಳಿದೆ‌.

ಚಾಮರಾಜನಗರದಲ್ಲಿ ಹೆಚ್ಚು: ಜಿಲ್ಲೆಯ ಐದು ತಾಲ್ಲೂಕುಗಳ ಪೈಕಿ, ಹಲವು ದಿನಗಳಿಂದ ಚಾಮರಾಜನಗರ ತಾಲ್ಲೂಕಿನಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಗುರುವಾರ ಒಂದೇ ದಿನ ಇಲ್ಲಿ 142 ಮಂದಿಗೆ ಸೋಂಕು ತಗುಲಿರುವುದು ಖಚಿತವಾಗಿದೆ. ಉಳಿದಂತೆ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 48, ಕೊಳ್ಳೇಗಾಲದಲ್ಲಿ 31, ಹನೂರು ಮತ್ತು ಯಳಂದೂರು ತಾಲ್ಲೂಕುಗಳ ತಲಾ 24 ಮಂದಿಗೆ ಸೋಂಕು ದೃಢಪಟ್ಟಿದೆ. ಹೊರ ಜಿಲ್ಲೆಯ ಇಬ್ಬರಿಗೆ ಕೋವಿಡ್‌ ಖಚಿತವಾಗಿದೆ.

ಅಧಿಕಾರಿ, ಸಿಬ್ಬಂದಿ ಕೇಂದ್ರ ಸ್ಥಾನದಲ್ಲಿರಲು ಆದೇಶ

ಕೋವಿಡ್ ಹರಡುವಿಕೆ ತಡೆಗಟ್ಟುವ ತುರ್ತು ಕೆಲಸ ಕಾರ್ಯಗಳನ್ನು ಸಮರೋಪಾದಿಯಲ್ಲಿ ನಿರ್ವಹಿಸಬೇಕಾಗಿರುವುದರಿಂದ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೇಂದ್ರ ಸ್ಥಾನದಲ್ಲಿ ವಾಸ್ತವ್ಯ ಹೂಡುವಂತೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಆದೇಶಿಸಿದ್ದಾರೆ.

ಯಾವುದೇ ಸಂದರ್ಭದಲ್ಲಿ ತುರ್ತು ಕರೆಯ ಮೇರೆಗೆ ಕರ್ತವ್ಯದ ಮೇಲೆ ಹಾಜರಾಗಲು ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಅವರು ಸೂಚಿಸಿದ್ದಾರೆ.

ತಮ್ಮ ಅನುಮತಿ ಇಲ್ಲದೆ ಇಲಾಖೆ ಮುಖ್ಯಸ್ಥರು ಅಧೀನ ಅಧಿಕಾರಿ, ಸಿಬ್ಬಂದಿಗೆ ರಜೆ ಮಂಜೂರು ಮಾಡದಂತೆ ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ. ತಪ್ಪಿದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್ ರವಿ ಅವರು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT