ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಳಂದೂರು: ಚಾಮುಂಡಾಂಬೆಗೆ ಬಗೆ ಬಗೆಯ ಅಲಂಕಾರ

ಗ್ರಾಮಗಳಲ್ಲಿ ನವರಾತ್ರಿ ಉತ್ಸವಕ್ಕೆ ಸಜ್ಜು
Published 18 ಅಕ್ಟೋಬರ್ 2023, 13:28 IST
Last Updated 18 ಅಕ್ಟೋಬರ್ 2023, 13:28 IST
ಅಕ್ಷರ ಗಾತ್ರ

ಯಳಂದೂರು: ದಸರಾ ಎಲ್ಲರ ಮನೆ ಮತ್ತು ಮನದಲ್ಲಿ ನವೋಲ್ಲಾಸ ತುಂಬುತ್ತಿದೆ. ಕೆಡುಕಿನ ವಿರುದ್ಧ ವಿಜಯದ ಸಂಕೇತ ಸಾರುವ ನವರಾತ್ರಿಯಲ್ಲಿ ಉತ್ಸವಗಳು ಗರಿಗೆದರುತ್ತವೆ. ನಾಡದೇವಿ ಚಾಮುಂಡೇಶ್ವರಿಗೆ ವಿಶೇಷ ಪೂಜಾ ಕೈಂಕರ್ಯ ನೆರವೇರಿಸಲಾಗುತ್ತದೆ. ಹಲವು ದೇಗುಲಗಳಲ್ಲಿ ಅ. 24ರ ತನಕ ದೇವಿಗೆ ಬಗೆ ಬಗೆ ಸಿಂಗಾರ ಹಾಗೂ ಪುಷ್ಪಗಳ ಅಲಂಕಾರ ಮಾಡಲಾಗುತ್ತಿದ್ದು, ಭಕ್ತರು ಪಾಲ್ಗೊಂಡು ಸಂಭ್ರಮಿಸುತ್ತಾರೆ.

‘ತಾಲ್ಲೂಕಿನ ಹೊನ್ನೂರು, ಅಂಬಳೆ ಹಾಗೂ ವಿವಿಧ ಗ್ರಾಮಗಳಲ್ಲಿ ಚಾಮುಂಡೇಶ್ವರಿ ಹಬ್ಬವನ್ನು ವಿಜೃಂಭಣೆಯಿಂದ ಜರುಗುತ್ತದೆ. ದಸರಾಕ್ಕೂ ಮೊದಲು ಮಳೆ ಬೆಳೆಗಾಗಿ ಪ್ರಾರ್ಥಿಸುತ್ತಾರೆ. ನಾಡಿನ ತಳ ಸಮುದಾಯಗಳ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿರುವ ಚಾಮುಂಡಿ ಅಮ್ಮನವರ ದೇವಸ್ಥಾನಗಳಲ್ಲಿ ಮತ, ಪಂಥ ಭೇದವಿಲ್ಲದೆ ಭಕ್ತರು ಸೇವೆ ಸಲ್ಲಿಸಿ ಧನ್ಯತೆ ಮೆರೆಯುತ್ತಾರೆ’ ಎನ್ನುತ್ತಾರೆ ಭಕ್ತ ಅಂಬಳೆ ಶಿವಶಂಕರ್.

ಶರನ್ನವರಾತ್ರಿಯಿಂದ ವಿಜಯದಶಮಿ ತನಕ ದೇವಿಗೆ ವಿವಿಧ ಪೂಜಾ ಕೈಂಕರ್ಯಗಳು ಜರುಗುತ್ತವೆ. ಚಂಡಿಕಾ ಹವನ, ಆಯುತ ದೀಪೋತ್ಸವ, ಹೂ, ಹಣ್ಣು ಮತ್ತು ಒಡವೆ ಅಲಂಕಾರ ಸೇರಿದಂತೆ ವೈವಿಧ್ಯಮಯ ಅಲಂಕಾರದಲ್ಲಿ ದೇವಿ ಶೋಭಿಸುತ್ತಾಳೆ. ಸ್ತ್ರೀಯರು ಒಂಬತ್ತು ದಿನಗಳ ಕಾಲ ದೇವಿಗೆ ಉಡಿ ತುಂಬಿ ಪೂಜಿಸುತ್ತಾರೆ. ನವರಾತ್ರಿಯಲ್ಲಿ ದೇವಿಯು ಬನ್ನಿ ಮರದಲ್ಲಿ ನೆಲೆಸಿರುತ್ತಾಳೆ ಎಂಬ ನಂಬಿಕೆ ಭಕ್ತರಲ್ಲಿ ಇದೆ.

ವಿಶೇಷ ನಾಮಾವಳಿ: ಪ್ರತಿದಿನ ಅಮ್ಮವರಿಗೆ ಅಲಂಕಾರ ಇರುತ್ತದೆ. ವಿವಿಧ ಬಣ್ಣದ ಸೀರೆ ತೊಡಿಸುತ್ತಾರೆ. ಅರ್ಚನೆ ನಂತರ ಪ್ರಸಾದ ವಿತರಣೆ ಇರುತ್ತದೆ. ತ್ರಿಪುರಸುಂದರಿ, ಗಾಯತ್ರಿ, ಅನ್ನಪೂರ್ಣೆ, ಮಹಾಲಕ್ಷ್ಮಿ, ಲಲಿತಾ, ಸರಸ್ವತಿ, ದುರ್ಗಾದೇವಿ, ಮಹಿಷಾಸುರ ಮರ್ದಿನಿ, ರಾಜರಾಜೇಶ್ವರಿ ಎಂಬ ನಾಮಾವಳಿಯಲ್ಲಿ ದೇವಿಯನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸಲಾಗುತ್ತದೆ ಎಂದು ಅರ್ಚಕ ಮಂಜುನಾಥ್ ಹೇಳಿದರು.

ಬಳೆ ಮಂಟಪ ಉತ್ಸವ: ಪಟ್ಟಣದ ಬಳೆಪೇಟೆಯ ಬನ್ನಿ ಮಂಟಪದಲ್ಲಿ ಅ.23 ಮತ್ತು 24ರಂದು ಉತ್ಸವ ಜರುಗಲಿದೆ. ಅಂದು ದೇವರಿಗೆ ಒಡವೆ ಮತ್ತು ಹೂ ಹಾರಗಳನ್ನು ಹಾಕಿ, ಮೆರವಣಿಗೆ ನಡೆಸಲಾಗುತ್ತದೆ. ಪ್ರತಿವರ್ಷ ಸಾವಿರಾರು ಭಕ್ತರು ಆಯುಧಪೂಜೆ ಮತ್ತು ವಿಜಯ ದಶಮಿಯಲ್ಲಿ ಇಲ್ಲಿ ಮಿನಿ ದಸರಾ ಆಚರಿಸುತ್ತಾರೆ ಎಂದು ರಮೇಶ್ ತಿಳಿಸಿದರು.

.

ಯಳಂದೂರಿನ ಮಹಾಲಕ್ಷ್ಮಿ
ಯಳಂದೂರಿನ ಮಹಾಲಕ್ಷ್ಮಿ
ಅಂಬಳೆಯ ಚಾಮುಂಡಾಂಬೆ
ಅಂಬಳೆಯ ಚಾಮುಂಡಾಂಬೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT